ಕಾನನ

ನಿಸರ್ಗದೆಡೆಗೆ ಪಯಣ — 2011ರಿಂದ ಕನ್ನಡದಲ್ಲಿ ವನ್ಯವಿಜ್ಞಾನ, ಉಚಿತವಾಗಿ

ಹವಾಮಾನ ಬದಲಾವಣೆ, ಕಾರ್ಬನ್ ಕ್ರೆಡಿಟ್ಗಳು ಮತ್ತು ಭಾರತದ ಸುಸ್ಥಿರ ಭವಿಷ್ಯ

ಹವಾಮಾನ ಬದಲಾವಣೆ, ಕಾರ್ಬನ್ ಕ್ರೆಡಿಟ್ ಮತ್ತು ಭಾರತದ ಸುಸ್ಥಿರ ಭವಿಷ್ಯದ ಕುರಿತಾದ ಸಮಗ್ರ ಮಾಹಿತಿ. ಎಲ್ ನಿನೋ, ಲಾ ನಿನಾ ಪರಿಣಾಮಗಳು ಹಾಗೂ ಕೃಷಿಯ ಮೇಲಿನ ಪರಿಣಾಮವನ್ನು ಸರಳವಾಗಿ ತಿಳಿಯಿರಿ.

Screenshot

           

    © Public Domain

ಹಿಂದಿನ ಸಂಚಿಕೆಯಿಂದ

ಪ್ಯಾರಿಸ್ ಒಪ್ಪಂದದಡಿ ಭಾರತದ ಬದ್ಧತೆ

ಭಾರತವು ಇತ್ತೀಚಿಗಿನ 2016ರಲ್ಲಿ Paris Agreementಗೆ ಒಪ್ಪಿಗೆ ನೀಡಿದಂತೆ, ಜಾಗತಿಕ ತಾಪಮಾನ ಏರಿಕೆಯನ್ನು 2°C ಗಿಂತಾ ಕಡಿಮೆ ಮಟ್ಟದಲ್ಲಿ ನಿಯಂತ್ರಿಸಲು ಗುರಿ ಇಟ್ಟುಕೊಂಡಿದೆ. ಮೊದಲ Nationally Determined Contributions (NDCs) ಅಡಿಯಲ್ಲಿ, ಭಾರತವು 2005 ರ ಕಾರ್ಬನ್ ಬಿಡುಗಡೆಯ ಪ್ರಮಾಣಕ್ಕಿಂತ 2030ರೊಳಗೆ 33–35 ಶೇಕಡಾ ಕಾರ್ಬನ್ ಬಿಡುಗಡೆಯನ್ನು ಕಡಿಮೆ ಮಾಡುವ ಗುರಿ ಘೋಷಿಸಿಕೊಂಡಿತ್ತು, ನಂತರ 2022ರಲ್ಲಿ ಈ ಗುರಿಯನ್ನು ಹೆಚ್ಚಿಸಿ 45 ಶೇಕಡಾ ಉತ್ಸರ್ಗ ತೀವ್ರತೆ ಕಡಿತ (Emission intensity reduction) ಗುರಿಯನ್ನು ನಿಗದಿಪಡಿಸಿಕೊಂಡಿದೆ. ಅಷ್ಟೇ ಅಲ್ಲದೇ 2070ರೊಳಗೆ ನೆಟ್-ಜೀರೋ (Net Zero) ಸಾಧಿಸುವ ದೀರ್ಘಕಾಲಿಕ ಗುರಿಯನ್ನೂ ನಿಗದಿಪಡಿಸಿಕೊಂಡಿದೆ.

ಭಾರತದ ಕಾರ್ಬನ್ ಕ್ರೆಡಿಟ್ ಟ್ರೇಡಿಂಗ್ ಸಿಸ್ಟಮ್

ಭಾರತದ ಹವಾಮಾನ ಗುರಿಗಳನ್ನು ಸಾಧಿಸಲು 2023ರಲ್ಲಿ Carbon Credit Trading Scheme (CCTS) ಜಾರಿಗೆ ತರಲಾಗಿದೆ. ಇದರಂತೆ, ಕಾರ್ಬನ್ ಮಾರುಕಟ್ಟೆಯನ್ನು ಕಾನೂನು ಬದ್ಧವಾಗಿ Energy Conservation (Amendment) Act, 2022 ಮೂಲಕ ಸ್ಥಾಪಿಸಲಾಗಿದೆ. ಈ ತಿದ್ದುಪಡಿ ಮೂಲಕ ಸರ್ಕಾರಕ್ಕೆ ಕಾರ್ಬನ್ ಕ್ರೆಡಿಟ್ ಟ್ರೇಡಿಂಗ್ ಸ್ಕೀಮ್ ಅನ್ನು ಜಾರಿಗೆ ತರಲು ಮತ್ತು ಕಾರ್ಬನ್ ಕ್ರೆಡಿಟ್ ಪ್ರಮಾಣಪತ್ರಗಳನ್ನು ನೀಡಲು ಅಧಿಕಾರ ದೊರಕಿದೆ.

