ಪ್ರಕೃತಿ ಬಿಂಬ

ಪ್ರಕೃತಿ ಬಿಂಬ

© ವೃಜುಲಾಲ್ ಎಂ. ವಿ , ಕಾಟಿ

ಕಾಟಿಯು ಜಾನುವಾರುಗಳ ಕುಟುಂಬದಲ್ಲೇ ದೊಡ್ಡದು. ಗಂಡು ಕಾಟಿಯು ಸುಮಾರು 1500 ಕೆ.ಜಿ ಯವರೆಗೂ ತೂಗಿದರೆ ಹೆಣ್ಣು ಕಾಟಿಯು ಸುಮಾರು 750 ರಿಂದ 800 ಕೆ.ಜಿ ಯಷ್ಟು ತೂಕವಿರುತ್ತದೆ. ತಲೆಯ ಮೇಲ್ಭಾಗವು ಕಣ್ಣುಗಳ ಮೇಲಿನಿಂದ ಕುತ್ತಿಗೆಯವರೆಗೆ ಬೂದು ಬಿಳಿ ಬಣ್ಣದ್ದಾಗಿರುತ್ತದೆ, ಮುಖ ಮಸುಕಾದ ಬಿಳಿ ಬಣ್ಣದ್ದಾಗಿದೆ, ಮತ್ತು ಕಾಲುಗಳ ಕೆಳಗಿನ ಭಾಗವು ಶುದ್ಧ ಬಿಳಿ ಕಾಲ್ಚೀಲ ಹಾಕಿರುವಂತೆ ಕಾಣುತ್ತದೆ. ಕಾಟಿಗಳು ಹೆಚ್ಚಾಗಿ ನಿತ್ಯಹರಿದ್ವರ್ಣ ಕಾಡುಗಳು, ಅರೆ ನಿತ್ಯಹರಿದ್ವರ್ಣ ಕಾಡುಗಳು ಮತ್ತು ತೇವಾಂಶವುಳ್ಳ ಕಾಡುಗಳಲ್ಲಿ ಕಾಣಸಿಗುತ್ತವೆ. ಸಾಮಾನ್ಯವಾಗಿ ಕಾಟಿಗಳ ಒಂದು ಗುಂಪಿನಲ್ಲಿ ಎಂಟರಿಂದ ಹನ್ನೊಂದು ಸಂಖ್ಯೆಯಲ್ಲಿ ಇರುತ್ತವೆ, ಈ ಗುಂಪಿನಲ್ಲಿ ಒಂದು ಗಂಡು ಸಹ ಇರುತ್ತದೆ. ಸಂತಾನೋತ್ಪತ್ತಿ ಸಮಯದಲ್ಲಿ ಗುಂಪಿಗೆ ಹೆಚ್ಚಿನ ಗಂಡುಗಳು ಗುಂಪನ್ನು ಸೇರುವ ಸಾಧ್ಯತೆಯೂ ಸಹ ಇದೆ. ಹುಲಿ, ಚಿರತೆ, ದೊಡ್ಡ ಮೊಸಳೆ ಮತ್ತು ಕೆನ್ನಾಯಿಗಳಂತಹ ನೈಸರ್ಗಿಕ ಪರಭಕ್ಷಕಗಳು ಊಟಕ್ಕಾಗಿ ಇವುಗಳನ್ನು ಅವಲಂಬಿಸಿವೆ.

© ವೃಜುಲಾಲ್ ಎಂ. ವಿ ,ಕಂಚು ಕುಟ್ರ

ಕಂಚು ಕುಟ್ರ ಅಥವಾ ಕಂಚು ಕುಟಿಗ (ಕಾಪರ್‌ ಸ್ಮಿತ್ ಬಾರ್ಬೆಟ್) ಎಂದು ಕರೆಯಲ್ಪಡುವ ಈ ಪಕ್ಷಿಯು ಗುಬ್ಬಚ್ಚಿಗಿಂತ ಗಾತ್ರದಲ್ಲಿ ತುಸು ದೊಡ್ಡದು. ಇದರ ಕಾಲು, ಹಣೆ ಮತ್ತು ಕುತ್ತಿಗೆಯ ಕೆಳಗೆ ಕೆಂಪು ಬಣ್ಣವಿದ್ದು ಕುತ್ತಿಗೆಯಲ್ಲಿ ಕೆಂಪು ಬಣ್ಣದ ಸುತ್ತ ಹಳದಿ ಬಣ್ಣವಿರುತ್ತದೆ. ತಮ್ಮ ಗೂಡನ್ನು ಮರದ ಪೊಟರೆಗಳಲ್ಲಿ ಮಾಡುತ್ತವೆ ಮತ್ತು ಪ್ರಧಾನವಾಗಿ ಕೀಟಗಳನ್ನು ತಿನ್ನುತ್ತವೆ. ಇವುಗಳ ವಾಸಸ್ಥಾನ ಬದಲಾವಣೆಯಾಗುವುದರಿಂದ ವರ್ಷದ ಬಹುಪಾಲು ಸಂತಾನೋತ್ಪತ್ತಿ ಮಾಡುತ್ತದೆ. ಹೆಚ್ಚಾಗಿ ಭಾರತದಲ್ಲಿ ಇದರ ಸಂತಾನೋತ್ಪತ್ತಿಯು ಫೆಬ್ರವರಿ ಇಂದ ಏಪ್ರಿಲ್ ತಿಂಗಳಿನವರೆಗೆ ನಡೆಯುತ್ತದೆ. ಗೂಡಿನಲ್ಲಿ ಮೂರ್ನಾಲ್ಕು ಮೊಟ್ಟೆಗಳನ್ನಿಟ್ಟು, ಗಂಡು ಹಾಗು ಹೆಣ್ಣು ಎರಡೂ ಸಹ ಎರಡು ವಾರಗಳ ಕಾಲ ಕಾವು ಕೊಟ್ಟು ಮರಿಮಾಡುತ್ತವೆ.

