ಕವಿರಾಗ

ಮೂಡಣದಿ ಮೂಡುವನು ನೇಸರನು
ಹೊನ್ನ ನಗೆಯ ಬೀರುತಾ|
ಬಾನ ಏರಿ ಬರುವನು ಜಗದ ತಮವನೀಗುತಾ
ಇರುಳು ಕಳೆದು ಬೆಳಕಿನೊಡನೆ ನವೋಲ್ಲಾಸ ತರುವನು||
ಚುಮು ಚುಮು ಚಳಿಗೆ ಬೆಚ್ಚನೆ ಅಪ್ಪುಗೆ ನೀಡುವನು
ಇಬ್ಬನಿಯ ಕರಗಿಸಿ ಎಳೆ ಬಿಸಿಲ ಇಳೆಗೆ ಇಳಿಸುತಾ|
ಹಕ್ಕಿಗಳ ಕಲರವದಿ ತಾ
ಮಂಜಿನಾ ಮುತ್ತುಗಳ ನಡುವಲ್ಲಿ ಹೊಳೆಯುವನು||
ಸುತ್ತೆಲ್ಲ ನವ ಚೈತನ್ಯ ಹೊಮ್ಮಿಸುವನು
ಬೆಳಕ ನೀಡಿ ಶುಭವ ಕೋರುತಾ|
ಮರಗಳ ನಡುವಲ್ಲಿ ಬೆಳಕಿನ ಕಣ್ಣಾಮುಚ್ಚಾಲೆ ಆಡುತಾ
ಹೂ ಅರಳಿಸಿ ಎಲ್ಲೆಲ್ಲೂ ಕಂಪು ಸೂಸುವನು||
ಧರೆಯನು ಪ್ರೀತಿಯಲಿ ವಶವಾಗಿಸುವನು
ಹಸಿರಿನ ಸಿರಿಯ ಜನನ ಕಾರಣ ತಾ|
ಬರಿದಾದ ಧರಣಿಯಲಿ ಹಸಿರನು ಬೆಳೆಸುತಾ
ತಾಳೆ ಬಾಳೆ ತೆಂಗಿನ ಅಂಗಕೆ ರಂಗ ನೀಡುವನು||
ಪಡುವಣದಿ ದೂರ ಸರಿಯುವನು
ಬಾನ ಮೊಗವ ಕೆಂಪೇರಿಸುತಾ|
ಕಡಲ ಒಡಲಲಿ ಮಲಗುವ ಕತ್ತಲ ತರಿಸುತಾ
ಮತ್ತೆ ಮುಂಜಾವಲಿ ಬೆಳಕ ಚೆಲ್ಲುತ ತನ್ನಯ ಕಾರ್ಯಕೆ ಬರುವನು||
– ಪ್ರತಿಭಾ ಪ್ರಶಾಂತ್
ಉತ್ತರ ಕನ್ನಡ ಜಿಲ್ಲೆ
