ಭೀಮರಾಜ ಪಕ್ಷಿ

ಬೆಂಗಳೂರಿನ ಮಗ್ಗುಲಾದ ಬನ್ನೇರುಘಟ್ಟ ಸಮೀಪ ಹುಟ್ಟಿಬೆಳೆದ ನನಗೆ ಕಾಡು-ಮೇಡು ಸುತ್ತುವುದು ಚಿಕ್ಕಂದಿನಿಂದಲೂ ಚಟವಾಗಿಬಿಟ್ಟಿತ್ತು. ಆದರೆ ಇಂದು ಕಾಡಿನಲ್ಲೇ ಇರುವ ಕೆಲಸವೊಂದು ಸಿಕ್ಕಾಗ ಖುಷಿಯಾಯಿತು. ಅದೂ ನನ್ನ ಮೊದಲ ಕ್ಯಾಂಪ್ ಬಿಳಿಗಿರಿರಂಗನ ಬೆಟ್ಟದ ಕೆ.ಗುಡಿಯಲ್ಲಿ ಎಂದಾಗ ಖುಷಿಯು ದುಪ್ಪಟ್ಟಾಯಿತು. ಆದರೆ ಬೆಂಗಳೂರಿನಿಂದ ಬಹುದೂರ ಹೋಗಬೇಕೆಂದಾಗ ಅಷ್ಟೇ ಬೇಸರವಾದದ್ದು ಸುಳ್ಳಲ್ಲ. ಈ ದುಃಖ ಮತ್ತು ಸಂತಸದೊಂದಿಗೆ ಅಂದು ಮೆಜೆಸ್ಟಿಕ್ ನಲ್ಲಿ ಕೆಂಪು ಬಸ್ಸು ಹತ್ತಿದ ನನಗೆ ಮನಸಲ್ಲಿ ಸ್ವಲ್ಪ ತಳಮಳ, ದುಗುಡ ತುಂಬಿತ್ತು. ಬಸ್ ಹತ್ತಿ ಕೂತವನೆ ನಿದ್ದೆಗೆ ಜಾರಿದೆ. ಎಚ್ಚರಾಗುವಷ್ಟರಲ್ಲಿ ಚಾಮರಾಜನಗರ ತಲುಪಿದ್ದೆ. ಆಗ ಸಮಯ ಮಧ್ಯಾಹ್ನ ಮೂರಾಗಿತ್ತು. ಚಾಮರಾಜನಗರದಿಂದ ಕೆ.ಗುಡಿಗೆ 3.30 ಕೊನೆಯ ಬಸ್ಸು, TCಯನ್ನ ಕೇಳಿದಾಗ ಏನೋ ಪೆನ್ನಲ್ಲಿ ಗೀಚುತ್ತಿದ್ದವ ದೂರದ ಬೆಟ್ಟಗಳ ಕಡೆ ಕೈ ಮಾಡಿ “ಅಲ್ಲೋಗಿ ನಿಂತ್ಕೋಳಿ ಬರುತ್ತೆ” ಎಂದು ನನ್ನ ಮುಖವನ್ನು ನೋಡದೆ ಮತ್ತೆ ಗೀಚಲಾರಂಭಿಸಿದ. ನಾನು ಬೆಟ್ಟದ ಕಡೆ ನೋಡಿ ಪಕ್ಕದಲ್ಲೇ ಇದ್ದ ಬೋರ್ಡ್ನಲ್ಲಿ ಪ್ಲಾಟ್ಫಾರ್ಮ್ ಸಂಖ್ಯೆ ನೋಡಿ ಅಲ್ಲೇ ಹೋಗಿ ಕಾಯುತ್ತಾ ಕುಳಿತೆ.

