ವನದಾಳದ ಮಾತು – ನೀಲಗಿರಿ ಮಾರ್ಟಿನ್

ವನದಾಳದ ಮಾತು – ನೀಲಗಿರಿ ಮಾರ್ಟಿನ್

ನಾಗೇಶ್ ಕೆ.ಜಿ ರವರು ಮೂಲತಃ ರಾಮನಗರ ಜಿಲ್ಲೆಯವರು, ಹುಟ್ಟಿ ಬೆಳೆದದ್ದು ಕುರುಚಲು ಕಾಡು  ಹಾಗೂ ಜನ ಸಂದಣಿ ಇರುವ ಪ್ರದೇಶದಲ್ಲಿ. ಅರಣ್ಯ ಇಲಾಖೆಯ ಅರಣ್ಯ ರಕ್ಷಕ ಹುದ್ದೆಗೆ ಸೇರಿದ್ದು ಪಶ್ಚಿಮ ಘಟ್ಟಗಳ  ಕೊಡಗು ಜಿಲ್ಲೆಯಲ್ಲಿ. “ಕೆಲಸಕ್ಕೆ ಸೇರಿದ ಮೊದಮೊದಲು ಜನರೇ ಇರದ ದಟ್ಟ ಕಾಡನ್ನು ಕಂಡು ಬೇಸರವಾಗುತ್ತಿತ್ತು ದಿನ ಕಳೆದಂತೆ ಪರಿಸರವನ್ನ, ಅದರಲ್ಲಿನ ಜೀವಗಳನ್ನು ತಿಳಿದುಕೊಳ್ಳಲು ಪ್ರಯತ್ನ ಪಡುತ್ತ ಕಾಡು ತುಂಬಾ ಹತ್ತಿರವಾಯ್ತು” ಎನ್ನುತ್ತಾರೆ  ನಾಗೇಶ್ ರವರು. ಐದು ವರ್ಷಗಳಿಂದ ಪಶ್ಚಿಮ ಘಟ್ಟದ ಕಾಡಿನಲ್ಲಿಯೇ ಸೇವೆ ಸಲ್ಲಿಸುತ್ತಿರುವ ಇವರು ಪ್ರಾಣಿ, ಪಕ್ಷಿ, ಚಿಟ್ಟೆ, ಕಪ್ಪೆ , ಹಾವುಗಳ ಬಗ್ಗೆ  ವಿಶೇಷ ಒಲವನ್ನು ಹೊಂದಿದ್ದಾರೆ ಹಾಗೂ ಉತ್ತಮ ಛಾಯಾಗ್ರಾಹಕ ಕೂಡ

