ನೀವೂ ಕಾನನಕ್ಕೆ ಬರೆಯಬಹುದು

      

ಪ್ರತಿ ಜೀವಿಯು ಬದುಕಬೇಕಾದರೆ ಅದರದೇ ಆದ ನಿರ್ದಿಷ್ಟ ಆವಾಸಸ್ಥಾನ ಅಗತ್ಯವಿರುತ್ತದೆ. ಒಂದು ವಾಸಸ್ಥನವು ಮಣ್ಣು, ತೇವಾಂಶ, ತಾಪಮಾನ ಹಾಗೂ ಬೆಳಕಿನ ತೀಕ್ಷ್ಣತೆಯಂತಹ ಭೌತಿಕ ಅಂಶಗಳೊಡನೆ, ಆಹಾರದ ಅಭ್ಯತೆ, ಆಶ್ರಯ, ರಕ್ಷಣೆ ಮತ್ತು ಸಂತಾನೋತ್ಪತ್ತಿಗೆ ನೆರವಾಗುವಂತಹ ಜೈವಿಕ ಅಂಶಗಳಿಂದ ಮಾಡಲ್ಪಟ್ಟಿರುತ್ತದೆ. ವಾಸಸ್ಥಾನವು ಕೇವಲ ಭೌಗೋಳಿಕ ಪ್ರದೇಶವಾಗಿರಬೇಕು ಎಂದೇನಿಲ್ಲ. ಅದು ಒಂದು ಕಾಂಡದ ಒಳಭಾಗವಾಗಿರಬಹುದು, ಬಂಡೆಯ ಮೇಲಿನ ಪಾಚಿಯ ರಾಶಿಯಾಗಿರಬಹುದು, ಒಂದು ಪರಾವಲಂಬಿ ಜೀವಿಗೆ ಬೇರೆ ಜೀವಿಯ ಶರೀರವಾಗಿರಬಹುದು, ಅನ್ನನಾಳದಂತಹ ಆಶ್ರಯದಾತ ಜೀವಿಯ ಶರೀರದ ಭಾಗವಾಗಿರಬಹುದು. ವಾಸಸ್ಥಾನಗಳ ವೈವಿಧ್ಯತೆಯಲ್ಲಿ ದೃವಪ್ರದೇಶಗಳು, ಸಮಶೀತೋಷ್ಣ, ಉಷ್ಣವಲಯ ಪ್ರದೇಶಗಳು ಸೇರಿವೆ. ಸಸ್ಯವರ್ಗದ ಆವಾಸಗಳಾದ ಕಾಡು, ನಿತ್ಯಹರಿದ್ವರ್ಣ ಕಾಡು, ಹುಲ್ಲುಗಾವಲು, ಅರೆ ಶುಷ್ಕ ಅಥವಾ ಮರುಭೂಮಿಯಾಗಿರಬಹುದು. ನೀರಿನ ಆವಾಸಗಳಾದ ತೊರೆಗಳು, ನದಿಗಳು, ಸರೋವರಗಳು ಮತ್ತು ಸಮುದ್ರ ಪ್ರದೇಶಗಳು ಸೇರಿವೆ. ಈ ಭೂಮಿಯ ಮೇಲೆ ಜೀವಿಗಳ ಹಂಚಿಕೆಯ ಮೇಲೆ ವಾಸಸ್ಥಾನ ತುಂಬಾ ಪರಿಣಾಮ ಬೀರುತ್ತದೆ. ಆದ್ದರಿಂದ ವಾಸಸ್ಥಾನವು  ಜೀವವೈಧ್ಯತೆಯನ್ನು ಕಾಪಾಡುವುದಕ್ಕೆ ಅತಿ ಮುಖ್ಯವಾದ ಅಂಶವಾಗಿದೆ.


