ಪ್ರಕೃತಿ ಬಿಂಬ

© ಅರವಿಂದ ರಂಗನಾಥ್ ,ಕಾನನ
ಕರ್ನಾಟಕದ ಪಶ್ಚಿಮಘಟ್ಟಗಳಲ್ಲಿ ಒಂದಾದ ಕುದುರೆಮುಖದ ಒಂದು ಕಿರುನೋಟ. ತುಂತುರು ಮಳೆಯಲ್ಲಿ ದಟ್ಟಡವಿಯು ನೆನೆಯುತ್ತಿರುವಾಗ ನೋಡಲು ಎಂತಾ ಸೊಬಗು. ಸುತ್ತಮುತ್ತಲು ಎತ್ತ ನೋಡಿದರೂ ಹಚ್ಚ ಹಸಿರು, ಕಣ್ಮುಚ್ಚಿ ನಿಂತರೆ ಮಳೆ ನೀರ ಹನಿಯು ಎಲೆಗಳ ಮೇಲೆ ಬಿದ್ದು ನುಡಿಸುವ ನಾದದ ಜೊತೆಗೆ ಆಗಾಗ ಗಾಳಿಯ ರಭಸಕ್ಕೆ ಮರಗಿಡಗಳ ಶಬ್ಢ ಭಯವನ್ನು ಹುಟ್ಟಿಸುತ್ತದೆ. ಪ್ರಕೃತಿಯಲ್ಲಿ ಯಾವುದೂ ತ್ಯಾಜ್ಯವಲ್ಲ ಜೀವ ಕಳೆದುಕೊಂಡು ನೆಲಕ್ಕುರುಳಿದ ಮರವೂ ಸಹ ಹಲವಾರು ಕೀಟ ರಾಶಿಗಳಿಗೆ ಸಸ್ಯ ಸಂಕುಲಗಳಿಗೆ ಮನೆಯಾಗಿದೆ. ವರ್ಷದ ಹೆಚ್ಚುಕಾಲ ಮಳೆಯಿಂದ ಕೂಡಿರುವ ಪಶ್ಚಿಮಘಟ್ಟವು ಹಚ್ಚ ಹಸಿರಿನಿಂದ ಕೂಡಿರುತ್ತದೆ.

© ಅರವಿಂದ ರಂಗನಾಥ್, ಪಶ್ಚಿಮಘಟ್ಟ
ಮೇಲಿನ ಚಿತ್ರ ನೋಡಿದ ಕ್ಷಣ ನಿಮ್ಮ ತಲೆಗೆ ಹೊಳೆಯುªÀÅzÀÄ ಈಗತಾನೆ ಮಳೆ ಸುರಿದು ನಿಂತಿದೆ ಎಂದು. ಹೌದು ನಿಮ್ಮ ಊಹೆ ಸತ್ಯ. ಕಾನನದ ಹಚ್ಚ ಹಸಿರಿಗೆ ಮನಸೋತ ವರುಣನು ಧರೆಗಿಳಿದಿದ್ದ. ತನ್ನ ಹನಿಯಿಂದ ಬಿಸಿಯಾದ ಭೂತಾಯಿಯನ್ನು ತಂಪಾಗಿಸಿದ ಬಿಸಿಲಿನಿಂದ ಕಾದ ಭೂತಾಯಿಯು ಮಳೆಯ ಹನಿಯಿಂದಾಗಿ ತನ್ನ ಶಾಖವನ್ನು ಹೊರಹಾಕುವಾಗ ಕಾಣುವ ದೃಶ್ಯವಿದು. ಬಿಸಿಲಿನಿಂದ ಅಲ್ಲಲ್ಲಿ ಬಾಡಿ ಹೋದಂತೆ ಕಾಣುತ್ತಿದ್ದ ಮರ-ಗಿಡಗಳು ಮಳೆಯ ಸ್ಪರ್ಶದಿಂದ ಹಸನ್ಮುಖಿಗಳಂತೆ ಕಾಣುತ್ತಿವೆ. ಇಂತಹ ಸುಂದರ ಪ್ರಕೃತಿಯಲ್ಲಿ ನಾವು ಕೂಡ ಒಂದು ಭಾಗವಾಗಿರುವುದಕ್ಕೆ ತುಂಬಾ ಸಂತೋಷ.

