ದುಂಬಿಗಳ ಬದಲಿಗೆ

ದುಂಬಿಗಳ ಬದಲಿಗೆ

ಹೀಗೊಂದು ದಿನ, ನಾನು ಮತ್ತು ನನ್ನ ಸ್ನೇಹಿತರು ನಮ್ಮ ಪಾಡಿಗೆ ಆಟವಾಡುತ್ತ ನಮಗೆ ದೊರೆತಿದ್ದ 5 ನಿಮಿಷದ ವಿರಾಮವನ್ನು ಕಳೆಯುತ್ತಿದ್ದೆವು. ಆಗ ನನ್ನ 7ನೇ ತರಗತಿಯ ದಿನಗಳೆನಿಸುತ್ತದೆ. ಇರುವ ಸ್ವಲ್ಪ ಸಮಯವನ್ನು ವ್ಯರ್ಥ ಮಾಡಬಾರದೆಂದು ಆಟಕ್ಕಗಿಯೇ ಮುಡಿಪಾಗಿಟ್ಟು, ಆಡುತ್ತಿದ್ದ ನಮ್ಮನ್ನು ತುಕ್ಕು(ಸ್ನೇಹಿತನ ಅಡ್ಡ ಹೆಸರು) ಬಂದು ‘ಲೋ ಅಲ್ಲಿ ಜೇನು ಕಟ್ಟದೆ, ಬಾ ಹೋಗಿ ಕೀಳನ’ ಎಂದನು. ಜೇನು ಸವಿಯಲು ಚೆನ್ನ, ಆದರೆ ಅದರ ಬಳಿ ಕಚ್ಚಿಸಿಕೊಂಡರೆ ಉಳಿಯಿತೇ? ಎಂದುಕೊಂಡು ನಾನು ‘ಹೋಗೊಲೋ ಯಾವನಿಗ್ ಬೇಕು ಕಚ್ಚುಸ್ಕೊಂಡ್ರೆ ಅಷ್ಟೇ 2 ದಿನ ರಜ ಸ್ಕೂಲ್ ಗೆ!’ ಎಂದೆ. ನನ್ನ ಈ ಮಾತುಗಳು ಅವನಿಗೆ ಮುಂದೇ ತಿಳಿದಂತೆ, ನನ್ನ ಮಾತುಗಳ ಅರ್ಧದಲ್ಲೇ ‘ಅದು ತುಡುವೆ ಜೇನು ಕಚ್ಚಲ್ಲ’ ಎಂದೊಡನೆ ನನ್ನ ಸ್ನೇಹಿತರೆಲ್ಲ ಹೋ ಎಂದು ಕಾಲ್ಕಿತ್ತರು. ನಾನು ಮಾತ್ರ ಏನು ಮಾಡಲಿ? ನಾನು ನಡೆದೆ. ಮರದ ಮೇಲೆ ಒಂದು ಸಣ್ಣ ಕಡ್ಡಿಯಲ್ಲಿ ಕಟ್ಟಿದ್ದ ಜೇನಿಗೆ ಎಲ್ಲರು ಗುರಿಯಿಟ್ಟು ಕಲ್ಲಿನಿಂದ ಹೊಡೆಯಲಾರಭಿಸಿದರು. ಒಂದೆರೆಡು ಏಟು ಜೇನಿನ ರಾಡಿಗೆ ತಗುಲಿದೊಡನೆ ಹುಳುಗಳೆಲ್ಲ ಎದ್ದು ಸದ್ದು ಮಾಡುತ್ತಿದ್ದವು. ನಾನು ಮಾತ್ರ ಕಲ್ಲು ಹೊಡೆಯದೆ ಸುಮ್ಮನೆ ಮರದ ಕೆಳಗೆ ಕೈ ಚಾಚಿ ನಿಂತಿದ್ದೆ. ಅದೃಷ್ಟವೋ ಏನೋ, ಅಷ್ಟು ಜನ ಶ್ರಮಪಟ್ಟು ಬೆವರೊರಿಸಿ, ಕ್ರಿಕೆಟ್ ನಲ್ಲಿ ಕಲಿತಿದ್ದ ತಮ್ಮ ಪ್ರತಿಭೆಯನ್ನೆಲ್ಲಾ ಉಪಯೋಗಿಸಿ ಕಲ್ಲು ತೂರುತ್ತಿರುವಾಗ, ಯಾವುದೋ ಪುಣ್ಯವಂತ ಕಲ್ಲು, ಜೇನು ಕಟ್ಟಿಗೆಗೆ ಯಾವುದೋ ಅದೃಷ್ಟ ಕೋನದಲ್ಲ್ಲಿ ತಗುಲಿ ಕಡ್ಡಿ ಮತ್ತು ಜೇನು ನೇರ ನನ್ನ ಕೈಯಲ್ಲಿ ತೊಪ್ ಎಂದು ಬಿತ್ತು.