ನೀಲಗಿರಿ ಮಾರ್ಟಿನ್

ಮಳೆಗಾಲದಲ್ಲಿ ನಿತ್ಯಹರಿದ್ವರ್ಣ ಕಾಡುಗಳ ಜೀವನವನ್ನು ವರ್ಣಿಸಲು ಪದಗಳೇ ಸಾಲದು. ಒಂದು ಕಡೆ ಸಿಕಾಡಗಳ ಮಾರ್ಧನಿ, ಬಿಡದೇ ಸುರಿವ ಮಳೆ, ಸುತ್ತಲೂ ಮಂಜು, ಕಾಡಿನಲ್ಲಿ ಕಾಲಿಟ್ಟರೆ ಜಿಗಣೆ, ಹಗಲಿನಲ್ಲೂ ಕತ್ತಲಿನ ವಾತಾವರಣ ಇದರಲ್ಲೂ ಕಾಡಿನ ಸೊಬಗು ಬಲು ರಮಣೀಯ., ಅತಿಹೆಚ್ಚು ಮಳೆ ಪಡೆವ ತಿಂಗಳು. ಒಂದು ದಿನ ಮಳೆರಾಯ ಸ್ವಲ್ಪ ಬಿಡುವು ನೀಡಿ ಸೂರ್ಯನ ಬೆಳಕು ಕಂಡಿತು. ಗಸ್ತಿಗೆಂದು ನಾನು ನನ್ನ ಸಿಬ್ಬಂದಿ ಸಮವಸ್ತ್ರ ಧರಿಸಿ, ಗಮ್ ಬೂಟ್ ಏರಿಸಿಕೊಂಡು, ಛತ್ರಿ, ಕೈಯಲ್ಲಿ ಡೆಟಾಲ್, ಕಾಚಂಪುಳಿ (ಜಿಗಣೆಯಿಂದ ನಮ್ಮನ್ನು ರಕ್ಷಿಸಲು ಸರಳ ಉಪಾಯ) ತೆಗೆದುಕೊಂಡು ಹೊರಟೆವು. ನನ್ನ ಸಿಬ್ಬಂದಿ ನನಗಿಂತ ಸ್ವಲ್ಪ ಮುಂದೆ ಇದ್ದರು. ದೊಡ್ಡ ಮರದ ಪೊಟರೆಯಲ್ಲಿ ಏನನ್ನೊ ಕಂಡು ಕೂಗಿದರು, ಬೇಗನೆ  ಓಡಿ ನೋಡಿದ ನನಗೆ ಆಶ್ಚರ್ಯ, ಒಂದು ಕ್ಷಣ ಅವನ್ನೂ ನೋಡುತ್ತ ನಿಂತೆ. ಇಲಾಖೆ ಸೇರಿದ 5 ವರ್ಷಗಳಿಂದ ನೋಡಲು ಹಂಬಲಿಸುತ್ತಿದ್ದ ಪ್ರಾಣಿ ಅದು. ಕಣ್ಣ ಮುಂದೆ!! ಅದುವೇ “ಮರನಾಯಿ (ನೀಲಗಿರಿ ಮಾರ್ಟಿನ್)” ತಾರೆ ಮರದ ಪೊಟರೆಯಲ್ಲಿ ಮೂರು ಮರನಾಯಿಗಳು ಸ್ವಲ್ಪ ಹೊತ್ತಿನಲ್ಲಿ ನಮ್ಮ ಇರುವನ್ನುಅರಿತು ಒಂದು, ಮರದ ಮೇಲೆ ಏರಿ ಕಣ್ಮರೆಯಾಯಿತು, ಮತ್ತೊಂದು ಅಲ್ಲೆ ಪೊಟರೆಯ ಪಕ್ಕದ ಕೊಂಬೆಯಲ್ಲಿ ನಿಂತಿತು, ಇನ್ನೊಂದು ಪೊಟರೆಯಲ್ಲೇ ಉಳಿಯಿತು. ಆಗ ಪೊಟರೆಯಲ್ಲಿ ಇರುವುದು ಅದರ ಮರಿ ಇರಬಹುದು ಎಂದುಕೊಂಡು ಫೋಟೋ  ಕ್ಲಿಕ್ ಮಾಡಲು ಶುರು ಮಾಡಿದೆ. ಪಕ್ಕದ ಕೊಂಬೆಯಲ್ಲಿ ಇದ್ದ ಮರನಾಯಿ‌ ನಮ್ಮನ್ನೇ ದಿಟ್ಟಿಸಿ ನೋಡುತ್ತ ನಮ್ಮನ್ನೇ ಹೆದರಿಸುತ್ತಿತ್ತು.  ಆಗಾಗ ತನ್ನ ಮರಿಯ ಕಡೆ ನೋಡುವುದು ನಮ್ಮನ್ನು ಹೆದರಿಸುವುದು ಮಾಡುತ್ತಾ ಕೊಂಬೆಯ ಮೇಲಿದ್ದ ಮರನಾಯಿ ಮರ ಏರಿ ಹೋಯಿತು.

ಪೊಟರೆಯಲ್ಲಿ ಇದ್ದ ಮರಿ ಅವಿತುಕೊಂಡಿತು. ಅದನ್ನು ನೋಡಿದ ಖುಷಿಯಲ್ಲಿ ನನ್ನ ಕಾಲನ್ನು ಜಿಗಣೆಗೆ ಬಿಟ್ಟಿದ್ದೆ ಅನಿಸಿತು. ಕಾಲಿನಲ್ಲಿ ‌ಸುಮಾರು ಹದಿನೈದು ಜಿಗಣೆ ರಕ್ತ ಹೀರುತ್ತಿತ್ತು. ಆ ಖುಷಿಯಲ್ಲಿ ಜಿಗಣೆ ಮರೆತು ಗಸ್ತು ಮತ್ತೆ ಶುರು ಮಾಡಿದೆವು, ನನ್ನ ಸಡಗರ ಕಂಡ ನನ್ನ ಸಿಬ್ಬಂದಿಗಳು ಅದರ ಬಗ್ಗೆ ಕೇಳಲು ಶುರು ಮಾಡಿದರು. ಆಗ ನಾನು ಇವು ನೀಲಗಿರಿ ಮಾರ್ಟಿನ್ (ಮರನಾಯಿ), ಹೆಸರೇ ಹೇಳುವ ಹಾಗೆ ಇದರ ಊಟ, ವಾಸ, ಆಟ ಎಲ್ಲಾ ಮರದ ಮೇಲೆಯೇ, ಅಪರೂಪವಾಗಿ ನೆಲದ ಮೇಲೆ ಓಡಾಡುತ್ತವೆ. ಇವುಗಳು ಅತ್ಯಂತ ರಹಸ್ಯಮಯ ಜೀವಿಗಳು, ಕೇವಲ ದಕ್ಷಿಣ ಭಾರತದ ನೀಲಗಿರಿ ಕಾಡು, ಪಶ್ಚಿಮ ಘಟ್ಟದ ಕೆಲವು ಭಾಗಗಳಲ್ಲಿ ಮಾತ್ರ ಕಾಣಲು ಸಿಗುತ್ತವೆ. ಇವುಗಳ ರಹಸ್ಯ ಜೀವನ ಶೈಲಿಯಿಂದ ಹಾಗೂ ಅತಿ ವಿರಳವಾಗಿ ಕಾಣುವುದರಿಂದ ಇವಗಳ ಪೂರ್ಣ ಅಧ್ಯಯನ ಸಾಧ್ಯವಾಗಿಲ್ಲ. ಇಷ್ಟೊಂದು ಅಪರೂಪದ ಪ್ರಾಣಿಯನ್ನು ನೋಡಿದ್ದು ಅಲ್ಲದೇ ಚಿತ್ರ ತೆಗೆಯಲು ಅವಕಾಶ ಸಿಕ್ಕಿದ ಕಾರಣ ಖುಷಿ, ಸಂಭ್ರಮ, ಆಶ್ಚರ್ಯ ಎಲ್ಲಾ ಒಡಗೂಡಿ ನನ್ನ ಮೈ ಕಂಪಿಸುತ್ತಲೇ ಇತ್ತು. ಮರನಾಯಿಗಳು ಉತ್ತರ ಭಾರತದ ಹಿಮಾಲಯದ ತಪ್ಪಲಲ್ಲಿ ಇರುವ ಕಾಡಿನ ಹಳದಿ ಕುತ್ತಿಗೆಯ ಮಾರ್ಟಿನ್ ಗಳ ಜಾತಿಗೆ ಸೇರಿರುತ್ತವೆ. ಮರನಾಯಿಗಳು ಸದಾ ಜೋಡಿಯೊಂದಿಗೆ ಅಥವಾ ಗುಂಪಿನೊಂದಿಗೆ ವಾಸ ಮಾಡುತ್ತವೆ.

ಬೆಳಕಿನ ಹೊತ್ತಿನಲ್ಲಿ ಶಾಶ್ವತವಲ್ಲದ ತಮ್ಮ ಸೀಮೆಯಲ್ಲಿ ಓಡಾಡುತ್ತಾ ಹಕ್ಕಿ, ಹುಳು ಹುಪ್ಪಟೆಗಳು, ಮಳೆ ಕಾಡಿನ ಸಿಕಾಡ, ಜೇನು ಹಿಡಿದು ಆಹಾರವಾಗಿಸಿಕೊಳ್ಳುತ್ತವೆ. ಯಾವುದೇ ಪ್ರಾಣಿಗೂ (ಮನುಷ್ಯನಿಗೂ) ಹೆದರದೆ ಇರುವ ಧೈರ್ಯವಂತ ಜೀವಿ ಇದು. ಕಾಡಿನ‌ ನಾಶ ಹಾಗೂ ಚರ್ಮದ ಬೇಟೆಯ ಹೊಡೆತಕ್ಕೆ ಸಿಲುಕಿ ಅವನತಿಯ ಅಂಚಿನಲ್ಲಿ ಬದುಕುಳಿದಿವೆ. ಕೊನೆಯ ಸಾಲು ಹೇಳಿ ಮುಗಿಸಲು, ಮಾನವರು ನಮ್ಮ ಭವಿಷ್ಯಕ್ಕೇ ಒಡ್ಡಿರುವ ಕೇಡುಗಾಲವ ನೆನೆದು ಎಲ್ಲರಲ್ಲೂ ನೀರವ ಮೌನ, ಗಸ್ತು ಮುಗಿಸಿ ವಾಪಸ್ ಅದೇ ದಾರಿಯಲ್ಲಿ ಮರನಾಯಿ ಗಮನಿಸೋಣ ಎಂದು ಬಂದ ನಮಗೆ ಆ ಪೊಟರೆಯಲ್ಲಿ ಎರಡು ಮರನಾಯಿಗಳು ಆಚೆ ತಲೆ ಹಾಕಿ ನಮ್ಮನ್ನೇ ನೋಡುತ್ತಿರುವುದನ್ನು ಕಂಡೆವು ನಂತರ ಒಂದು ಮರ ಏರಿ‌ ಹೋಯಿತು. ಒಂದು ಪೊಟರೆಯಲ್ಲೆ ಹಾರಾಡುತ್ತಿದ್ದ ಜೇಣುನೋಣಗಳನ್ನು ಹಿಡಿದು ತಿನ್ನುತ್ತಿತ್ತು. ನಂತರ ಗಸ್ತು ಮುಗಿಸಿ ವಾಪಸ್ ಬಂದೆವು. ಮರುದಿನ ಅದನ್ನು ಗಮನಿಸಬೇಕೆಂದು‌ ಹೋಗಿ ನೋಡಿದಾಗ ಸಿಕ್ಕಿದು ಖಾಲಿ ಪೊಟರೆ ಮಾತ್ರ..! ಆ ದಿನ ಮಾತ್ರ ಅಲ್ಲಿ ಜೇನು ತಿನ್ನಲು ಅಲ್ಲಿಗೆ ಬಂದಿದ್ದವೋ? ಅಥವಾ ಅಲ್ಲೆ ಮರಿ ಮಾಡಿ ವಾಸ್ತವ್ಯ ಹೂಡಿದ್ದವೊ ಎಂಬುದು ಯಕ್ಷ ಪ್ರಶ್ನೆಯಾಗೆ ಉಳಿಯಿತು.

ಚಿತ್ರ – ಲೇಖನ: ನಾಗೇಶ್ ಕೆ.ಜಿ
ರಾಮನಗರ ಜಿಲ್ಲೆ

Print Friendly, PDF & Email
Spread the love
error: Content is protected.