ಪ್ರಕೃತಿ ಬಿಂಬ

ಪ್ರಕೃತಿ ಬಿಂಬ

© ವಿಷ್ಣುಮೂರ್ತಿ, ಹಳದಿ ಪೊದೆ ಕಪ್ಪೆ

ತನ್ನ ವಿಶಿಷ್ಟವಾದ ನೀಲಿ ಉಂಗುರದಂತಹ ಕಣ್ಣಿನಿಂದಾಗಿ ಈ ಹಿಂದೆ ಬ್ಲೂ-ಐಡ್ ಬುಷ್ ಫ್ರಾಗ್ ಎಂದು ಕರೆಯಲಾಗುತ್ತಿತ್ತು. ಹಳದಿ ಪೊದೆ ಕಪ್ಪೆಯು ಭಾರತದ ಪಶ್ಚಿಮ ಘಟ್ಟಗಳಲ್ಲಿ ಕಂಡುಬರುವುದರಿಂದ ಕರ್ನಾಟಕದಲ್ಲಿ ಈಗ ಕೂರ್ಗ್ ಹಳದಿ ಪೊದೆ ಕಪ್ಪೆಯೆಂದು ಚಿರಪರಿಚಿತವಾಗಿದೆ. “ರಾಕೊಫೊರಿಡೆ” ಕುಟುಂಬದ ಒಂದು ಪ್ರಭೇದವಾಗಿರುವ ಈ ಹಳದಿ ಪೊದೆ ಕಪ್ಪೆಯು, ಹಳದಿ ಮಿಶ್ರಿತ ಕಂದು ಬಣ್ಣದಿಂದ ಹಾಗು ತಿಳಿ-ಕಂದು ಬಣ್ಣದ ಗೆರೆಗಳಿಂದ ಕೂಡಿರುತ್ತದೆ. ನೀಲಿ ಉಂಗುರದಂತಹ ಕಣ್ಣುಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಫಳ ಫಳ ಹೊಳೆಯುತ್ತಿರುತ್ತವೆ. ಸಾಮಾನ್ಯವಾಗಿ ನೆಲದಿಂದ ಒಂದು ಮೀಟರ್ ಎತ್ತರದಲ್ಲಿ ಎಲೆಗಳ ಮೇಲೆ ಹಾಗು ಕಾಂಡಗಳ ಮೇಲೆ ಕಂಡುಬರುತ್ತವೆ. ಇವು ಸಾಮಾನ್ಯವಾಗಿ ಪಾಳು ಬಿದ್ದಿರುವ ಮನೆ, ಕಾಡಿನ ಪಕ್ಕದಲ್ಲಿರುವ ಕಾಫಿ ತೋಟಗಳ ಬಳಿ  ಕಾಣಸಿಗುತ್ತವೆ.

