ಜೀವದನಿ
ಕೇಳಿಸಿಕೊ ನಿನ್ನ ದನಿ
ತಾಮ್ರದ ತಗಡ ಬಡಿದಂತಾ ಪಕ್ಕಿಯ ಇಂಚರಕೆ
ಊಳಿಟ್ಟಿವೆ ಕಾಗೆ, ಉಂಡು ಕೋಳಿ, ನರಿ
ಭೂಮಿಯನಪ್ಪಿದ ಬೀಜ ಸಿಡಿಸಿದಾ ನಾದ.
ಹಸಿರುಟ್ಟು ನಿಂತ ಬಿದಿರು ಮೆಳೆಯ ಉಸಿರು
ಬಿಲದೊಳಗಿನ ಸುಂಡಿಲಿಗೆ ಗುರುತಾಗಿ
ಬರ ಬಂದು ಜಲದ ಕಣ್ಣು ಹಿಂಗುವ ಮೊದಲು
ಕೇಳಿಸಿಕೊ ನಿನ್ನ ದನಿ
ಆಧುನಿಕ ಅನಾಗರೀಕತೆಯ
ಯಂತ್ರೋಪದೇಶಕ್ಕೆ ಮರುಳಾಗಿ
ಭೂಮಿಯ ಒಡಲಿಂದ ಮರಗಳ ಕೊರಳಿಂದ
ಸೆಟೆದು ನಿಂತು ಜಾಡಿಸಿ ಕೂಗಿದ ಆಕ್ರಂದನ
ಮಿಷಿನ್ ರಂಪದ, ಜೇಸೀಬಿ ನಿನಾದ
ಕೇಳಿಸಿಕೊ ನಿನ್ನ ದನಿ
ಬರಸಿಡಿಲು ಮಳೆಯಾಗಿ
ತುಸುಗಾಳಿಗೆ ತೂರಾಡಿದ ಎಲೆಯ ದನಿ
ಮೊಗ್ಗರಳಿ ಹೂವಾಗಿ
ಹಿಮಬಿಂದು ಮರೆಯಾದ ಇನಿದನಿ
ತಾರಾ ನಿಹಾರಿಕೆಗಳಲಿ ಕೇಳದ ಜೀವದನಿ !
ಕೇಳಿಸಿಕೊ ನಿನ್ನ ದನಿ
ಸೊಲ್ಲು ನಿಲ್ಲುವ ಮೊದಲು
ನಿನ್ನ ನಿಜ ದನಿ
-ಶಂಕರಪ್ಪ ಕೆ.ಪಿ
ಅತಿಥಿ ಶಿಕ್ಷಕರು, GHPS ಕೋನಸಂದ್ರ . ಬೆಂಗಳೂರು.
ಸಹಾಯಕ ಪ್ರಾಧ್ಯಾಪಕರು
ಎಸ್ ಎನ್ ಆರ್ ಪದವಿ ಕಾಲೇಜ್ , ಜಿಗಣಿ , ಬೆಂಗಳೂರು.