ಪ್ರಕೃತಿ ಬಿಂಬ
© ಭಗವತಿ ಬಿ. ಎಂ., ಚಾಕೊಲೇಟ್ ಕೋಮಲೆ
ದಕ್ಷಿಣ ಹಾಗೂ ಆಗ್ನೇಯ ಏಷ್ಯಾದಾದ್ಯಂತ ಕಂಡುಬರುವ ಚಿಟ್ಟೆಯ ಪ್ರಭೇದವಾಗಿದೆ. ಇವುಗಳ ರೆಕ್ಕೆಯು 55 ರಿಂದ 70 ಮಿ. ಮೀ ವರೆಗೂ ಇರುತ್ತವೆ. ಗಂಡು ಮೇಲ್ಭಾಗದಲ್ಲಿ ಬಿಳಿಯ ಬಣ್ಣದೊಂದಿಗೆ ಚಾಕೊಲೇಟ್ ಕಂದು ಅಥವಾ ಕಪ್ಪು ಅಂಚಿಂದ ಕೂಡಿರುತ್ತದೆ. ಕೆಳ ಭಾಗವೂ ಪ್ರಕಾಶಮಾನವಾದ ನಿಂಬೆಹಳದಿ ಬಣ್ಣದೊಂದಿಗೆ ಚಾಕೊಲೇಟ್ ಬಣ್ಣದ ಅಂಚನ್ನು ಹೊಂದಿರುತ್ತದೆ. ಹೆಣ್ಣು ಬಿಳಿ ಹಾಗೂ ಗಾಢ ಕಂದು ಬಣ್ಣದಿಂದ ಕೂಡಿರುತ್ತದೆ. ಈ ಚಿಟ್ಟೆಗಳು ಮಳೆಕಾಡಿನ ಎತ್ತರದ ಪ್ರದೇಶಗಳಲ್ಲಿ ಸಣ್ಣ ನೀರಿನ ಹಳ್ಳಗಳ ಬಳಿ ಕಾಣಸಿಗುತ್ತವೆ. ಬಲವಾಗಿ ಹಾಗೂ ವೇಗವಾಗಿ ಹಾರುವ ಇವು ಸುಮಾರು 900 70 ಮೀಟರ್ ಗಳಷ್ಟು ಎತ್ತರದಲ್ಲಿ ಹಾರಬಲ್ಲವು.
© ಭಗವತಿ ಬಿ. ಎಂ., ಚಿತ್ತಾರ
ದಕ್ಷಿಣ ಭಾರತ ಹಾಗೂ ಶ್ರೀಲಂಕಾದಾದ್ಯಂತ ಕಂಡುಬರುವ ಚಿಟ್ಟೆಯಾಗಿದೆ. ಇವುಗಳ ರೆಕ್ಕೆಯೂ 80 ರಿಂದ 110 ಮಿ. ಮೀ ವರೆಗೂ ಇರುತ್ತವೆ. ಗಂಡು ಚಿಟ್ಟೆಯ ಮೇಲ್ಭಾಗವು ಕಂದು ಬಣ್ಣದಿಂದ ಕೂಡಿದ್ದು, ಕಪ್ಪು ಅಂಚನ್ನು ಹಾಗೂ ಅಲ್ಲಲ್ಲಿ ಕಪ್ಪು ಚುಕ್ಕೆಗಳನ್ನು ಹೊಂದಿದೆ. ಕೆಳ ಭಾಗವು ಕೆಂಪು ಹಾಗೂ ಕಪ್ಪುಚುಕ್ಕೆಗಳಿಂದ ಕೂಡಿದ್ದು, ಅಲ್ಲಲ್ಲಿ ಬಿಳಿ ಬಣ್ಣದ ಮಚ್ಚೆಗಳಿವೆ. ಅಂಚಿನಲ್ಲಿ ಕಪ್ಪು ಬಣ್ಣದಿಂದ ಕೂಡಿದೆ. ಹೆಣ್ಣು ಚಿಟ್ಟೆಯಲ್ಲಿ ಎಲ್ಲಾ ಕಪ್ಪು ಗುರುತುಗಳು ಚಿಕ್ಕದಾಗಿದ್ದು, ಮೇಲಿನ ರೆಕ್ಕೆಯ ಹಿಂಭಾಗದ ತಳ ಭಾಗವು ಹಸಿರು ಮಿಶ್ರಿತ ನೀಲಿ ಬಣ್ಣದಲ್ಲಿರುತ್ತದೆ.
