ಉರಗ ಸಂರಕ್ಷಕನಾಗಿ ನಾನು ಕಲಿತದ್ದು

ಉರಗ ಸಂರಕ್ಷಕನಾಗಿ ನಾನು ಕಲಿತದ್ದು

 “ಎರಡು ದಿನಗಳ ಹಿಂದೆ  ಸಂರಕ್ಷಿಸಿ ತನ್ನ ಬಳಿಯಲ್ಲಿ ಇಟ್ಟುಕೊಂಡಿದ್ದ ಹಾವಿನ ಛಾಯಾಚಿತ್ರಗಳನ್ನು ತೆಗೆಯಲು ಹೋದಾಗ, ಹಾವು ಕಚ್ಚಿತು, ಅವನ ಸ್ನೇಹಿತರು ಆಸ್ಪತ್ರೆಗೆ ಕರೆದುಕೊಂಡುಹೋದರು ಆದರೆ ಅವನು ಉಳಿಯಲಿಲ್ಲ”

ಕೆಲವು ವರ್ಷಗಳ ಹಿಂದೆ ನಡೆದ ಈ ಸಂಭಾಷಣೆ ನನಗೆ ನೆನಪಿದೆ. ಒಬ್ಬ ಉರಗ ಪ್ರೇಮಿ ತನ್ನ ಪ್ರಾಣವನ್ನು ಪಣಕ್ಕಿಟ್ಟು ಹಾವನ್ನು ರಕ್ಷಿಸಿದ, ಆದರೆ ಹಾವು ಅವನನ್ನೇ ಕಚ್ಚಿಕೊಂದಿತು, ಹಾಲೆರೆವ ಕೈಯನ್ನೇ ಕಚ್ಚುವ ಹಾವಿನಂಥವನು ಎನ್ನುವ ನಾಣ್ಣುಡಿ ಹಳ್ಳಿಗಾಡಿನಲ್ಲಿ ಬಳಕೆಯಲ್ಲಿದೆ, ಆದರೆ ಅದು ಸುಳ್ಳು, ಹಾವು ಹಾಲನ್ನು ಕುಡಿಯುವುದಿಲ್ಲ ಹಾಗೂ ಮನುಷ್ಯನ ಪ್ರೀತಿಯ ಭಾಷೆ ಹಾವುಗಳಿಗೆ ತಿಳಿಯುವುದಿಲ್ಲ.

ಇತ್ತೀಚಿನ ದಿನಗಳಲ್ಲಿ ’’ಉರಗ ಪ್ರೇಮಿ’’, ‘’ಉರಗ ಸಂರಕ್ಷಕ’’ ಎಂದು ಕರೆಸಿಕೊಳ್ಳುವ ಹಲವಾರು ಮಂದಿ ಹಾವಿನ ಕಡಿತದಿಂದ ಮರಣವನ್ನಪ್ಪಿದ್ದಾರೆ. ಮನುಷ್ಯ ಸತ್ತಾಗ ಸರೀಸೃಪಗಳನ್ನು ದೋಷಿಯೆಂದು ಪರಿಗಣಿಸುವುದು ಸರ್ವೇ ಸಾಮಾನ್ಯ, ಆದರೆ ಬಹಳಷ್ಟು ಬಾರಿ ಉರಗಪ್ರೇಮಿ ಸಂರಕ್ಷಕ ಎಂದು ಘೋಷಿಸಿಕೊಳ್ಳುವವರ ಅಲಕ್ಷ್ಯ ಹಾಗು ಅತಿಯಾದ ವಿಶ್ವಾಸವೇ ಅವರ ತೊಂದರೆಗೆ ಕಾರಣವೇ ಹೊರತು ಹಾವುಗಳಲ್ಲ. ತನ್ನ ಸಮೀಪಕ್ಕೆ ಬರುವವರನ್ನು ತನ್ನ ಜೀವಕ್ಕೆ ಅಪಾಯವನ್ನುಂಟು ಮಾಡುವವರು ಎಂದು ಹಾವು ಹೆಡೆಯೆತ್ತಿ ಹೊಡೆಯುತ್ತದೆ ಹಾಗು ಕಚ್ಚುತ್ತದೆ.
ನಾನು ಮೊದಲು ಹಾವನ್ನು ಹಿಡಿದಾಗ ನನ್ನವಯಸ್ಸು ಬಹುಶಃ ಹತ್ತುವರ್ಷಕ್ಕಿಂತಲೂ ಕಡಿಮೆ ಎನಿಸುತ್ತದೆ. ರಬ್ಬರ್ ಗಿಡಗಳ ಮಧ್ಯೆ ಯಾವ ಜಾತಿಯ ಹಾವನ್ನೋ ಹಿಡಿದಿದ್ದೆ, ವಿಷಯುಕ್ತ ಹಾವೋ ಅಲ್ಲವೋ ತಿಳಿದಿರಲಿಲ್ಲ. ಹಾವನ್ನು ಹತ್ತಿರದಿಂದ ನೋಡಲು ಅದನ್ನು ಒಂದು ಕಡ್ಡಿಯ ಸಹಾಯದಿಂದ ಪ್ಲಾಸ್ಟಿಕ್ ಜಾಡಿಯೊಳಗೆ ಕಳಿಸುತ್ತಿದ್ದೆ. ನಾನೀಕತೆಯನ್ನು ಹೇಳಲು ಬದುಕುಳಿದಿರುವುದೇ ಅದು ವಿಷಯುಕ್ತ ಹಾವಲ್ಲ ಎನ್ನುವುದಕ್ಕೆ ಸಾಕ್ಷಿ! ಎಲ್ಲ ಹಾವುಗಳನ್ನು ವಿಷಯುಕ್ತ ಹಾವೆಂದು ಪರಿಗಣಿಸುವ ನನ್ನಮ್ಮ, ನನ್ನನ್ನು ಹಾವಿರುವ ಜಾಡಿಯೊಂದಿಗೆ ಮನೆಯಿಂದ ಹೊರಹಾಕಿದ್ದಳು.