© ಅರವಿಂದ ರಂಗನಾಥ್ , ಜಲಪಾತ
ಆಗಸದಿಂದ ಧರೆಗಿಳಿಯುತ್ತಿರುವಂತೆ ಕಾಣುತ್ತಿರುವ ಈ ದೃಶ್ಯವನ್ನು ನೋಡಲು ಯಾರಿಗಿಷ್ಟವಿಲ್ಲ ಹೇಳಿ. ನೋಡುಗರ ಕಣ್ ಸೆಳೆಯುವ ಈ ಜಲಪಾತವನ್ನು ಎಷ್ಟು ನೋಡಿದರು ಸಾಲದು. ದಟ್ಟಡವಿಯಲ್ಲಿ ದೂರದವರೆಗೂ ಕೇಳುವ ಇದರ ಸದ್ದು ಜನನಿಬಿಡ ಕಾಡಿನಲ್ಲಿ ಹಾಡುತ್ತಿರುವಂತೆನಿಸುತ್ತದೆ. ಎಲ್ಲೋ ಹುಟ್ಟಿ ನೂರಾರು ಮೈಲಿಗಳು ಹರಿದು ಸಮುದ್ರ ಸೇರುವಮುನ್ನ ಅದೆಷ್ಟೋ ಜೀವಸಂಕುಲಗಳಿಗೆ ಆಧಾರವಾಗಿದೆ.

© ಅರವಿಂದ ರಂಗನಾಥ್, ಕಾನನದಲ್ಲಿ ಬೆರೆತಾಗ
ಪೂರ್ಣಚಂದ್ರ ತೇಜಸ್ವಿ ಅವರು ಹೇಳುವಂತೆ “ಪ್ರಕೃತಿ ನಮ್ಮ ಬದುಕಿನ ಭಾಗವಲ್ಲ ನಾವು ಪ್ರಕೃತಿಯ ಒಂದು ಭಾಗ”.
ಯಾರ ಹಂಗಿಲ್ಲದೆ ಬೆಳೆದು ನಿಂತಿರುವ ಈ ಪ್ರಕೃತಿಯನ್ನು ನಾವುಗಳು ಕಾಪಾಡಿಕೊಳ್ಳಬೇಕೇ ಹೊರತು ಹಾಳು ಮಾಡುವಂತಿಲ್ಲ. ಸುಂದರ ಹಚ್ಚಹಸಿರಿನ ಕಾಡಿನ ನಡುವೆ ಇದ್ದು ಅದನ್ನು ಅನುಭವಿಸುವವರಿಗೆ ಈ ಕಾನನದ ಸೊಬಗು ತಿಳಿಯುತ್ತದೆ. ಈ ಸೊಬಗನ್ನರಿತ ಯಾವ ಜೀವಿಯು ಅಲ್ಲಿಂದ ಹಿಂತಿರುಗಲು ಇಚ್ಛಿಸುವುದಿಲ್ಲ ಬದಲಾಗಿ ಕಾಪಾಡಿಕೊಳ್ಳುವುದರ ಕುರಿತು ಆಲೋಚಿಸುತ್ತವೆ. ಇದನ್ನರಿಯದ ನಮ್ಮಂಥ ಕೆಲ ಮಾನವರು ಹಾಳುಮಾಡ ಹೊರಟಿದ್ದೇವೆ.
ಚಿತ್ರಗಳು: ಅರವಿಂದ ರಂಗನಾಥ್
ವಿವರಣೆ: ಧನರಾಜ್ ಎಂ