ತಿಳಿಯಾಗಿದ್ದ ಜೇನು ಕೈಯಿಂದ ಮೆಲ್ಲನೆ ಜಾರುತ್ತಿತ್ತು. ಹಿಂದೆ ಸ್ನೇಹಿತರು ಇದ್ದುದು ನನಗೆ ನೆನಪಾಗಲೇ ಇಲ್ಲ. ಯಾವುದೋ ಅತೀವ ಶಕ್ತಿ ನನ್ನಾವರಿಸಿ ನನ್ನ ಕೈ ಮತ್ತು ಬಾಯಿ ಸಂಭಂದವನ್ನು ಕ್ಷಣಾರ್ಧದಲ್ಲಿ ಬೆಸೆಯಿತು. ನನಗರಿಯದಂದೆ ನನ್ನ ನಾಲಿಗೆಯಲ್ಲಿ ಜೇನಿನ ಸವಿ ಈಜಾಡುತ್ತಿತ್ತು.

ಆದರೆ ಇದೆಲ್ಲ ನನ್ನ ಸ್ನೇಹಿತರಿಗೇನು ತಿಳಿಯಬೇಕು ಪಾಪ. ಅವರು ಒಂದೆರೆಡು ಕ್ಷಣ ಜೇನು ಮಣ್ಣಿನ ಪಾಲಾಯಿತೆಂದು ತಿಳಿದಿದ್ದರು. ಆದರೆ ಇಲ್ಲಿ ನಡೆದ ವಾಸ್ತವ ನೋಡಿದ ಮೇಲೆ ಅವರಿಗೆ ಏನು ಮಾಡಬೇಕೆಂದು ತಿಳಿಯಲಿಲ್ಲ. ನನಗೆ ಬೈಯುವಷ್ಟರಲ್ಲಿ ಇನ್ನೆಷ್ಟು ಜೇನು ಖಾಲಿಯಗುವುದೋ ಎಂದು ನನ್ನ ಕೈಯಲ್ಲಿ ಉಳಿದಿದ್ದ ಜೇನನ್ನು ಕಸಿದುಕೊಂಡು, ನನ್ನ ಕೈಯನ್ನೂ ಬಿಡದೆ ರುಚಿಸಿದರು.

ಆಗಿನ ವಯಸ್ಸಿನಲ್ಲಿ ಜೇನು ಹುಳುಗಳ ಮಹತ್ವ ನಮಗೆ ಸರಿಯಾಗಿ ತಿಳಿದಿರಲಿಲ್ಲ. ಸಾವಿರು ಮೈಲಿ ಸಾಗಿ ಮಕರಂದ ಹೀರಿ ಜೊತೆಗೆ ಪರಾಗಸ್ಪರ್ಶ ಮಾಡಿ ಲೆಕ್ಕವಿಲ್ಲದಷ್ಟು ಸಸ್ಯಪ್ರಬೇಧಗಳ ಪೀಳಿಗೆಯನ್ನು ಮುಂದೆ ಸಾಗಿಸುವಲ್ಲಿ ಜೇನು ಹುಳುಗಳದ್ದೇ ಪ್ರಮುಖ ಪಾತ್ರವೆಂದು. ಆದರೆ ದುಸ್ತಿತಿ ಎಂದರೆ ಅಂತಹ ಜೇನು ಹುಳುಗಳ ಸಂಖ್ಯೆ ಈಗ ಗಂಭೀರವಾಗಿ ಕ್ಷೀಣಿಸುತ್ತಿದೆ. ಇದಕ್ಕೆ ಕೆಲವು ಕಾರಣಗಳೆಂದರೆ ವಾಯು ಮಾಲಿನ್ಯ, ವ್ಯವಸಾಯದಲ್ಲಿ ಕ್ರಿಮಿ ಮತ್ತು ಕೀಟನಾಶಕಗಳ ಅತೀವ ಬಳಕೆ ಮುಂತಾದವು. ಈ ವಿಷಯಗಳನ್ನು ಯಾವುದೋ ಟಿ.ವಿ. ಪ್ರೋಗ್ರಾಮಿನಲ್ಲಿ ಕಂಡ National Institute of Advanced Industrial Science and Technology in Tsukuba, Japan ನ ರಸಾಯನ ಶಾಸ್ತ್ರಜ್ಞ ಇಜಿರೋ ಮಿಯಾಕೋ (Eijiro Miyako) ನಾನು ಈ ಸಮಸ್ಯೆಗೆ ಪರಿಹಾರ ಹುಡುಕಬೇಕೆಂದು ಮನಸಾಯಿತು. ಹಾಗೆಯೇ ಕ್ಷೀಣಿಸುತ್ತಿರುವ ಪರಾಗಸ್ಪರ್ಷಕಗಳ ಸಮಸ್ಯೆಗೆ ಒಂದು ಪರಿಹಾರವನ್ನು ಸಹ ಕಂಡು ಹಿಡಿದರು.

ಅದನ್ನು ಹೇಳುವ ಮುಂಚೆ ಇದನ್ನು ನೀವು ಕೇಳಲೇ ಬೇಕು. ಮಿಯಾಕೋ ಒಬ್ಬ ರಸಾಯನ ಶಾಸ್ತ್ರಜ್ಞ ಎಂಬುದು ನಿಮಗೆ ಈಗಾಗಲೇ ತಿಳಿದಿದೆ. ಇವರು ಒಂದು ಹೊಸ ಆವಿಷ್ಕಾರಕ್ಕೆ ಕೈ ಹಾಕಿದ್ದರು. ಅದೇನೆಂದರೆ ವಿದ್ಯುತ್ ಚಲಿಸುವ ಅರೆ ಘನರೂಪ ದ್ರಾವಣ(Electricity conducting Gel) ವನ್ನು ಕಂಡು ಹಿಡಿಯುವ ಪ್ರಯತ್ನದಲ್ಲಿದ್ದರು. ಆದರೆ ಕಾರಣಾಂತರಗಳಿಂದ ಅವರ ಆವಿಷ್ಕಾರ ಸೋಲು ಕಂಡಿದ್ದರಿಂದ 2007 ರಲ್ಲಿ ಆ ದ್ರಾವಣವನ್ನು ಒಂದು ಜಾರ್ ನಲ್ಲಿ ಇರಿಸಿ ಮರೆತುಬಿಟ್ಟರು. ಇತ್ತೀಚೆಗೆ ತಮ್ಮ ಕೊಠಡಿಯನ್ನು ಶುಚಿಗೊಳಿಸುವಾಗ ಕೈ ತಗುಲಿ ಆ ಜಾರ್ ಕೆಳಗೆ ಉರುಳಿ ಸಂಗೀತ ದನಿಯಲ್ಲಿ ಒಡೆಯಿತು. ಬಿದ್ದ ಜಾರ್ ಮತ್ತು ಜೆಲ್ ಅನ್ನು ಶುಚಿ ಗೊಳಿಸುವಾಗ ಆ ಜೆಲ್ ನ ಜೊತೆಗೆ ಕೆವವು ಧೋಲಿನ ಕಣಗಳು ಅಂಟಿಕೊಂಡಿದ್ದವು. ಅವರಿಗೆ ಒಂದು ಹೊಸ ಯೋಚನೆ ಹೊಳೆಯಿತು. ಈ ಅಂಟುವಿಕೆ ಪರಾಗ ಕಣಗಳು ಜೇನು ಹುಳುವಿನ ಮೈ ಕೂದಲಿಗೆ ಅಂಟುವ ರೀತಿಯಲ್ಲೇ ಇದೆ ಎಂದನಿಸಿತು. ಹಾಗಾದರೆ ಇದೇ ಜೆಲ್ ನನ್ನು ಉಪಯೋಗಿಸಿ ಕೃತಕ ಪರಾಗಸ್ಪರ್ಶ ಕ್ರಿಯೆ ಮಾಡಬಹುದೇ ಎಂಬ ಗುಮಾನಿ ಅವರ ತಲೆಯಲ್ಲಿ ಮೊಳಕೆಯೊಡೆಯಿತು.

 ತಾವು ತಯಾರಿಸಿದ್ದ 8 ವರ್ಷ ಹಳೆಯ ಜೆಲ್ ನ್ನು ಕೆಲವು ಇರುವೆಗಳ ಬೆನ್ನಿಗೆ ಸವರಿ ಹೂವುಗಳಿರುವ ಒಂದು ಪೆಟ್ಟಿಗೆಯಲ್ಲಿ ಬಿಟ್ಟರು. ಮೂರೂ ದಿನದ ಬಳಿಕ ಅವುಗಳ ಮೇಲೆ ಸವರಿದ್ದ ಜೆಲ್ ನಲ್ಲಿ ಪರಾಗ ಕಣಗಳು ಕಂಡು ಬಂದವು. ಇದನ್ನು ಕಂಡ ಮಿಯಾಕೋ ಗೆ ಆನಂದವೋ ಆನಂದ. ಆದರೆ ಈ ಜೆಲ್ ನ ಬಣ್ಣದಿಂದ ಬೇರೆ ಕೀಟಗಳು ಈ ಇರುವೆಗಳನ್ನು ಬೆಟೆಯಾಡಬಹುದು. ಜೇನು ಹುಳುಗಳಂತೆ ತಪ್ಪಿಸಿಕೊಳ್ಳಲು ಇವುಗಳಿಗೆ ಸೂಜಿ ಇಲ್ಲವಲ್ಲ. ಹಾಗಾಗಿ ತಮ್ಮ ರಸಾಯನ ಶಾಸ್ತ್ರದ ಜ್ಞಾನವನ್ನು ಉಪಯೋಗಿಸಿ ಆ ಜೆಲ್ ಗೆ ಇನ್ನು ನಾಲ್ಕು ಬಗೆಯ ರಾಸಾಯನಿಕಗಳನ್ನು ಸೇರಿಸಿ, ಸೂರ್ಯನ ಅತಿ ನೇರಳೆ ಕಿರಣಕ್ಕೆ ಆ ಜೆಲ್ ಸಹ ನೀಲಿ ಬಣ್ಣಕ್ಕೆ ತಿರುಗುವಂತೆ ತಯಾರಿಸಿದರು. ಅತಿ ನೇರಳೆ ಬಣ್ಣ ಬೀಳದಿದ್ದರೆ ಜೆಲ್ ಯಾವುದೇ ಬಣ್ಣ ಹೊದಿರುವುದಿಲ್ಲ. ಈ ಮಾರ್ಪಡಿಸಿದ ಜೆಲ್ ನನ್ನು ಈ ಬಾರಿ ಹಾರುವ ಕೀಟಗಳ ಮೇಲೆ ಪ್ರಯೋಗಿಸಿದರು. ತಕ್ಕ ಮಟ್ಟಿಗೆ ಇದು ಸಹ ಯಶಸ್ಸು ಕಂಡಿತು. ಆದರೆ ಅವರಿಗೆ ಈ ಕೀಟಗಳಂತೆ ಎಲ್ಲೆಂದರಲ್ಲಿ ಹಾರುವ ಬದಲಿಗೆ, ನಮ್ಮ ಕಪಿ ಮುಷ್ಟಿಯಲ್ಲಿಯೇ ಇಟ್ಟುಕೊಂಡು ಪರಾಗಸ್ಪರ್ಶ ಮಾಡಿಸಬೇನ್ನಿಸಿತು. ಆದರಿಂದಲೇ ಅವರು ಡ್ರೋನ್ ನ ಮೊರೆ ಹೋದರು.