© ಭಗವತಿ ಬಿ. ಎಂ., ಬೇಲಿ ನೀಲಿ
ದಕ್ಷಿಣ ಏಷ್ಯಾದಾದ್ಯಂತ, ಕಂಡುಬರುವ ಚಿಕ್ಕ ಪ್ರಭೇದದ ಚಿಟ್ಟೆಯಾಗಿದೆ. ಗಂಡು ಚಿಟ್ಟೆಯ ಮೇಲ್ಭಾಗವು ತೆಳು ನೇರಳೆ ಬಣ್ಣದಿಂದ ಕೂಡಿದ ಕಪ್ಪು ಅಂಚನ್ನು ಹೊಂದಿದೆ. ಕೆಳಭಾಗವು ಬಿಳಿ ಬಣ್ಣದಿಂದ ಕೂಡಿದ್ದು, ಅಲ್ಲಲ್ಲಿ ಕಪ್ಪುಚುಕ್ಕೆಗಳು. ಅಂಚಿನಲ್ಲಿ ಕಪ್ಪು ಚುಕ್ಕೆಯ ಸಾಲನ್ನು ನೋಡಬಹುದು. ಹೆಣ್ಣು ಚಿಟ್ಟೆಯ ಮೇಲ್ಭಾಗವು ಬಿಳಿ ಬಣ್ಣದಿಂದ ಕೂಡಿದ್ದು, ಅಂಚುಗಳು ಕಪ್ಪು ಬಣ್ಣದಿಂದ ಕೂಡಿದೆ. ಕೆಳಭಾಗವು ಬಿಳಿ ಬಣ್ಣದಿಂದ ಕೂಡಿದ್ದು, ಕಪ್ಪು ಚುಕ್ಕೆಗಳನ್ನು ಹೊಂದಿದೆ. ಅಂಚಿನಲ್ಲಿ ಮಸುಕಾದ ಕಪ್ಪು ಬಣ್ಣದ ಸಾಲನ್ನು ಕಾಣಬಹುದು. ಭಾರತದಲ್ಲಿ ಚಳಿಗಾಲದಲ್ಲಿ ಕಾಣಸಿಗುತ್ತವೆ.
© ಭಗವತಿ ಬಿ. ಎಂ., ಕ್ಲಿಪ್ಪರ್
ಇವು ದಕ್ಷಿಣ, ಹಾಗೂ ಆಗ್ನೇಯ ಏಷ್ಯಾಗಳಲ್ಲಿ ಕಂಡುಬರುವ, ವೇಗವಾಗಿ ಹಾರುವ ಚಿಟ್ಟೆಯಾಗಿದೆ. ಭಾರತದ ಪಶ್ಚಿಮ ಘಟ್ಟಗಳ ಅರಣ್ಯ ಪ್ರದೇಶದಲ್ಲಿ ಇವುಗಳು ಕಾಣಸಿಗುತ್ತವೆ. ಅಗಲವಾದ ರೆಕ್ಕೆಗಳನ್ನು ಹೊಂದಿರುವ ಇದರ ಮೇಲ್ಭಾಗವು ತೆಳು ನೀಲಿ, ಅಲ್ಲಲ್ಲಿ ಅಗಲವಾದ ಬಿಳಿ ಚುಕ್ಕೆಗಳು ಹಾಗೂ ಅಂಚು ಕಪ್ಪು ಬಣ್ಣದಿಂದ ಕೂಡಿದೆ. ಕೆಳ ಭಾಗವು ಬೂದು ಮಿಶ್ರಿತ ಬಿಳಿ ಬಣ್ಣದಿಂದ ಕೂಡಿದ್ದು, ಅಗಲವಾದ ಬಿಳಿ ಚುಕ್ಕೆಗಳನ್ನು ಹೊಂದಿವೆ. ಇವು ಎತ್ತರದ ಪ್ರದೇಶಗಳಲ್ಲಿ ರೆಕ್ಕೆಗಳನ್ನು ಬಿಗಿ ಹಿಡಿದು ಹಾರುವ ಅಭ್ಯಾಸವನ್ನು ಹೊಂದಿವೆ. ಮಾನವನ ಅತಿಕ್ರಮ ಪ್ರವೇಶ, ಅರಣ್ಯಗಳ ನಾಶ ಚಿಟ್ಟೆಗಳ ಆವಾಸ ಸ್ಥಾನಗಳಿಗೆ ಧಕ್ಕೆ ಉಂಟಾಗಿದೆ. ಇಂತಹ ಚಟುವಟಕೆಗಳಿಂದಾಗಿ ಹಲವಾರು ಪ್ರಭೇದದ ಚಿಟ್ಟೆಗಳು ಅಳಿವಿನಂಚನ್ನು ತಲುಪಿವೆ.
