ಬಣ್ಣದ ಬಕಾಸುರರು

ಬಣ್ಣದ ಬಕಾಸುರರು

ಬಾಲ್ಯ ಎಷ್ಟು ಚಂದ!. ನೋಡಿದ್ದನ್ನೆಲ್ಲ ಮುಟ್ಟಿ ಅನ್ವೇಷಿಸುವ ಆಸೆ. ಚಿಕ್ಕವರಿದ್ದಾಗ ಬೇಸಿಗೆ ರಜೆ ಬಂದ್ರೆ ಸಾಕು, ಪುಸ್ತಕಗಳಿಗೂ ರಜೆಕೊಟ್ಟು ಸ್ನೇಹಿತರೊಟ್ಟಿಗೆ ಆಟ ಆಡುವುದು, ಸೈಕಲ್ ತುಳಿಯುವುದು, ಅಲ್ಲೊಂದು ಇಲ್ಲೊಂದು ಇದ್ದ ಚೇಪೆಕಾಯಿ, ನೇರಳೆ, ಗಸಗಸೆ ಹಣ್ಣು, ಮಾವಿನಕಾಯಿ, ನೆಲ್ಲಿಕಾಯಿಗಳನ್ನು ಅರಸಿ ಬೀದಿ ಬೀದಿಗಳಲ್ಲಿ ಸುತ್ತುವುದು, ಕೆಲವೊಮ್ಮೆ ಗುಂಪಾಗಿ ಬರುವ ಏರೋಪ್ಲೇನ್ ಚಿಟ್ಟೆಗಳನ್ನು ಪಾರ್ಥೇನಿಯಂ ಗಿಡದಿಂದ ಪೊರಕೆಯಂತೆ ಮಾಡಿ ಯಾರ್ಯಾರು ಎಷ್ಟೆಷ್ಟು ಮಿಡತೆಗಳನ್ನು ಹೊಡೆದು ಸಾಯಿಸುತ್ತೇವೆ ಎಂದು ಸ್ಪರ್ಧೆ ಮಾಡುವುದು, ಸತ್ತ ಏರೋಪ್ಲೇನ್ ಚಿಟ್ಟೆಗಳನ್ನು ಅಥವಾ ಮಿಡತೆಗಳನ್ನು ದಾರದಲ್ಲಿ ಕಟ್ಟಿ ನಾಯಿಗಳಿಗೆ ಅದರ ರುಚಿ ತೋರಿಸಿ, ಅವುಗಳು ಮೇಲಕ್ಕೆ ಜಿಗಿಯುವಂತೆ ಮಾಡಿದ ನೆನಪುಗಳು. ಅವುಗಳನ್ನು ನೆನೆದರೆ ಕೆಲವೊಮ್ಮೆ ಈ  ಪುಟ್ಟ ಜೀವಿಗಳನ್ನು ಕೊಂದೆವಲ್ಲ ಎಂದು ಬೇಸರವಾದರೂ, ಗೊತ್ತಿಲ್ಲದೆ ಮಾಡಿದ ಮೋಜು ಈಗಲೂ ಖುಷಿ ತರಿಸುತ್ತದೆ. ಯಾಕಾದರೂ ದೊಡ್ಡವರಾದೆವೋ ಎಂದು ಅನಿಸುವಂತೆ ಮಾಡುತ್ತದೆ. ಸರಿ ಇಂದಿನ ವಿಷಯವನ್ನು ಒಮ್ಮೆ ನೋಡೋಣ.

ನೀವೆಲ್ಲ ಗಮನಿಸಿರಬೇಕು,  ಎರಡು ಸಾವಿರದ ಇಪ್ಪತ್ತು ಹೊಸ ವರ್ಷವನ್ನು ಸ್ವಾಗತಿಸಿದ ನಮಗೆ, ಆರಂಭದಲ್ಲಿ ಆದ ಕಾಡ್ಗಿಚ್ಚು, ವನ್ಯಮೃಗಗಳ ನಷ್ಟ ನೋಡಿ ಇದು ಯಾವುದೊ ವಿಪತ್ತಿನ ಮುನ್ಸೂಚನೆ ಎಂಬುದರ ಸುಳಿವು ಸಿಕ್ಕಿತ್ತು.

ಕಂಡು ಕಂಡುದನೆಲ್ಲ ಕೊಂದು
ಅಟ್ಟಹಾಸದಿ ಮೆರೆವ ಜನಕ್ಕೆ,
ಕಾಣದ ಜೀವಿಯು ಬಂದು,
ತಲ್ಲಣಿಸುವುದು ಜಗವ.

ಇದು ಯಾರ ರಚನೆಯೋ ತಿಳಿಯದು ಆದರೆ ನಮ್ಮ ಇಂದಿನ ಪರಿಸ್ಥಿತಿಗೆ ಎಷ್ಟು ಹೊಂದುತ್ತೆ ಅಲ್ಲವೇ? ಅಂಫಾನ್ ಚಂಡಮಾರುತದಿಂದ ಕಂಗಾಲಾದ ಉತ್ತರ ಭಾರತದ ಜನರಿಗೆ, ಗಾಯದ ಮೇಲೆ ಬರೆ ಎಳೆದದ್ದು ಆಫ್ರಿಕಾದಿಂದ ಬಂದ  ‘ಬಣ್ಣದ ಬಕಾಸುರ’ರ ಹಿಂಡಿನ ದಾಳಿ. ‘ಡೆಸರ್ಟ್ ಲೋಕಸ್ಟ್’ ಎಂದು ಕರೆಯಲ್ಪಡುವ  ಈ ಮಿಡತೆಗಳು, ಭಾರತದ ಹೃದಯ ಭಾಗವಾದ ಉತ್ತರ ಪ್ರದೇಶ, ಹರಿಯಾಣ, ಪಂಜಾಬ್, ಮಧ್ಯಪ್ರದೇಶಗಳಲ್ಲಿನ ರೈತರಿಗೆ ತಲೆನೋವು ತಂದೊಡ್ಡಿದವು.