ಸ್ವಲ್ಪ ಸಮಯದ ನಂತರ ನಾಲ್ಕೈದು ಹುಡುಗರು ಸುಮಾರು 12 ರಿಂದ 15 ವಯಸ್ಸಿರಬಹುದು. ಶಾಲಾ ಮಕ್ಕಳೆನಿಸುತ್ತದೆ, ಬಂದು ನನ್ನ ಪಕ್ಕದಲ್ಲೇ ಕುಳಿತರು. ಎಲ್ಲರೂ ತಂತಮ್ಮ ಮುಂದಲೆಯ 4 ಕೂದಲು ಮತ್ತು ಹಿಂದಲೆಯ ನಾಲ್ಕು ಕೂದಲಿಗೆ ಅದ್ಯಾವುದೋ ಕೆಂಪು ಬಣ್ಣವನ್ನ ಹಚ್ಚಿ ಒಂದೇ ಮೊಬೈಲ್ ನಲ್ಲಿ ಎಲ್ಲರು ಇಷ್ಟಿಷ್ಟು ಎಂದು ಗೇಂ ಆಡುತ್ತಾ ಕುಳಿತರು. ಅಲ್ಲೆ ಪಕ್ಕದಲ್ಲಿ ಕುಳಿತಿದ್ದ ಒಬ್ಬ ಮುದುಕ ಈ ಹುಡುಗರ ಆಟ ನೋಡಿ. “ಬಡ್ಡಿ ಐಕ ಯರುಡಾ ನಿನಗ ಬಣ್ಣ ಹಾಕಿದ್ದ, ನೋಡ್ ಯಂಗ್ ಕಾಣ್ತಿ ಹಾ….’ ಎಂದ. ಅದನ್ನು ಲೆಕ್ಕಕ್ಕೆ ಪರಿಗಣಿಸದ ಆ ಹುಡುಗರು ತಮ್ಮಾಟದ ಪಾಲಿಗೆ ಕಾಯುತ್ತಾ ಕುಳಿತರು. ಅಷ್ಟರಲ್ಲಿ ಯಾರ್ ರೀ… ಬೆಟ್ಟ… ಬೆಟ್ಟ ಬೆಟ್ಟ… ಎಂದ ಕಂಡಕ್ಟರ್ ದನಿ ಕೇಳಿ, ಓಡಿಹೋಗಿ ಬಸ್ ಹತ್ತಿ ಕುಳಿತೆ. ಅಲ್ಲಿಂದ ಸುಮಾರು 25 ಕಿ.ಮೀ ದೂರದಲ್ಲಿನ ಕೆ. ಗುಡಿ ತಲುಪಬೇಕಿತ್ತು. ಸುಮಾರು 5 ಗಂಟೆಗೆ ಬಿಳಿಗಿರಿರಂಗ ಕಾಡಿನ ಒಳ ಹೊಕ್ಕುತ್ತಿದ್ದಂತೆ ಮಟ ಪಕ್ಷಿ, ಹಸಿರು ಪಿಜೆನ್ಗಳು ನನ್ನನ್ನ ಆಹ್ವಾನಿಸಿದವು. ಸುಮಾರು ಆರುಗಂಟೆಗೆ ಕೆ.ಗುಡಿ ತಲುಪಿದೆ. ದಿನವೂ ನಗರದ ಜಂಜಾಟ, ಹೂಂಕರಿಸುವ ಹಾರ್ನ್ ಸದ್ದು, ಇವುಗಳಲ್ಲೇ ಮುಳುಗಿಹೋಗಿದ್ದ ನನಗೆ ಇಂದು ಎಲ್ಲವೂ ಸ್ತಬ್ಧವಾದಂತೆ ಭಾಸವಾಯಿತು.

ಸುತ್ತಲೂ ಕಾಡು ಇದರಮಧ್ಯದಲ್ಲಿಯೇ ನನ್ನ ವಾಸ.