ಸಂರಕ್ಷಣಾ ಕಾರ್ಯ ಆರಂಭಿಸುವ ಮುನ್ನ ಉರಗಗಳ ಬಗ್ಗೆ ಕಲಿಯಿರಿ:  ನಾನು ವಡೋದರದಲ್ಲಿ ಉರಗ ಸಂರಕ್ಷಕನಾಗಿ ಕೆಲಸವಾರಂಭಿಸಿದಾಗ ಸ್ನೇಹಾಲ್ ಭಟ್ ರವರು ಬೇರೆಬೇರೆ ಉರಗ ಜಾತಿಗಳನ್ನು ಗುರುತಿಸುವುದನ್ನು ಮೊದಲು ಕಲಿಸಿದರು. ಆ ಸ್ಥಳದಲ್ಲಿ ಕಾಣುವ ವಿಷಯುಕ್ತ ಹಾಗು ವಿಷವಲ್ಲದ ಹಾವುಗಳನ್ನು  ಗುರುತಿಸುವುದನ್ನು ಕಲಿಯಲು ಸ್ವಲ್ಪ ಸಮಯ ತೆಗೆದುಕೊಂಡೆ. ನಾನು ಹಾವುಗಳನ್ನು ಸರಿಯಾಗಿ ಗುರುತಿಸುವುದನ್ನು ಕಲಿತಿದ್ದೇನೆ ಎಂಬುದು ಖಾತರಿಯಾಗುವವರೆಗೂ ಸ್ನೇಹಾಲ್ ಭಟ್ ರವರು ನಾನು ಹಾವುಗಳನ್ನು ಹಿಡಿಯದಂತೆ ನೋಡಿಕೊಂಡರು, ಅದಕ್ಕೆ ಬದಲಾಗಿ ಹಾವಿನ ಡಬ್ಬಿಗಳನ್ನು ಸ್ವಚ್ಛಗೊಳಿಸಿ ಬಿಸಿಲಿನಲ್ಲಿ ಒಣಗಿಸುವ ಕೆಲಸವನ್ನು ನನಗೆ ನೀಡಿದರು. ನಿಮಗೆ ಹಾವುಗಳ ವಿಷಯದಲ್ಲಿ ಆಸಕ್ತಿ ಇದ್ದರೆ ಅವುಗಳನ್ನು ನೂರು ಪ್ರತಿಶತ ತಪ್ಪಿಲ್ಲದೇ ಗುರುತಿಸುವುದನ್ನ ಕಲಿತುಕೊಳ್ಳಿ. ಹಾವನ್ನು ಗುರುತಿಸುವುದಕ್ಕಾಗದೇ ಹೋದರೆ ಆ ಹಾವನ್ನು  ಪ್ರಪಂಚದಲ್ಲೇ ಅತ್ಯಂತ ವಿಷಕಾರಿ ಹಾವು ಎಂದು ಪರಿಗಣಿಸಿ.