ಈ ಸಣ್ಣ ಜೀವಿಗಳ ಬಗ್ಗೆ ನಮಗೆ ಗೊತ್ತೇ ಇಲ್ಲದ ವಿಸ್ಮಯಕಾರೀ ಅಂಶಗಳನ್ನು ನೋಡೋಣ ಬನ್ನಿ.

ಮಿಡತೆಗಳ ವೈಜ್ಞಾನಿಕ ಹೆಸರು ಸ್ಕಿಸ್ಟೊಕೆರ್ಕಾ ಗ್ರೆಗೇರಿಯಾ” (Schistocerca gregaria), ಇವು ಕೀಟ ವರ್ಗಕ್ಕೆ ಸೇರಿದ್ದು, ಇಲ್ಲಿಯವರೆಗೂ ಭೂಮಿಯ ಮೇಲೆ ಹನ್ನೊಂದು ಸಾವಿರಕ್ಕೂ ಹೆಚ್ಚು ಮಿಡತೆ ಪ್ರಭೇದಗಳನ್ನು ಗುರುತಿಸಲಾಗಿದೆ. ಇವು ಸಸ್ಯಾಹಾರಿಗಳಾದ್ದರಿಂದ ತೋಟಗಳು, ಹೊಲಗಳು ಮತ್ತು ಕಾಡುಗಳನ್ನು ಆವಾಸ ಸ್ಥಳವನ್ನಾಗಿ ಮಾಡಿಕೊಂಡಿವೆ. ಸುಮಾರು 0.5 ರಿಂದ 5 ಇಂಚಿನವರೆಗೆ ಉದ್ದ ಬೆಳೆಯಬಲ್ಲ ಇವು, ಹೆಚ್ಚಾಗಿ ಕಂದು, ಹಳದಿ ಮತ್ತು ಹಸಿರು ಬಣ್ಣಗಳಲ್ಲಿ ಕಾಣಸಿಗುತ್ತವೆ. ಮಿಡತೆಗಳು ಸಾಮಾನ್ಯವಾಗಿ ಹಗಲಿನಲ್ಲಿ ಸಕ್ರಿಯವಾಗಿದ್ದು, ರಾತ್ರಿ ವೇಳೆ ವಿಶ್ರಾಂತಿ ಪಡೆಯುತ್ತವೆ. ಮಿಡತೆ ತಮ್ಮ ದೇಹದ ಉಷ್ಣತೆಯನ್ನು ಹೆಚ್ಚಿಸುವ ಸಲುವಾಗಿ ಸೂರ್ಯನ.

ಶಾಖವನ್ನು ಹೀರಿಕೊಂಡು ಅವಶ್ಯಕ ಶಕ್ತಿಯನ್ನು ಪಡೆಯುತ್ತವೆ. ಆದರೆ ನಾನು ಮತ್ತು ನನ್ನ ಅಕ್ಕ ರಾತ್ರಿ ಸುಮಾರು 10.30 ಗಂಟೆಗೆ ಟೆರೆಸ್ ಮೇಲೆ ಓಡಾಡುತ್ತಿದ್ದಾಗ ಅಕ್ಕ ನನ್ನನ್ನು ನಿಲ್ಲಿಸಿ, ಹೂವಿನ ಗಿಡದ ಮೇಲೆ ಕುಳಿತಿದ್ದ ಮಿಡತೆಯನ್ನು ತೋರಿಸಿದಾಗ ನನಗೆ ತಿಳಿಯಿತು, ಕೆಲವು ಪ್ರಭೇದದ ಮಿಡತೆಗಳು ರಾತ್ರಿಯಲ್ಲಿಯೂ ಆಹಾರ ಹುಡುಕುತ್ತವೆ ಎಂದು!

ಮಿಡತೆ ಡೈನೋಸಾರ್ ಗಳಿಗಿಂತಲೂ  ಹಿಂದಿನವು!

ಈ ಚಿಕ್ಕ ಜೀವಿಗಳು ಡೈನೋಸಾರ್ ಗಳಿಗಿಂತಲೂ ಹಿರಿಯರು ಎಂದರೆ ಒಂದು ಕ್ಷಣ ನಂಬಲು ಕಷ್ಟವಾದರೂ ಕೂಡ ಇದು ಸತ್ಯ!

ಮೂನ್ನೂರು ದಶಲಕ್ಷ ವರ್ಷಗಳ ಹಿಂದೆ ಸಂಭವಿಸಿದ ಕಾರ್ಬೊನಿಫೆರಸ್ ಅವಧಿಯ ಪಳೆಯುಳಿಕೆಗಳಲ್ಲಿ ಮೊಟ್ಟಮೊದಲ ಪ್ರಾಚೀನ ಮಿಡತೆಗಳು ಕಾಣಿಸಿಕೊಂಡವು. ನಂತರ,  ಇನ್ನೂರು ದಶಲಕ್ಷಕ್ಕೂ ಹೆಚ್ಚು ವರ್ಷಗಳ ಹಿಂದೆ ಸಂಭವಿಸಿದ ಟ್ರಯಾಸಿಕ್ ಅವಧಿಯಲ್ಲಿ,  ಪ್ರಸ್ತುತ ಮಿಡತೆಗಳ ಪೂರ್ವಜರು ವಿಕಸನಗೊಂಡರು. ಪ್ರಾಚೀನ ಈಜಿಪ್ಟ್‌ ನಲ್ಲಿ ಕ್ರಿ.ಪೂ. 2500 ರ ಹಿಂದಿನ ಗೋರಿಗಳಲ್ಲಿನ ಚಿತ್ರಣಗಳ ಮೂಲಕ ಅವುಗಳನ್ನು ದಾಖಲಿಸಲಾಗಿತ್ತು. ಕುರಾನ್ ಮತ್ತು ಇತರ ಹಲವಾರು ಪವಿತ್ರ ಗ್ರಂಥಗಳಲ್ಲಿಯೂ  ಕೂಡ ಮಿಡತೆಗಳ ಬಗ್ಗೆ ಉಲ್ಲೇಖಿಸಲಾಗಿದೆ (ಮಿಡತೆಗಳ ಬಗ್ಗೆಗಿನ ಸತ್ಯಾಂಶಗಳು).

