ಪ್ರಕೃತಿ ಬಿಂಬ
©ವಿನೋದ್ ಕುಮಾರ್ ವಿ. ಕೆ, ಸೂರ್ಯ ತಂಪಾಗಿಸುವ ಹೊತ್ತು
ಸೂರ್ಯ ತಂಪಾಗಿಸುವ ಹೊತ್ತು… ಬಾನು ಕೆಂಪೇರಿತ್ತು… ಚಲಿಸುವ ಮೋಡಗಳನ್ನು ಹಿಂದಿಕ್ಕಿ ಕತ್ತಲಾಗುವ ಮುನ್ನ ಗೂಡು ಸೇರುವ ಹಂಬಲದೊಂದಿಗೆ ಹಾರುತ್ತಿರುವ ಹಕ್ಕಿಗಳು…!! ಈ ದೃಶ್ಯ ಕಂಡು ಬರುವುದು ಸೂರ್ಯಾಸ್ತದ ಸಮಯದಲ್ಲಿ. ಗಗನ ತುಂಬೆಲ್ಲಾ ಆವರಿಸಿದೆ ಬಂಗಾರ ಬಣ್ಣದ ಛಾಯೆ, ಮೋಡಗಳ ಅಂಚಿಗೆ ಸುವರ್ಣ ರೇಖೆ ಎಂದು ಹೆಚ್.ಎ. ಪಾಟಿಲ್ ರವರು ಸೂರ್ಯಾಸ್ತವನ್ನು ವರ್ಣಿಸಿದ್ದಾರೆ. ಸೂರ್ಯನ ಕಿರಣಗಳು ಪ್ರಕೃತಿಯ ಸೌಂದರ್ಯವನ್ನು ಹೆಚ್ಚಿಸುತ್ತದೆ ಎನ್ನುವುದಕ್ಕೆ ಮೇಲಿನ ಚಿತ್ರವೇ ನಿದರ್ಶನ.
© ವಿನೋದ್ ಕುಮಾರ್ ವಿ. ಕೆ, ನದಿದಂಡೆ
ಪ್ರಕೃತಿಯ ಸೌಂದರ್ಯವನ್ನು ಸವಿಯಬಹುದೇ ಹೊರತು ವರ್ಣಿಸಲು ಸಾಧ್ಯವಿಲ್ಲ. ನದಿಯ ದಂಡೆಯಲ್ಲಿ ಹಚ್ಚ ಹಸಿರಾಗಿ ಬೆಳೆದಿರುವ ಹುಲ್ಲನ್ನು ತಿನ್ನುತ್ತಿರುವ ಹಸುಗಳನ್ನು ಹಾಗು ಮೀನನ್ನು ಬೇಟೆಯಾಡಲು ಕಾದು ಕುಳಿತುಕೊಂಡಿರುವ ಕೊಕ್ಕರೆಗಳನ್ನು ಮೇಲಿನ ಚಿತ್ರದಲ್ಲಿ ಕಾಣಬಹುದು. ಈ ಸುಂದರವಾದ ದೃಶ್ಯ ನೋಡಿದರೆ, ಈ ರೀತಿಯ ದೃಶ್ಯದ ಸೊಬಗನ್ನು ಸವಿಯಲೆಂದೆ ಶ್ರೀ ಕೃಷ್ಣ ಪರಮಾತ್ಮ ಗೊಲ್ಲನಾಗಿ ಜನಿಸಿದ್ದು ಅನಿಸುತ್ತದೆ.
