ಗಮನಿಸದಿದ್ದರೆ ಗರಗಸ ನಮ್ಮ ಜೀವನ ಸೇರುವುದು ಆಗಸ.
© ಧನುಷ್ ಆರ್. ಎಸ್.
ನನಗೆ ವನ್ಯಜೀವಿಗಳ ಮೇಲೆ ಆಸಕ್ತಿ ಬರಲು WCGಯ ಕಾರ್ಯವೈಖರಿ ಮುಖ್ಯ ಕಾರಣ ಎಂದರೆ ತಪ್ಪಾಗಲಾರದು. ಮೊದಮೊದಲು ಪಕ್ಷಿವೀಕ್ಷಣೆಯಿಂದ ಶುರುವಾದ ನನ್ನ ಹವ್ಯಾಸ, ಕಾನನಕ್ಕೆ ಬರೆಯಲು ದಾರಿ ಮಾಡಿಕೊಟ್ಟಿತು. ಅಲ್ಲಿಂದ ಮುಂದೆ, ವನ್ಯಜೀವಿ ಸಂರಕ್ಷಣೆಗೆ ಏನೆಲ್ಲಾ ಮಾಡಬಹುದು ಎಂದು ಯೋಚಿಸುತ್ತಾ ಇಂದು ಹಲವಾರು ಕಾರ್ಯಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದೇನೆ. ಆದರೆ ಕಳೆದ 8 ವರ್ಷಗಳಿಂದ ನಾನು ಯಾವುದೇ ಲೇಖನ ಬರೆದಿರಲಿಲ್ಲ, ಕಾರಣ ಏನು ಅಂತ ಯೋಚಿಸುತ್ತಿದ್ದೀರಾ? ಅಂತಹ ಮಹಾ ಕಾರಣ ಏನೂ ಇಲ್ಲ ಕಣ್ರೀ, 8 ವರ್ಷದಿಂದ ಕಾನನ ಪತ್ರಿಕೆ ವಿನ್ಯಾಸ ಕಾರ್ಯದಲ್ಲಿ ಸಾಕಷ್ಟು ನನ್ನನ್ನು ನಾನು ತೊಡಗಿಸಿಕೊಂಡಿದ್ದೇನೆ ಅಷ್ಟೇ. ಈಗ ಇದ್ದಕ್ಕಿದ್ದ ಹಾಗೆ, ಲೇಖನ ಬರೀಬೇಕು ಅನ್ನಿಸ್ತು; ಯಾಕಂದ್ರೆ ಒಂದು ಅತೀ ಪ್ರಮುಖವಾದ ವಿಷಯವನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕು ಅಂತ.
ನಮ್ಮ WCG ಕಛೇರಿಯಾದ ‘ಅಡವಿ ಫೀಲ್ಡ್ ಸ್ಟೇಷನ್’ನಲ್ಲಿ ಸುಮಾರು ತಿಂಗಳುಗಳಿಂದ ನಾನು ಮತ್ತು ಡಾ. ಆಶ್ವಥ್ ರವರು ನೆಲೆಯೂರಿದ್ದೇವೆ. ಅಂದು ಶಿವರಾತ್ರಿ ಹಬ್ಬ, ನಮ್ಮ ಶಿವನಹಳ್ಳಿಯ ‘ರಾಮಕೃಷ್ಣ ಮಿಷನ್’ನಲ್ಲಿ ಶಿವರಾತ್ರಿಯ ಪ್ರಯುಕ್ತ ದೇವರ ಭಜನೆಯೊಂದಿಗೆ ಜಾಗರಣೆ ನಡೆಯುತ್ತಿತ್ತು. ಜಾಗರಣೆಗೆ ನಾನೇನು ಹೋಗಿಲ್ಲ ಬಿಡಿ, ಆದರೆ ಅಶ್ವಥ್ ರವರು ಅದರಲ್ಲಿ ಭಾಗವಹಿಸಿದ್ದರು. ನಾನು ಅಂದು ಬೆಳ್ಳಂಬೆಳಗ್ಗೆ ಒಂದು ಗಂಟೆಯ ಹೊತ್ತಿಗೆ ಚಿಕ್ಕಮಗಳೂರು ತಲುಪಬೇಕಿದ್ದ ಕಾರಣ, ಹೇಗಿದ್ರೂ ಬೆಂಗಳೂರಿನಿಂದ ಅಲ್ಲಿಗೆ ಪ್ರಯಾಣ ಜಾಗರಣೆಯಂತೆ ಇರುತ್ತದೆಯೆಂದು ಜಾಗರಣೆಗೆ ಹೋಗಿರಲಿಲ್ಲ. ಅಡವಿಯಲ್ಲೇ ರಾತ್ರಿಯ ಸ್ವಲ್ಪ ಸಮಯ ಕಳೆದು, ಚಿಕ್ಕಮಗಳೂರಿಗೆ ಹೊರಡುವ ಯೋಜನೆ ಮಾಡಿ, ಅಂತೆಯೇ ಅಲ್ಲಿಯೇ ಸ್ವಲ್ಪ ಕಾಲ ಕಳೆದು ಹೊರಡಲು ಸಿದ್ದನಾಗಿ ಹೊರಬಂದು, ಶೂ ಹಾಕಿಕೊಳ್ಳಲು ಮುಂದಾದಾಗ ನನ್ನ ‘ಶೂ’ನ ಮುಂದೆ ಪ್ಲಾಸ್ಟಿಕ್ ಕವರ್ನಲ್ಲಿ ಇಟ್ಟಿದ್ದ ಅಶ್ವಥ್ ರವರ ಶೂನಲ್ಲಿ ‘ಗರಂ’ ಆದ ‘ಗರಗಸ ಮಂಡಲ ಹಾವು’ ಕಚ್ಚಲು ಸಿದ್ದವಿದ್ದಂತಿತ್ತು. ‘ಅಯ್ಯೋ ಶಿವನೆ! ಲೈಟ್ ಇಲ್ಲದೆ ಏನಾದರು ಬಂದಿದ್ದರೆ, ನನ್ನನ್ನು ಆ ಶಿವನ ಬಳಿಗೆ ಕಳುಹಿಸಲು ಬಂದಿದಿಯೋ ಈ ಹಾವು?!’ ಎಂದು ಬೆಚ್ಚಿಬಿದ್ದೆ.

ಆದರೂ ನನಗೆ ಅರ್ಥವಾಗದ ವಿಷಯವೆಂದರೆ, ಸುತ್ತಲೂ 4 ಜೊತೆ ‘ಕವರ್ ಇಲ್ಲದ’ ಶೂ ಇದ್ದರೂ ಸಹ, ಈ ಹಾವು ‘ಕವರ್’ನಲ್ಲಿ ಇಟ್ಟಿದ್ದ ಶೂನಲ್ಲಿ ಹೊಕ್ಕಿದ್ದ ವಿಷಯ! ಅಂತೂ, ಒಮ್ಮೆಲೇ ಕಂಡು ದಿಗ್ಬ್ರಮೆಗೊಂಡೆ! ನಿಧಾನವಾಗಿ ವಾಸ್ತವಕ್ಕೆ ಬಂದು, ‘ಈ ಹಾವು ಯಾಕೆ ‘ಕವರ್’ನಲ್ಲಿ ಇಟ್ಟಿದ್ದ ಶೂ ಒಳ ಹೊಕ್ಕಿದೆ?’ ಎಂದು ಯೋಚಿಸತೊಡಗಿದೆ.