ಸುಮಾರು 10 ಸಣ್ಣ ಡ್ರೋನ್ ಗಳನ್ನೂ ಖರೀದಿಸಿಬಿಟ್ಟರು. ನಂತರ ಅವುಗಳನ್ನು ಹಾರಿಸುವುದನ್ನು ಕಷ್ಟಪಟ್ಟು ಕಲಿತು, ತಾವು ತಯಾರಿಸಿದ ಈ ಜೆಲ್, ಕುದುರೆ ಕೂದಲು ಗಳನ್ನ ಡ್ರೋನ್ ನ ಕೆಳಭಾಗದಲ್ಲಿ ಅಳವಡಿಸಿದರು. ಆ ಕೂದಲುಗಳು ಜೇನು ಹುಳುಗಳ ಕೂದಲಿನಂತೆ ನೆಟ್ಟಗೆ ನಿಲ್ಲಿಸಲು ವಿದ್ಯುತ್ ನ್ನು ಬಳಸಿದರು ಹಾಗೆಯೇ ಪರಾಗಸ್ಪರ್ಶ ಮಾಡಿಸಿದರು. ಈ ಡ್ರೋನ್ ಗಳು ಮೊದಲಿಗೆ ಪರಾಗ ಕಣಗಳನ್ನು ತಮಗೆ ಅಂಟಿಸಿಕೊಂಡು ನಂತರ ಬೇರೊಂದು ಹೂವಿಗೆ ಹೋಗಿ ತಾಗಿಸುತಿದ್ದವು. ಈ ಕಾರ್ಯವು ಇವುಗಳ 2-3 ಪ್ರಯತ್ನದಲ್ಲೇ ಯಶಸ್ವಿಯಾಗುತ್ತಿದ್ದವು ಎಂಬುದು ಗಮನಾರ್ಹ.

ಹಾಗೆಯೇ ಈ ಡ್ರೋನ್ ಗಳನ್ನ ಇನ್ನು ಅಭಿವೃದ್ಧಿಪಡಿಸಿ ಇವುಗಳಿಗೆ ಜಿಪಿಎಸ್ (GPS) ಅಳವಡಿಸಿ ಮತ್ತು ಕೃತಕ ಬುದ್ಧಿಮತ್ತೆ(Artificial Intelligence)ಯ ಸಹಾಯದಿಂದ ಕಡಿಮೆಯಾಗುತ್ತಿರು ದುಂಬಿಗಳ ಸಂಖ್ಯೆಗೆ ತುರ್ತು ಚಿತ್ಸೆಯಗಬಹುದು ಎನ್ನುತ್ತಾರೆ.

ಡ್ರೋನ್ ನಿಂದ ಯಶಸ್ವಿ ಪರಾಗಸ್ಪರ್ಶ

ಆದರೆ ನನ್ನ ದೃಷ್ಟಿಯಲ್ಲಿ, ಈ ತರಹದ ಎಲ್ಲಾ ಉಪಕರಣ ಯುಕ್ತ ಪರಿಸರವನ್ನು ಕಟ್ಟುವುದು ಸರಿಯೇ? ದುಂಬಿಗಳ ಕ್ಷೀಣಿಸುತ್ತಿರುವ ಸಂಖ್ಯೆಗೆ ನಿಜವಾದ ಕಾರಣ ಹುಡುಕಿ ಸ್ವಾಭಾವಿಕವಾಗಿ ಅವುಗಳ ಸಂಖ್ಯೆ ಹೆಚ್ಚಿಸಲು ಸಾಧ್ಯವೇ ಇಲ್ಲವೇ? ಈ ಡ್ರೋನ್ ಗಳು ದುಂಬಿಗಳ ಬದಲಿಗೆ ಅವುಗಳ ಕಾರ್ಯಕ್ಷಮತೆಗೆ ತಕ್ಕಂತೆಯೇ ಕೆಲಸ ನಿರ್ವಹಿಸಬಲ್ಲವೇ? ಹಾಗಾದರೆ ಮನುಷ್ಯನ ಅಗತ್ಯತೆಗಳಿಗೆ ಅಥವ ತೊಂದರೆಗಳಿಗೆ ಹೊಸದಾಗಿ ರೂಪುಗೊಳ್ಳುತ್ತಿರುವ ಕೃತಕ ಬುದ್ಧಿಮತ್ತೆಯೇ ಪರಿಹಾರವೇ? ಯೋಚಿಸಿ ನೋಡಿ.! ಇಂತಹ ಪ್ರಶ್ನೆಗಳ ಹುಡುಕಾಟದಲ್ಲೇ ಉತ್ತರವಿದೆ ಎಂದು ನನಗನಿಸುತ್ತದೆ.

The development of full artificial intelligence could spell the end of the human race…!
-Stephen Hawking
From an interview with the BBC, December 2014

ಲೇಖನ: ಜೈಕುಮಾರ್ ಆರ್.
ಡಬ್ಲೂ.ಸಿ.ಜಿ, ಬೆಂಗಳೂರು

Print Friendly, PDF & Email
Spread the love
error: Content is protected.