ಮಳೆಕಾಡಿನಲ್ಲೊಂದು ಸುತ್ತು

ಮಳೆಕಾಡಿನಲ್ಲೊಂದು ಸುತ್ತು

© ಶ್ರೀಪತಿ ಹಾದಿಗಲ್

ಮುಂದುವರೆದ ಭಾಗ . . .

ಕಳೆದ ಆವೃತ್ತಿಯಲ್ಲಿ ಮಳೆಕಾಡಿನಲ್ಲೊಂದು ಸಣ್ಣ ಸುತ್ತು ಹೋಗಿ ಬಂದಮೇಲೆ, ಈ ಬಾರಿ ವಿವಿಧ ಸ್ತರದಲ್ಲಿ ಉಗಮಗೊಂಡಿರುವ ಮಳೆಕಾಡಿನ ವಿವಿಧ ಪ್ರಕಾರಗಳ ಒಂದು ಪುಟ್ಟ ಪರಿಚಯವನ್ನು ಮಾಡಿಸಲೇಬೇಕಿದೆ. ಇವುಗಳಲ್ಲಿ ತಗ್ಗು ಪ್ರದೇಶದ ಮಳೆಕಾಡು, ಪರ್ವತ ಕಾಡು, ಮೇಘ ಕಾಡು, ಕುರುಚಲು ಕಾಡು, ಜೌಗು ಹಾಗೂ ಮ್ಯಾಂಗ್ರೋವ್ ಕಾಡುಗಳು ಹೆಚ್ಚು ಪ್ರಮುಖವಾಗಿದ್ದು, ಈ ಎಲ್ಲವೂ ತನ್ನದೇ ಆದ ಜೀವ ಸಂಕುಲಗಳನ್ನು ಪೋಷಿಸುತ್ತಿವೆ.

© ಡಾ ದೀಪಕ್ ಭ

ತಗ್ಗು ಪ್ರದೇಶದಲ್ಲಿ ರಚನೆಯಾದ ಮಳೆಕಾಡುಗಳನ್ನು ನಮ್ಮ ಕಲ್ಪನೆಯಲ್ಲಿರುವ ಮಳೆಕಾಡಿನ ಮುಖ್ಯ ರಂಗಸ್ಥಳ ಎಂದು ಕರೆಯಬಹುದು. ಸೃಷ್ಟಿಯಲ್ಲಿ ಅತೀ ಹೆಚ್ಚು ಒತ್ತುಕೊಟ್ಟು ನಡೆದ ರಚನೆ ಇದು ಎಂದು ಎಣಿಸಲು ಪ್ರಮುಖ ಕಾರಣ ಇಲ್ಲಿರುವ ವೈವಿಧ್ಯಮಯ ಜೀವಜಾಲ. ಹಣ್ಣು, ಮಕರಂದ, ಅದಕ್ಕೆ ಆಕರ್ಷಿಸುವ ಕ್ರಿಮಿ-ಕೀಟ, ಆಹಾರ ಸರಪಳಿಯಲ್ಲಿ ಹಿಂಬಾಲಿಸುವ ಹಕ್ಕಿ, ಕಪ್ಪೆ, ಹಾವು ಹೀಗೆ ಊಹಿಸಲಾರದಷ್ಟು ಸಂಪದ್ಭರಿತವಾದ ಜೀವಜಾಲವಿರುವುದರಿಂದ ಇಲ್ಲಿ ಎಲ್ಲವೂ ಯಥೇಚ್ಚ. ಬದುಕು ಕಂಡುಕೊಳ್ಳಲು ಪ್ರಕೃತಿಯ ಮಡಿಲಿನಲ್ಲಿ ಅಪಾರ ಸಾಧ್ಯತೆಗಳಿರುವುದರಿಂದ ಜೀವಿಗಳಲ್ಲಿ ವಿವಿಧತೆ ಹೆಚ್ಚಿರುವುದಷ್ಟೇ ಅಲ್ಲದೆ, ಒಂದೇ ಜೀವಿ ಬಹುಬಗೆಯಲ್ಲಿ, ನಮ್ಮ ಊಹೆಗೂ ನಿಲುಕದ ಸ್ತರದಲ್ಲಿ ಉಗಮಗೊಂಡಿದೆ. ಸಂಗಾತಿಯನ್ನು ಒಲಿಸಲು, ತನ್ನಲ್ಲಿರುವ ವಿಷದ ಬಗ್ಗೆ ಎಚ್ಚರಿಸಲು, ಆಹಾರಕ್ಕಾಗಿ ಹೊಂಚುಹಾಕಲು, ತನ್ನನ್ನು ತಾನು ರಕ್ಷಿಸಿಕೊಳ್ಳಲು ಹೀಗೆ ಎಲ್ಲಾ ವಿಫುಲತೆಯೂ ಬಹಳಷ್ಟು ಜೀವಿಗಳಲ್ಲಿ ಕಂಡುಬಂದು ಬದುಕು ವರ್ಣಮಯವೇನೋ ಎನಿಸುತ್ತದೆ. ಬದುಕು ಸ್ಪರ್ಧಾತ್ಮಕವಾಗಿರುವುದರಿಂದ ಜೀವ ಉಗಮದಲ್ಲೂ ಅಷ್ಟೇ ಬಹು ಬಗೆ. ಆದರೆ ತಗ್ಗು ಪ್ರದೇಶದ ಈ ಮಳೆಕಾಡಿನಲ್ಲಿ ನಮಗೆ ಕಾಣುವ ಅಂದ ಚಂದ ಎಲ್ಲವೂ ಜೀವಿಯ ದೃಷ್ಟಿಕೋನದಲ್ಲಿ ನಿಂತು ನೋಡುವುದಾದರೆ ಆಶ್ಚರ್ಯವಾಗುವಷ್ಟು ಕಠಿಣ. ಯಾವ ಕ್ಷಣ ಆಹಾರ ಸಿಗಬಹುದು ಎನ್ನುವ ಯೋಚನೆಗಿಂತ, ಯಾವ ಗಳಿಗೆಯಲ್ಲಾದರೂ ತಾನು ಆಹಾರ ಆಗುವೆನೇನೋ ಎನ್ನುವ ಭಯ ಹೆಚ್ಚಿರುತ್ತದೆ.