ಸರೀಸೃಪಗಳು ಶೀತರಕ್ತ ಪ್ರಾಣಿಗಳು; ಸಸ್ತನಿಗಳ ಹಾಗೆ ಇವುಗಳು ತಮ್ಮ ದೇಹದ ಉಷ್ಣಾಂಶವನ್ನು ತಾವೇ ನಿರ್ವಹಿಸಿಕೊಳ್ಳಲು ಆಗುವುದಿಲ್ಲ. ಈ ಹಾವುಗಳು ಸರೀಸೃಪಗಳ ಗುಂಪಿಗೆ ಸೇರಿರುವುದರಿಂದ, ವಾತಾವರಣದಲ್ಲಿ ಉಷ್ಣಾಂಶ ಹೆಚ್ಚಾದಾಗ, ಇವುಗಳ ರಕ್ತದ ಉಷ್ಣಾಂಶವೂ ಹೆಚ್ಚಾಗುತ್ತದೆ; ಅದನ್ನು ಕಡಿಮೆ ಮಾಡಿಕೊಳ್ಳಲು, ಒಡೆದ ಹುತ್ತಗಳು, ನೀರು, ಮರ ಗಿಡಗಳ ನೆರಳು ಹಾಗೂ ತೇವಾಂಶವಿರುವ ಸ್ಥಳಗಳನ್ನು ಹೊಕ್ಕುತ್ತವೆ. ಹಾಗೆಯೇ ವಾತಾವರಣದಲ್ಲಿ ಉಷ್ಣಾಂಶ ಕಡಿಮೆಯಾದಾಗ, ತಮ್ಮ ದೇಹದ ಉಷ್ಣಾಂಶ ಹೆಚ್ಚಿಸಿಕೊಳ್ಳಲು ಬೆಚ್ಚಗಿನ ಜಾಗಗಳನ್ನು ಹುಡುಕಿ ಹೋಗುತ್ತವೆ. ಹಾಗೆ ಹುಡುಕಿ ಬಂದ ಜಾಗವೇ ನಮ್ಮ ಶೂ ಇರಬಹುದು.
ಭಾರತದಲ್ಲಿ ಅತಿಹೆಚ್ಚು ಹಾವು ಕಡಿತದಿಂದ ಸಾವು ಸಂಭವಿಸುತ್ತಿರುವುದು ಕೇವಲ ನಾಲ್ಕು ಪ್ರಭೇದದ ಹಾವುಗಳಿಂದ. ಮೊದಲನೆಯದು, ನಮಗೆಲ್ಲರಿಗೂ ಚಿರಪರಿಚಿತವಾಗಿರುವ ನಾಗರಹಾವು, ಎರಡನೆಯದು ಕಟ್ಟುಹಾವು; ಇವು ಹೆಚ್ಚಾಗಿ ರಾತ್ರಿಯ ಸಮಯದಲ್ಲಿ ಸಕ್ರಿಯವಾಗಿರುತ್ತವೆ. ಮೂರನೆಯದು ಕೊಳಕುಮಂಡಲ; ಈ ಹಾವನ್ನು ನೋಡಿದಾಕ್ಷಣ ಎಂಥವರಿಗೂ ಒಮ್ಮೆ ಮೈ ಜುಮ್ಮೆನಿಸುವ ಅದರ ದೇಹದ ಮೇಲಿನ ಕಪ್ಪು ಸರಮಾಲೆಯಂತಹ ಚಿನ್ಹೆ, ಈ ಹಾವನ್ನು ಗುರುತಿಸಲು ಬಲು ಸಹಕಾರಿ. ನಾಲ್ಕನೆಯದು ಹಾಗು ಕೊನೆಯದ್ದೇ ನನ್ನ ಕಥೆಯಲ್ಲಿರುವ ಗರಗಸ ಮಂಡಲ ಹಾವು – ನೋಡಲು ಚಿಕ್ಕದಾದರೂ ತುಂಬಾ ಅಪಾಯಕಾರಿ.

ಈ ಪಟ್ಟಿಯಲ್ಲಿ ಅತಿ ವಿಷಕಾರಿಯಾದ ಕಾಳಿಂಗ ಸರ್ಪ ಇಲ್ಲ ಏಕೆ ಅಂತ ಯೋಚನೆ ಮಾಡ್ತಿದ್ದೀರಾ? ಕಾಳಿಂಗ ಸರ್ಪ ಹಾವು ವಿಶ್ವದ ಅತ್ಯಂತ ದೊಡ್ಡ ವಿಷಕಾರಿ ಹಾವು ಹೌದು, ಆದರೆ ಇದರ ಕಡಿತದಿಂದ ಆಗಿರುವ ಸಾವು ಬೆರಳೆಣಿಕೆಯಷ್ಟು ಮಾತ್ರ. ಅದಕ್ಕೆ ಇದನ್ನು “Big Fours of India” ಪಟ್ಟಿಗೆ ಸೇರಿಸಿಲ್ಲ. ಗರಗಸ ಮಂಡಲ ಹಾವುಗಳು ತಮಗೆ ಅಪಾಯ ಎದುರಾದಾಗ, ತಮ್ಮ ದೇಹವನ್ನು ಸುತ್ತು ಸುತ್ತಾಗಿ (C ಅಥವಾ ಸಂಖ್ಯೆ 8 ಆಕಾರದಲ್ಲಿ) ಮಡಚಿಕೊಂಡು ತಲೆಯನ್ನು ಮಧ್ಯದಲ್ಲಿ ಇಡುತ್ತವೆ. ಈ ಸ್ಥಿತಿಯಲ್ಲಿ ಅವು ಬಹಳ ಬೇಗ ಕಚ್ಚುವ ಸಾಧ್ಯತೆ ಇರುವುದರಿಂದ ದೂರ ಇರುವುದು ಅತ್ಯುತ್ತಮ.