ಮಿಡತೆಗಳ ಜೀವನಚಕ್ರ

ಮಿಡತೆಗಳ ಜೀವನಚಕ್ರವು ಮೊಟ್ಟೆ, ನಿಂಫ್ ಮತ್ತು ವಯಸ್ಕ ಎಂಬ ಮೂರು ಹಂತಗಳನ್ನು ಒಳಗೊಂಡಿದ್ದು, ಹೆಣ್ಣು ಮಿಡತೆಗಳು ಶರತ್ಕಾಲದಲ್ಲಿ ಹಲವಾರು ಮೊಟ್ಟೆಗಳನ್ನಿಟ್ಟು ವಸಂತಕಾಲದಲ್ಲಿ ಮೊಟ್ಟೆಗಳಿಂದ ಚಿಕ್ಕ ಮಿಡತೆ (ನಿಂಫ್)ಗಳಾಗಿ ಹೊರಬರುತ್ತವೆ. ನಿಂಫ್ ಎಂದು ಕರೆಯಲ್ಪಡುವ ಚಿಕ್ಕ ಮಿಡತೆ ಸಣ್ಣ ವಯಸ್ಕ ಮಿಡತೆಯನ್ನು ಹೋಲುತ್ತದೆ. ಆದರೆ ಇವುಗಳಿಗೆ ರೆಕ್ಕೆಗಳಿರುವುದಿಲ್ಲ,  ಗಾತ್ರದಲ್ಲಿ  ದೊಡ್ಡದಾಗಿ ಬೆಳೆದಂತೆ, ಅದು ತನ್ನ  ಹೊರಪೊರೆಯನ್ನು (Exoskeleton) ಐದು ಅಥವಾ ಆರು ಬಾರಿ ಕಳಚುತ್ತವೆ. ಅಂತಿಮವಾಗಿ, ರೆಕ್ಕೆಗಳು ಬಲಿತು ದೊಡ್ಡದಾಗಿ ಹಾರಲು ಸಮರ್ಥವಾಗುತ್ತವೆ.

ಸಂತಾನೋತ್ಪತ್ತಿ

ಪ್ರತಿಯೊಂದು ಪ್ರಭೇದದ ಮಿಡತೆಯ ಶಬ್ಧವೂ ವಿಶಿಷ್ಟವಾಗಿರುವುದರಿಂದ, ವಿಭಿನ್ನ ಪ್ರಭೇದಗಳ ನಡುವಿನ ವ್ಯತ್ಯಾಸವನ್ನು ಗುರುತಿಸಲು ಹಾಗೂ ತಮ್ಮದೇ  ಪ್ರಭೇದದ  ಸಂಗಾತಿಗಳನ್ನು ಹುಡುಕಲು ಸಹಾಯವಾಗುತ್ತದೆ.

ಮಳೆಗಾಲದ ನಂತರ ಹೆಣ್ಣುಮಿಡತೆಗಳು ಬೆಚ್ಚಗಿನ ತೇವಾಂಶವುಳ್ಳ ಮರಳಿನಲ್ಲಿ 50 ಅಥವಾ 60 ಮಿ.ಮೀ ಆಳಕ್ಕೆ ಬಿಲ ಮಾಡಿ‌  ಐವತ್ತರಿಂದ ನೂರು ಮೊಟ್ಟೆಗಳನ್ನಿಟ್ಟು, ನಯವಾದ ದ್ರವದೊಂದಿಗೆ ಬೆರಸುತ್ತವೆ. ಇದು ಸ್ವಲ್ಪ ಗಟ್ಟಿಯಾಗಿ ಮೊಟ್ಟೆಗಳ ಸುತ್ತಲೂ ಗಾಳಿಯ ಪೂರೈಕೆಯನ್ನು ನಿರ್ವಹಿಸಲು ಸಹಾಯ ಮಾಡುತ್ತವೆ. ಸುತ್ತಮುತ್ತಲಿನ ತಾಪಮಾನ ಮತ್ತು ತೇವಾಂಶದ ಅನುಗುಣವಾಗಿ ಹತ್ತರಿಂದ ಇಪ್ಪತ್ತು ದಿನಗಳಲ್ಲಿ, ಮೊಟ್ಟೆಗಳಿಂದ ಮರಿಗಳು ಹೊರಬರುತ್ತವೆ.