© ಸ್ಮಿತಾ ರಾವ್

ಪರ್ವತ ಕಾಡು ತಗ್ಗು ಪ್ರದೇಶದ ಕಾಡು ಪರ್ವತವನ್ನು ಸಂಧಿಸುವ ಜಾಗದಲ್ಲಿ ಕಾಡು ಮೊದಲು ಸ್ವಲ್ಪ ಸ್ವಲ್ಪವೇ ಬದಲಾಗುತ್ತಾ ಹೋಗಿ, ನಂತರ ನೋಡ ನೋಡುತ್ತಿದ್ದಂತೆಯೇ ತನ್ನ ಸ್ವರೂಪವನ್ನು ಸಂಪೂರ್ಣ ಬದಲಾಯಿಸುತ್ತದೆ. ಬೀಸುತ್ತಿದ್ದ ತೇವಭರಿತ ತಂಪಾದ ಗಾಳಿ ಈಗ ಕೊರೆಯುವ ಚಳಿಯನ್ನು ಹೊತ್ತೊಯ್ಯಲು ಸಜ್ಜಾಗುತ್ತದೆ. ಆರ್ದ್ರತೆ ಮಂಜಾಗಿ ಮಾರ್ಪಾಡಾಗಿ, ಸೂರ್ಯನ ಕಿರಣಕ್ಕಾಗಿ ಹವಣಿಸುತ್ತಿದ್ದ ತರಗೆಲೆಗಳಿಗೆ ಸಿಗದಂತೆ ಮಾಡುತ್ತದೆ. ಹೀಗೆ ಉಷ್ಣತೆ ಹಾಗೂ ಬೆಳಕು ಕಡಿಮೆಯಾಗುತ್ತಲೇ ಸಹಜವಾಗಿ ಹೆಚ್ಚು ಉದ್ದವಿಲ್ಲದ ಮರಗಳು ತಲೆ ಎತ್ತಿ ನಿಲ್ಲುತ್ತವೆ, ಇದೇ ಪರ್ವತ ಕಾಡು. ಪರ್ವತ ಶ್ರೇಣಿಯ ಎತ್ತರಕ್ಕೆ ಅನುಗುಣವಾಗಿ ಸುಮಾರು 3000-6000 ಅಡಿ ಎತ್ತರದಲ್ಲಿ ಈ ಕಾಡು ರೂಪುಗೊಂಡಿರುತ್ತದೆ. ಇಲ್ಲಿ ಮರದ ಕೊಂಬೆಯನ್ನಪ್ಪಿ ತಮಗೆ ಅವಶ್ಯವಾದ ತೇವಾಂಶ ಪಡೆದು ಸಂಪದ್ಭರಿತವಾಗಿ ಬೆಳೆಯುವ ಪಾಚಿ, ಲಿಚೆನ್, ಆರ್ಕಿಡ್ ಮುಂತಾದ ಅಧಿಸಸ್ಯಗಳು  ಜನ್ಮ ತಾಳುತ್ತವೆ.  ಇಲ್ಲಿನ ಕಡಿಮೆ ಉಷ್ಣತೆಯಿಂದಾಗಿ ಉದುರಿದ ಎಲೆಗಳ ಕೊಳೆಯುವಿಕೆಯೂ ನಿಧಾನ. ಹೀಗೆ ಅರ್ಧಂಬರ್ಧ ಕೊಳೆತ ಎಲೆಗಳ ದಟ್ಟವಾದ ಹಾಸು ಕಾಡಿನ ನೆಲವನ್ನು ಅಲಂಕರಿಸುತ್ತದೆ. ಇಲ್ಲಿ ಬಹಳಷ್ಟು ಪೋಷಕಾಂಶಗಳು ಎಲೆಗಳಲ್ಲಿ ಹುದುಗಿ ಸರಿಯಾಗಿ ಕೊಳೆತು ಗೊಬ್ಬರವಾಗಿ ಮರಗಳಿಗೆ ದೊರಕದೆ, ಮರಗಳ ಬೆಳವಣಿಗೆಯನ್ನು ಸಹಜವಾಗಿ ಕುಂಠಿತಗೊಳಿಸುತ್ತದೆ.