ಈ ಹಾವುಗಳು ತಮ್ಮ ದೇಹದ ಗರಗಸದಂತಿರುವ ಹುರುಪೆಗಳನ್ನು ಉಜ್ಜುವ ಮೂಲಕ “ಶಶಶ” ಎಂಬ ಶಬ್ದವನ್ನು ಉಂಟುಮಾಡಿ ಎಚ್ಚರಿಕೆ ನೀಡುತ್ತವೆ.
ಇವುಗಳ ವಿಷ ಹಿಮೋಟಾಕ್ಸಿಕ್ ಸ್ವಭಾವ ಹೊಂದಿದ್ದು, ‘ರಕ್ತ ಹೆಪ್ಪುಗಟ್ಟುವ ವ್ಯವಸ್ಥೆ’ ಯನ್ನು ಗಂಭೀರವಾಗಿ ಹಾನಿಗೊಳಿಸುತ್ತದೆ. ವಿಷದ ಪರಿಣಾಮವಾಗಿ ಆರಂಭದಲ್ಲಿ ರಕ್ತ ಹೆಪ್ಪುಗಟ್ಟುವ ಕ್ರಿಯೆ ಸಕ್ರಿಯವಾಗುವಂತೆ ಕಾಣಿಸಿದರೂ, ನಂತರ ಹೆಪ್ಪುಗಟ್ಟುವ ಅಂಶಗಳು ಕಡಿಮೆಯಾಗುವುದರಿಂದ ರಕ್ತ ಹೆಪ್ಪುಗಟ್ಟುವ ಸಾಮರ್ಥ್ಯ ಕುಂದುತ್ತದೆ. ಇದರ ಪರಿಣಾಮವಾಗಿ ಆಂತರಿಕ ಹಾಗೂ ಬಾಹ್ಯ ರಕ್ತಸ್ರಾವ ಸಂಭವಿಸಬಹುದು.
ಮನುಷ್ಯರಲ್ಲಿ ಹಾವು ಕಚ್ಚಿದ ನಂತರ ಕೆಲವು ನಿಮಿಷಗಳಿಂದ ಕೆಲವು ಗಂಟೆಗಳೊಳಗೆ ನೋವು, ಊತ, ಒಸಡು ಮತ್ತು ಮೂಗಿನಿಂದ ರಕ್ತಸ್ರಾವ, ವಾಂತಿ, ತಲೆ ತಿರುಗುವಿಕೆ ಮುಂತಾದ ಲಕ್ಷಣಗಳು ಕಾಣಿಸಬಹುದು. ತಕ್ಷಣ ಚಿಕಿತ್ಸೆ ಪಡೆಯುವುದು ಅತ್ಯವಶ್ಯಕ, ಇಲ್ಲದಿದ್ದರೆ ಜೀವಾಪಾಯ ಉಂಟಾಗಬಹುದು.