© ವೃಜುಲಾಲ್ ಎಂ. ವಿ ,ಕಂದು ಬಳ್ಳಿ ಹಾವು

ಕಂದು ಬಳ್ಳಿ ಹಾವು ಹೆಚ್ಚಾಗಿ ನಿತ್ಯಹರಿದ್ವರ್ಣ ಕಾಡುಗಳಲ್ಲಿ ಕಂಡುಬರುತ್ತವೆ. ಒಣ ಎಲೆಗಳ ಮೇಲೆ ಹಾಗು ಮರದ ಕೊಂಬೆಗಳ ಮೇಲೆ ಮರೆ ಮಾಚುತ್ತಾ ಕುಳಿತು ಬೇಟೆಯಾಡುತ್ತವೆ. ಕಂದು ಬಳ್ಳಿ ಹಾವು ಸ್ವಲ್ಪ ವಿಷಪೂರಿತವಾಗಿದ್ದು, ಕಚ್ಚಿದರೆ ತುಸು ನೋವು, ಮರಗಟ್ಟುವಿಕೆಯಂತೆ ಆಗುತ್ತದೆ. ಎರಡರಿಂದ ಮೂರು ದಿನಗಳಲ್ಲಿ ಈ ನೋವು ಕಡಿಮೆಯಾಗುತ್ತದೆ. ಇವುಗಳು ಸಾಮಾನ್ಯವಾಗಿ ಕಪ್ಪೆಗಳು ಮತ್ತು ಹಲ್ಲಿಗಳನ್ನು ಆಹಾರವನ್ನಾಗಿ ಸೇವಿಸುತ್ತವೆ. ‌ ಬೆದರಿಸಿದಾಗ ಎದುರಾಳಿಗೆ ಭಯವಾಗಲೆಂದು ಇವುಗಳು ತಮ್ಮ ಬಾಯನ್ನು ದೊಡ್ಡದಾಗಿ ತೆಗೆದು ಮೈ ಮೇಲೆ ಕಪ್ಪುಚುಕ್ಕಿಗಳು ಕಾಣುವಂತೆ ಮಾಡಿಕೊಳ್ಳುತ್ತವೆ.

© ವೃಜುಲಾಲ್ ಎಂ. ವಿ ,ಅಲೆಮಾರಿ ಚಿಟ್ಟೆ

ಅಲೆಮಾರಿ ಚಿಟ್ಟೆಯು ಪಿಯರಿಡೆ ಕುಟುಂಬಕ್ಕೆ ಸೇರಿದೆ, ಅಂದರೆ ಹಳದಿ ಮತ್ತು ಬಿಳಿಗರ ಕುಟುಂಬ. ಇವುಗಳ ರೆಕ್ಕೆಯ ಮೇಲ್ಭಾಗದಲ್ಲಿ ಮಸುಕಾದ ನೀಲಿ ಬಣ್ಣವಿದ್ದು ಕಪ್ಪು ರಕ್ತನಾಳಗಳಿರುತ್ತವೆ. ಸಾಮಾನ್ಯವಾಗಿ ಕೀಟಗಳನ್ನು ಎರಡು ವಿಧವಾಗಿ ವಿಂಗಡಿಸಬಹುದು. ಮೊದಲನೆಯದು ಸಂಪೂರ್ಣ ರೂಪಾಂತರಗಳು ಹಾಗು ಎರಡನೆಯದು ಅರೆ ರೂಪಾಂತರಗಳು. ಚಿಟ್ಟೆಗಳು ಸಂಪೂರ್ಣ ರೂಪಾಂತರಗಳಾಗಿರುತ್ತವೆ, ಹೇಗೆಂದರೆ ಇವುಗಳು ತಮ್ಮ ರೂಪವನ್ನು ಸಂಪೂರ್ಣ ಬದಲಿಸುತ್ತವೆ. ಮೊಟ್ಟೆಯಿಂದ ಹೊರ ಬಂದ ಹುಳುವು ಎಲೆಗಳನ್ನು ತಿಂದು ಬೆಳೆದು ಕೋಶಾವಸ್ಥೆಗೆ ಬರುತ್ತದೆ, ಕೋಶದಿಂದ ಬೆಳೆದಾಗ ಚಿಟ್ಟೆಯಾಗಿರುತ್ತದೆ.  ಇದನ್ನು ಸಂಪೂರ್ಣ ರೂಪಾಂತರ ಎನ್ನಲಾಗುತ್ತದೆ.

ಚಿತ್ರಗಳು: ವೃಜುಲಾಲ್ ಎಂ. ವಿ
ವಿವರಣೆ: ಧನರಾಜ್ ಎಂ

Spread the love
error: Content is protected.