ಅಂದು ಬೆಳಗ್ಗೆ ಸುಮಾರು 5.45 ರ ಸಮಯ ನನ್ನ ರೂಮಿನ ಹೊರಗಡೆ… ಬ್ರೈನ್ ಫಿವೇರ್… ಬ್ರೈನ್ ಫಿವೇರ್… ಎಂದು ಕೋಗಿಲೆ ಚಾಣ (Common Cuckoo Hawk) ಕೂಗುತ್ತಿತ್ತು. ಅದಕ್ಕೆ ಜೊತೆಯಾದಂತೆ ರೂಮಿನ ಪಕ್ಕದಲ್ಲೇ ಮರದ ಕೊಂಬೆಯಲ್ಲಿ ಕುಳಿತಿದ್ದ ಮಡಿವಾಳ. ತನ್ನ ಇರುವಿಕೆಯನ್ನು ಇಡೀ ಕಾಡಿಗೆ ಸಾರಿ ಹೇಳುವಂತೆ ಕೂಗುತ್ತಿದ್ದವು. ಈ ಸಂಗೀತ ನಿನಾದ ನನಗೆ ತಲೆ ಭಾರವಾದಂತೆ ಅನಿಸಿದ್ದು ಸುಳ್ಳಲ್ಲ. ಎದ್ದು ಹೊರಬಂದೆ, ಮೂಡಣದಲ್ಲಿ ಸೂರ್ಯ ಮೋಡಗಳ ನಡುವೆ ಅಗೋ-ಇಗೋ ಎಂದು ಇಣುಕುತ್ತಿದ್ದ. ಇತ್ತ ಕಾನನದ ಖಗಪಕ್ಷಿಗಳೆಲ್ಲ ಸಂಗೀತದ ಸ್ವಾಗತ ನೀಡಲು ತಯಾರಾಗಿರುವಂತೆ ಪಕ್ಷಿಗಳ ಕಲರವ ಕಾನನದ ಒಡಲಾಳದವರೆಗೂ ಪ್ರತಿಧ್ವನಿಸುತ್ತಿತ್ತು. ನಗರದ ಜಂಜಾಟದಲ್ಲೇ ಇದ್ದ ನನಗೆ ಇಂದಿನ ಮುಂಜಾವು ಹೊಸ ಲೋಕಕ್ಕೆ ಕರೆದೊಯ್ದಿತ್ತು.

ಸ್ವಲ್ಪ ಬಿಸಿಲೇರುತ್ತಿದ್ದಂತೆ ನೋಟ್ಬುಕ್, ಪೆನ್ನು, ಫೀಲ್ಡ್ ಗೈಡ್ ಹಿಡಿದು ಪಕ್ಷಿವೀಕ್ಷಣೆಗೆಂದು ಹೊರಟೆ. ಇಂತಹ ದಟ್ಟ ಕಾಡಿನಲ್ಲಿ ಪಕ್ಷಿವೀಕ್ಷಣೆ ಅಷ್ಟು ಸುಲಭದ ಮಾತಲ್ಲ, ಕೇವಲ ಪಕ್ಷಿಗಳ ಕೂಗನ್ನು ಮಾತ್ರ ಕೇಳಿ ಪಕ್ಷಿಗಳನ್ನ ಗುರುತಿಸಬೇಕಾಗುತ್ತದೆ.