© ವಿಷ್ಣುಮೂರ್ತಿ, ಮಲಬಾರ್ ಮರದ ನೆಲಗಪ್ಪೆ

ಮಲಬಾರ್ ಮರದ ನೆಲಗಪ್ಪೆಯು (ಪೆಡೋಸ್ಟಿಬೆಸ್ ಟುಬೆರ್ಕುಲುಸ್) ಗೋವಾದ ದಕ್ಷಿಣಕ್ಕೆ ಹಾಗೂ ಪಶ್ಚಿಮ ಘಟ್ಟದ ಉದ್ದಕ್ಕೂ ಈ ಹಿಂದೆ ಹೆಚ್ಚಾಗಿ ಕಂಡುಬರುತ್ತಿದ್ದವು, ಈಗ ಅಳಿವಿನಂಚಿನಲ್ಲಿರುವ ಈ ನೆಲಗಪ್ಪೆಯ ಪ್ರಭೇದ ನಶಿಸಿ ಹೋಗುವ ಭೀತಿಯಲ್ಲಿದೆ. ಇವು ಒದ್ದೆಯಾದ ಮರದ ಟೊಳ್ಳುಗಳು ಅಥವಾ ಹಸಿ ಎಲೆಗಳ ಕೆಳಗೆ ಕಂಡುಬರುತ್ತವೆ. ಗಂಡು ಮರಗಪ್ಪೆಗಳು ಮರದಿಂದ ಕರೆಮಾಡುತ್ತವೆ. ಹೆಣ್ಣು ನೆಲಗಪ್ಪೆಗಳು ಗಂಡಿಗಿಂತ ದೊಡ್ಡದಾಗಿರುತ್ತವೆ. ಇವುಗಳು ಸುಮಾರು 3.6 – 3.85 ಸೆಂ.ಮೀ ಉದ್ದಕ್ಕೆ ಬೆಳೆಯಬಲ್ಲವು. ಇದರ ಕರೆಯು “ಶಿರ್ರ್ರ್ ಶಿರ್ ಶಿರ್ ಶಿರ್” ಎಂಬಂತಿರುತ್ತದೆ. ಈ ಪ್ರಭೇದದ ನೆಲಗಪ್ಪೆಗಳು ಹೆಸರೇ ಹೇಳುವಂತೆ ಹೆಚ್ಚಾಗಿ ಮರಗಳ ಮೇಲೆ ಅದರಲ್ಲೂ ಪಶ್ಚಿಮ ಘಟ್ಟದ  200 ಅಡಿ ಎತ್ತರದಲ್ಲಿ ಹಾಗೂ ಆಗಾಗ್ಗೆ ತೊರೆಗಳ ಪಕ್ಕದಲ್ಲಿ ಕಂಡುಬರುತ್ತವೆ.

© ವಿಷ್ಣುಮೂರ್ತಿ, ದೊಡ್ಡ ಹುರುಪೆಯ ಗುಳಿ ಮಂಡಲ

ದೊಡ್ಡ ಹುರುಪೆಯ ಗುಳಿ ಮಂಡಲವು (ಲಾರ್ಜ್ ಸ್ಕೇಲ್ಡ್ ಪಿಟ್ವೈಪರ್) ದಕ್ಷಿಣ ಭಾರತದ ಪಶ್ಚಿಮ ಘಟ್ಟಗಳಲ್ಲಿ ಕಂಡುಬರುತ್ತವೆ. ಇವುಗಳನ್ನು ವಿಷಯುಕ್ತ ಮಂಡಲ ಹಾವುಗಳ ಪ್ರಭೇದಕ್ಕೆ ಸೇರಿಸಲಾಗಿದೆ. ರಾತ್ರಿ ಹೊತ್ತು ಸಕ್ರಿಯವಾಗಿರುತ್ತವೆ ಹಾಗು ಸಾಮಾನ್ಯವಾಗಿ ಹಗಲು ನಿಷ್ಕ್ರಿಯವಾಗಿರುತ್ತವೆ,  ಕೆಲವೊಮ್ಮೆ ಬಂಡೆಗಳಡಿ, ತೊರೆಗಳ ಬಳಿ ಹಾಗು ಮರಗಳ ಮೇಲೆ ತನ್ನ 2 ಅಡಿ ಉದ್ದದ ದೇಹದೊಂದಿಗೆ ಕಾಣಬಹುದು. ಮಳೆಗಾಲದಲ್ಲಿ ಇವು ಹೆಚ್ಚಾಗಿ ಕಂಡುಬರುತ್ತವೆ. ಈ ಪ್ರಭೇದದ ಹಾವುಗಳು ಆಹಾರವಾಗಿ ಕಪ್ಪೆ, ಹಲ್ಲಿ, ಪಕ್ಷಿ, ಹಾಗು ಇಲಿಗಳಂತಹ ಸಣ್ಣ ಪ್ರಾಣಿಗಳನ್ನು ಸೇವಿಸುತ್ತವೆ. ಎಲ್ಲಾ ವಿಷಪೂರಿತ ಹಾವುಗಳಂತೆ ಈ ಹಾವಿನ ತಲೆಯು ಕೂಡ  ತ್ರಿಭುಜಾಕೃತಿಯಲ್ಲಿರುವುದು ಕಂಡುಬರುತ್ತದೆ. ವರ್ಷದ ಇದೇ ತಿಂಗಳಲ್ಲಿ ಅಂದರೆ ಅಕ್ಟೋಬರ್ ನಲ್ಲಿ ಸಂತಾನೋತ್ಪತ್ತಿ ನಡೆಸುವ ಇವು 4-7 ಮೊಟ್ಟೆಗಳನ್ನಿಟ್ಟು ಮರಿಮಾಡುತ್ತವೆ.

© ವಿಷ್ಣುಮೂರ್ತಿ, ಮಲೆ ಮಂಡಲ           

ಮಲೆ ಮಂಡಲಗಳನ್ನು ನೋಡಲು ಉತ್ತಮ ಸ್ಥಳವೆಂದರೆ ಮಹಾರಾಷ್ಟ್ರದ ಅಂಬೋಲಿಯಲ್ಲಿ. ಇವು ಪಶ್ಚಿಮ ಘಟ್ಟಗಳಲ್ಲಿ ಹಾಗು ಭಾರತದ ನೈರುತ್ಯ ಭಾಗದಲ್ಲಿ ಕಾಣಲು ಸಿಗುವ ವಿಷಕಾರಿ ಹಾವುಗಳಲ್ಲಿ ಒಂದು. ಹೆಚ್ಚು ತೇವಾಂಶವಿರುವ ಕಾಡುಗಳನ್ನು ಇಷ್ಟ ಪಡುತ್ತವೆ ಮತ್ತು ಸಾಮಾನ್ಯವಾಗಿ ಚಹಾ, ಕಾಫಿ ಮತ್ತು ಏಲಕ್ಕಿ ತೋಟಗಳಲ್ಲಿ ಕಂಡುಬರುತ್ತವೆ. ನೆಲ ಹಾಗು ಮರದ ಮೇಲೆಯೂ ಕಾಣಸಿಗುವ ಇವು ಎಲ್ಲಾ ಮಂಡಲಗಳಂತೆ ಆಹಾರವಾಗಿ ಕಪ್ಪೆ, ಹಲ್ಲಿ, ಇಲಿಗಳಂತಹ ಸಣ್ಣಪ್ರಾಣಿಗಳನ್ನು ಹಾಗು ಕೆಲವು ಬಾರಿ ಹಾವುಗಳನ್ನೇ ಭಕ್ಷಿಸುವುದುಂಟು. ತನ್ನ ಬಾಲವನ್ನು ಬಳಸಿ ಕೊಂಬೆಗಳನ್ನು ಹಿಡಿದಿಟ್ಟುಕೊಳ್ಳುತ್ತದೆ. ಇದೂ ಕೂಡ ತನ್ನ ತ್ರಿಭುಜಾಕ್ರುತಿಯ ತಲೆಯಿಂದಾಗಿ ವಿಷಯುಕ್ತ ಹಾವೆಂದು ಸುಲಭಾಗಿ ಗುರುತಿಸಬಹುದು. ಹಳದಿ, ಹಸಿರು ಹಾಗು ಕಂದು ಬಣ್ಣಗಳನ್ನು ಒಳಗೊಂಡಂತೆ ಅನೇಕ ವಿಭಿನ್ನ ಬಣ್ಣದ ಮಾರ್ಫ್ ಗಳನ್ನು ಇದು ಒಳಗೊಂಡಿದೆ. ಮಾದರಿಯಂತೆ ಹಳದಿ ಮಾರ್ಫ್ ನ್ನು ಈ ಮೇಲೆ ತೋರಿಸಲಾಗಿದೆ.

ಚಿತ್ರಗಳು: ವಿಷ್ಣುಮೂರ್ತಿ
ವಿವರಣೆ: ವಿವೇಕ್ ಜಿ.ಎಸ್

Spread the love
error: Content is protected.