ಕಾಡ್ಗಿಚ್ಚು
ಏನಪರಾಧವ
ಮಾಡಿಹವು
ಕಾಡಿನ
ಪ್ರಾಣಿ ಪ್ರಭೇದಗಳು..?
ಹುಟ್ಟು ಅಡಗಿಸೋ
ಹುಚ್ಚು ಮಾನವ
ನಿನಗೇಕೋ ಈ
ಅವಿವೇಕ…?
ಸಸ್ಯಗಳೇನು
ಮಾಡಿದವು..?
ಕಾಡುಗಳೇನು
ಮಾಡಿದವು..?
ಬೆಂಕಿಯ ಬಲೆಯ
ಬೀಸಿದೆ ಏಕೋ..
ನಿನ್ನಯ ನಾಲಗೆ
ಚಪಲಕ್ಕೋ..?
ನಾಳೆಯ ದಿನವು
ನಿನ್ನದೆ ತಿಳಿಯೋ
ಜೀವ ಜಲದ
ಕ್ಷಾಮ ದ್ಯೋತಕಕ್ಕೆ..
ಪಾಪದ ಕಾರ್ಯ
ಹೊಲಸಿನ ಧ್ಯೇಯ
ಕಾಡಿಗಂಟುವ
ಕಾಡ್ಗಿಚ್ಚು..
ಮಳೆ ಇರದ ಇಳೆ
ಪಸೆ ಇರದ ಗಾಳಿ
ಬಿಸಿ ಬಿಸಿ ತಾಪವ
ಹೆಚ್ಚಿಸಿ ಸೋಕಿಸಿ
ಖುಷಿ ಪಡುವೆ ಏಕೋ..?
ಉರಿ ಪಡೆವೆ ಸಾಕೋ..!?
ಮರುಳಾಗಿಹ
ಕಾಂಕ್ರೀಟ್ನ ಕಾಡಿಗೆ
ಹಸಿರಿನ ಬೆಲೆ
ಅರಿಯದ ಹಾಡಿಗೆ..
ಹುಟ್ಟಡಗಿಸುವ ಕೈಗಳು ಕಟ್ಟಿ
ನಿರಕ್ಷರರ ಸಾಕುತ ಸಲಹಿ
ಶಿಕ್ಷಿತ ಮಂದಿಯ ಹಾದಿಯ ತಪ್ಪಿಸಿ
ಕಾಡಿಗೆ ಹತ್ತಿತೆ ಬೆಂಕಿ…
ಜನ ಬಲ ಜಲ ಬಲ
ಸೇರುತಲಿರಲು…
ಹೊತ್ತುತ ಉರಿಯುತ
ಬಾಚುತ ತಬ್ಬುತ
ಕೆನ್ನಾಲಗೆ ಬೆಂಕಿ ಚಾಚುತಿದೆ.
ಏನೀ ಮರ್ಮ ಏನೀ ಕರ್ಮ
ಹುಲ್ಲು ಸಾಯುವುದು ಶಾಪವೇ.?
ಏನೀ ವ್ಯಸನ? ಏನೀ ಕ್ರೌರ್ಯ.?
ಹೊಗೆ, ಬಿಸಿ ತಾಪವು ಏತಕ್ಕೆ..?
ಇಳೆಗೆ ತಂಪಾದೆ
ಮೋಡಕ್ಕೆ ಅಡ್ಡಿಯಾಗಿ
ಮಳೆಗೆ ಆಸರೆಯಾದೆ
ತೊರೆಗೆ ಭದ್ರ ಕೋಟೆಯಾದೆ
ಸಸ್ಯ ಸಂಕುಲ
ಬೆರೆತರೆ ನಲಿವಾದೆ
ಮುಂಜಾವಿಗೆ
ಬಾನುಲಿಯಾದೆ
ಆಹಾರ ಚಕ್ರಕ್ಕೆ
ಪ್ರಕೃತಿಯ ಶಿಶುವಾದೆ
ಓ ಪ್ರಾಣಿ ಸಂಕುಲ..
ನೀ ಯಾರಿಗಾದೆಯೋ ಎಲೆ ಮಾನವ..
–ನಂದಕುಮಾರ ಹೊಳ್ಳ.
ಉಡುಪಿ ಜಿಲ್ಲೆ