ಹೇಗೆ ಕಾರ್ಯ ನಿರ್ವಹಿಸುತ್ತದೆ?

    © RCraig09 CC BY-SA 4.0

1 ಕಾರ್ಬನ್ ಕ್ರೆಡಿಟ್ ಪ್ರಮಾಣಪತ್ರ = 1 ಟನ್ CO₂ ಬಿಡುಗಡೆಯ ಕಡಿತ ಈ ಪ್ರಮಾಣಪತ್ರಗಳನ್ನು ಡಿಜಿಟಲ್ ವ್ಯಾಪಾರ ವೇದಿಕೆಯಲ್ಲಿ ವಿನಿಮಯ ಮಾಡಬಹುದು. ಈ ವ್ಯವಸ್ಥೆಯಲ್ಲಿ ಎರಡು ಪ್ರಮುಖ ಭಾಗಗಳಿವೆ:

1. ಕಡ್ಡಾಯ ಅನುಸರಣೆ ವ್ಯವಸ್ಥೆ

ಉಕ್ಕು, ಸಿಮೆಂಟ್, ರಸಗೊಬ್ಬರ, ಅಲ್ಯೂಮಿನಿಯಂ, ಜವಳಿ ಉದ್ಯಮ ಮುಂತಾದ ಕೈಗಾರಿಕೆಗಳು ಸೇರಿದಂತೆ ಒಟ್ಟು 800 ಕೈಗಾರಿಕಾ ಘಟಕಗಳಿಗೆ ಕಡ್ಡಾಯವಾಗಿ ಅನುಸರಿಸಬೇಕಾದ ಕಾರ್ಬನ್ ಬಿಡುಗಡೆಯ ತೀವ್ರತೆಗೆ ಗುರಿಗಳನ್ನು ನೀಡಲಾಗುತ್ತದೆ. ಈ ಕೈಗಾರಿಕೆಗಳು ಗುರಿಗಿಂತ ಉತ್ತಮ ಸಾಧನೆ ಮಾಡಿದರೆ ಕಾರ್ಬನ್ ಕ್ರೆಡಿಟ್ ಸಿಗುತ್ತದೆ. ಗುರಿ ತಲುಪದಿದ್ದರೆ ಆ ಕೈಗಾರಿಕೆಗಳು ಕ್ರೆಡಿಟ್ಟನ್ನು ಖರೀದಿಸಬೇಕು.

2. ಆಫ್‌ಸೆಟ್ ವ್ಯವಸ್ಥೆ

ಕಡ್ಡಾಯ ಮಿತಿ ನಿಗದಿಪಡಿಸಿರುವ ಕೈಗಾರಿಕೆಗಳ ಹೊರತಾಗಿ, ಈ ವ್ಯವಸ್ಥೆಯಡಿಯಲ್ಲಿ ಅರಣ್ಯ, ಕೃಷಿ, ಸಾರಿಗೆ, ತ್ಯಾಜ್ಯ ನಿರ್ವಹಣೆ, ಸಮುದಾಯ ಅರಣ್ಯೀಕರಣ ಇವೆಲ್ಲವೂ ಸ್ವಯಂಪ್ರೇರಿತವಾಗಿ ಕಾರ್ಬನ್ ಸಂಗ್ರಹಣೆ ಅಥವಾ ಬಿಡುಗಡೆ ಕಡಿಮೆ ಮಾಡುವ ಅವಕಾಶವಿದೆ. ಇದರಿಂದಾಗಿ ಗ್ರಾಮೀಣ ಪ್ರದೇಶಗಳಿಗೆ, ಪರಿಸರ ಕ್ಷೇತ್ರಗಳಿಗೆ ಕಾರ್ಬನ್ ಮಾರುಕಟ್ಟೆಯಲ್ಲಿ ಉತ್ತಮ ಅವಕಾಶಗಳು ಸೃಷ್ಟಿಯಾಗುತ್ತವೆ.

