ಪ್ರಕೃತಿ ಬಿಂಬ

ಪ್ರಕೃತಿ ಬಿಂಬ

© ಹಯಾತ್ ಮೊಹಮ್ಮದ್ , ಪ್ರಾರ್ಥಿಸುವ ಮ್ಯಾಂಟೀಸ್

ಭೂಮಿಯಲ್ಲಿ ವಾಸಿಸುತ್ತಿರುವ ಕೊಟ್ಯಾಂತರ ಪ್ರಭೇದದ ಕೀಟಗಳಲ್ಲಿ ಈ ಮಿಡಿತೆಗಳ ಪ್ರಭೇದ ಕೂಡ ಒಂದು. ಇವುಗಳಲ್ಲಿಯೂ ಕೂಡ ಹಲವು ಬಗೆಯ ಮಿಡತೆಗಳಿವೆ, ಅವುಗಳಲ್ಲಿ ಒಂದು ಈ ಪ್ರಾರ್ಥಿಸುವ ಮ್ಯಾಂಟೀಸ್. ತ್ರಿಕೋನ ತಲೆ, ಕೊಕ್ಕಿನಂತಹ ಮೂತಿ, ಎರಡು ಬಲ್ಬ್ ಗಳಂತೆ ಹೊರಕ್ಕೆ ಬಂದಿರುವ ಕಣ್ಣುಗಳೊಂದಿಗೆ ಜೋಡಿ ಆಂಟಿನಗಳನ್ನು ಹೊಂದಿರುವ ಇವು ತನ್ನ ಉಳಿದ ಶರೀರ ಭಾಗಕ್ಕೆ ಕಡಿಮೆ ಕೆಲಸಕೊಟ್ಟು ಹೆಚ್ಚಿನ ಕೆಲಸವನ್ನು ತನ್ನ ತಲೆ ಹಾಗು ಮುಂಗಾಲುಗಳಿಗೆ ನೀಡಿರುತ್ತದೆ. ಇವುಗಳಲ್ಲೆ ಕೆಲವು ಪ್ರಭೇದದ ಮ್ಯಾಂಟೀಸ್ ಗಳು ತಮ್ಮ ತಲೆಯನ್ನು 1800 ವರೆಗೆ ತಿರುಗಿಸಬಲ್ಲವು.  ಇವುಗಳ ಬೇಟೆಯು ಕಣ್ಣಿನ ಮೇಲೆ ಅವಲಂಬಿತವಾಗಿರುವುದರಿಂದ ಹೆಚ್ಚಿನ ಮ್ಯಾಂಟೀಸ್ ಗಳು ಹಗಲಲ್ಲೇ ಬೇಟೆಯಾಡುತ್ತವೆ, ಪರಿಸರದಲ್ಲಿ ವಿಲೀನವಾಗುವಂತೆ ತಮ್ಮನ್ನು ಬೇಟೆಯಾಡುವ ಜೀವಿಗಳಿಂದ ತಪ್ಪಿಸಿಕೊಳ್ಳಲು ಒಣ ಎಲೆ, ಹಸಿರು ಎಲೆ, ಮರ ಕಡ್ಡಿಗಳ ಬಣ್ಣಗಳಲ್ಲಿರುತ್ತದೆ ಇದರಿಂದ ತಾನು ಉಳಿಯುವುದಲ್ಲದೆ ತನ್ನ ಬೇಟೆಯು ಸರಳವಾಗುತ್ತದೆ. ಚಿಕ್ಕ ಮ್ಯಾಂಟೀಸ್ ಗಳು 2 ರಿಂದ 3 ತಿಂಗಳು ಹಾಗು ದೊಡ್ಡವು 5 ರಿಂದ 6 ತಿಂಗಗಳುಗಳ ಕಾಲ ಬದುಕಬಲ್ಲವು.