ಹಾವುಗಳು ವಿಷ ಶೇಖರಿಸಿ ಇಟ್ಟುಕೊಂಡಿರುವುದು ಮನುಷ್ಯರಿಗೆ ಕಚ್ಚಲೆಂದು ಅಲ್ಲ. ಬದಲಿಗೆ ತನ್ನ ಆಹಾರ ಸಂಪಾದನೆಗಾಗಿ. ತನ್ನ ಬೇಟೆಯಾದ ಪ್ರಾಣಿಗಳನ್ನು ನಿಷ್ಕ್ರಿಯಗೊಳಿಸಿ, ಸೇವಿಸಲು. ಮನುಷ್ಯರಾದ ನಾವು ತಿಳಿದೋ, ತಿಳಿಯದೆಯೋ ಆಕಸ್ಮಿಕವಾಗಿ ಸಂಭವಿಸುವ ಘಟನೆಗಳಿಂದ ಅವುಗಳ ವಿಷಕ್ಕೆ ಬಲಿಯಾಗುತ್ತಿದ್ದೇವೆ ಅಷ್ಟೆ. ಇನ್ನೊಂದು ವಿಷಯ – ಈ ವಿಷಕಾರಿ ಹಾವುಗಳು ಕಚ್ಚಿದರೆ ಸಾವು ಕಟ್ಟಿಟ್ಟ ಬುತ್ತಿ ಅಂತ ಏನಿಲ್ಲ; ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಸೇರಿಸಿ, ಪ್ರತ್ಯೌಷಧಿ ಪಡೆದರೆ ಸಾಕು, ಯಮಧರ್ಮ ನಮ್ಮ ಕೊರಳಿಗೆ ಹಾಕಿರುವ ಚಾಟಿಯಿಂದ ತಪ್ಪಿಸಿಕೊಳ್ಳಬಹುದು. ಆದರೆ ಏನ್ ಮಾಡೋದು ಹೇಳಿ? ನಮ್ಮ ಹೆಚ್ಚಿನ ಜನ ಮಂತ್ರ ಹಾಕಿಸಿ, ತಂತ್ರಮಾಡಿಸಿ ವಾಸಿ ಮಾಡಿಸ್ಕೋತೀವಿ ಅಂತ ಹೋಗಿ ಸಾಯ್ತಾರೆ.
| ಹಾವು ಕಚ್ಚಿದಾಗ ಮಾಡಬೇಕಾದ ಪ್ರಥಮ ಚಿಕಿತ್ಸೆ: | ಹಾವು ಕಚ್ಚಿದಾಗ ಮಾಡಬಾರದಂತಹ ಕೆಲಸಗಳು: |
| ಶಾಂತವಾಗಿರಿ: ಭಯವು ವಿಷದ ಪರಿಣಾಮವನ್ನು ಹೆಚ್ಚಿಸುತ್ತದೆ. | ವಿಷವನ್ನು ಬಾಯಲ್ಲಿ ಹೀರುವುದು. |
| ‘ಹಾವು ಕಡಿತ’ಕ್ಕೊಳಗಾದ ಭಾಗವನ್ನು ಹೆಚ್ಚು ಅಲುಗಾಡದಂತೆ ಇರಿಸಿ. | ಕಚ್ಚಿದ ಭಾಗದ ಮೇಲೆ ಐಸ್ ಅನ್ನು ಇಡುವುದು |
| ಕಚ್ಚಿದ ಭಾಗದಲ್ಲಿ ಆಭರಣಗಳು ಮತ್ತು ಬಿಗಿಯಾದ ಬಟ್ಟೆಗಳು ಇದ್ದಲ್ಲಿ ತೆಗೆದುಹಾಕಿ. | ಬಲವಂತವಾಗಿ ನೀರು ಅಥವಾ ಯಾವುದೇ ಪಾನೀಯಗಳನ್ನು ಕುಡಿಸುವುದು (ಮದ್ಯ / ಕಾಫಿ ಕೊಡಬಾರದು). |
| ಸಾಧ್ಯವಾದಷ್ಟೂ ಬೇಗ ಹತ್ತಿರದ ಆಸ್ಪತ್ರೆ ಅಥವಾ ವೈದ್ಯಕೀಯ ಸೌಲಭ್ಯ ಇರುವ ಕಡೆ ಸಾಗಿಸಿ. | ಕಚ್ಚಿದ ಭಾಗದ ಮೇಲೆ ಗಟ್ಟಿಯಾಗಿ ರಕ್ತ ಸಂಚಲನ ಆಗದಂತೆ ಬಟ್ಟೆ ಅಥವಾ ದಾರ ಕಟ್ಟುವುದು. |
