ಪ್ರಕೃತಿ ಬಿಂಬ

ಪ್ರಕೃತಿ ಬಿಂಬ

© ಕಾಂತರಾಜು ಡಿ., ಕರಿಎದೆಯ ಲಾವುಗೆ

ಭಾರತದಾದ್ಯಂತ ಕಂಡುಬರುವ ಈ ಕರಿಎದೆಯ ಲಾವುಗೆ(ರೈನ್ ಕ್ವೆಯಿಲ್) ಪಕ್ಷಿಗಳು ತಮ್ಮ ಅಧಿಕ ಅವಧಿಯನ್ನು ಎಳೆಯ ಪೈರು ಅಥವಾ ಹುಲ್ಲುಗಾವಲುಗಳ ಹೊದಿಕೆಯಡಿ ಕಳೆಯುತ್ತವೆ. ಮಾಸಲು ಹಳದಿ ಮಿಶ್ರಿತ ಕಂದು ಬಣ್ಣದ  ಗರಿಗಳನ್ನೊಳಗೊಂಡ ಈ ಹಕ್ಕಿಗಳು, ಆ ಗರಿಗಳ ಮೇಲ್ಭಾಗದಲ್ಲಿ ಹಗುರ ಗೆರೆಗಳು ಮತ್ತು ಅವ್ಯವಸ್ಥಿತವಾದ ಕಪ್ಪು ಕಲೆಯನ್ನು ಹೊಂದಿರುತ್ತವೆ. ಹೆಣ್ಣು ಹಕ್ಕಿಗೆ ಕಪ್ಪು ಎದೆ ಮತ್ತು ಕತ್ತಿನ ಬಳಿಯ ಕಪ್ಪು ಮತ್ತು ಬಿಳುಪು ಗುರುತು ಇರುವುದಿಲ್ಲ. ಆದರೆ ಗಂಡು ಹಕ್ಕಿಯ ಎದೆಯ ಮೇಲ್ಭಾಗ ಹಾಗೂ ಅನೇಕ ವೇಳೆ ಹೊಟ್ಟೆಯ ಮಧ್ಯಭಾಗವೂ ಕಪ್ಪಗಿರುತ್ತದೆ. ಈ ಪಕ್ಷಿಯ ಕೂಗು ವ್ಹಿಚ್-ವ್ಹಿಚ್ ಎಂಬುವ ಸುಶ್ರಾವ್ಯವಾದ ದ್ವಿಗುಣ ಶಿಳ್ಳು. ಈ ಹಕ್ಕಿಗಳ ಸಂತಾನೋತ್ಪತ್ತಿಯ ಕಾಲ ಮಾರ್ಚ-ಅಕ್ಟೋಬರ್ ತಿಂಗಳು. ಒಂದು ಸಂತಾನೋತ್ಪತ್ತಿಯಲ್ಲಿ ಹೆಣ್ಣು ಹಕ್ಕಿ ಹಾಕಿದ ಮೊಟ್ಟೆಗಳ ಸಂಖ್ಯೆಯನ್ನು ‘ಕ್ಲಚ್ ಸೈಜ್’ ಎಂದು ಕರೆಯುತ್ತಾರೆ. ಸಾಮಾನ್ಯವಾಗಿ ಈ ಹಕ್ಕಿಯ ಕ್ಲಚ್ನಲ್ಲಿ ಸುಮಾರು 6 ರಿಂದ 8 ಮೊಟ್ಟೆಗಳಿರುತ್ತವೆ. ಅವು ಮೊಟ್ಟೆಗಳಿಗೆ ಕಾವು ಕೊಡುವ ಕಾಲಾವಧಿಯು ಹದಿನಾರರಿಂದ ಹದಿನೆಂಟು ದಿನಗಳು ಹಾಗು ಆ ಮರಿಗಳು ತಮ್ಮ ಹೆತ್ತವರೊಂದಿಗೆ ಸುಮಾರು ಎಂಟು ತಿಂಗಳುಗಳ ಕಾಲ ಉಳಿಯುತ್ತವೆ.