© ಹಯಾತ್ ಮೊಹಮ್ಮದ್, ದರೋಡೆ ಫ್ಲೈ

ಕ್ಷಣಮಾತ್ರದಲ್ಲೆ ಹಾರಿ ತಮ್ಮ ಬೇಟೆಯನ್ನು ಅಪಹರಿಸುವ ಈ ಕೀಟವು ದರೋಡೆ ಫ್ಲೈ  ಎಂದು ಹೆಸರುವಾಸಿಯಾಗಿದೆ.  ಕೆಂಪು ಮಿಶ್ರಿತ ಕಪ್ಪುಬಣ್ಣದ ದಪ್ಪ ಕಾಲುಗಳ ಮೇಲೆ ಕೂದಲಿನಂಥ ರಚನೆಗಳು ತನ್ನ ಬೇಟೆಯನ್ನು ಹಾಗು ಯಾವುದೇ ಕೋನದಲ್ಲಾದರು ಅದು ಧೃಡವಾಗಿ ನಿಲ್ಲಲು ಸಹಾಯ ಮಾಡುತ್ತದೆ, ಬಲಿಷ್ಠವಾದ ಕಾಲುಗಳನ್ನು ಹೊಂದಿರುವುದರಿಂದ ತನ್ನ ಗಾತ್ರದ ಮಿಡತೆಯಂತಹ ಕೀಟಗಳನ್ನು ಸಹ ಬೇಟೆಯಾಡುತ್ತವೆ. ಇವುಗಳು ತಮ್ಮ ದೊಡ್ದ ಕಣ್ಣುಗಳ ಜೊತೆಗೆ ಅವುಗಳ ಮಧ್ಯದಲ್ಲಿ 3 ಸಣ್ಣ ಸರಳ ಕಣ್ಣುಗಳನ್ನು ಹೊಂದಿರುತ್ತವೆ. ಮರಿಗಳು ತೇವಾಂಶವಿರುವ ಸ್ಥಳಗಳಲ್ಲಿ ವಾಸಿಸುತ್ತವೆ. ಇವುಗಳು ಎಲ್ಲಿ ಸಸ್ಯಗಳು ಹೆಚ್ಚಿರುತ್ತವೋ ಅಲ್ಲಿ ಕಂಡುಬರುತ್ತವೆ. ಪೊದೆ ಪ್ರದೇಶಗಳು, ಹಾಗು ಹುಲ್ಲುಗಾವಲಿನಂತಹ ಪ್ರದೇಶಗಳಲ್ಲಿಯೂ ಕಾಣಸಿಗುತ್ತವೆ.

©ಹಯಾತ್ ಮೊಹಮ್ಮದ್, ಅಸಾಸಿನ್ ಬಗ್

ಅಸಾಸಿನ್ ಬಗ್ ಬೇಸಿಗೆಯಲ್ಲಿ ಮೊಟ್ಟೆಗಳನ್ನು ಇಡುತ್ತದೆ ಈ ಬಗ್ ಗಳು ಮೂರು ಬೆಳವಣಿಗೆಯ ಹಂತಗಳ ಮೂಲಕ ಹಾದುಹೋಗುತ್ತವೆ ಅವುಗಳೆಂದರೆ ಮೊಟ್ಟೆಗಳು, ನಿಂಫ಼್ ಗಳು (nymphs) ಮತ್ತು ವಯಸ್ಕರು. ಅಸಾಸಿನ್ ಬಗ್ ಗಳು ತಮ್ಮ ಕೊಕ್ಕಿನ ಮೂಲಕ ಬೇಟೆಗೆ ವಿಷವನ್ನು ಸೇರಿಸಿ ಬೇಟೆಯಾಡಿ ತಿನ್ನುತ್ತವೆ. ಇದರ ಚೂಪಾದ ಕೊಕ್ಕಿನಿಂದ ನಮಗೆ ಚುಚ್ಚಿದಾಗಲೇ ತುಂಬಾ ನೋವಾಗುವುದರ ಜೊತೆಗೆ ಅಲರ್ಜಿಯೂ ಕೂಡ ಆಗುವುದು, ಇನ್ನು ಅದರಬೇಟೆಯು ಸಾಯುವುದು ಖಚಿತ. ಕಂಬಳಿ ಹುಳುಗಳಂತಹ ಮೃದು ಮಾಂಸದ ಕೀಟಗಳು ಇವುಗಳಿಗೆ ಹೆಚ್ಚಾಗಿ ಇಷ್ಟವಾಗುತ್ತವೆ.

ಚಿತ್ರಗಳು: ಹಯಾತ್ ಮೊಹಮ್ಮದ್
ವಿವರಣೆ: ಧನರಾಜ್ ಎಂ

Print Friendly, PDF & Email
Spread the love
error: Content is protected.