ವಲಸೆ

ಮಿಡತೆಗಳ ಅತ್ಯಂತ ಆಶ್ಚರ್ಯಕರವಾದ ಸಂಗತಿ ಎಂದರೆ, ಇವು ಆಹಾರದ ಕೊರತೆಯಿರುವಾಗ ವರ್ಷದ ತಂಪಾದ ತಿಂಗಳುಗಳಲ್ಲಿ ಉತ್ತಮ ಆಹಾರದ ಮೂಲಗಳನ್ನು ಹುಡುಕಿಕೊಂಡು ಲಕ್ಷಗಟ್ಟಲೇ ಹಿಂಡುಗಳಲ್ಲಿ ವಲಸೆ ಹೋಗುತ್ತವೆ. ಇದನ್ನು ಸಮಗ್ರ ಹಂತ (Gregarious phase) ಎಂದು ಕರೆಯಲಾಗುತ್ತದೆ.

ಮಿಡತೆಗಳು ಕಂದು ಅಥವಾ ಹಸಿರು ಬಣ್ಣದ ದೇಹಗಳನ್ನು ಹೊಂದಿರುವುದರಿಂದ ಹಸಿರು ಹುಲ್ಲು ಮತ್ತು ಮರಗಳ ಮೇಲೆ ನಿಧಾನವಾಗಿ ಚಲಿಸುವ ಕಾರಣ ಇವುಗಳ ಇರುವಿಕೆಯನ್ನು ಗುರುತಿಸಲು ಕಷ್ಟವಾಗುತ್ತದೆ. ಈ ಮಿಡತೆಗಳು ಸಾಮಾನ್ಯವಾಗಿ ಸಂಗಾತಿಗಳನ್ನು ಹುಡುಕುವಾಗ ಬಿಟ್ಟು, ಬೇರೆ ಸಮಯದಲ್ಲಿ ಇತರ ಮಿಡತೆಗಳೊಂದಿಗೆ  ಬೆರೆಯುವುದಿಲ್ಲ. ಇವು ಏಕಾಂತವಾಗಿರಲು ಬಯಸುತ್ತವೆ.

ದೇಹ ರಚನೆ

ಮಿಡತೆಗಳ ದೇಹವನ್ನು ತಲೆ, ಎದೆ ಮತ್ತು ಹೊಟ್ಟೆ ಎಂದು ಮೂರು ಭಾಗಗಳಾಗಿ ವಿಂಗಡಿಸಬಹುದು. ತಲೆ ಭಾಗವು ಕಣ್ಣುಗಳು, ಆಂಟೆನಾಗಳು ಮತ್ತು ಬಾಯಿಯನ್ನು ಒಳಗೊಂಡಿದ್ದು. ತಲೆಯ ನಂತರದ ಭಾಗವು ಕಾಲುಗಳು ಮತ್ತು ರೆಕ್ಕೆಗಳಿಂದ ಕೂಡಿದೆ. ಹೊಟ್ಟೆಯ ಭಾಗವು ಜೀರ್ಣಕ್ರಿಯೆ ಮತ್ತು ಸಂತಾನೋತ್ಪತ್ತಿಯ ಅಂಗಗಳನ್ನು ಒಳಗೊಂಡಿದೆ.

ಮಿಡತೆಗಳು ಒಟ್ಟು ಐದು ಕಣ್ಣುಗಳನ್ನು ಹೊಂದಿದ್ದು ಎರಡು ಕಣ್ಣುಗಳು ತಲೆಯ ಎರಡೂ ಬದಿಯಲ್ಲಿರುತ್ತವೆ. ಪ್ರತಿ ಕಣ್ಣು ಸಾವಿರಾರು ಮಸೂರದಂತಹ ರಚನೆಯಿಂದ ಕೂಡಿರುತ್ತದೆ [ಕಾಂಪೌಂಡ್‌ ಐ], ಇದು ಮಿಡತೆಗೆ ಎಲ್ಲಾ ದಿಕ್ಕುಗಳಲ್ಲಿಯೂ ನೋಡಲು ಅನುವು ಮಾಡಿಕೊಡುತ್ತದೆ. ಉಳಿದ ಮೂರು ಕಣ್ಣುಗಳು ಮಿಡತೆಗಳ ತಲೆಯ ಮೇಲಿನ ಎರಡು ಆಂಟೆನಾಗಳ ತಳದಲ್ಲಿ ಒಂದೊಂದು ಕಣ್ಣು ಮತ್ತು ಎರಡು ಆಂಟೆನಾಗಳ ನಡುವೆ ಒಂದು ಕಣ್ಣು, ಹೀಗೆ ಒಟ್ಟು  ಮೂರು ಸಣ್ಣ ಕಣ್ಣುಗಳನ್ನು ಹೊಂದಿದೆ, ಈ ಮೂರು ಸಣ್ಣ ಕಣ್ಣುಗಳ ಉದ್ದೇಶ ಇನ್ನೂ ತಿಳಿದು ಬಂದಿಲ್ಲ.

ಮಿಡತೆಯ ‘ಕಿವಿಗಳು’ ಅದರ ಹೊಟ್ಟೆಯ ಮೇಲೆ ಇರುವುದು ಅತ್ಯಂತ ಕುತೂಹಲಕಾರಿ ಸಂಗತಿ. ಕಿಬ್ಬೊಟ್ಟೆಯ ಭಾಗದ ಎರಡೂ ಬದಿಯಲ್ಲಿ, ರೆಕ್ಕೆಗಳ ಕೆಳಗೆ, ಸರಳವಾದ ಟಿಂಪನಮ್ (tympanum) ಎಂದು ಕರೆಯಲ್ಪಡುವ ಅಂಗ ಇದ್ದು, ಇದು ಧ್ವನಿ ತರಂಗಗಳಿಗೆ ಪ್ರತಿಕ್ರಿಯೆಯಾಗಿ ಕಂಪಿಸುವ ಪೊರೆಗಳನ್ನು ಒಳಗೊಂಡಿರುತ್ತವೆ. ಇತರ ಮಿಡತೆಗಳು ಹೊರಸೂಸುವ ಶಬ್ದಗಳನ್ನು ಕೇಳಲು ಅನುವು ಮಾಡಿಕೊಡುತ್ತವೆ.