ಉರಗ ಸಂರಕ್ಷಣೆಯ ಪ್ರಮುಖವಾದ ಸಾಧನಗಳು:

ನನ್ನ ಇನ್ನೊಂದು ಅನುಭವವನ್ನು ನಿಮ್ಮೊಂದಿಗೆ ಹಂಚಿಕೊಳ್ಳುವೆ. ಹದಿನೈದು ವರ್ಷಗಳ ಹಿಂದೆ ವಡೋದರದಲ್ಲಿ ಕರೆ ಬಂದೆಡೆ ಹಾವುಗಳ ಸಂರಕ್ಷಣೆಗೆ ಹೊರಡುತ್ತಿದ್ದೆ. ಸಂರಕ್ಷಣಾ ಕರೆ ಬಂದಾಗ ಸಾಧಾರಣವಾಗಿ ಮೂಲಪರಿಕರಗಳಾದ ಹಾವಿನಕಡ್ಡಿ ಹಾಗೂ ಚೀಲಗಳನ್ನು ಎತ್ತಿಕೊಂಡುಹೋಗುವಷ್ಟು ವ್ಯವಧಾನವಿರುತ್ತಿರಲಿಲ್ಲ. ವಡೋದರದಲ್ಲಿ ಹೇರಳವಾಗಿ ನಾಗರಹಾವುಗಳು, ಕಟ್ಟುಹಾವುಗಳು, ಕೊಳಕಮಂಡಲಗಳು, ಗರಗಸ ಮಂಡಲಹಾವುಗಳಿದ್ದವು. ಇವುಗಳಲ್ಲಿ ಆಕ್ರಮಣಕಾರಿ ಸ್ವಭಾವ ಹೆಚ್ಚಿರುವುದರಿಂದ ಅವುಗಳನ್ನು ಸಂರಕ್ಷಿಸಲು ಬಹಳಸಮಯಬೇಕಾಗುತ್ತಿತ್ತು. ಸಂರಕ್ಷಣಾ ಸ್ಥಳ ತಲುಪಿದಮೇಲೆ ಸ್ಥಳೀಯರಲ್ಲಿ ಒಂದು ಸಣ್ಣ ಚೀಲವನ್ನೋ ಪ್ಲಾಸ್ಟಿಕ್ ಜಾಡಿಯನ್ನೋ ಕೇಳಿ ಪಡೆಯುತ್ತಿದ್ದೆ ಹಾಗೂ ಹಾವನ್ನು ಅದರೊಳಗೆ ಕಳಿಸಲು ಸುತ್ತಮುತ್ತ ಬಿದ್ದಿರಬಹುದಾದ ಕಡ್ಡಿಯನ್ನು ಹುಡುಕುತ್ತಿದ್ದೆ. ಕೆಲವು ಬಾರಿ ಹಾವನ್ನು ಚೀಲದೊಳಗೆ ಸೇರಿಸುವಷ್ಟರಲ್ಲಿ ಅದು ಚೀಲದಲ್ಲಿದ್ದ ಸಣ್ಣತೂತುಗಳಿಂದ ಹೊರಗೆ ಬಂದುಬಿಡುತ್ತಿತ್ತು. ಕೊನೆಗೆ ಆರು ಅಡಿ ಉದ್ದದ ಒಂದು ಕಟ್ಟುಹಾವು ನನಗೆ ಪಾಠ ಕಲಿಸಿತು. ಮನೆಯಹಿತ್ತಲಿನಲ್ಲಿದ್ದ ಹಾವು ನನಗೆ ತೀವ್ರಪ್ರತಿರೋಧವನ್ನೊಡ್ಡಿತು ಹಾಗೂ ಚೀಲದೊಳಗೆ ಸೇರಿಸುವಷ್ಟರಲ್ಲಿ  ಮೂರ್ನಾಲ್ಕು ಬಾರಿ ಇನ್ನೇನು ಕಚ್ಚೇಬಿಟ್ಟಿತು ಎನ್ನುವಂತಾಗಿತ್ತು. ಈ ಘಟನೆಯ ನಂತರ ಉದ್ದನೆಯ ಕೋಲು ಹಾಗು ಹಾವಿನ ಕೊಕ್ಕೆಗಳು ನನ್ನ ಮೊಟಾರುವಾಹನದ ಅವಿಭಾಜ್ಯ ಅಂಗಗಳಾಗಿಬಿಟ್ಟವು. ತಪ್ಪುಮಾಡಿ ಹಾನಿಯಾಗದೆ ಉಳಿಯುವುದು, ಸರಿಯಾದುದನ್ನು ಕಲಿಯಲು ಒದಗಿ ಬರುವ ಅವಕಾಶ.  ನೀವುಕೂಡ ಹಾವಿನ ಸಂರಕ್ಷಣೆಗೆ ಹೊರಡುವಾಗ ಸೂಕ್ತ ಪರಿಕರಗಳನ್ನು ತೆಗೆದುಕೊಂಡುಹೋಗಿರಿ.

ಡಿಸ್ಕವರಿ ನ್ಯಾಟ್ ಜಿಯೊ ಹೀರೊಗಳು ಸಂಪೂರ್ಣ ನಿಜವಲ್ಲ: ಪ್ರಾಣಿಗಳು ಹಾವುಗಳು ಪರದೆಯ ಮೇಲೆ ನೋಡಿದಷ್ಟು ಸೌಮ್ಯಸ್ವಭಾವದ ಪ್ರಾಣಿಗಳಲ್ಲ, ವೀಡಿಯೋದ ಸಾಕಷ್ಟುಭಾಗಗಳನ್ನು ಸಂಸ್ಕರಿಸಿ ಪರದೆಯಮೇಲೆ ತೋರಿಸುತ್ತಾರೆ, ತೋರಿಸದೇ ಇರುವುದೇನೆಂದರೆ ಚಿತ್ರೀಕರಣದವೇಳೆ ಪರದೆಯ ಹಿಂದಿನ ತಯಾರಿ, ನಿರ್ಮಾಪಕ ವೃಂದದವರು ತಮಗಾಗಿ ದುಡಿಯುವ ಪ್ರಸ್ತುತ ಪಡಿಸುವವನ(anchor) ಸುರಕ್ಷತೆಗಾಗಿ ಪ್ರಥಮಚಿಕಿತ್ಸೆಯಿಂದ ಹಿಡಿದು, ನುರಿತ ತಜ್ಞವೈದ್ಯರು, ಔಷಧಿಗಳು, ಸಾರಿಗೆ ವ್ಯವಸ್ಥೆಯನ್ನು ಮಾಡಿರುತ್ತಾರೆ ಹಾಗೂ ತುರ್ತು ಪರಿಸ್ಥಿತಿಯಲ್ಲಿ ಕ್ಷಣಮಾತ್ರದಲ್ಲಿ ಬೇಕೆಂದರೆ ಹೆಲಿಕಾಪ್ಟರ್ ಗಳನ್ನುಕೂಡ ಬಳಸಿ, ಪ್ರಸ್ತುತಪಡಿಸುವವನ ಜೀವವನ್ನು ಕಾಪಾಡುತ್ತಾರೆ ಹಾಗು ಅವರ ಚಿಕಿತ್ಸಾವೆಚ್ಚಗಳನ್ನು ಸಂಪೂರ್ಣವಾಗಿ ಭರಿಸುತ್ತಾರೆ.

ನೀವು ಟಿ.ವಿ.,ಯಲ್ಲಿ ದಿಸ್ಕವರಿ, ನ್ಯಾಟ್ ಜಿಯೊ ನೋಡಿ ಹಾವುಗಳ ಸಂರಕ್ಷಣೆಮಾಡಲು ನಿರ್ಧರಿಸಿದರೆ ಹುಷಾರಾಗಿರಿ, ಸೂಕ್ತ ಉಪಕರಣಗಳನ್ನು ಬಳಸಿ, ಟಿವಿಯಲ್ಲಿ ನೋಡಿದಂತೆ ಮಾಡಲು ಹೋಗಬೇಡಿ , ನೀವು ಯಾವ ಗಳಿಗೆಯನ್ನು ಅತ್ಯಂತ ಸುರಕ್ಷಿತ ಎಂದು ಪರಿಗಣಿಸುವಿರೋ ಅದೇ ವೇಳೆಯಲ್ಲಿ ಹಾವುಗಳು ಕಚ್ಚಲು ನಿರ್ಧರಿಸಿರುತ್ತವೆ.

ಹಾವನ್ನು ಕಾಪಾಡಲು ಹೋದಾಗ ಯಾವುದೇ ನಾಟಕೀಯತೆಯೂ ಬೇಡ, ಹಾವನ್ನು ಕೈಯಲ್ಲಿ ಹಿಡಿದು ಪ್ರದರ್ಶಿಸುವುದು, ಚೀಲದಿಂದ ಹೊರಗೆ ತೆಗೆಯುವುದು ಮಾಡಬೇಡಿ, ಹೋದ ಕೆಲಸ ಹಾವನ್ನು ರಕ್ಷಿಸುವುದು, ಮೊದಲು ಹಾವನ್ನು ಚೀಲದೊಳಗೆ/ ಜಾಡಿಯೊಳಗೆ ಬಂಧಿಸಿ, ನಂತರ ಸ್ಥಳೀಯರೊಂದಿಗೆ ಮಾತನಾಡಿ,ಸಾಧ್ಯವಾದರೆ ಹಾವನ್ನು ಅಲ್ಲೇ ಸುರಕ್ಷಿತ ಜಾಗದಲ್ಲಿ ಬಿಡಿ ಇಲ್ಲವೇ ಸುರಕ್ಷಿತ ಜಾಗಕ್ಕೆ ತೆಗೆದುಕೊಂಡುಹೋಗಿ.

ಎಲ್ಲ ಹಾವುಗಳನ್ನು ಸಂರಕ್ಷಿಸಬೇಕೆ? ಇದೊಂದು ಅತಿಕ್ಲಿಷ್ಟವಾದ ಪ್ರಶ್ನೆ. ನಾನು ಹಲವಾರುಕಡೆ ಸಾಕಷ್ಟು ಬಗೆಯ ಹಾವುಗಳನ್ನು ಹಿಡಿದಿದ್ದೇನೆ. ಈ ವಿಷಯದಲ್ಲಿ ವ್ಯಕ್ತಿಗತ ಸಂಬಂಧ(public relation) ಅತಿಮುಖ್ಯ. ಜನರೊಂದಿಗೆ ಮಾತನಾಡಿ, ವಿಷಕಾರಿಯಲ್ಲದ ಹಾವುಗಳು ಮರದಮೇಲಿರುವ ಹಕ್ಕಿಗಳಂತೆ ಏನೂ ಅಪಾಯವನ್ನುಂಟು ಮಾಡುವುದಿಲ್ಲ. ಬಿಡಿಸಿ ತಿಳಿ ಹೇಳಿ ಜನಸಂದಣಿಯ ನಡುವೆ ಕಾಪಾಡಿದ ವಿಷಕಾರಿ ಹಾವುಗಳನ್ನು ಅಲ್ಲೇಬಿಡುವುದು ಯಾವ ದೃಷ್ಟಿಯಲ್ಲೂ ಸುರಕ್ಷಿತವಲ್ಲ. ವಿಷಕಾರಿಯಲ್ಲದ ಹಾವುಗಳನ್ನು ಅವುಗಳು ದೊರಕಿದ ಸ್ಥಳಗಳಲ್ಲೇ ಬಿಡಬೇಕು ಇಲ್ಲದಿದ್ದರೆ ಅದರ ಸ್ಥಳಕ್ಕೆ ಮತ್ತೊಂದು ವಿಷಕಾರಿಹಾವು ಬಂದು ಸೇರಿಕೊಳ್ಳುವ ಸಂಭವವಿದೆ.

ಹಾವುಗಳು ಸಾಕುಪ್ರಾಣಿಗಳ ಸಾಲಿಗೆ ಸೇರುವುದಿಲ್ಲ:

ಹಾವುಗಳನ್ನು ಅಪಾಯಕರ ಜಾಗಗಳಿಂದ ಸಂರಕ್ಷಿಸಿ ಹಾಗೂ ಸುರಕ್ಷಿತ ಸ್ಥಳದಲ್ಲಿ ಆದಷ್ಟು ಬೇಗ ಬಿಟ್ಟುಬಿಡಿ. ಸುಮಾರು ಮೂರು ವರ್ಷಗಳ ಹಿಂದೆ ನನ್ನ ಉರಗ ಸಂರಕ್ಷಕ ಸ್ನೇಹಿತನನ್ನು ಭೇಟಿಯಾದೆ. ಅವರು ನನ್ನನ್ನು ಮನೆಗೆ ಕರೆದುಕೊಂಡು ಹೋದರು. ಅವರ ಮನೆಯಲ್ಲಿ ಆತ ಸಂರಕ್ಷಿಸಿದ ಹಾವುಗಳೆಲ್ಲವೂ ಪ್ಲಾಸ್ಟಿಕ್ ಜಾಡಿಯಲ್ಲಿ ಇದ್ದದು ನೋಡಿ ನನಗೆ ಅಘಾತವಾಯಿತು. ಏನೆಂದು ಕೇಳಿದಾಗ ಹಾವುಗಳ ಬಗ್ಗೆ ತಿಳುವಳಿಕೆ ನೀಡುವ ಕಾರ್ಯಾಗಾರಕ್ಕೋಸ್ಕರ ಸಂಗ್ರಹಿಸಿರುವುದೆಂದೂ ಕಾರ್ಯಗಾರ ಮುಗಿದೊಡನೆ ಬಿಟ್ಟುಬಿಡುವುದಾಗಿ ತಿಳಿಸಿದರು. ಸಂರಕ್ಷಿಸಿದ ಹಾವುಗಳನ್ನು IUCN(INTERNATIONAL UNION FOR CONSERVATION OF NATURE)
ಮಾರ್ಗಸೂಚಿಯನ್ನು ಪಾಲಿಸಿ. ಒಂದು ನಗರಪ್ರದೇಶದಲ್ಲಿ ಹಲವಾರು ಹಾವುಗಳನ್ನು ಹಿಡಿದು ಅವುಗಳನ್ನು ಊರಾಚೆಯ ಒಂದೇ ಸ್ಥಳದಲ್ಲಿ ಬಿಡುವುದು ಪರಿಸರದ ಒಂದುದೊಡ್ಡ ದುರಂತ. ಸ್ಥಾನಪಲ್ಲಟವಾದ ಹಾವುಗಳು ಸ್ಥಳೀಯ ಹಾವುಗಳೊಂದಿಗೆ ಆಹಾರಕ್ಕಾಗಿ, ವಾಸ ಸ್ಥಳಕ್ಕಾಗಿ ಪೈಪೋಟಿಯನ್ನೊಡ್ಡುತ್ತವೆ ಹಾಗೂ ರೋಗಗ್ರಸ್ತವಾಗಿದ್ದರೆ ಸ್ಥಳೀಯ ಹಾವುಗಳು ಕೂಡ ರೋಗಗ್ರಸ್ತವಾಗುತ್ತವೆ. ಕಾನೂನು ಪಾಲಿಸಿ ಇಲ್ಲದಿದ್ದರೆ ಕಾನೂನು ರಕ್ಷಕರು ನಿಮ್ಮಹಿಂದೆ ಬೀಳುತ್ತಾರೆ: ತುರ್ತು ಸಮಯದಲ್ಲಿ ಯಾವ ಪರವಾನಿಗೆಗಳಿಲ್ಲದೆ ಹಾವು, ಇನ್ಯಾವುದೇ ವನ್ಯಜೀವಿಯನ್ನು ಅಪಾಯದಿಂದ ಸಂರಕ್ಷಿಸಬಹುದು..
ನಿಮ್ಮೊಂದಿಗೆ ಯಾವುದಾದರು ವನ್ಯಮೃಗವಿದ್ದರೆ ಸಮೀಪದ ಅರಣ್ಯಾಧಿಕಾರಿ ಕಛೇರಿಯನ್ನು 48 ಗಂಟೆಗಳೊಳಗೆ ಸಂಪರ್ಕಿಸಿ ಮಾಹಿತಿನೀಡಿ. ಸಾಧ್ಯವಾಗದಿದ್ದರೆ ಆರಕ್ಷಕ ಠಾಣೆಗೆ ಬರವಣಿಗೆಯಲ್ಲಿ ತಿಳಿಸಿ ಸ್ವೀಕೃತಿ ದೃಡೀಕರಣವನ್ನು ಪಡೆದುಕೊಳ್ಳಿ. ವನ್ಯಪ್ರಾಣಿಗಳನ್ನು ನಿರ್ವಹಿಸುವ ಮೊದಲು ಸ್ಥಳೀಯ ಮುಖ್ಯ ಅರಣ್ಯಾಧಿಕಾರಿಯ ಅನುಮತಿ ಪಡೆದುಕೊಳ್ಳಿ. ಅನುಮತಿ ಇಲ್ಲದೆ ಹಾವುಗಳನ್ನು ಸಂರಕ್ಷಿಸಿಸುವುದು ಅಥವಾ ನಿರ್ವಹಿಸುವುದು ಕಾನೂನು ಬಾಹಿರ. ಎಲ್ಲಾ ಹಾವುಗಳು ಭಾರತೀಯ ಕಾನೂನಿನ ಬೇರೆ ಬೇರೆ ನಿಯಮಗಳಡಿ ಮೊದಲೇ ಸಂರಕ್ಷಿಸಲ್ಪಟ್ಟಿವೆ, ನಿಮ್ಮ ಪ್ರದೇಶದಲ್ಲಿ ಉರಗ ಸಂರಕ್ಷಣೆ ಮಾಡುವಿರೆಂದರೆ ಅದು ಕಾನೂನು ಪಾಲನೆಯ ಭಾಗವಾಗುತ್ತದೆ. ಆದ್ದರಿಂದ ಸಂಬಂಧಪಟ್ಟ ಅರಣ್ಯ ಇಲಾಖೆಯಿಂದ ಹಾವುಗಳನ್ನು ಸಂರಕ್ಷಿಸಲು
ಮೊದಲು ಅಪ್ಪಣೆಯನ್ನು ಪಡೆದುಕೊಳ್ಳಿ..