ಚಿತ್ರಗಳು: ಭಗವತಿ ಬಿ. ಎಂ.
ಲೇಖನ: ಹೇಮಂತ ಕುಮಾರ್ ಟಿ. ಎಂ.
ನಾನು ಒಬ್ಬ ಪಕ್ಷಿ ಪ್ರೇಮಿ ಮತ್ತು ಅದರ ಛಾಯಾಗ್ರಾಹಕಿ, ಇತರ ವನ್ಯ ಜೀವಿಗಳ ಛಾಯಾಗ್ರಹಣದಲ್ಲಿ ಆಸಕ್ತಿ ತುಂಬಾ ಇದೆ. ನಾನು ನನ್ನ ತಂದೆ ಸ್ಥಾಪಿಸಿದ ಒಂದು ಸಣ್ಣ ಕೈಗಾರಿಕೋದ್ಯಮದಲ್ಲಿ ನನ್ನ ಸೇವೆ ಮತ್ತು ಅದರ ಉನ್ನತಿ ನನ್ನ ಕೆಲಸ. ನನ್ನ ಮೇಲಿನ ಜವಾಬ್ದಾರಿ ಒಬ್ಬ ಮಗಳದಾಗಿ, ಒಬ್ಬ ಪತ್ನಿಯಾಗಿ, ಒಬ್ಬ ಮಗಳ ತಾಯಿಯಾಗಿ, ಒಬ್ಬ ಅತ್ತೆಯ ಸೊಸೆಯಾಗಿ ಇರುತ್ತದೆ. ನಾನು ನನ್ನ ಬಿಡುವಿನ ಸಮಯದಲ್ಲಿ ಛಾಯಾಚಿತ್ರದ ಹವ್ಯಾಸ ಬೆಳೆಸಿಕೊಂಡೆ ಮತ್ತು ಇದು ನನ್ನ ಮನಸ್ಸಿಗೆ ತುಂಬಾ ಅಚ್ಚುಮೆಚ್ಚು.
ಹಾಗೊಮ್ಮೆ ಹೀಗೊಮ್ಮೆ ಚಾರಣ ದಲ್ಲಿಯೂ ನನ್ನ ಆಸಕ್ತಿ , ಅದಕ್ಕೆ ನನ್ನ ಮಗಳ ಕಂಪನಿ ಇರುತ್ತದೆ…
ನನಗೆ ಶಾಸ್ತ್ರೀಯ ನೃತ್ಯ, ಸಂಗೀತದ ಅಭ್ಯಾಸವನ್ನು ಮಾಡಿದ್ದೇನೆ. ಸಮರ ಕಲೆಯನ್ನು ಅಭ್ಯಾಸ ಮಾಡಿದವಳು. ಹೀಗೆ ನನ್ನನ್ನು ನಾನು ಯಾವಾಗಲೂ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ನನಗೆ ಇಷ್ಟ. ಸಾಮಾಜಿಕ ವಾಗಿಯೂ ಸಕ್ರಿಯವಾಗಿದ್ದೆನೆ. ಹೀಗಿದೆ ನನ್ನ ಇದುವರೆಗಿನ ಜೀವನ, ಮಂದಿನ ಜೀವನ ಇನ್ನೂ ಹೆಚ್ಚಿನ ರೀತಿಯಲ್ಲಿ ಪರಿಸರ, ವನ್ಯಜೀವಿಗಳ ಸಂರಕ್ಷಣೆಗಾಗಿ ನನ್ನ ಸೇವೆ ಮೀಸಲು.