© ಕಾಂತರಾಜು ಡಿ., ಚಿಟ್ಟು ಮಡಿವಾಳ

ಭಾರತ, ಸೇರಿದಂತೆ ಬಾಂಗ್ಲಾದೇಶ, ಭೂತಾನ್, ನೇಪಾಳ, ಶ್ರೀಲಂಕಾಗಳಲ್ಲಿ ಕಂಡುಬರುವ ಈ ಪಕ್ಷಿಗಳ ಆಹಾರವು ಪೂರ್ಣವಾಗಿ ಕೀಟಗಳು ಹಾಗೂ ಚಿಟ್ಟೆ ಅಥವಾ ಪತಂಗ ಮರಿಗಳು. ಚಿಟ್ಟು ಮಡಿವಾಳದ  ಗಂಡು ಹಕ್ಕಿ ಸ್ಥಿರವಾಗಿ ಮೇಲೆತ್ತಿರುವ ಬಾಲದಡಿ ಚೆಸ್ಟನೆಟ್ ಬಣ್ಣ ಹೊಂದಿರುವ ಕಂದು ಮತ್ತು ಹೊಳೆಯುವ ಕಪ್ಪು ವರ್ಣಗಳ ಸಣ್ಣ ಗಾತ್ರದ ಪಕ್ಷಿ. ರೆಕ್ಕೆಯಲ್ಲಿ ಬಿಳುಪು ಮಚ್ಚೆಯಿದ್ದು ಹಾರುವಾಗ ಅದು ಸರಿಯಾಗಿ ಗೋಚರಿಸುತ್ತದೆ.ಬಾಲವನ್ನು ಎತ್ತಿಕೊಂಡು ಓಡಾಡುವುದು ಈ ಹಕ್ಕಿಗಳ ವಿಶೇಷತೆ. ಅವುಗಳು ಬಹಳ ಹರ್ಷದಾಯಕ ರಾಗಗಳಲ್ಲಿ ಹಾಡುತ್ತವೆ.ಈ ಹಾಡನ್ನು ಗಂಡು ಪಕ್ಷಿಯು ಮುಖ್ಯವಾಗಿ ಪ್ರಣಯಾಚರಣೆ ಮತ್ತು ತನ್ನ ಗಡಿಯೊಳಗೆ ಹಕ್ಕಿಲ್ಲದೆ ಹೊಕ್ಕ ಪಕ್ಷಿಗಳನ್ನು ಎದುರಿಸಲು ಉಪಯೋಗಿಸುತ್ತವೆ. ಗಂಡು ಹಕ್ಕಿ ಹಾಡುವಾಗ ತನ್ನ ಎದೆಯನ್ನು ಉಬ್ಬಿಸಿ, ದೇಹವನ್ನು ಹಿಗ್ಗಿಸಿ, ಮೇಲೆತ್ತಿದ ಬಾಲವನ್ನು ಪೂರ್ಣವಾಗಿ ಬೆನ್ನ ಮೇಲೇರುವಂತೆ ಬಗ್ಗಿಸುತ್ತದೆ. ಈ ಹಕ್ಕಿಗಳು ಉತ್ತರಭಾರತದಲ್ಲಿ ಮುಂಗಾರಿನ ಸಮಯದಲ್ಲಿ (ಜೂನ್ ತಿಂಗಳು)ಸಂತಾನಾಭಿವೃದ್ಧಿ ನಡೆಸಿದರೆ, ದಕ್ಷಿಣ ಭಾರತದಲ್ಲಿ ಸೆಪ್ಟೆಂಬರ್ ದಿಂದ ಡಿಸೆಂಬರ್ ವರೆಗೆ ಸಂತಾನೋತ್ಪತ್ತಿ ನಡೆಸುತ್ತವೆ. 3 ರಿಂದ 5 ಮೊಟ್ಟೆಗಳನ್ನಿಟ್ಟು, 10 ರಿಂದ 12  ದಿನಗಳವರೆಗೆ ಹೆಣ್ಣು ಹಕ್ಕಿಗಳು ಮಾತ್ರ ಕಾವು ಕೊಡುತ್ತದೆ. ಹೆಣ್ಣು ಮತ್ತು ಗಂಡು ಹಕ್ಕಿಗಳೆರಡೂ ಮರಿಗಳಿಗೆ ಆಹಾರ ನೀಡುತ್ತವೆ.

© ಕಾಂತರಾಜು ಡಿ.,  ಸಿಂಪಿಗ

ಏಷ್ಯಾ ಖಂಡದಾದ್ಯಂತ ಕಂಡುಬರುವ ಈ ಹಕ್ಕಿ ಎಲೆಗಳನ್ನು ನೇಯ್ದು ಉತ್ತಮವಾಗಿ ಗೂಡು ಕಟ್ಟುವ ಕಾರಣದಿಂದ ಇದನ್ನು ಕನ್ನಡದಲ್ಲಿ ʼದರ್ಜಿಹಕ್ಕಿʼ ಎಂತಲೂ ಕರೆಯುತ್ತಾರೆ. ಮೃದು ನಾರು, ಕೂದಲು,ಹತ್ತಿ, ತರಕಾರಿಗಳ ನವಿರು ಕೂದಲುಗಳಿಂದ ತಮ್ಮ ಗೂಡನ್ನು ರಚಿಸಿಕೊಳ್ಳುವ ಈ ಹಕ್ಕಿ, ಪಕ್ಷಿಗಳ ವಾಸ್ತುಶಿಲ್ಪ ಕಲೆಯನ್ನು ತಮ್ಮ ಗೂಡಿನ ರಚನೆಯ ಮೂಲಕ ಎತ್ತಿ ತೋರುತ್ತದೆ. ಆಲೀವ್ ಹಸಿರು ಮೈಬಣ್ಣವಿರುವ ಸಣ್ಣ ಗಾತ್ರದ ಈ ಪಕ್ಷಿ, ನೀಳವಾದ ತೆಳು ಬಾಲ ಹಾಗು ಸೂಜಿಯಂತಹ ಮಧ್ಯಗರಿಯನ್ನೂ ಹೊಂದಿದೆ. ಸಣ್ಣ ಕೀಟಗಳನ್ನು ತಿಂದು ಬದುಕುವ ಅವುಗಳಿಗೆ ಹೂವುಗಳ ಮಧು ಎಂದರೆ ಅತೀ ಇಷ್ಟವಾಗಿದ್ದು, ಹಾರಿವಾಣ ಮತ್ತು ಬೂರುಗ ಮರಗಳ ಹೂವುಗಳಲ್ಲಿ ಅದಕ್ಕಾಗಿ ಹುಡುಕುತ್ತಿರುತ್ತವೆ. ಟುವಿಟ್-ಟುವಿಟ್-ಟುವಿಟ್ ಅಥವಾ ಪುಟ್ಟಿ-ಪುಟ್ಟಿ-ಪುಟ್ಟಿ ಎಂದು ಮಧುರವಾದ ಧ್ವನಿಯಲ್ಲಿ ಕೂಗುತ್ತದೆ. 3 ರಿಂದ 4 ಮೊಟ್ಟೆಗಳನ್ನಿಡುವ ಈ ಹಕ್ಕಿಯ ಮೊಟ್ಟೆಗಳ ಬಣ್ಣ ನೀಲಿ ಬಿಳುಪು ಅಥವಾ ಕಂದು ಚುಕ್ಕೆಯ ಕೆಂಪನೆಯ ಬಣ್ಣ

© ಕಾಂತರಾಜು ಡಿ., ನೀಲಿರೆಕ್ಕೆಯ ಎಲೆಯಕ್ಕಿ

ಭಾರತ ಹಾಗು ಶ್ರೀಲಂಕಾಗಳಲ್ಲಿನ ಕಾಡು ಮತ್ತು ಗುಡ್ಡಗಾಡಿನಲ್ಲಿ ಕಂಡುಬರುವ ಈ ಪಕ್ಷಿಗಳು ಹಣ್ಣು, ಹೂವಿನ ಮಕರಂದ ಹಾಗು ಕ್ರಿಮಿ-ಕೀಟಗಳನ್ನು ಆಹಾರವಾಗಿ ಸೇವಿಸುತ್ತವೆ. ಗಂಡು ಹಕ್ಕಿಗಳು ಹಸಿರು ಮೈಬಣ್ಣ, ಹಳದಿ ಬಣ್ಣದ ತಲೆ, ಕಪ್ಪು ಬಣ್ಣದ ಮುಖ ಹಾಗು ಕಂಠವನ್ನು ಹೊಂದಿದ್ದು ನೀಲಿ ಬಣ್ಣದ ಮೀಸೆಯಂತೆ ಗೆರೆಯನ್ನು ಹೊಂದಿರುತ್ತವೆ. ಹೆಣ್ಣು ಪಕ್ಷಿ ಸ್ವಲ್ಪ ವಿಭಿನ್ನವಾಗಿದ್ದು, ಹಸಿರು ಬಣ್ಣದ ತಲೆ ಹಾಗು ನೀಲಿ ಬಣ್ಣದ ಕಂಠವನ್ನು ಹೊಂದಿರುತ್ತವೆ. ಮರಗಳ ಮೇಲೆ ತಮ್ಮ ಗೂಡನ್ನು ಕಟ್ಟಿಕೊಳ್ಳುವ ಈ ಹಕ್ಕಿಗಳು 2 ರಿಂದ 3 ಮೊಟ್ಟೆಗಳನ್ನಿಡುತ್ತವೆ.

ಚಿತ್ರಗಳು:  ಕಾಂತರಾಜು ಡಿ
          ಲೇಖನ: ಶಾಂಭವಿ ಎನ್.

Print Friendly, PDF & Email
Spread the love

One thought on “ಪ್ರಕೃತಿ ಬಿಂಬ

  1. ಒಳ್ಳೆಯ ಪ್ರಯತ್ನ ಶಾಂಭವಿ….ಹೀಗೆ ಮುಂದುವರೆಯಲಿ ನಿನ್ನ ಬರೆಯುವ ಕಲೆ..

Comments are closed.

error: Content is protected.