ಮಾಸ ವಿಶೇಷ – ಕಾಡು ಸೀಗೆ
©ನಾಗೇಶ್ ಓ ಎಸ್, ಕಾಡು ಸೀಗೆ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ
ಇಂಗ್ಲೀಷ್ ಹೆಸರು : Climbing acacia
ವೈಜ್ಞಾನಿಕ ಹೆಸರು : Senegalia pennata
ಕಾಡುಸೀಗೆಯು ಪೊದೆಯಂತೆ ಬೆಳೆಯುವ ಒಂದು ಸಣ್ಣ ಮರ. ಭಾರತದಲ್ಲಿ ಕಂಡುಬರುವ ಮರವಿದು. ಇದರ ರೆಂಬೆಕೊಂಬೆಗಳು ಮುಳ್ಳುಗಳಿಂದ ಕೂಡಿದ್ದು, ಸುಮಾರು ಹತ್ತರಿಂದ ಹದಿನೈದು ಮೀಟರ್ ಎತ್ತರಕ್ಕೆ ಬೆಳೆಯುತ್ತದೆ. ಎಳೆಯ ಕೊಂಬೆಗಳು ಹಸಿರಾಗಿದ್ದು, ಬೆಳೆದಂತೆ ಬೂದು ಬಣ್ಣಕ್ಕೆ ತಿರುಗುತ್ತವೆ. ಕಡು ಹಸಿರು ಬಣ್ಣದ ಸಂಯುಕ್ತ ಎಲೆಗಳನ್ನು ಹೊಂದಿದ್ದು ಎಲೆಗಳು ಕಾಂಡದ ಮೇಲೆ ಪರ್ಯಾಯವಾಗಿ ಬೆಳೆಯುತ್ತವೆ. ಇದರ ದುಂಡಾಕಾರದ ಹೂವುಗಳು ಹಸಿರು ಹಾಗೂ ಗುಲಾಬಿ ಬಣ್ಣದಲ್ಲಿರುತ್ತವೆ. ಸಾಮಾನ್ಯವಾಗಿ ಈ ಸೀಗೆಯ ಚಿಗುರನ್ನು ಆಹಾರವಾಗಿ ಉಪಯೋಗಿಸುತ್ತಾರೆ ಹಾಗೂ ಕಾಯಿಯನ್ನು ಒಣಗಿಸಿ ಪುಡಿಮಾಡಿ ಮಾರ್ಜಕವಾಗಿಯೂ ಉಪಯೋಗಿಸುತ್ತಾರೆ. ಅಜೀರ್ಣವಾದಾಗ ಈ ಸೀಗೆ ಎಲೆಯ ರಸವನ್ನು ಹಾಲಿನಲ್ಲಿ ಬೆರೆಸಿ ಕುಡಿಸುತ್ತಾರೆ ಹಾಗೂ ಇನ್ನಿತರ ಆಯುರ್ವೇದದ ಔಷಧವಾಗಿ ಈ ಮರದ ಎಲೆ ಹಾಗೂ ಕಾಯಿಗಳನ್ನು ಉಪಯೋಗಿಸುತ್ತಾರೆ.