ಮೋಡಗಳು
ಮೋಡಗಳು
ಆಗಸವೇ ನಿನ್ನ ಬೊಗಸೆಯಲ್ಲಿ ಸೊಗಸಾಗಿ ಹಾಡಿವೆ ಮೋಡಗಳು
ತಾಮಸವಿಲ್ಲದೆ ತಮ್ಮಲ್ಲೇ ಗುನುಗುತ್ತಿವೆ ತನ್ಮಯದಿ ಹಾಡುಗಳು
ಜಿಟಿಜಿಟಿ ಜಿನುಗುತ್ತಿವೆ ಹನಿ ಹನಿಯಾಗಿ ಮುತ್ತು ರತ್ನಗಳು
ಸರಿಸಾಟಿಯೇ ಇಲ್ಲ ಹೊಗಳಲು ಉಪಮೇಯ ಉಪಮಾನಗಳು
ವಸಂತ ಋತುವಿಗೆ ನೀವು ಸ್ವಂತ ಮಕ್ಕಳೇ ಇರಬಹುದು
ಹಸಿರು ಸೂಸುವ ಸಸ್ಯಕುಲದ ಆಂತರ್ಯವೇ ಇರಬಹುದು
ನಿರಂತರವಾಗಿ ಪೃಥ್ವಿಯ ಮೇಲೆ ಅದೆಂತಹಾ ನಂಟು ಇರಬಹುದು
ಸತತವಾಗಿ ಸದಾಕಾಲ ಸಾಗುತ್ತಿರುವ ನಿಮಗೆಂದು ಸ್ವಾತಂತ್ರ್ಯ ದೊರಕಬಹುದು
ತಂಪಾದ ತಂಗಾಳಿಯಲ್ಲಿ ಇಳೆಗೆ ಮಳೆಯಾಗಿ ಬರುವೆ
ಭೂಮಿಯ ಮೂಲೆ ಮುಡುಕನ್ನು ಸಾಗಿ ಕೊಳೆಯನ್ನು ತೊಳೆವೆ
ಸೊರಗುತ್ತಿರುವ ರೈತನ ಮುಖದಲ್ಲೊಂದು ಕಳೆಯನ್ನು ತರುವೆ
ಬರದಿಂದ ಕೊರಗುತ್ತಿರುವ ಜೀವ ಸಂಕುಲಕ್ಕೆ ಉಸಿರೇ ಆಗಿರುವೆ
– ಮಧುಸೂಧನ ಹೆಚ್.ಸಿ.
ತುಮಕೂರು ಜಿಲ್ಲೆ
ಬೋಧನೆಯ ಜೊತೆ ಬರಹಗಾರನಾಗುವ ಹಂಬಲ..ಸಾಮಾಜಿಕ ಕಾಳಜಿಯ ಜೊತೆ ಸಾಧಕನಾಗುವ ಹಂಬಲ..ಪ್ರಕೃತಿಯ ಮಡಿಲಲ್ಲಿ ಕಳೆದುಹೋಗುವ ಹಂಬಲ..
ತಾಂತ್ರಿಕ ಕಾಲೇಜಿನ ಉಪನ್ಯಾಸಕನಾಗಿರುವ ನನಗೆ ಕನ್ನಡ ಬರವಣಿಗೆ ಮೋಹ ಹೊಸತೇನಲ್ಲ..ಹವ್ಯಾಸಿ ಬರಹಗಾರ..ವೃತ್ತಿಯಲ್ಲಿ ಭೌತಶಾಸ್ತ್ರ ಉಪನ್ಯಾಸಕ ಹಾಗೂ ಸಂಶೋಧಕ