ಅತ್ತಿಂದಿತ್ತ ಹಾರುವ ಪಕ್ಷಿಗಳನ್ನ ಬೈನಾಕ್ಯುಲಾರ್ ನಿಂದ ನೋಡಿ ಆನಂದಿಸಿದೆ, ಮಲಬಾರ್ಗಿಳಿ, ಚಿಟ್ಟು ಗಿಳಿ (Hanging Parrot), ನೀಲಿಗಲ್ಲದ ಕಳ್ಳಿಪೀರ (Blue bearded bee-eater), ಕಪ್ಪು ಹಕ್ಕಿ (Indian Black Bird), ಹೀಗೆ ನಾನು ಕಂಡಿರದ ಪಕ್ಷಿಗಳ ನೋಡಿ ಆನಂದವೋ ಆನಂದ. ಹೀಗೆಯೇ ಹಕ್ಕಿಗಳ ನಾದವನ್ನು ಕೇಳಿಸಿಕೊಳ್ಳುತ್ತಾ, ಬರೀ ಪುಸ್ತಕಗಳಲ್ಲಿ ಮಾತ್ರ ನೋಡಿದ್ದ ಹಕ್ಕಿಗಳನ್ನು ನೋಡುತ್ತಾ ಕಾಡಿನೊಳಗೊಂದಾಗಿ ಮೈಮರೆತು ಮುನ್ನಡೆಯುತ್ತಿದ್ದೆ. ಯಾವುದೋ ಉದ್ದನೆಯ ಬಾಲಂಗೋಚಿಯನ್ನು ಅಂಟಿಸಿಕೊಂಡಂತ್ತಿದ್ದ ಕಪ್ಪು ಪಕ್ಷಿಯು ಕಣ್ಮುಂದೆಯೇ ಹಾರಿ ಎದರುಗಡೆ ಇದ್ದ ಮರದ ಕೊಂಬೆಯ ಮೇಲೆ ಕುಳಿತು ಕೂಗತೊಡಗಿತು. ಕಪ್ಪು ಪಕ್ಷಿಗೆ ಉದ್ದ ಬಾಲವನ್ನ ಕಂಡೊಡನೆ ಹೋ ಇದು ಭೀಮರಾಜ (Racket Tailed Drongo) ಇರಬೇಕೆಂದು ಬೈನಕುಲರ್ ನಿಂದ ನೋಡಿದ ನನಗೆ ಆನಂದವೋ ಆನಂದ. ಜೀವನದಲ್ಲಿ ಮೊದಲಬಾರಿ ಕಂಡದ್ದು. ಕುವೆಂಪುರವರ ಪುಸ್ತಕ ಪ್ರಕಾಶನದ ಲಾಂಚನವನ್ನ ನೋಡಿದಾಗಲೆಲ್ಲ ಈ ಪಕ್ಷಿಯನ್ನ ಒಮ್ಮೆಯಾದರೂ ನೋಡಬೇಕು ಎಂದುಕೊಂಡಿದ್ದ ನನ್ನ ಮಹದಾಸೆ ಇಂದು ಪೂರ್ಣವಾಯಿತಲ್ಲ ಎಂದೆನಿಸಿತು.

ಸಾಧಾರಣ ಮೈನಾ ಗಾತ್ರದ ನೀಲಿಗಪ್ಪು ಬಣ್ಣದ ಹಕ್ಕಿ. ತಲೆಯ ಮೇಲೆ ಕಪ್ಪು ಜುಟ್ಟು ಇದ್ದು, ಅದು ಕಿರೀಟದಂತೆ ಕಾಣುತ್ತದೆ. ಈ ಹಕ್ಕಿಗಳ ಬಾಲವೇ ವಿಶೇಷ. ಹಕ್ಕಿ ಹಾರುವಾಗ ಯಾವೋ ಎರಡು ದುಂಬಿಗಳು ಹಕ್ಕಿಯನ್ನು ಹಿಂಬಾಲಿಸಿದಂತೆ ಈ ಬಾಲ ಕಾಣುತ್ತದೆ.