© ಅರವಿಂದ ರಂಗನಾಥ್

ಮೇಘ ಕಾಡುಗಳಲ್ಲಿ ಹೀಗೆ ಮುಂದುವರೆಯುತ್ತಾ ಹೋದಂತೆ ಕಾಡು ಇನ್ನೂ ಸಂಕೀರ್ಣವಾಗುತ್ತಾ ಹೋಗುತ್ತದೆ. ಕೆಳಗೆ ಮಂಜು ಮಂಜಂತೆ ಕಂಡಿದ್ದು ಈಗ ದಟ್ಟ ಮೋಡ. ಈ ಮೋಡಗಳು ತಗ್ಗು ಪ್ರದೇಶದಿಂದ ಬೀಸಿ ಬರುವ ಬಿಸಿಗಾಳಿಯಿಂದಾದ ರಚನೆ. ಕಡಿಮೆ ಒತ್ತಡದಿಂದ ಮೇಲೆ ಏರುತ್ತಾ ಹೋಗಿ ತೇವ ಘನೀಕರಿಸಿ ಸಣ್ಣ ಸಣ್ಣ ಹನಿಗಳಾಗುತ್ತವೆ. ಕಾಡಿನ ಒಳಗಿಂದ ನಿಂತು ನೋಡಿದರೆ ನಸು ಬೂದು-ಬಿಳಿ ಬಣ್ಣದಿಂದ ಆವೃತವಾಗಿ ಮಬ್ಬು ಮಬ್ಬಾಗಿ ಗೋಚರಿಸುವ ಇದೇ ಮೇಘ ಕಾಡು. ಅತಿ ಎತ್ತರದ ಈ ಕಾಡಿನಲ್ಲಿ ಜೀವವೈವಿಧ್ಯ ಸಹ ಕಡಿಮೆ. ಸದ್ದು ಮಾಡುವ ಕೆಲವೇ ಕೆಲವು ಬಣ್ಣ ಬಣ್ಣದ ಹಕ್ಕಿಗಳು ಹಾಗೇ ಅಪರೂಪದ ಪರ್ವತ ಗೊರಿಲ್ಲಾಗಳ ವಾಸಸ್ಥಾನ. ತನ್ನ ಸಹಜೀವಿಗಳೊಂದಿಗೆ ನಡೆಯುವ ಸಂಘರ್ಷಕ್ಕಿಂತ ಹೆಚ್ಚಾಗಿ ಪ್ರಕೃತಿಯಲ್ಲಿ ಎದುರಾಗುವ ವೈಪರೀತ್ಯದೊಂದಿಗೆ ಸೆಣಸಾಡುವುದೇ ಇಲ್ಲಿಯ ಜೀವಿಗಳಿಗೆ ಬಹು ದೊಡ್ಡ ಸವಾಲಾಗಿರುತ್ತದೆ. ಇದಕ್ಕೂ ಮೇಲೆ ಹೋಗಿ ನೋಡಬಯಸುವುದೇ ಆದರೆ, ಪ್ರಕೃತಿ ಅಲ್ಲೂ ಸಹ ತನ್ನ ಹಲವು ನಿಗೂಢತೆಗಳನ್ನು ಬಚ್ಚಿಟ್ಟುಕೊಂಡಿರುತ್ತಾಳೆ. 9800 ಅಡಿಗೂ ಮೇಲಿನ ಈ ಪ್ರದೇಶ ಅತೀ ನಿಶಬ್ದ. ಕೇವಲ ಮನುಷ್ಯನ ಎತ್ತರದಲ್ಲಿರುವ ಮಂಜಿನಲ್ಲೇ ತಮ್ಮ ಜೀವನ ಪೂರ್ತಿ ಮಿಂದೇಳುವ ಇಲ್ಲಿನ ಮರಗಳು ಅತಿ ನಿಧಾನ ಗತಿಯಲ್ಲಿ ಬೆಳೆಯುತ್ತವೆ. ಎಲೆಗಳು ಸಹ ಸಣ್ಣದಾಗಿಯೂ, ಒರಟು ಒರಟಾಗಿಯೂ ಇರುತ್ತವೆ.

© ಡಾ ದೀಪಕ್ ಭ

ಕುರುಚಲು ಕಾಡು ಮಳೆಕಾಡಿನ ಒಂದು ಭಾಗವಾಗಿ ಮರಳಿರುವ ಮಣ್ಣಿನಲ್ಲಿ ವಿಶಿಷ್ಟವಾದ ಕುರುಚಲು ಕಾಡುಗಳು ಹುಟ್ಟುತ್ತವೆ. ಕೇರಂಗ ಎಂದೂ ಕರೆಯಲ್ಪಡುವ ಈ ಕಾಡಿನಲ್ಲಿರುವುದು ಗಿಡ್ಡ, ಸಪೂರ ಗಿಡಗಳು. ಬೇರೆಡೆಯಲ್ಲಾದರೂ ಜೀವನ ಸ್ವಲ್ಪ ಸರಾಗ ಎಂದು ತೋರಿದರೂ, ಇಲ್ಲಂತೂ ಅದು ಅಲ್ಲವೇ ಅಲ್ಲ. ಇಲ್ಲಿ ಮರಳಿನಿಂದ ಮರಗಳಿಗೆ ಯಾವುದೇ ಪೌಷ್ಟಿಕಾಂಶ ದೊರೆಯದ ಕಾರಣ ಮರಗಳ ಬೆಳವಣಿಗೆಯೇ ನಿರಾಶಾದಾಯಕ. ಆದರೆ ಇಲ್ಲಿನ ಎಲೆಗಳು ಮಾತ್ರ ಬೇರೆಡೆಗೆ ಹೋಲಿಸಿದರೆ ಬಹಳ ಸುರಕ್ಷಿತ, ಏಕೆಂದರೆ ಮೊದಲೇ ಪೌಷ್ಟಿಕಾಂಶ ಸಿಗುವುದಿಲ್ಲ ಎನ್ನುವ ಕೊರತೆ ಇರುವಾಗ ತಮ್ಮನ್ನು ಆವರಿಸುವ ಕ್ರಿಮಿಕೀಟಗಳು ಅದನ್ನು ಕಸಿದುಕೊಳ್ಳುತ್ತವೆ ಎಂಬ ಭಯದಲ್ಲೇ ಇಲ್ಲಿನ ಎಲೆಗಳು ರಾಸಾಯನಿಕವನ್ನು ಹೊರಹೊಮ್ಮುತ್ತವೆ.