ಮಿಡತೆಗಳು ವಿಶೇಷ ರೀತಿಯ ಚರ್ಮದಿಂದ ಮುಚ್ಚಲ್ಪಟ್ಟಿದ್ದು, ಇದನ್ನು ಹೊರಪೊರೆ ಎಂದು ಕರೆಯಲಾಗುತ್ತದೆ. ಇದು ಮೂರು ವಿಭಿನ್ನ ಪದರಗಳನ್ನು ಹೊಂದಿದ್ದು, ದೇಹದ ಒಳಭಾಗಕ್ಕೆ ಹತ್ತಿರವಿರುವ ಪದರವು ಮೃದುವಾಗಿರುತ್ತದೆ; ನಂತರ ಗಟ್ಟಿಯಾದ ಪದರವಿದೆ ಮತ್ತು ಹೊರಭಾಗದಲ್ಲಿ ಮೇಣದ ತೆಳುವಾದ ಪದರವಿದ್ದು, ಈ ಮೇಣವು ಚರ್ಮವನ್ನು ಜಲನಿರೋಧಕವನ್ನಾಗಿ ಮಾಡುತ್ತದೆ.

ಮಿಡತೆಗಳ ದಾಳಿ

ಮಿಡತೆಗಳು ಮತ್ತು ಡೆಸರ್ಟ್ ಲೋಕಸ್ಟ್ ಮಿಡತೆಗಳು ಸಾಮಾನ್ಯವಾಗಿ ಒಂದೇ ಆಗಿದೆ. ಈ ಎಲ್ಲಾ ಸಣ್ಣ ಕೀಟಗಳು ಸ೦ಧಿಪಾದಿಗಳ(ಆರ್ತ್ರೋಪೊಡ್ಸ್) ಗುಂಪಿಗೆ ಸೇರಿವೆ. ನಾವು ಕೆಲವು ಪ್ರಭೇದದ ಮಿಡತೆಗಳು ಮತ್ತು  ಡೆಸರ್ಟ್ ಲೋಕಸ್ಟ್ ಗಳನ್ನು ಬೇರೆ ಬೇರೆ ಪ್ರಭೇದಗಳೆಂದು ತಿಳಿದಿದ್ದೇವೆ, ಆದರೆ ಅವು ವಾಸ್ತವವಾಗಿ ಒಂದೇ ತರಹದ ಕೀಟಗಳು. ವಿಶಿಷ್ಟವಾಗಿ, ಅವು ವಲಸೆ ಹೋದಾಗ ಅಥವಾ ಹಿಂಡುಗಳಲ್ಲಿ ಹಾರಿದಾಗ, ಅವುಗಳನ್ನು ಲೋಕಸ್ಟ್ ಮಿಡತೆಗಳು ಎಂದು ಕರೆಯಲಾಗುತ್ತದೆ.

ಡೆಸರ್ಟ್ ಲೋಕಸ್ಟ್ ಮಿಡತೆಗಳಲ್ಲಿ ಸಣ್ಣ ಮತ್ತು ದೊಡ್ಡ ಎಂಬ ಎರಡು ಪ್ರಭೇದಗಳಿದ್ದು, ಇವುಗಳನ್ನು ಗುರುತಿಸಲು ಅದರದರ ಗಾತ್ರವೇ ಮಾಪಕವಾಗಿದೆ. ಇವು ತೆಳುವಾದ ಉದ್ದ ಕಾಲುಗಳನ್ನು ಹೊಂದಿರುವುದರಿಂದ  ಸುಲಭವಾಗಿ ಹಾರಬಲ್ಲವು. ಈ ಮಿಡತೆಗಳು ಒಂಟಿಯಾಗಿರುವುದೇ ಹೆಚ್ಚು. ಆದರೆ ಕೆಲವೊಂದು ಸಂದರ್ಭದಲ್ಲಿ ಗುಂಪು ಗುಂಪಾಗಿ ರೈತರ ಬೆಳೆಗಳ ಮೇಲೆ ದಾಳಿ ಮಾಡುತ್ತವೆ.

ಇತ್ತೀಚೆಗಷ್ಟೇ ಗುಜರಾತಿನ ರೈತರ ಬೆಳೆಗಳು ನಾಶವಾಗಿದ್ದನ್ನು ಪತ್ರಿಕೆಗಳಲ್ಲಿ ಓದಿದ್ದೀರಿ. ಇದೀಗ ಕಳೆದ ಆರು ದಶಕಗಳಲ್ಲಿಯೇ ಕಂಡರಿಯದಷ್ಟು ದೊಡ್ಡ ಪ್ರಮಾಣದ ಬೆಳೆ ಹಾನಿಗೆ ರಾಜಸ್ಥಾನದ ರೈತರು ತತ್ತರಿಸಿ ಹೋಗಿದ್ದಾರೆ. ಇದಕ್ಕೆ ಕಾರಣ ಪಾಕಿಸ್ತಾನದಿಂದ ಲಕ್ಷಾಂತರ ಸಂಖ್ಯೆಯಲ್ಲಿ ಬಂದು ದಾಳಿ ನಡೆಸಿದ ಮಿಡತೆಗಳು!