    © CC BY 3.0_Our World In Data

ಇದಲ್ಲದೇ, ಭಾರತದ ಕಾರ್ಬನ್ ಮಾರುಕಟ್ಟೆ ವ್ಯವಸ್ಥೆಯು ‘Intensity-based’ ವಿಧಾನವನ್ನು ಅಳವಡಿಸಿಕೊಂಡಿದ್ದು, ಇದು ವಿಶೇಷವಾಗಿದೆ. ಒಟ್ಟು ಕಾರ್ಬನ್ ಬಿಡುಗಡೆಯ ಮಿತಿಯ (absolute cap) ಬದಲು ಆಯಾ ಕೈಗಾರಿಕೆಗಳ, ಪ್ರತಿಯೊಂದು ಉತ್ಪಾದನಾ ಘಟಕಕ್ಕೆ ಕಾರ್ಬನ್ ಬಿಡುಗಡೆಯ ತೀವ್ರತೆಯು (emission per unit output) ಆಧಾರಿತವಾಗಿದೆ.

ಅಂದರೆ, ಕೈಗಾರಿಕೆಗಳು ಉತ್ಪಾದನೆ ಮುಂದುವರಿಸಿಕೊಂಡು ಹೋಗುತ್ತಾ ಕಾರ್ಬನ್ ಬಿಡುಗಡೆಯನ್ನು ಕಡಿಮೆ ಮಾಡಲು ಇದು ಉತ್ತೇಜಿಸುತ್ತದೆ ಹಾಗು ಈ ಮಾದರಿಯು ಭಾರತದಂತಹ ಅಭಿವೃದ್ಧಿಶೀಲ ದೇಶಗಳು ಅನುಸರಿಸಬಲ್ಲ ಸೂಕ್ತವಾದ ಸಮತೋಲನ ಮಾದರಿಯಾಗಿದೆ.

ಭಾರತದಲ್ಲಿ ಈಗಾಗಲೇ ಜಾರಿಯಲ್ಲಿರುವ Perform, Achieve and Trade (PAT) ಯೋಜನೆಯ ಅನುಭವವನ್ನು ಆಧಾರವಾಗಿಸಿಕೊಂಡು, ದೇಶವು Carbon Credit Trading Scheme (CCTS) ಮೂಲಕ ಹೆಚ್ಚು ವ್ಯಾಪಕವಾದ ಕಾರ್ಬನ್ ಮಾರುಕಟ್ಟೆಯನ್ನು ಅಭಿವೃದ್ಧಿಪಡಿಸುತ್ತಿದೆ.

    © Public Domain

ಭಾರತದ ಕಾರ್ಬನ್ ಮಾರುಕಟ್ಟೆಯ ಹಂತಗಳು:

ಮೊದಲ ಹಂತವು (Phase 1) — 2026ರಿಂದ ಪ್ರಾರಂಭವಾಗುತ್ತದೆ. ಸುಮಾರು 800 ಕೈಗಾರಿಕಾ ಘಟಕಗಳು ಹಾಗೂ 9 ಪ್ರಮುಖ ಸೋಲಾರ್ ಆಧಾರಿತ ವಲಯಗಳು ಸೇರಿವೆ, ಈ ಹಂತದಲ್ಲಿ ಕಾರ್ಬನ್ ಬಿಡುಗಡೆಯ ಮೂಲಡೇಟ (baseline) ಆಧರಿಸಿ ನಿಗದಿಪಡಿಸಲಾಗುತ್ತದೆ.

ಕಾರ್ಬನ್ ಕ್ರೆಡಿಟ್ ಹಂಚಿಕೆಯ ವಿಧಾನ:

ಇದರಡಿಯಲ್ಲಿ, ಸರ್ಕಾರವು ಪ್ರತಿಯೊಂದು ವಲಯಕ್ಕೆ ಕಾರ್ಬನ್ ಬಿಡುಗಡೆಯ ತೀವ್ರತೆಯ ನಿಯಮಗಳನ್ನು ಕುರಿತ ಮಾರ್ಗಸೂಚಿ ನೀಡುತ್ತದೆ.

● ಪ್ರತಿ ಕೈಗಾರಿಕೆಗೆ ಅದರ ಕಾರ್ಯಕ್ಷಮತೆ ಆಧರಿಸಿ ಗುರಿ ನೀಡಲಾಗುತ್ತದೆ.
● ಈ ಗುರಿಗಳು ಸಾಮಾನ್ಯವಾಗಿ 3 ವರ್ಷಗಳ ಅವಧಿಗೆ ನಿಗದಿಯಾಗುತ್ತವೆ.
● ಪ್ರತಿ ವರ್ಷ ಅನುಸರಣೆ (Compliance) ಪರಿಶೀಲನೆ ನಡೆಯುತ್ತದೆ.