ಜೌಗು ಮಳೆಕಾಡಿನ ಮತ್ತೊಂದು ಭಾಗದಲ್ಲಿ ಜೌಗು ಪ್ರದೇಶದ ಕಾಡನ್ನು ಕಾಣಬಹುದಾಗಿದೆ. ಸಾಮಾನ್ಯವಾಗಿ ಪ್ರವಾಹ ಪೀಡಿತ ಜಾಗಗಳಲ್ಲೇ ಹುಟ್ಟಿರುವ ಈ ಕಾಡಿನಲ್ಲಿ, ಮರಗಳು ಒಮ್ಮೆ ಗಟ್ಟಿಯಾಗಿ ನಿಂತು ಬೇರೂರಿ, ಪ್ರವಾಹಕ್ಕೆ ಸವಾಲೊಡ್ಡುತ್ತವೆ. ಇಲ್ಲಿ ಪ್ರವಾಹವು ಸಮಸ್ಯೆ ಆದರೂ ಒಂದೆಡೆಯಿಂದ ಇನ್ನೊಂದೆಡೆಗೆ ಬೀಜ ಪ್ರಸರಣ ಕಾರ್ಯವನ್ನು ಪ್ರವಾಹದ ನೀರೇ ಮಾಡಬೇಕಾಗುತ್ತದೆ.

ಮ್ಯಾಂಗ್ರೋವ್ ಕಾಡು ಮಳೆಕಾಡು ಸಾಗರವನ್ನು ಸಂಧಿಸುವಲ್ಲಿ ಮಳೆಕಾಡಿನ ಮತ್ತೊಂದು ಪ್ರಕಾರವಾದ ಮ್ಯಾಂಗ್ರೋವ್ ಕಾಡು ರಚನೆಯಾಗಿದೆ. ಮೇಲಿಂದ ನೋಡಿದರೆ ಇದೊಂದು ಕೇವಲ ನೀಲಿ-ಹಸಿರು ಪಟ್ಟಿ, ಅದೇ ಕೆಳಗಿನಿಂದ ನೋಡಿದರೆ ನೀರು-ನೆಲ ಸಂಧಿಸುವ ಒಂದು ಸುಂದರ ಪ್ರದೇಶ. ಪ್ರಕೃತಿಯ ಬಹಳಷ್ಟು ವೈವಿಧ್ಯ ಈ ಮ್ಯಾಂಗ್ರೋವ್ ಕಾಡಿನಲ್ಲಿ ಒಂದೇ ಕಡೆ ಒಟ್ಟುಗೂಡಿರುತ್ತದೆ. ಇಲ್ಲಿ ಕಾಲಿಟ್ಟರೆ ಸೊಳ್ಳೆಗಳು ಮುತ್ತಿಕೊಳ್ಳುತ್ತವೆ, ಕಪ್ಪಾದ ನಾರುವ ಒದ್ದೆ ಕೆಸರಿನಿಂದ ಜಾರಬೇಕಾಗುತ್ತದೆ. ದುರ್ಗಮ ಎನಿಸುವ ಮರದ ಬೇರುಗಳು, ಅತ್ತ ನೀರಿಗೂ ಸೇರುತ್ತಾ ಇತ್ತ ನೆಲದ ಮೇಲೂ ಒದ್ದಾಡುತ್ತಾ ತೆರಳುವ ಮಡ್ ಸ್ಕಿಪ್ಪರ್, ಏಡಿಗಳನ್ನು ಹಿಂಬಾಲಿಸುವ ಮಂಗಗಳು, ಮೊಸಳೆಗಳನ್ನು ಹಿಡಿಯಲು ಹೊಂಚುಹಾಕುವ ಹುಲಿಗಳು- ಹೀಗೆ ಎಲ್ಲವೂ ಒಂದೇ ವೇದಿಕೆಯಲ್ಲೇ ನಡೆಯುತ್ತದೆ!