ಮಿಡತೆಗಳ ದಾಳಿಗೆ ರಾಜಸ್ಥಾನದ 3.60 ಲಕ್ಷ ಹೆಕ್ಟೇರ್ ಗಳಷ್ಟು ಬೆಳೆಗಳಿಗೆ ಹೊಡೆತ ಬಿದ್ದಿದ್ದು, ರಾಜಸ್ಥಾನದ ಶ್ರೀಗಂಗಾನಗರ್ ಜಿಲ್ಲೆಯಲ್ಲಿ ಅತೀ ಹೆಚ್ಚು ಬೆಳೆಗಳಿಗೆ ಹಾನಿಯಾಗಿದೆ. ಇನ್ನು ಜೈಸಲ್ಮೇರ್,  ಬಿಕಾನೆರ್, ಜಾಲೋರ್, ಜೋಧ್ ಪುರ್, ಬರ್ಮೆರ್, ಸಿರೋಹಿ, ಚುರು, ನಾಗೌರ್ ಮತ್ತು ಹನುಮಾನ್ ಗಢ್ ನಲ್ಲಿ ಸಾವಿರಾರು ಎಕರೆಬೆಳೆಗಳು ಮಿಡತೆಗಳ ದಾಳಿಯಿಂದ ಹಾನಿಗೊಳಗಾಗಿವೆ.

©Food Agriculture Organization (FAO)

ಕಳೆದ ವರ್ಷ 2019ನೇ ಮೇ ತಿಂಗಳಿನಲ್ಲಿ ದಕ್ಷಿಣ ಪಾಕಿಸ್ತಾನದಿಂದ ಹಾರಿ ಬಂದ ಲಕ್ಷಾಂತರ ಮಿಡತೆಗಳ ದಾಳಿಯಿಂದ ಖಾರೀಫ್ ಬೆಳೆ ನಾಶವಾಗಿತ್ತು. ಇದೀಗ ರಾಬಿ (ಹಿಂಗಾರು) ಬೆಳೆ ನಾಶವಾಗಿದೆ. 1993ರಲ್ಲಿ ಲಕ್ಷಾಂತರ ಮಿಡತೆಗಳು ರಾಜಸ್ಥಾನದ ಜೈಸಲ್ಮೇರ್, ಬಾರ್ಮರ್, ಭುಜ್ ಮತ್ತು ಜಲೋರ್ ಜಿಲ್ಲೆಗಳಲ್ಲಿ ಕನಿಷ್ಠ 3,10,000 ಹೆಕ್ಟೇರ್ ಪ್ರದೇಶದಲ್ಲಿ ದಾಳಿ ನಡೆಸಿದ್ದವು.

ಈ ಮಿಡತೆಗಳ ಮೂಲ ಆಫ್ರಿಕಾ ಆಗಿದ್ದು, ಸಾಮಾನ್ಯವಾಗಿ ಮುಂಗಾರು ಮಾರುತಗಳೊಂದಿಗೆ  ಮಧ್ಯ ಏಷ್ಯಾದ  ಮೂಲಕ ಹಾರಾಟ ನಡೆಸುತ್ತಾ ಪಾಕಿಸ್ತಾನದಿಂದ ಭಾರತದ ಥಾರ್ ಮರುಭೂಮಿಯನ್ನು ಪ್ರವೇಶಿಸಿ, ಜೂನ್ – ಜುಲೈನಲ್ಲಿ ಸಂತಾನೋತ್ಪತ್ತಿ ಆರಂಭಿಸುತ್ತವೆ. ಆದರೆ ಈ ವರ್ಷ ಏಪ್ರಿಲ್ 11ನೇ ತಾರೀಕಿನಂದೇ ಕಾಣಿಸಿಕೊಂಡಿವೆ. ಏಕೆಂದರೆ, ಕಳೆದ ಋತುವಿನಲ್ಲಿ ಪಾಕಿಸ್ತಾನದಲ್ಲಿ ಯಾವ ನಿಯಂತ್ರಣವೂ ಇಲ್ಲದೆ ಈ ಮಿಡತೆಗಳ ಸಂತಾನೋತ್ಪತ್ತಿ ಆಗಿತ್ತು. 2019-20ರಲ್ಲೂ ಭಾರತದಲ್ಲೂ ಭಾರೀ ಪ್ರಮಾಣದಲ್ಲಿ ಮಿಡತೆಗಳ ದಾಳಿಯಾಗಿತ್ತು. ಮೇ 2019 ರಿಂದ ಫೆಬ್ರವರಿ 2020ರ ತನಕ ನಿರಂತರವಾಗಿ ಕಾರ್ಯಾಚರಣೆ ನಡೆಸಿ, ಮಿಡತೆಗಳನ್ನು ನಿಯಂತ್ರಣಕ್ಕೆ ತರಲಾಗಿತ್ತು. ಆ ಅವಧಿಯಲ್ಲಿ 4.03 ಲಕ್ಷ ಹೆಕ್ಟೇರ್ ಅಥವಾ ಹತ್ತು ಲಕ್ಷ ಎಕರೆಯಷ್ಟು ಪ್ರದೇಶದಲ್ಲಿ ಕೀಟನಾಶಕ ಹಾಗೂ ರಾಸಾಯನಿಕಗಳನ್ನು ಬಳಸಿ, ಸತತ ಪರಿಶ್ರಮದಿಂದ ಮಿಡತೆಗಳ ದಾಳಿಯಿಂದ ತಪ್ಪಿಸಿಕೊಳ್ಳಲಾಗಿತ್ತು. ಆದರೆ ಈ ಬಾರಿ ಬಹಳ ಕಷ್ಟ ಇದೆ ಎಂದಿದ್ದಾರೆ ತಜ್ಞರು.