ದಟ್ಟ ಅರಣ್ಯ ಹಾಗೂ ಬಿದಿರು ಕಾಡುಗಳಿರುವ ಭಾರತ, ಶ್ರೀಲಂಕಾ ಹಾಗೂ ಅಂಡಮಾನ್ ನಿಕೋಬಾರ್ ಗಳಲ್ಲಿ ಈ ಪಕ್ಷಿಯು ಕಂಡುಬರುತ್ತವೆ. ಕೀಟಗಳು, ಸಣ್ಣ ಹಣ್ಣುಗಳು ಹಾಗೂ ಮಕರಂದ ಇದರ ಆಹಾರ. ಗಂಡು ಹೆಣ್ಣು ಹಕ್ಕಿಗಳಲ್ಲೇನು ವ್ಯತ್ಯಾಸವಿಲ್ಲ. ಹಲವು ಹಕ್ಕಿಗಳ ಕೂಗನ್ನು ಅನುಕರಿಸುವುದರಲ್ಲಿ ಈ ಭೀಮರಾಜ (ಕಾಜಾಣ) ನಿಸ್ಸೀಮ. ಸಂಶೋಧನೆಯ ಪ್ರಕಾರ ಇವು ಸರಿ ಸುಮಾರು 30 ಬೇರೆ-ಬೇರೆ ಜಾತಿಯ ಪಕ್ಷಿಗಳ ಕೂಗನ್ನು ಅನುಕರಣೆ ಮಾಡುತ್ತವೆ. ಕೆಲವೊಮ್ಮೆ ಲಂಗೂರ್ ಗಳ ಎಚ್ಚರಿಕೆ ದನಿಯನ್ನೂ ಹೇಳುತ್ತಾರೆ. ಇವುಗಳಿಗೆ ಹೆಚ್ಚು ಕೋಪ. ಯಾರಾದರೂ ತನ್ನ ಗೂಡಿಗೋ, ಮರಿಗಳಿಗೋ ತೊಂದರೆಕೊಟ್ಟರೆ ವೈರಿಯ ಗಾತ್ರವನ್ನು ಲೆಕ್ಕಿಸದೆ ಮೇಲೆರಗುತ್ತವೆ.  ಆದ್ದರಿಂದಲೇ ಸಣ್ಣ ಸಣ್ಣ ಹಕ್ಕಿಗಳು ಭೀಮರಾಜ/ಕಾಜಾಣಗಳ ಗೂಡುಗಳ ಬಳಿಯಲ್ಲೇ ತಮ್ಮ ಗೂಡುಗಳನ್ನ ಕಟ್ಟಿಕೊಳ್ಳುತ್ತವೆ. ನಾನು ನೋಡುತ್ತಿದ್ದ ಭೀಮರಾಜ ಪಕ್ಕದಲ್ಲೇ ಇದ್ದ ನೇರಳೆ ಮರಕ್ಕೆ ಹಾರಿತು ಮರ ಹೂಗಳಿಂದ ತುಂಬಿ ಕಂಗೊಳಿಸುತ್ತಿತ್ತು. ಒಳ್ಳೆ ಮಕರಂದ ಸಿಕ್ಕಿತೆಂದು ಪಿಕಳಾರ, ಬೆಳಗಣ್ಣ, ಕಳ್ಳಿಪೀರಗಳು ಆಗಲೇ ಬಂದು ಮಕರಂದ ಹೀರುವುದರಲ್ಲಿ ತಲ್ಲೀನವಾಗಿದ್ದವು. ಅಷ್ಟರಲ್ಲಿ  ಕಾಡಿನೊಳಗಿಂದ ಮುಸವಾಗಳು ಕೂಗಲಾರಂಭಿಸಿದವು. ಪಕ್ಕದಲ್ಲೇ ಮೇಯುತ್ತಿದ್ದ ಚುಕ್ಕೆ ಜಿಂಕೆಗಳು ತಲೆಯೆತ್ತಿ ಎರಡು ಕಿವಿಗಳನ್ನ ನೆಟ್ಟಗೆ ಮಾಡಿ ಆಲಿಸಲಾರಂಭಿಸಿದವು. ಹುಲಿಯೋ.. ಚಿರತೆಯೋ.. ಬೇಟೆಗೆ ಹೊಂಚು ಹಾಕುತ್ತಿರಬಹುದು, ನಾನು ಇಲ್ಲಿಯೇ ಇದ್ದರೆ ಅವುಗಳು ಅಂಜಿ ಹಿಂದಿರುಗಬಹುದೆಂದು, ನನಗೂ ಹೊಟ್ಟೆ ಹಸಿವಾಗಿದ್ದ ಕಾರಣ ನಾನು ಹಿಂತಿರುಗಿ ಕ್ಯಾಂಪ್ ನ ಕಡೆ ಹೆಜ್ಜೆ ಹಾಕತೊಡಗಿದೆ.

ಲೇಖನ: ಮುರಳಿ .ಎಸ್
          ಬೆಂಗಳೂರು ಜಿಲ್ಲೆ.

Print Friendly, PDF & Email
Spread the love
error: Content is protected.