ಯಾವಾಗ ಜೀವಿ ಬದುಕುವ ವಾಸಸ್ಥಾನದಲ್ಲಿ ಏರುಪೇರಾಗುತ್ತದೋ, ಆಗ ಆ ವಾಸಸ್ಥಾನದಲ್ಲಿ ಕಂಡು ಬರುವ ಜೀವಿಗಳು ನಶಿಸಿಹೋಗುತ್ತವೆ. ಈಗಾಗಲೇ, ನಾವು ಅಭಿವೃದ್ಧಿಯ ಕಡೆ ಮುಖಮಾಡಿ ಎಷ್ಟೊಂದು  ವನ್ಯಜೀವಿಗಳ ಆವಾಸಗಳನ್ನು ಕುರುಹು ಇಲ್ಲದೆ ನೆಲಸಮ ಮಾಡಿದ್ದೇವೆ. ಇದರಿಂದ ಎಷ್ಟೊಂದು ಜೀವಿಗಳು ನಶಿಸಿಹೋಗಿದ್ದಾವೆ ಹಾಗೂ ಕೆಲವು ಅಳಿವಿನಂಚಿನ ಪಟ್ಟಿಯಲ್ಲಿ ಸೇರಿವೆ. ಇತ್ತೀಚೆಗಷ್ಟೆ, ದಕ್ಷಿಣ ಪೆಸಿಫಿಕ್ ನ ಫಿಜಿ ದ್ವೀಪದಲ್ಲಿ ಆಸ್ಟ್ರೇಲಿಯಾದ ಪ್ಲಿಂಡರ್ಸ್ ಯೂನಿವರ್ಸಿಟಿಯಲ್ಲಿ ಪಿಎಚ್ ಡಿ ಅಧ್ಯಯನ ನಡೆಸುತ್ತಿರುವ ಜೇಮ್ಸ್ ಡೋರೆಯಾವರ ಸಂಶೋದನೆಯಲ್ಲಿ ಕಂಡು ಹಿಡಿದ ಹೊಸ ಪ್ರಭೇದದ ಬಣ್ಣದ ಜೇನುನೊಣಗಳು ಪತ್ತೆಯಾಗಿದ್ದು, ಆ ಜೇನು ನೊಣಗಳು ಹವಾಮಾನ ಬದಲಾವಣೆ ಮತ್ತು ಅದರ ಆವಾಸಗಳ ನಾಶದಿಂದ ಅವು ಈಗ ಅಳಿವಿನಂಚಿನಲ್ಲಿವೆ ಎಂದು ತಿಳಿದು ಬಂದಿದೆ. ಆಗಾಗಿ, ಈ ಪರಿಸರದಲ್ಲಿ ಎಲ್ಲಾ ಜೀವಿಗಳು ಅತಿ ಮುಖ್ಯವಾದ ಪಾತ್ರ ನಿರ್ವಹಿಸುತ್ತವೆ. ಯಾವುದೇ ಜೀವಿಯ ಪಾತ್ರವು ಕಳಚಿ ಹೋದರು. ಪರಿಸರದಲ್ಲಿ ನಡೆಯುತ್ತಿರುವ ಚಕ್ರಗಳು ಅಲ್ಲೋಲ ಕಲ್ಲೋಲವಾಗುತ್ತದೆ. ಆದ್ದರಿಂದ ಜೀವಿಗಳ ಹಾಗೂ ವಾಸಸ್ಥಾನಗಳ ಮಹತ್ವವನ್ನು ತಿಳಿಸಲು ಅಕ್ಟೋಬರ್ ತಿಂಗಳ 4ನೇ ತಾರೀಖಿನಂದು “World Animal Day” ಹಾಗೂ 7ನೇ ತಾರೀಖಿನಂದು “World Habitat Day” ಎಂದು ಆಚರಿಸಲಾಗುತ್ತದೆ, ಇವುಗಳ ಸಂರಕ್ಷಣೆಯ ಹಾದಿಯಲ್ಲಿ ನಾವು ಮತ್ತು ನೀವೂ ಏನಾದರು ಮಾಡಬಹುದೆ? ಒಮ್ಮೆ ಯೋಚಿಸಿ. ಕೊನೆ ಪಕ್ಷ ಮಕ್ಕಳಲ್ಲಿಯಾದರೂ ಅರಿವು ಮೂಡಿಸಲು, ಇವುಗಳ ಉಳಿವಿಗಾಗಿ ಕಾನನಕ್ಕೆ ನಿಮ್ಮ ಬರಹಗಳನ್ನು ಸಹ ಮಾಡಬಹುದಲ್ಲವೇ… ಈ ಕುರಿತು ನವೆಂಬರ್ ತಿಂಗಳ ಸಂಚಿಕೆಗಾಗಿ ಜೀವ ವೈವಿದ್ಯತೆ ಕುರಿತ, ಕಾಡು, ಕಾಡಿನ ಕತೆಗಳು, ಜೀವ ವಿಜ್ಞಾನ, ವನ್ಯ ವಿಜ್ಞಾನ, ಕೀಟಲೋಕ, ಕೃಷಿ, ವನ್ಯಜೀವಿ ಛಾಯಚಿತ್ರಗಳು, ಕವನ (ಪರಿಸರಕ್ಕೆ ಸಂಬಂಧಿಸಿದ), ವರ್ಣಚಿತ್ರಗಳು ಮತ್ತು ಪ್ರವಾಸ ಕತೆಗಳು, ಪರಿಸರಕ್ಕೆ ಸಂಬಂಧ ಪಟ್ಟ ಎಲ್ಲಾ ಲೇಖನಗಳನ್ನು ಆಹ್ವಾನಿಸಲಾಗಿದೆ. ಇ-ಮೇಲ್ ಅಥವಾ ಪೋಸ್ಟ್ ಮೂಲಕ ಕಳಿಸಬಹುದು.

ಕಾನನ ಪತ್ರಿಕೆಯ ಇ-ಮೇಲ್ ವಿಳಾಸ: [email protected]
ಅಂಚೆ ವಿಳಾಸ:
Study House,
ಕಾಳೇಶ್ವರಿ ಗ್ರಾಮ,
ಆನೇಕಲ್ ತಾಲ್ಲೂಕು,
ಬೆಂಗಳೂರು ನಗರ ಜಿಲ್ಲೆ,
ಪಿನ್ ಕೋಡ್ :560083. ಗೆ ಕಳಿಸಿಕೊಡಬಹುದು.

Print Friendly, PDF & Email
Spread the love
error: Content is protected.