Banking allowed: ಈಗ ಗಳಿಸಿದಂತಹ ಕ್ರೆಡಿಟ್‌ಗಳನ್ನು ಮುಂದಿನ ವರ್ಷಗಳಿಗೆ ಉಳಿಸಿಕೊಳ್ಳಬಹುದು.

 Borrowing allowed: ಇಲ್ಲ ಭವಿಷ್ಯದ ಕ್ರೆಡಿಟ್‌ಗಳನ್ನು ಈಗಲೇ ಬಳಸಲು ಅವಕಾಶ ಇಲ್ಲ.

ನಿಗಾವಹಿಸುವಿಕೆ, ವರದಿಮಾಡುವಿಕೆ ಮತ್ತು ಪರಿಶೀಲನೆ (Monitoring, Reporting, Verification (MRV))

ಇಡೀ ಕಾರ್ಬನ್ ಮಾರುಕಟ್ಟೆಯ ವಿಶ್ವಾಸಾರ್ಹತೆಯು ಈ ಮೂರು ಅಂಶಗಳ ಮೇಲೆ ಅವಲಂಬಿತವಾಗಿವೆ. ಕಾರ್ಬನ್ ಬಿಡುಗಡೆಯಾಗುವಿಕೆಯ ನಿರಂತರ ನಿರ್ವಹಣೆ, ವಾರ್ಷಿಕವಾಗಿ ವರದಿ ಸಲ್ಲಿಸುವಿಕೆ, ಮಾನ್ಯ ಸಂಸ್ಥೆಗಳ ಪರಿಶೀಲನೆ. ಈ ಪ್ರಕ್ರಿಯೆಗಳ ಪಾರದರ್ಶಕತೆಯು ಕಾರ್ಬನ್ ಮಾರುಕಟ್ಟೆಯ ವ್ಯವಸ್ಥೆಯನ್ನು ಖಾತ್ರಿಪಡಿಸುತ್ತದೆ. ಆದ್ದರಿಂದ ಮಾರುಕಟ್ಟೆ ನಿಯಂತ್ರಣಕ್ಕಾಗಿ, ಸರ್ಕಾರವು ಕೆಲ ವ್ಯವಸ್ಥೆಗಳನ್ನು ಜಾರಿಗೆ ತಂದಿದೆ.

• ಕಾರ್ಬನ್ ಕ್ರೆಡಿಟ್‌ಗಳನ್ನು ಪವರ್ ಎಕ್ಸ್‌ಚೇಂಜ್‌ಗಳ ಮೂಲಕ ಮಾತ್ರ ವ್ಯಾಪಾರ ಮಾಡಬಹುದು.
• Over-the-Counter (OTC, direct private trading) ಪ್ರಾರಂಭದಲ್ಲಿ ಅನುಮತಿ ಇಲ್ಲ.
• Central Electricity Regulatory Commission (CERC) ಮಾರುಕಟ್ಟೆಯನ್ನು ನಿಯಂತ್ರಿಸುತ್ತದೆ.
• ವಂಚನೆ ಮತ್ತು ದುರುಪಯೋಗ ತಡೆಯಲು ಮೇಲ್ವಿಚಾರಣೆ ವ್ಯವಸ್ಥೆ ಇದೆ.

    © Public Domain

ಕರ್ನಾಟಕಕ್ಕೆ ಇದರ ಪ್ರಾಮುಖ್ಯತೆ

ಕರ್ನಾಟಕ ರಾಜ್ಯದಲ್ಲಿ ವಿಶೇಷವಾಗಿ ಪಶ್ಚಿಮಘಟ್ಟದ ಪ್ರದೇಶಗಳು ಕಾರ್ಬನ್ ಸಂಗ್ರಹಣೆಯ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿವೆ. ಉತ್ತರಕನ್ನಡ ಜಿಲ್ಲೆಯು ಸುಮಾರು ಶೇಕಡಾ 80ರಷ್ಟು ಅರಣ್ಯವನ್ನು ಹೊಂದಿದ್ದು, ನಿತ್ಯಹರಿದ್ವರ್ಣ ಕಾಡುಗಳು ಹೆಚ್ಚಿನ ಪ್ರಮಾಣದಲ್ಲಿ ‘ಕಾರ್ಬನ್’ಅನ್ನು ಹೀರಿಕೊಳ್ಳುತ್ತವೆ. ಅಧ್ಯಯನಗಳ ಪ್ರಕಾರ ಉತ್ತರ ಕನ್ನಡದ ಜಿಲ್ಲೆಯ ಅರಣ್ಯಗಳಲ್ಲಿ ಸಾವಿರಾರು ಗಿಗಾ ಗ್ರಾಂ (1 ಗಿಗಾಗ್ರಾಂ (Gg) = 1,000 ಟನ್‌ಗಳು = 1,000,000 ಕೆ.ಜಿ.) ಪ್ರಮಾಣದ ಕಾರ್ಬನ್, ಮರಗಳಲ್ಲಿ ಮತ್ತು ಮಣ್ಣಿನಲ್ಲಿ ಸಂಗ್ರಹವಾಗಿದೆ. ಇದು ಕರ್ನಾಟಕದ ಅರಣ್ಯ ಸಂಪತ್ತು ಹವಾಮಾನ ಬದಲಾವಣೆಯ ವಿರುದ್ಧದ ಹೋರಾಟದಲ್ಲಿ ಎಷ್ಟು ಮಹತ್ವದ್ದಾಗಿದೆ ಎಂಬುದನ್ನು ತೋರಿಸುತ್ತದೆ.

ಕರ್ನಾಟಕದ ಪಶ್ಚಿಮ ಘಟ್ಟ, ನದಿ ಪುನರುಜ್ಜೀವನ, ಸಮುದಾಯ ವನೀಕರಣ, ಕೃಷಿ-ಅರಣ್ಯ ವ್ಯವಸ್ಥೆಗಳು, ನಗರ ಹಸಿರು ವಲಯಗಳು ಮತ್ತು ಜೀವ ವೈವಿಧ್ಯತೆಯ ಪ್ರದೇಶಗಳು ಕಾರ್ಬನ್ ಕ್ರೆಡಿಟ್ ವ್ಯವಸ್ಥೆಗೆ ಉತ್ತಮ ಅವಕಾಶ ಒದಗಿಸುತ್ತವೆ. ಅಲ್ಲದೇ, ಇದು ಪರಿಸರ ಸಂರಕ್ಷಣೆ ಮಾತ್ರವಲ್ಲ, ಗ್ರಾಮೀಣ ಜೀವನೋಪಾಯ ಮತ್ತು ಸ್ಥಳೀಯ ಸಮುದಾಯಗಳ ಆರ್ಥಿಕ ಸದೃಢತೆಗೂ ಸಹಾಯಕವಾಗಬಹುದು.

ಹವಾಮಾನ ಬದಲಾವಣೆಯನ್ನು ತಗ್ಗಿಸುವ ನಮ್ಮೆಲ್ಲರ ಜವಾಬ್ದಾರಿಯಲ್ಲಿ ಅರಣ್ಯಗಳು ಕೇವಲ ಹಸಿರು ಮಾತ್ರವಲ್ಲ ಅವು ಭೂಮಿಯ ಉಸಿರು, ಕಾರ್ಬನ್ ಭಂಡಾರ ಮತ್ತು ಭವಿಷ್ಯದ ಜೀವ ಭದ್ರತೆ. ಕಾರ್ಬನ್ ಕ್ರೆಡಿಟ್‌ಗಳು ವಿಜ್ಞಾನ, ನೀತಿ ಮತ್ತು ಆರ್ಥಿಕತೆಯನ್ನು ಒಂದೇ ವೇದಿಕೆಯಲ್ಲಿ ಒಟ್ಟುಗೂಡಿಸುವ ಪರಿಣಾಮಕಾರಿ ಸಾಧನವಾಗಿವೆ. ಭಾರತದಂತಹ ಅಭಿವೃದ್ಧಿಶೀಲ ದೇಶಕ್ಕೆ ಇದು ಹಸಿರು ಬೆಳವಣಿಗೆಗೆ ದಾರಿ ತೆರೆದಿರುವ ಮಹತ್ವದ ಹೆಜ್ಜೆಯಾಗಿದೆ.

ಹವಾಮಾನ ಬದಲಾವಣೆಯ ವಿರುದ್ಧದ ಹೋರಾಟದಲ್ಲಿ ಅರಣ್ಯಗಳು ನಮ್ಮ ಮೊದಲ ರಕ್ಷಣಾ ಗೋಡೆ; ಕಾರ್ಬನ್ ಮಾರುಕಟ್ಟೆ ಅದರ ಆರ್ಥಿಕ ಬಲ.

    © Arnold Paul CC BY-SA 3.0

ಲೇಖನ: ಕುಮುದ
ಚಿಕ್ಕಮಗಳೂರು ಜಿಲ್ಲೆ

ಕಾನನದ ದನಿ ಹರಡಿ

ಅಭಿಪ್ರಾಯ ತಿಳಿಸಿ

Your email address will not be published. Required fields are marked *