ಒಂದು ದಿನಕ್ಕೆ ಮಿಡತೆಗಳು ಸರಾಸರಿ 200 ಕಿಲೋ ಮೀಟರ್ ದೂರದವರೆಗೆ ಗಾಳಿಯಲ್ಲಿ ತೇಲುತ್ತಾ ಸಾಗಬಲ್ಲವು. ಲಕ್ಷಾಂತರ ಸಂಖ್ಯೆಯಲ್ಲಿ ಹಾರಿ ಬರುವ ಮಿಡತೆಗಳು ಬೆಳೆಗಳ ಮೇಲೆ ದಾಳಿ ನಡೆಸುತ್ತವೆ. ದೊಡ್ಡ ಮಿಡತೆಯೊಂದು ಅಂದಾಜು ತನ್ನ ತೂಕದಷ್ಟೇ ದಿನಂಪ್ರತಿ ಆಹಾರ(ಬೆಳೆ)ವನ್ನು ತಿನ್ನುತ್ತದೆ. ಅಂದರೆ ಒಂದು ದಿನಕ್ಕೆ 2 ಗ್ರಾಂನಷ್ಟು ಬೆಳೆಯನ್ನು ತಿನ್ನುತ್ತದೆ. ಹೀಗೆ 40 ಮಿಲಿಯನ್ ಮಿಡತೆಗಳು ಒಮ್ಮೆಲೆ ದಾಳಿ ಇಟ್ಟರೆ, ಈ ಬಣ್ಣದ ಬಕಾಸುರರು ಒಂದು ದಿನಕ್ಕೆ ಮೂವತೈದುಸಾವಿರ ಜನಕ್ಕೆ ಬೇಕಾಗುವ ಆಹಾರವನ್ನು ತಿಂದು ಮುಗಿಸುತ್ತವೆ ಎಂಬುದು ಊಹೆಗೂ ನಿಲುಕದ ಸತ್ಯ!

ಈ ಮಿಡತೆಗಳು ಎಲೆ, ಹೂವು, ಹಣ್ಣು, ಬೀಜ, ಗಿಡದ ಕಾಂಡ, ಕೊಂಬೆಗಳನ್ನು ತಿನ್ನುತ್ತವೆ. ಮಿಡತೆಗಳು ಭಾರೀ ಪ್ರಮಾಣದಲ್ಲಿ ಹೀಗೆ ತಿನ್ನುವುದರಿಂದ ಇಡೀ ಬೆಳೆಯೇ ನಾಶವಾಗುತ್ತದೆ ಎಂದು ಸಂಶೋಧನಾ ವರದಿಗಳು ಹೇಳುತ್ತವೆ.

ರಾಜಸ್ಥಾನದಲ್ಲಿ ಮಿಡತೆಗಳು ಮನೆಯ ಮೇಲೆ ಹಾರಾಡುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ನಾವೆಲ್ಲರು ನೋಡಿದ್ದೇವೆ. ಮೆಣಸಿನಕಾಯಿ, ಹತ್ತಿ, ಗೋಧಿ ಮತ್ತು ಬೇಳೆಯಂತಹ ಧಾನ್ಯಗಳ ಮೇಲೆ ದಾಳಿ ಮಾಡಿರುವ ಈ ಮಿಡತೆಗಳನ್ನು ನಿಯಂತ್ರಿಸಲು ಮತ್ತು ಹೆದರಿಸಲು ರೈತರು ತಟ್ಟೆಗಳನ್ನು, ಡ್ರಮ್ ಗಳನ್ನು  ಬಡೆದು ತಮ್ಮ ಹೊಲಗಳಿಗೆ ಕಾವಲಾಗಿ ನಿಲ್ಲಬೇಕಾಯಿತು. ಇದೇ ರೀತಿ ಮುಂದುವರೆದರೆ ಆಹಾರ ಸರಪಳಿಯಲ್ಲಿ ಏರುಪೇರಾಗಬಹುದು ಎಂದು ಅಗ್ರಿಕಲ್ಚರಲ್ ಆರ್ಗನೈಸೇಶನ್ ಎಚ್ಚರಿಕೆ ನೀಡಿತ್ತು. ಕೇಂದ್ರ ಕೃಷಿ ಸಚಿವಾಲಯವು ಮಿಡತೆ ದಾಳಿಯನ್ನು ನಿಯಂತ್ರಿಸಲು ಡ್ರೋನ್, ಸ್ಯಾಟಲೈಟ್ ಗಳಲ್ಲಿ ಸ್ಪ್ರೇಯರ್ ಗಳನ್ನು ಗಡಿಭಾಗಗಳಲ್ಲಿ ನಿಯೋಜಿಸಲಾಗಿತ್ತು.

ಎಲ್ಲೋ… ದೂರದ ವಾಯುವ್ಯದಲ್ಲಿನ  ಥಾರ್ ಮರುಭೂಮಿ ಭಾಗದಲ್ಲಿ ಮಿಡತೆ ದಾಳಿಯ ಬಗ್ಗೆ ಕಂಡು, ಕೇಳಿ, ನಿರ್ಲಕ್ಷಿಸಿದ ನಮಗೆ ಅಚ್ಚರಿ ಮೂಡಿಸುವಂತೆ ನಮ್ಮ ಕರ್ನಾಟಕದ ದಕ್ಷಿಣ ಕನ್ನಡ  ಜಿಲ್ಲೆಯ ಕೆಲವು ಭಾಗಗಳಲ್ಲಿಯೂ ಇದೇ ರೀತಿ ಮಿಡತೆಗಳ ಹಿಂಡು ರೈತರಿಗೆ ಸಂಕಷ್ಟ ತಂದೊಡ್ಡಿದ್ದವು. ಈ ಭಾಗದಲ್ಲಿ ದಾಳಿ ನಡೆಸಿರುವ ಮಿಡತೆಗಳನ್ನು ಗಮನಿಸಿದ  ಕೀಟ ತಜ್ಞರು, ಇವು ಡೆಸರ್ಟ್ ಲೋಕಸ್ಟ್ ಅಲ್ಲ, ಕ್ಯಾಲೋಪ್ಟ್ರೋಪಿಸ್ ಲೋಕಸ್ಟ್ (ಕಲರ್ ಗ್ರಾಸ್ ಹೋಪರ್) ಎಂದು ಗುರುತಿಸಿದ್ದಾರೆ.

