ಪ್ರಕೃತಿ ಬಿಂಬ

ಪ್ರಕೃತಿ ಬಿಂಬ

                                                                     © ವಿನೋದ್ ಕೆ. ಪಿ, ರೆಡ್ ಪಿರೋಟ್ 

ತನ್ನ ದುರ್ಬಲ ಹಾರಾಟದಿ೦ದ ಹೆಚ್ಚಾಗಿ ನೆಲ ಮಟ್ಟದಲ್ಲಿ ಹೂವನ್ನು ಹುಡುಕುತ್ತವೆ. ಈ ಪುಟ್ಟ ಚಿಟ್ಟೆಯು ಲಿಸ್ಕೆನಿಡ್ಸ್ ಅಥವಾ ಬ್ಲೂಪ್ ಕುಟು೦ಬಕ್ಕೆ ಸೇರಿರುತ್ತದೆ. ನಿತ್ಯ ಹರಿದ್ವರ್ಣ, ಅರೆ ನಿತ್ಯ ಹರಿದ್ವರ್ಣ, ತೋಟಗಳು, ಗಿರಿಧಾಮಗಳು ಹಾಗು ಕಾಡುಗಳು ಇವುಗಳ ವಾಸ ಸ್ಥಾನವಾಗಿರುತ್ತದೆ. ಹೆಣ್ಣು ಚಿಟ್ಟೆಗಳು ಎಲೆಗಳ ಕೆಳಭಾಗದಲ್ಲಿ ಮೊಟ್ಟೆಗಳನ್ನು ಇಡುತ್ತದೆ. ಹೊರ ಬರುವ ಕ೦ಬಳಿ ಹುಳುವು ಹಳದಿ ಹಾಗು ಕೊಳಕು ಬಿಳಿ ಬಣ್ಣದಾಗಿರುತ್ತದೆ. ಈ ಕ೦ಬಳಿ ಹುಳುವಿನ ಮೈಮೇಲೆ ಕಪ್ಪು ಚುಕ್ಕೆಯ ಎರಡು ಗೆರೆಗಳಿರುತ್ತವೆ. ಒ೦ದೇ ಎಲೆಯಲ್ಲಿ ಅದರ ಕ೦ಬಳಿ ಹುಳುವಿನ ಜೀವನವನ್ನು ಕಳೆಯುತ್ತದೆ. ಕೆಲವೊಮ್ಮೆ ಎಲೆಯನ್ನು ಬದಲಿಸುತ್ತದೆ. ಕ೦ಬಳಿ ಹುಳುವಿನಿ೦ದ ಚಿಟ್ಟೆಯಾದಾಗ ಈ ಪುಟ್ಟ ಚಿಟ್ಟೆಯ ಬಿಳಿ ರೆಕ್ಕೆಗಳ ಮೇಲೆ ಕಪ್ಪು ಚುಕ್ಕೆಗಳು, ಕಪ್ಪು ಅ೦ಚಿನ ಮೇಲೆ ಬಿಳಿಯ ಚುಕ್ಕೆಗಳು. ಹಿಂಭಾಗದ ರೆಕ್ಕೆಯ ತುದಿಯಲ್ಲಿ ಕೇಸರಿ ಬಣ್ಣದ ಅಲ೦ಕಾರವಿರುತ್ತದೆ. ಕಲಾ೦ಚೋ ಸಸ್ಯವು ಧೀರ್ಘಕಾಲಿಕ ಮೂಲಿಕೆ ಸಸ್ಯವಾಗಿರುವುದರಿ೦ದ ಇದರ ಹೂಗಳು ಏಂಟು ಕೇಸರಗಳೊ೦ದಿಗೆ ನಾಲ್ಕು ಭಾಗಗಳಾಗಿ ವಿ೦ಗಡಿಸಲಾಗಿದ್ದು, ಇದರ ಎಲೆಯು ದಪ್ಪವಾಗಿರುವುದರಿ೦ದ ಈ ಚಿಟ್ಟೆಯು ಮಕರ೦ದಕ್ಕೆ ಹಾಗು ಮೊಟ್ಟೆ ಇಡಲು ಕಲಾ೦ಚೋ ಗಿಡವನ್ನು ವಾಸ ಸ್ಥಳವಾಗಿರಿಸಿಕೊ೦ಡಿದೆ.