ಹಾವುಗಳನ್ನು ಸಂರಕ್ಷಿಸುವುದು, ಜನಸಾಮಾನ್ಯರಿಗೆ ಹಾವುಗಳ ಬಗ್ಗೆ ತಿಳುವಳಿಕೆ ನೀಡುವುದು ಒಂದು
ಸಮಾಜಮುಖಿಕಾರ್ಯ. ಇದು ಹಾವು ಹಾಗು ಮಾನವನ ನಡುವಿನ ಸಂಘರ್ಷವನ್ನು ಇಲ್ಲವಾಗಿಸುತ್ತದೆ ಹಾಗು ಇಬ್ಬರು ಕ್ಷೇಮವಾಗಿರುತ್ತಾರೆ. ಪ್ರತಿಯೊಂದು ಉರಗ ಸಂರಕ್ಷಣೆಯು ಸಂಪೂರ್ಣ ಮಾಹಿತಿ ತಿಳಿದುಕೊಂಡು ತರಭೇತಿಯಾದ ಬಳಿಕವೇ ಜವಾಬ್ದಾರಿಯುತವಾಗಿ ಮಾಡಬೇಕಾದ ಕೆಲಸ. ಹಾವುಗಳಿಗೆ ಮನುಷ್ಯನ ಹೆದರಿಕೆ ,ಪ್ರೀತಿ ಎರಡು ಬೇಕಿಲ್ಲ ಅವುಗಳನ್ನು ಗೌರವಿಸಿ. ಹಾವುಗಳಿಗೆ ಮಾನವನ ಭಾವನೆಗಳು ಅರ್ಥವಾಗುವುದಿಲ್ಲ.

ಮೂಲ ಲೇಖನ: ಜೋಸ್ ಲೂಯಿಸ್
ಕನ್ನಡಕ್ಕೆ ಅನುವಾದ: ಡಾ. ದೀಪಕ್ ಭದ್ರಶೆಟ್ಟಿ

Spread the love
error: Content is protected.