© ಸ್ಮಿತಾ ರಾವ್

ಎಂಥಾ ವಿಷಯುಕ್ತ ಎಲೆಗಳನ್ನೂ ತಿಂದು ಜೀರ್ಣಿಸಿಕೊಳ್ಳಬಲ್ಲ ವಿಚಿತ್ರ ಮೂಗಿನ ಪ್ರುಬಾಸಿಸ್ ಮಂಗಗಳ ನೆಚ್ಚಿನ ತಾಣವೂ ಇದಾಗಿದೆ. ಮಣ್ಣಿನ ಸವಕಳಿಯನ್ನು ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುವ ಇಲ್ಲಿಯ ಮರದ ಬೇರುಗಳು, ಉಪ್ಪುನೀರಿನಲ್ಲಿ ತನ್ನೆಲ್ಲಾ ಜವಾಬ್ದಾರಿಯನ್ನು ಹೊರಿಸಿ ಇಟ್ಟಂತೆ ನಿಶ್ಚಿಂತೆಯಾಗಿ ನಿಂತಿರುತ್ತವೆ. ಚಲಿಸುವ ಕೆಸರಿನ ನೆಲದ ತುದಿಗೆ ಜೀವ ಕೈಲಿಟ್ಟುಕೊಂಡಂತೆ ನಿಲ್ಲುವ ಈ ಮ್ಯಾಂಗ್ರೋವ್ ಕಾಡು, ಪ್ರಪಂಚದ ವಿಸ್ಮಯಗಳಲ್ಲಿ ಒಂದೆಂದರೂ ಉತ್ಪ್ರೇಕ್ಷೆಯಲ್ಲ. ಪ್ರಕೃತಿಗೆ ತನ್ನನ್ನು ತಾನು ಸಂಭಾಳಿಸಿಕೊಳ್ಳೋದು ಗೊತ್ತು ಎಂಬುದನ್ನು ತೋರಿಸಲೆಂದೇ ಆದ ಸೃಷ್ಟಿ ಇದು.