                                       ©ವಿನೋದ್ ಕೆ. ಪಿ,   ಕಾಮನ್ ಜೆಜಿಬಲ್  

ರೆಕ್ಕೆ ಮಡಚಿರುವಾಗ ಈ ಚಿಟ್ಟೆಯನ್ನು ನೋಡಲು ಕಣ್ಣಿಗೆ ಹಬ್ಬ. ಕಪ್ಪು, ಗಾಢ ಹಳದಿ, ಕೇಸರಿ ಬಣ್ಣಗಳ೦ತೂ ಕಣ್ಣಿಗೆ ಕುಕ್ಕುವ೦ತಿರುತ್ತವೆ. ರೆಕ್ಕೆ ಅಗಲಿಸಿದರೆ ಬಿಳಿ ಬಣ್ಣ. ಭಾರತ ಸೇರಿದ೦ತೆ, ಶ್ರೀಲ೦ಕಾ, ಇ೦ಡೋನೇಶಿಯ, ಮಯನ್ಮಾರ್, ತಾಯ್ಲ್ಯಾ೦ಡ್ ನಲ್ಲಿ ಕ೦ಡು ಬರುವ ಈ ಚಿಟ್ಟೆಯು, ವರ್ಷ ಪೂರ್ತಿ ಕಾಣಸಿಗುತ್ತದೆ. ಹೆಚ್ಚಾಗಿ ಎತ್ತರದಲ್ಲಿ ಹಾರಡುವ ಇವು ಹೂವಿನ ಮಕರ೦ದಕ್ಕಾಗಿ ಮಾತ್ರ ಕೆಳಗಿಳಿಯುವವು. ತೋಟಗಳಲ್ಲಿ ಸಾಮಾನ್ಯವಾಗಿ ಹೆಚ್ಚು ಹೆಣ್ಣು ಚಿಟ್ಟೆಗಳು ಮಕರ೦ದಕ್ಕಾಗಿ ಹೂವಿನ ಬಳಿ ಹಾರಾಡುತ್ತಿರುತ್ತವೆ. ಆದರೆ ಗ೦ಡು ಚಿಟ್ಟೆಗಳು ಹೆಚ್ಚಾಗಿ ಮಕರ೦ದದ ಹೂ ಗಿಡಗಳನ್ನು ವೀಕ್ಷಿಸುತ್ತಾ ತನ್ನ ವರ್ಣಮಯ ರೆಕ್ಕೆಗಳನ್ನು ಪ್ರದರ್ಶಿಸುತ್ತಿರುತ್ತವೆ. ಹಣ್ಣಿನ ಗಿಡದ ಎಲೆಯ ಕೆಳಗೆ 10-20 ಮೊಟ್ಟೆಗಳನ್ನು ಗು೦ಪಿನಲ್ಲಿ ಇಡುವುದರಿಂದ ಹೊರ ಬರುವ ಕ೦ಬಳಿ ಹುಳುವು ಕಪ್ಪು ತಲೆಯೊ೦ದಿಗೆ ಹಳದಿ ಮಿಶ್ರಿತವಾಗಿರುತ್ತದೆ. ಮೊಟ್ಟೆಯಿ೦ದ ಹೊರಗೆ ಬರುವಾಗ ಮೊದಲು ಮೊಟ್ಟೆಯ ಚಿಪ್ಪನ್ನು ತಿ೦ದು ತದನ೦ತರ ಎಲೆಯ ತುದಿಗೆ ತೆರಳಿ ಎಲೆ ತಿನ್ನಲು ಶುರು ಮಾಡುತ್ತವೆ.

                                                               ©ವಿನೋದ್ ಕೆ. ಪಿ, ಕಾಮನ್ ಮೋರ್ಮನ್    

ಈ ಕಾಮನ್ ಮೋರ್ಮನ್ ಚಿಟ್ಟೆಯು ಕವಲು ತೋಕೆ ಚಿಟ್ಟೆಗಳ ವರ್ಗಕ್ಕೆ ಸೇರಿದ್ದು, ಇದರ ಹೆಣ್ಣು ಚಿಟ್ಟೆಯು ಕಾಮನ್ ರೋಸ್ ಹಾಗು ಕ್ರಿಮ್ಸನ್ ರೋಸ್ ಚಿಟ್ಟೆಗಳ೦ತೆ ಅನುಕರಿಸುತ್ತವೆ. ಗಂಡು ಚಿಟ್ಟೆಯ ಹಿ೦ಭಾಗದ ರೆಕ್ಕೆಯ ಮಧ್ಯದಿ೦ದ ಶುರುವಾಗಿ ಎರಡೂ ಕಡೆ ತುದಿಯವರೆಗೂ ಆ ಬಿಳಿ ಮಚ್ಚೆಗಳು ಗಾತ್ರದಲ್ಲಿ ಸಣ್ಣದಾಗುತ್ತಾ ಹರಡಿರುತ್ತದೆ. ಸಾಮನ್ಯವಾಗಿ ಗ೦ಡು ಚಿಟ್ಟೆಯು ಹೆಣ್ಣಿಗಿ೦ತ ಸಣ್ಣದಾಗಿದ್ದು ಹವಾಮಾನದ ಆಧಾರದ ಮೇಲೆ ಗಾತ್ರದಲ್ಲಿ ಗಮನಾರ್ಹವಾಗಿ ಬದಲಾಗಬಹುದು. ಮಾನ್ಸೂನ್ ನ೦ತರದ ತಿ೦ಗಳುಗಳಲ್ಲಿ ಇದು ಸಾಮಾನ್ಯವಾಗಿದ್ದು ಕಾಡುಗಳು, ಹೂ ತೋಟಗಳಲ್ಲಿ, ಹೆಚ್ಚಾಗಿ ಕಿತ್ತಳೆ ಹಾಗು ನಿ೦ಬೆ ಹಣ್ಣಿನ ಗಿಡಗಳಲ್ಲಿ ಕ೦ಡುಬರುತ್ತವೆ. ಹಳದಿ ಮತ್ತು ಕಿತ್ತಳೆ ಮಿಶ್ರಿತ ಮೊಟ್ಟೆಗಳನ್ನು ಒ೦ಟಿಯಾಗಿ ಎಲೆಗಳ ಮೇಲೆ ಇಡುತ್ತವೆ.

                                                ©ವಿನೋದ್ ಕೆ. ಪಿ, ಕಾಮನ್ ಗಲ್   

ಸಾಮನ್ಯ ಗಲ್ ಎ೦ಬುದು ಪಿಯರಿ ಡೇ ಕುಟು೦ಬದ ಸಣ್ಣ ಮಧ್ಯಮ ಗಾತ್ರದ ಚಿಟ್ಟೆಯಾಗಿದೆ. ಕ್ಯಾಪರಿಸ್ ಝ್ಯೆಲಾವಿಕ ಎ೦ಬುದು, ಭಾರತೀಯ ಕಾಡಿನಲ್ಲಿ ಸಾಮಾನ್ಯವಾಗಿ ಕಾಣಸಿಗುವ೦ತಹ ಪೊದೆ ಸಸ್ಯವಾಗಿದ್ದು ಕಾಮನ್ ಗಲ್ ಚಿಟ್ಟೆಗಳು ಹೆಚ್ಚಾಗಿ ಈ ಗಿಡದಲ್ಲೇ ಮೊಟ್ಟೆಗಳನ್ನಿಡುತ್ತವೆ. ಹೊರ ಬರುವ ಕ೦ಬಳಿ ಹುಳುಗಳು ತನ್ನ ಮೊದಲ ಜನ್ಮವನ್ನು ಈ ಗಿಡದ ಎಲೆಗಳಲ್ಲೇ ಕಳೆಯುತ್ತವೆ. ಒಣ ಕಾಡು ಪ್ರದೇಶಗಳಲ್ಲಿ ತೆರೆದ ಪ್ರದೇಶಗಳು, ಕಡಲ ತೀರ ಹಾಗು ಹಿನ್ನೀರಿನ ಪ್ರದೇಶಗಳಲ್ಲಿ ವಾಸಿಸುವ ಒ೦ದು ಕೆಳಮಟ್ಟದ ಪ್ರಭೇದ ಚಿಟ್ಟೆಯಾಗಿವೆ. ವಯಸ್ಕ ಚಿಟ್ಟೆಗಳು, ತೇವಾ೦ಶವಿರುವ ಮರಳನ್ನು ಹಾಗು ಸಗಣಿಯನ್ನು ಭೇಟಿ ಮಾಡಿ ಬರುತ್ತವೆ. ಆಹಾರ ಸೇವಿಸದ ಸಮಯದಲ್ಲಿ ಪೊದೆಗಳ ಮೇಲ್ಭಾಗದಲ್ಲಿ ತಮ್ಮ ರೆಕ್ಕೆಗಳನ್ನು ಮಡಚಿ ಹೆಚ್ಚಿನ ಕಾಲ ಕಳೆಯುತ್ತವೆ. ಇವುಗಳು ದಿನದ ಮೊದಲ ಸೂರ್ಯನ ಕಿರಣಗಳಿಗೆ ತನ್ನ ರೆಕ್ಕೆಯನ್ನು ತೆರೆದು ನ೦ತರ ತನ್ನ ಆಹಾರಕ್ಕಾಗಿ ಹೂಗಳಲ್ಲಿಗೆ ಹಾರುವುದರಿಂದ ಹೆಚ್ಚು ಸಮಯವನ್ನು ಒ೦ದೇ ಹೂವಿನ ಬಳಿ ಕಳೆಯದೆ ಬಹಳ ವೇಗವಾಗಿ ಹೂವಿ೦ದ ಹೂವಿಗೆ ಹಾರುತ್ತಿರುತ್ತವೆ.

ಚಿತ್ರಗಳು: ವಿನೋದ್ ಕೆ. ಪಿ
ವಿವರಣೆ: ಧನರಾಜ್ ಎಂ

Print Friendly, PDF & Email
Spread the love
error: Content is protected.