© ವಿನೋದ್ ಕುಮಾರ್ ವಿ. ಕೆ, ಪರ್ವತ ಶ್ರೇಣಿ
ನೀಲಗಿರಿ ಪರ್ವತ ಶ್ರೇಣಿಯ ನೀಲ ಬೆಟ್ಟಗಳಡಿಯಲ್ಲಿ ನೀಲಿ-ಹಸಿರು ರಾಶಿಯ ನಡುವೆ ಘಮ್ಮನೆಂದು ಅರಳಿ ನಿಂತ ಭೂಲೋಕದ ಸ್ವರ್ಗವಿದು. ನೈಸರ್ಗಿಕ ಚೆಲುವಿಗೆ ಮನುಷ್ಯ ಕುಸುರಿ ಇಟ್ಟ ಧರೆಗಿಳಿದ ನಾಕ. ದಟ್ಟ ಕಾಡು, ಎತ್ತರೆತ್ತರದ ನೀಲಗಿರಿ ಮರಗಳ ತನ್ಮಯತೆ, ವಿಸ್ತಾರವಾದ ಚಹಾ ತೋಟಗಳ ಸೊಬಗು, ಜಗತ್ತಿನಲ್ಲೆಲ್ಲೂ ಕಾಣದ ಅಪರೂಪದ ಹೂಗಳ ಘಮ, ಇದುವರೆಗೂ ತಿಂದೇ ಇರದ ಹಣ್ಣುಗಳ ಮಧುರ ಸ್ವಾದ. ದಿನವಿಡೀ ಮೇಘಗಳ ಮಾಲೆ, ಒಮ್ಮೆ ದೃಶ್ಯವಾಗಿ ಮತ್ತೊಮ್ಮೆ ಅದೃಶ್ಯವಾಗುವ ಲೀಲೆ. ಅಂದು ಹಾಗೆ ಇದು ಊಟಿಯ ಒಂದು ದೃಶ್ಯ.
© ವಿನೋದ್ ಕುಮಾರ್ ವಿ. ಕೆ, ಕಾಡ್ಗಿಚ್ಚು
ಕಾಡ್ಗಿಚ್ಚು ಅರಣ್ಯದಲ್ಲಿ ಬೀಸುವ ಗಾಳಿಯಿಂದಾಗಿ ಅಲ್ಲಿರಬಹುದಾದ ಒಣಗಿದ ಮರದ ಕಾಂಡಗಳು ಅಥವಾ ಪೊದೆಗಳು ಒಂದಕ್ಕೊಂದು ಘರ್ಷಣೆಗೊಳಗಾಗಿ ಹತ್ತಿಕೊಳ್ಳುತ್ತದೆ ಎಂದು ನಾವು ಪುಸ್ತಕಗಳಲ್ಲಿ ಓದಿದ್ದೇವೆ, ಆದರೆ ನಿಜ ರೂಪವೇ ಬೇರೆ. ಕಾಡ್ಗಿಚ್ಚು 95 ಪ್ರತಿಶತ ಮಾನವ ನಿರ್ಮಿತ ಕೃತ್ಯ. ಸಣ್ಣ ಕಿಡಿಯಾಗಿ ಜನ್ಮ ತಾಳುವ ಇದು ಗಾಳಿ ಬೀಸುವ ದಿಕ್ಕಿನೆಲ್ಲೆಡೆ ತನ್ನ ಅಗ್ನಿಯ ಕೆನ್ನಾಲಿಗೆಯನ್ನು ಚಾಚುವ ಈ ಕಾಡ್ಗಿಚ್ಚಿಗೆ ಯಾವುದೇ ನಿಶ್ಚಿತ ಗುರಿಯಿರುವುದಿಲ್ಲ. ತಾನು ಹೋದಲ್ಲೆಲ್ಲಾ ಇರುವ ಪ್ರಾಣಿ ಪಕ್ಷಿಗಳ ಆಹುತಿ ತೆಗೆದುಕೊಳ್ಳುತ್ತದೆ. ಅದರಲ್ಲಿ ಸಿಲುಕಿದ ಜೀವಿಗಳ ಪರಿಸ್ಥಿತಿ ಊಹಿಸಲಾಗದು. ಆದರೆ ಅರಣ್ಯದ ಜೀವ ಸಂಕುಲವನ್ನು ಸಮತೋಲನದಲ್ಲಿಡಲು ನಿಸರ್ಗವೇ ಕಂಡುಕೊಂಡ ಮಾರ್ಗವಿದು ಎಂದು ಅಭಿಪ್ರಾಯಪಡುವವರೂ ಇದ್ದಾರೆ.
ಚಿತ್ರಗಳು: ವಿನೋದ್ ಕುಮಾರ್ ವಿ. ಕೆ
ವಿವರಣೆ: ವಿವೇಕ್ ಜಿ. ಎಸ್.