ಮಾರಣಾಂತಿಕ ಕಾಯಿಲೆಗಳಿಗೆ ಮದ್ದು

ಮಿಡತೆಗಳನ್ನೊಳಗೊಂಡ ಆಹಾರವು ಮಾರಣಾಂತಿಕ ಕಾಯಿಲೆ ಕ್ಯಾನ್ಸರ್ ರೋಗವನ್ನು ತಡೆಯುವ ಆಂಟಿಆಕ್ಸಿಡೆಂಟ್‌ಗಳನ್ನು ಹೊಂದಿವೆ. ಇದು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುವ ಪ್ರಮುಖ ಅಂಶವಾಗಿದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಮಿಡತೆಗಳಲ್ಲಿ ಹೃದಯ ಸಂಬಂಧಿತ ಕಾಯಿಲೆಗಳನ್ನು ನಿಯಂತ್ರಿಸಬಲ್ಲ ಫೈಟೊಸ್ಟಿರಾಲ್ (Phytosterols) ಎಂದು ಕರೆಯಲ್ಪಡುವ ಹೆಚ್ಚಿನ ಪ್ರಮಾಣದ ರಾಸಾಯನಿಕಗಳಿವೆ. ಅಂತರರಾಷ್ಟ್ರೀಯ ಕೀಟಗಳ ಶರೀರಶಾಸ್ತ್ರ ಮತ್ತು ಪರಿಸರ ವಿಜ್ಞಾನ ಕೇಂದ್ರ (International Centre of Insect Physiology and Ecology), ಜೊಮೊ ಕೆನ್ಯಾಟ್ಟಾ ಕೃಷಿ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ ಮತ್ತು ಯುನೈಟೆಡ್ ಸ್ಟೇಟ್ಸ್ ಕೃಷಿ / ಕೃಷಿ ಸಂಶೋಧನಾ ಸೇವೆ ಜಂಟಿಯಾಗಿ ನಡೆಸಿದ ಅಧ್ಯಯನವು ಮರುಭೂಮಿ ಮಿಡತೆಯ ಮಾಂಸವನ್ನು ತಿನ್ನುವುದರಿಂದ ಹೃದಯಕ್ಕೆ ಸಂಬಂಧಪಟ್ಟ ಕಾಯಿಲೆಗಳಿಗೆ ಒಳ್ಳೆಯದು ಎಂದು ಕಂಡು ಹಿಡಿದಿದ್ದಾರೆ.

ಅಳಿವಿನಂಚಿನಲ್ಲಿವೆ ಮಿಡತೆಗಳು

ಸಾಮಾನ್ಯವಾಗಿ ಮಿಡತೆಗಳ ಸಂರಕ್ಷಣೆಗೆ ಕನಿಷ್ಠ ಕಾಳಜಿ ಇದ್ದರೂ, ಇದು ಮುಖ್ಯವಾಗಿ ನಗರೀಕರಣ ಮತ್ತು ಕೃಷಿಯ ವಿಸ್ತರಣೆಯ ಪರಿಣಾಮವಾಗಿ ಅವುಗಳ ನೈಸರ್ಗಿಕ ಆವಾಸಗಳ ನಷ್ಟದಿಂದ ಕೆಲವು ಪ್ರಭೇದದ ಮಿಡತೆಗಳು ಅಳಿವಿನಂಚಿನಲ್ಲಿವೆ ಎಂದು ಪರಿಗಣಿಸಲಾಗಿದೆ.

ಪ್ರಕೃತಿಯಲ್ಲಿ ಯಾವುದೊಂದು ಜೀವಿ ಹೆಚ್ಚುಕಡಿಮೆಯಾದರೂ ಪರಿಸರ ವ್ಯವಸ್ಥೆಯಲ್ಲಿ ಏರುಪೇರುಗಳು ಉಂಟಾಗುತ್ತವೆ. ಪ್ರಕೃತಿಯ ಮುಂದೆ ಎಲ್ಲ ಜೀವಿಗಳು ಸಮ. ‘ನಿಸರ್ಗವನ್ನು ಆಳಲಾಗುವುದಿಲ್ಲ, ಅನುಸರಿಸಬೇಕು’ ಎಂಬ ತೇಜಸ್ವಿಯವರ ಮಾತನ್ನು, ಬುದ್ಧಿವಂತ ಪ್ರಾಣಿಗಳಾದ ನಾವೆಲ್ಲರೂ ಅರಿತು, ಪರಿಸರಸ್ನೇಹಿ ಅಭ್ಯಾಸಗಳೊಂದಿಗೆ ಬದುಕಬೇಕಾಗಿದೆ. ನಾವು ಬದುಕೋಣ, ಇತರ ಜೀವಿಗಳನ್ನೂ ಬದುಕಲು ಬಿಡೋಣ.

ಲೇಖನ: ದೀಪಿಕಾಬಾಯಿ ಎನ್.
             ಬೆಂಗಳೂರು ಜಿಲ್ಲೆ

Print Friendly, PDF & Email
Spread the love
error: Content is protected.