ಸುಮ್ಮನೆ ಮಳೆಕಾಡನ್ನು ಹಾಗೇ ನೋಡಿದರೆ ಇದು ತನಗಿಷ್ಟ ಬಂದಂತೆ ಅಸ್ತವ್ಯಸ್ತವಾಗಿ ಬೆಳೆದು ನಿಂತಂತೆ ಕಾಣುತ್ತದೆ. ಆದರೆ ವಾಸ್ತವದಲ್ಲಿ ಇದೊಂದು ವ್ಯವಸ್ಥಿತವಾದ ರಚನೆ. ಸ್ವಲ್ಪ ಫಲವತ್ತಾದ ಮಣ್ಣು ಎಂದು ಗುರುತಿಸಬಹುದಾದ ತಗ್ಗು ಪ್ರದೇಶದ ಮಳೆಕಾಡನ್ನೇ ನೋಡಿದರೆ, ಇಲ್ಲಿ 4-5 ಸ್ತರಗಳಿದ್ದು, ನೆರಳು-ಬೆಳಕಿಗಾಗಿ ಇವು ವ್ಯವಸ್ಥಿತವಾಗಿ ರೂಪುಗೊಂಡಿವೆ. ಎಲ್ಲಿ ಫಲವತ್ತತೆ ಕಡಿಮೆಯಾಗುತ್ತಾ ಹೋಗುತ್ತದೋ, ಅಲ್ಲಿ ಇದು 2-3 ಸ್ತರಕ್ಕೆ ಇಳಿಯುತ್ತದೆ. ಒಟ್ಟಿನಲ್ಲಿ ಇಲ್ಲಿ ನಡೆಯುವುದು ಬೆಳಕನ್ನು ಪಡೆಯಲು ಒಂದು ರೀತಿಯ ಸಂಘರ್ಷ. ಎಂದಿಗೂ ಮುಗಿಯದ, ಸೂರ್ಯನ ಕಿರಣ ಅರಸುವ ತನ್ನ ಪಕ್ಕದ ಮರದೊಂದಿಗಿನ ಈ ಹೋರಾಟ, ವಿಕಾಸದ ಹಾದಿಯಲ್ಲಿ ಒಂದು ವ್ಯವಸ್ಥಿತ ಒಪ್ಪಂದಕ್ಕೆ ತಂದು ನಿಲ್ಲಿಸಿದೆ. ಕಾಡಿನ ನೆಲ ಹಾಸನ್ನೇ ಬರೀ ನೋಡುವುದಾದರೆ, ಇದೊಂದು ಕತ್ತಲಿನ ಜಾಗ. ಮರದ ಮೇಲೆ ಬೀಳುವ ಶೇಕಡ 1/100 ರಷ್ಟು ಬೆಳಕೂ ಕೆಲವೊಮ್ಮೆ ಇಲ್ಲಿ ಸಿಗುವುದಿಲ್ಲ. ಹಾಗಾಗಿ ಹಸಿರ ಬೆಳದಿಂಗಳಿನ ಬೆಳಕೇ ಸಾಕು ಎಂದು ಮರುಮಾತಾಡದೆ ಬೆಳೆಯುವ ಚಿಕ್ಕ ಗಿಡಮೂಲಿಕೆಗಳೂ ಜೀವ ತಳೆದಿರುತ್ತವೆ. ಬೆಳಕನ್ನು ಅರಸಿ ಹೋಗುವುದು ಎಂಬ ಪ್ರಶ್ನೆಯೇ ಇಲ್ಲಿ ಇಲ್ಲದಿರುವಾಗ, ಇವುಗಳಲ್ಲಿ ಹೆಚ್ಚು ಸ್ಪರ್ಧೆ ಸಹ ಇರುವುದಿಲ್ಲ. ಹೀಗಿದ್ದರೂ, ಇಲ್ಲೂ ಸಹ ಅಪಾಯವೇನೂ ತಪ್ಪಿದ್ದಲ್ಲ. ದಟ್ಟವಾಗಿ ಹಬ್ಬಿರುವ ಕಾಡಿನ ಮೇಲ್ಛಾವಣಿಯಲ್ಲಿ ಕೊಂಬೆ ಮುರಿದು ಬಿದ್ದೋ ಅಥವಾ ಹೇಗಾದರೂ ಒಂದಷ್ಟು ಜಾಗ ಖಾಲಿ ಉಂಟಾದರೆ, ಬೆಳಕನ್ನೇ ಕಂಡಿರದಿದ್ದ ಈ ಚಿಕ್ಕ ಗಿಡ ಮೂಲಿಕೆಗಳು ಒಮ್ಮೆಲೇ ಕಾಣುವ ಪ್ರಖರ ಬೆಳಕಿನಿಂದ ಬದುಕುಳಿಯಲಾರವು. ಇದು ಮರಗಳ ಕೆಳಗಿರುವ ನೆರಳಿನಲ್ಲಿ ನಡೆವ ಕಥೆಯಾದರೆ, ಇನ್ನು ದಟ್ಟ ಮರಗಳ ಮೇಲಿನ ಹಾಸು ತನ್ನದೇ ಆದ ಸೊಬಗನ್ನು ಹೊಂದಿದೆ. ಇದಕ್ಕೆ ಸೂರ್ಯನಿಗೆ ತಾನೇ ನಿಕಟವರ್ತಿ ಎಂಬ ಬಿಗುಮಾನ ಬೇರೆ! ಮೇಲಿಂದ ನೋಡಿದರೆ ಒತ್ತೊತ್ತಾಗಿ ಮಾಡಿರುವ ಹಸಿರು ಚಪ್ಪರದಂತೆ ಕಂಡರೂ, ಸೂಕ್ಷ್ಮವಾಗಿ ಗಮನಿಸಿದರೆ, ಇಲ್ಲಿ ಒಂದರಿಂದ ಮತ್ತೊಂದಕ್ಕೆ ಸಾಕಷ್ಟು ಜಾಗ ಇರುತ್ತದೆ. ಅಂದರೆ ಆದಷ್ಟೂ ಒಂದರ ನೆರಳು ಇನ್ನೊಂದಕ್ಕೆ ಬೀಳದಂತೆ ಆದ ವ್ಯವಸ್ಥಿತ ರಚನೆ ಇದು. ಪ್ರತಿ ಮರದ, ಪ್ರತಿ ಎಲೆಯೂ ಸಾಕಷ್ಟು ಸೂರ್ಯನ ಕಿರಣ ಪಡೆಯಲು ಸಹಜವಾಗಿಯೇ ಹಾತೊರೆಯುತ್ತಿರುವುದರಿಂದ, ಯಾವ ಸ್ತರಗಳಿಗೂ ಮೋಸ ಆಗದಂತೆ ಮಾಡಿಕೊಂಡ ಒಪ್ಪಂದ. ಸೂರ್ಯನ ಬೆಳಕಿಗಾಗಿ ಇದನ್ನು ಎಲೆಗಳು ಮಾಡಿಕೊಂಡರೂ, ಇದರ ಫಲಾನುಭವಿಗಳ ಪಟ್ಟಿಯಲ್ಲಿ ಬೇರೆ ಪ್ರಾಣಿ ಪಕ್ಷಿಗಳೂ ಇರುವುವು. ಅದರಲ್ಲೂ ಪ್ರಮುಖವಾಗಿ ಇಷ್ಟು ಎತ್ತರದಲ್ಲೇ ವಾಸ ಮಾಡುವ, ಸ್ವಲ್ಪ ಕೈ ತಪ್ಪಿದರೂ ಕೆಳಗೆ ಬಿದ್ದು ಪ್ರಾಣ ಕಳೆದುಕೊಳ್ಳುವ ಸಾಧ್ಯತೆಯೇ ಹೊಂದಿರುವ ಒರಾಂಗುಟನ್ ಗಳ ನಾಜೂಕಾದ ಚಲನೆ ಎಲೆಗಳ ಈ ಅದ್ಭುತ ಒಪ್ಪಂದದಿಂದಾಗಿಯೇ ಸಾಧ್ಯವಾಗಿದೆ.

© ಸ್ಮಿತಾ ರಾವ್

ಹಿಂದೆ ನೋಡಿದ ಮಳೆಕಾಡಿನ ಸರ್ವ ಅಂಶಗಳಲ್ಲೂ ವಿವಿಧತೆ ತುಂಬಿ ತುಳುಕುತ್ತಿದ್ದರೂ ಎಲೆಗಳ ರಚನೆ ವಿಷಯಕ್ಕೆ ಬಂದಾಗ ಅದು ಸ್ವಲ್ಪ ಅಪವಾದ. ಹೆಚ್ಚು ಒದ್ದೆ ಇದ್ದಷ್ಟೂ ಅದರ ಪೋಷಕಾಂಶ ಕಳೆದುಕೊಳ್ಳುವ ಭೀತಿಯಲ್ಲೇ ಇರುವ ಎಲೆಗಳು, ನೀರು ಬೀಳುತ್ತಿದ್ದಂತೆ ಆದಷ್ಟು ಬೇಗ ಎಲೆಯಿಂದ ಜಾರಿ ಹೋಗಲೆಂದು ನೀಳವಾಗಿದ್ದು, ತುದಿಯಲ್ಲಿ ಮೊನಚಾಗಿರುತ್ತವೆ. ಮಳೆಕಾಡಿನ ಶೇಕಡಾ 80 ರಷ್ಟು ಎಲೆಗಳ ರಚನೆ ಹೆಚ್ಚೂ ಕಡಿಮೆ ಹಾಗೆ ಇರುತ್ತದೆ. ಇಲ್ಲಿ ಎಲೆಗಳು ಸಹ ತಮ್ಮನ್ನು ತಾವು ಅರ್ಪಿಸಿಕೊಳ್ಳುವಷ್ಟು ಒಳ್ಳೆಯವರಾಗಿರುವುದಿಲ್ಲ. ಹೇಗೆ ಕೆಲವು ಮರದ ತೊಗಟೆಗಳು ತಮ್ಮನ್ನು ತಾವು ಕಾಪಾಡಿಕೊಳ್ಳಲು ವಿಷಯುಕ್ತ ರಾಸಾಯನಿಕವನ್ನು ಹೊರಚೆಲ್ಲುವುದೋ, ಹಾಗೇ ತಮ್ಮನ್ನು ತಾವೇ ರಕ್ಷಿಸಿಕೊಳ್ಳಲೆಂದೇ ಹಲವಾರು ಎಲೆಗಳು ವಿಷಕಾರಿ ಅಂಶಗಳನ್ನು ಹೊಂದಿರುತ್ತವೆ. ಹೀಗಾಗಿಯೇ ಹೆಚ್ಚು ಎಲೆಗಳ ಮೇಲೆ ಅವಲಂಬಿತ ಆಗಿರುವ ಹೌಲರ್ ಮಂಗಗಳಂತಹ ಜೀವಿಗಳು ಈ ರಾಸಾಯನಿಕ ಸವಾಲನ್ನು ಎದುರಿಸಲು, ತಿನ್ನುವಾಗಲೇ ಆದಷ್ಟು ಎಳೆಯ ಎಲೆಗಳನ್ನು ಹುಡುಕಿ, ಇದ್ದುದರಲ್ಲೇ ಸ್ವಲ್ಪ ಕಡಿಮೆ ವಿಷ ಸೇವನೆಗೆ ಮುಂದಾಗುತ್ತವೆ.

ಈ ಮಳೆಕಾಡುಗಳಲ್ಲಿರುವ ಮತ್ತೊಂದು ವಿಶೇಷತೆ ಎಂದರೆ, ಇಲ್ಲಿ ಉದುರುವ ಎಲೆಗಳು ಬೇರೆ ಕಾಡುಗಳಂತೆ ಬಹಳ ಸಮಯದ ತನಕ ಇದ್ದು, ನಿಧಾನಗತಿಯಲ್ಲಿ ಕೊಳೆಯುತ್ತಾ ಹೋಗುವುದಿಲ್ಲ. ಇಲ್ಲಿ ನೆಲಕ್ಕೆ ಬಿದ್ದ ಎಲೆಗಳು ಬೇಗನೆ ಅಂದರೆ ಸುಮಾರು ನಾಲ್ಕು ತಿಂಗಳುಗಳಲ್ಲಿ ಮತ್ತೆ ಮರುಬಳಕೆಗೆ ಸಿದ್ಧವಾಗುತ್ತವೆ. ಒಟ್ಟಿನಲ್ಲಿ ಕೆಲವೇ ವಾರ ತಿಂಗಳುಗಳಲ್ಲಿ ಇನ್ನೇನು ಸತ್ತು ಹೋದದ್ದು ಎನ್ನುವ ಯಾವುದೇ ಜೈವಿಕ ಭಾಗವು, ಮತ್ತೆ ಪುನರ್ಜೀವ ಪಡೆದು, ಇನ್ಯಾವುದೋ ಜೀವರಾಶಿಯ ಭಾಗವಾಗುತ್ತದೆ. ಯಾವ ಜಾಗವನ್ನೂ ಬಿಟ್ಟಿರದೆ, ಎಲ್ಲೆಲ್ಲಿ ಅವಕಾಶ ಸಿಗುವುದೋ ಅಲ್ಲೇ ಹೊಸ ಜೀವ ಉಗಮಕ್ಕೆ ಇಲ್ಲಿ ಅವಕಾಶವಿದೆ. ಎಂದೋ ಮುರಿದು ಬಿದ್ದ ಮರದ ತೊಗಟೆ, ಕೊಳೆಯುತ್ತಿರುವ ಎಲೆ ರಾಶಿ-ಹೀಗೆ ಯಾರಿಗೂ ಬೇಡವಾದದ್ದು ಮತ್ತಷ್ಟು ಜೀವಕ್ಕೆ ಆಸರೆಯಾಗುತ್ತದೆ. ಇರುವೆ, ಗೆದ್ದಲು, ಜೀರುಂಡೆ, ಸಹಸ್ರಪದಿ, ಚೇಳು, ಜೇಡದಂತಹ ಜೀವಿಗಳು ತಮ್ಮ ಬದುಕನ್ನು ಇಲ್ಲಿ ಕಂಡುಕೊಂಡಿವೆ.

ಈ ಮಟ್ಟಿಗಿನ ಮಳೆಕಾಡಿನ ಜೀವ ಸಮೃದ್ಧತೆಯ ಹಿಂದೆ ಕೆಲವೊಂದು ಕುತೂಹಲಕಾರಿ ವಿಷಯಗಳೂ ಅಡಗಿವೆ. ಅದರಲ್ಲಿ 19ನೇ ಶತಮಾನದಲ್ಲಿ ಬ್ರಿಟಿಷ್ ನಿಸರ್ಗವಾದಿ ಆಲ್ಫ್ರೆಡ್ ರಸ್ಸೆಲ್ ಆಗ್ನೇಯ ಏಷ್ಯಾದ ಮಳೆಕಾಡುಗಳಲ್ಲಿ ಈ ವೈವಿಧ್ಯಮಯ ಜೀವವ್ಯವಸ್ಥೆಯ ಹಿಂದೆ ಒಂದೇ ಜಾತಿಯ ಮರಗಳು ಹೆಚ್ಚು ದೂರದಲ್ಲಿ ಇರುವುದು ಪ್ರಮುಖ ಕಾರಣ ಎಂದು ತೋರಿಸಿದ್ದಾರೆ. ಇದಕ್ಕೆ ಕಾಂಗೊ, ಬೊರ್ನಿಯೊದಲ್ಲಿರುವ ಕೆಲವು ಕಾಡುಗಳು ಅಪವಾದವಾದರೂ, ಹೆಚ್ಚಿನ ಕಾಡುಗಳಲ್ಲಿ ಒಂದೇ ವರ್ಗಕ್ಕೆ ಸೇರುವ ಮರಗಳು ಅರ್ಧ ಮೈಲಿಯಾದರೂ ದೂರದಲ್ಲಿರುತ್ತವೆ ಎಂಬುದು ಇವರ ವಾದ. ಹೀಗಾದಾಗ ಕೇವಲ ಒಂದೇ ಮರಕ್ಕೆ ಅವಲಂಬಿತವಾಗುವ ಕ್ರಿಮಿ ಕೀಟಗಳಾಗಲೀ, ಪಕ್ಷಿಗಳಾಗಲೀ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಬೆಳೆದು, ಮರಕ್ಕೆ ಮಾರಕವಾಗದ ಹಾಗೆ ಪ್ರಕೃತಿಯೇ ಮಾಡಿಕೊಂಡ ರಚನೆ. ಒಟ್ಟಿನಲ್ಲಿ ಮರಗಳಲ್ಲಿನ ವಿವಿಧತೆಯಿಂದ ಜೀವಿಗಳಲ್ಲಿ ಇಷ್ಟು ಬಹುಬಗೆಯೆಂದೋ ಅಥವಾ ಜೀವಿಯಿಂದ ಮರಗಳೆಂದೋ ಯೋಚಿಸುವುದೆರಡೂ ತಪ್ಪಾಗುತ್ತದೆ. ಅವೆರಡೂ ಒಂದಕ್ಕೊಂದು ಪೂರಕವಾಗಿ, ಒಟ್ಟೊಟ್ಟಿಗೆ ಸಹ ಉಗಮವಾಗಿ ಹೀಗೆ ಬೆಳೆದು ಬಂದು ಇಂದು ನಾವು ನೋಡುತ್ತಿರುವ ಮಳೆಕಾಡನ್ನು ಹುಟ್ಟುಹಾಕಿದೆ. ಅಂದರೆ ಇದರ ಅರ್ಥ ಪ್ರಕೃತಿಯ ಈ ಎಲ್ಲಾ ಸಂಕೀರ್ಣತೆಯೂ ಬೇರೆಲ್ಲೂ ಸಿಗದೇ ಇಲ್ಲಿ ಮಾತ್ರ ಕಾಣಸಿಗುತ್ತದೆ ಎಂದು ಅಲ್ಲವೇ ಅಲ್ಲ. ಬದಲಿಗೆ ಬೇರೆಡೆ ಸಹ ಸಂಭವಿಸುವ ಎಲ್ಲಾ ಚಿಕ್ಕ ಪುಟ್ಟ ಸಂಗತಿಗಳೂ ತಮ್ಮ ಅತಿರೇಕ ತಲುಪುವುದೇ ಈ ಮಳೆಕಾಡುಗಳಲ್ಲಿ ಎಂದು. ಇಷ್ಟು ಸಂಪದ್ಭರಿತವಾಗಿ, ಎಲ್ಲಾ ಚಂದವಾಗಿ ಕಾಣುವ ಮಳೆಕಾಡು ಸಹ, ತಾನೊಂದು ಮಳೆಕಾಡೆಂದು ಕರೆಸಿಕೊಳ್ಳಲು ಪ್ರಕೃತಿಯಲ್ಲಿ ಎದುರಿಸುವ ಒಂದಷ್ಟು ಸವಾಲು, ಮಾಡಿಕೊಳ್ಳುವ ಕೆಲವು ರಾಜಿಯನ್ನು ಮುಂದಿನ  ಆವೃತ್ತಿಯಲ್ಲಿ ನೋಡೋಣ.

© ಸ್ಮಿತಾ ರಾವ್

ಮುಂದುವರೆಯುತ್ತದೆ…

ಲೇಖನ: ಸ್ಮಿತಾ ರಾವ್
                      ಶಿವಮೊಗ್ಗ ಜಿಲ್ಲೆ.

Print Friendly, PDF & Email
Spread the love
error: Content is protected.