ಮಾಸ ವಿಶೇಷ – ಹೊನ್ನೆ ಮರ
©ನಾಗೇಶ್ ಓ ಎಸ್, ಹೊನ್ನೆ ಮರ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ
ಇಂಗ್ಲೀಷ್ ಹೆಸರು :Indian kino tree
ವೈಜ್ಞಾನಿಕ ಹೆಸರು : Pterocarpus marsupium
ಭಾರತ ಉಪಖಂಡ, ನೇಪಾಳ, ಶ್ರೀಲಂಕಾಗಳಲ್ಲಿನ ಶುಷ್ಕ ಎಲೆ ಉದುರುವ ಕಾಡುಗಳಲ್ಲಿ ಎತ್ತರವಾಗಿ ಬೆಳೆಯುವ ಸುಂದರ ಮರ ಹೊನ್ನೆ ಮರ. ಇವು ಸುಮಾರು 30 ಮೀಟರ್ ಎತ್ತರದವರೆಗೆ ಬೆಳೆಯುತ್ತವೆ. ಕಾಡಿನಲ್ಲಿ ಈ ಮರಗಳನ್ನು ಪತ್ತೆ ಮಾಡುವ ಬಗೆ ಎಂದರೆ, ದೂರದಿಂದಲೇ ಮರದ ಕೊಂಬೆಗಳು ಸುಂದರವಾದ ನರ್ತನದಭಂಗಿಯಲ್ಲಿ ಕಾಣುತ್ತವೆ. ಈ ರೀತಿಯ ಕೆಲ ಮರಗಳು ಮಾತ್ರ ಮಳೆಯ ನಂತರ ಸುಂದರ ಹೂಗಳನ್ನು ಬಿಡುತ್ತವೆ. ಸುವಾಸನೆ ಭರಿತ ಹೂಗಳು ಕೊಂಬೆಗಳ ತುದಿಯಲ್ಲಿ ಸಮೂಹವಾಗಿ ಮೂಡುತ್ತವೆ. ಗಾಢ ತುಕ್ಕು ಕಂದು ಬಣ್ಣದ ಪುಷ್ಪಪಾತ್ರಗಳು, ಗಾಢಹಳದಿ ಬಣ್ಣದ ಪುಷ್ಪದಳಗಳು, ನೋಡಲು ಉಲ್ಲಾಸಭರಿತವಾಗಿರುತ್ತವೆ.ಸಾಮಾನ್ಯವಾಗಿ ಹೊನ್ನೆ ಮರಗಳು ಮೇ ತಿಂಗಳಲ್ಲಿ ಚಿಗುರಲು ಶುರುವಾಗುತ್ತವೆ, ಚಿಗುರು ತಿಳಿ ಗುಲಾಬಿ ಬಣ್ಣ, ಹಳದಿ ಹಸಿರು ಬಣ್ಣದಿಂದ ಕೂಡಿರುತ್ತವೆ. ಇದರ ಉಪಯೋಗಗಳಲ್ಲಿ ಗೃಹ ನಿರ್ಮಾಣ, ದೋಣಿ ತಯಾರಿಕೆ ಇತ್ಯಾದಿ ಮರಗೆಲಸಕ್ಕೆ ಉತ್ತಮ ಜಾತಿಯ ಮರ. ಇದರ ತೊಗಟೆಯಲ್ಲಿ ದೊರೆಯುವ ರಕ್ತ ಕೆಂಪಿನ ಬಂಧಕ ಅಂಟು (Astringent Gum) ಆಯುರ್ವೇದ ಔಷಧಗಳ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ.