ನೇಮ

ನೇಮ

ರವಿ ಮೂಡೆ ಮುನ್ನವೆದ್ದು
ತಂಗಾಳಿಗೆ ಮೈಯ್ಯನೊಡ್ಡಿ
ತನಗೆಲ್ಲವನಿತ್ತ ನಿಸರ್ಗದ
ನಿಯಮಕೆ ನಡೆವ
ಹಕ್ಕಿಯೊಂದು ಕೂಗಿ ನಕ್ಕಿತು
ಅವನ ಹುಚ್ಚಾಟದ ಪೆಚ್ಚುತನಕೆ!

ಉಳಿವು ಸಾಗಿ
ಅಳಿವ ಕಾಣ್ವ ನೀತಿನೇಮ
ಇವನ ನೀತಿನಿಯಮಗಳ
ಅಬ್ಬರದ ಪಜೀತಿ ಬೇಕಿತ್ತೆ ಎಂದು!?

ಸಜ್ಜಾಗಿರುವಾಗ ಮಣ್ಣಕಣವಾಗಲದು
ಉಳಿದವರ ಮಣ್ಣಗಾಣಿಸಲು
ಹೆಣಗಾಡುತ್ತಿರುವ ಮಂದಿ ಅಳು
ಅರಚಾಟವ ಕೇಳಿ
ಎನಗೇಕೆ ಜನ್ಮವಿತ್ತೆಂದಳುವುದೇನೋ
ಜನ್ಮದಾತನಲಿ ಮೊರೆ ಹೋಗಿ
ಕಾಣಿಸದೆ ಮೃಗಮಿಗ
ತರುಲತೆಗಳ ಜೀವವಿಧಾನ?

ತಲೆಕೆರೆದು ಕಣ್ಣು ಬಿಡುವ
ಜೀವವಿರದ ಹೆಣವಾಗ
ಶವದಯಾತ್ರೆಯಲು ಕೇಳಿಸದ
ಅವರ ಧನಿಗಳಿಗೆ ಅರ್ಥ ಹುಡುಕುತಾ
ನಿಂತಿರುವಾಗ ಹುಲಿಯೊಂದು
ಆಡಿದ ಬೇಟೆ ತಿಂದಮೇಲೆ
ಮಿಕ್ಕದ್ದು ಮಿಕ್ಕೆಲ್ಲ ಬಂಧುಗೆಂದು
ಬಿಟ್ಟೋಗುವುದೆ ವಿನಃ

ಹಾಗೆ ಕೊಂದ ಜಿಂಕೆ ಆಗ
ನೀನೇಕೆ ಕೊಂದೆ ಹೂಡದು
ಮುಷ್ಕರವ. ಅವಕೆಂದೂ ಗೊತ್ತು
ನಿಸರ್ಗ ನಿಯಮ.
ಭಾಷೆಯೊಂದನರಿತೆ
ಮನದ ಇಂಗಿತಕೆ
ಪದಗಳ ಪೋಷಾಕು
ತೊಡಿಸುವುದನರಿತೆನೆಂದು

ಶೋಕಾಸಿಗೆ ನಿಂತಂತಿದೆ ಇವನು
ಎವೆಯಿಕ್ಕಿ ನೋಡಿ ಕೇಳಿತಾಗ
ಉರಿಗಣ್ಣ ವ್ಯಾಘ್ರ!

-ಪವಿತ್ರ ಎಂ.
ರಾಮನಗರ ಜಿಲ್ಲೆ

Print Friendly, PDF & Email
Spread the love
error: Content is protected.