| ರೋಗಿಯನ್ನು ಮಲಗಿಸಿ, ಹಾವು ಕಚ್ಚಿದ ಅಂಗವನ್ನು ಅಚಲವಾಗಿ, ಹೃದಯ ಮಟ್ಟದಲ್ಲಿ ಅಥವಾ ಹೃದಯ ಮಟ್ಟಕ್ಕಿಂತ ಸ್ವಲ್ಪ ಕೆಳಗೆ ಇಡಿ. | ಮಂತ್ರ ಹಾಕಿಸಲು ಪೂಜಾರಿ/ಮಂತ್ರವಾದಿ ಬಳಿ ಕರೆದೊಯ್ಯುವುದು. |
| ಕಚ್ಚಿದ ಸ್ಥಳವನ್ನು ಒರೆಸಬೇಡಿ ಅಥವಾ ತೊಳೆಯಬೇಡಿ. | ಕಚ್ಚಿದ ಭಾಗದಲ್ಲಿ ಯಾವುದೇ ರೀತಿಯ ಕತ್ತರಿಸುವುದು (X ಚಿನ್ಹೆಯಂತೆ ಕೊಯ್ಯುವುದು). |
| ಹಾವನ್ನು ಹಿಡಿಯಲು ಅಥವಾ ಕೊಲ್ಲಲು ಪ್ರಯತ್ನಿಸುವುದು. |

ಈಗ ಚಳಿಯಿರೋದ್ರಿಂದ ಹಾವುಗಳು ನಿಮ್ಮ ಮನೆಯ ಸುತ್ತಮುತ್ತಲೂ ಬರಬಹುದು. ಯಾವಾಗಲೂ ಮನೆಯ ಬಾಗಿಲು ಮುಚ್ಚಿರಿ; ಶೂ, ಚಪ್ಪಲಿ ಹಾಕಿಕೊಳ್ಳುವ ಮುನ್ನ ತೀಕ್ಷ್ಣವಾಗಿ ನೋಡಿ, ನಂತರ ಧರಿಸಿ. ಮನೆಯ ಸುತ್ತಮುತ್ತಲೂ ಶುಚಿಯಾಗಿಡಿ; ಶುಚಿಯಿಲ್ಲದಿದ್ದರೆ, ಇಲಿಗಳು ಮನೆಹೊಕ್ಕುತ್ತವೆ; ಅವುಗಳನ್ನು ಹುಡುಕಿಕೊಂಡು, ಹಾವುಗಳೂ ಸಹ ಬರುತ್ತವೆ. ದಯವಿಟ್ಟು ಯಾರೂ ಸಹ ಹಾವುಗಳನ್ನು ಕಂಡಾಗ ಕೊಲ್ಲಬೇಡಿ. ಅವುಗಳು ನಮಗೆ ಮಾರಕವಲ್ಲ, ಆಹಾರ ಜಾಲದಲ್ಲಿ ಅವು ಮುಖ್ಯ ಪಾತ್ರವಹಿಸುತ್ತಿವೆ. ಹಾವು ಕಂಡಲ್ಲಿ ನಿಮ್ಮ ಸುತ್ತಮುತ್ತಲಿನ ಉರಗರಕ್ಷಕರನ್ನು ಸಂಪರ್ಕಿಸಿ.
ಇದರ ಬಗ್ಗೆ ಅರಿವು ಮೂಡಿಸಲು WCG ಕಡೆಯಿಂದ ನಾವೂ ಸಹ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ. ಇತ್ತೀಚಿಗೆ ಬೆಂಗಳೂರಿನ ಸುತ್ತಮುತ್ತ ಕಂಡುಬರುವ ಸುಮಾರು 23 ಪ್ರಭೇದದ ಸಾಮಾನ್ಯ ಹಾವುಗಳ ಬಗ್ಗೆ ಒಂದು ಕಿರುಹೊತ್ತಗೆಯನ್ನು ಹೊರತಂದಿದ್ದೇವೆ. ನಿಮಗೆ ಈ ಕಿರುಹೊತ್ತಗೆ ಬೇಕಾದಲ್ಲಿ, ಇದೇ ಪತ್ರಿಕೆಯ ‘ನೀವೂ ಕಾನನಕ್ಕೆ ಬರೆಯಬಹುದು’ ಅಂಕಣದಲ್ಲಿರುವ ವಿಳಾಸವನ್ನು ಸಂಪರ್ಕಿಸಿ.
ಹಾವುಗಳ ಪ್ರಾಮುಖ್ಯತೆ ಬಗ್ಗೆ ಚರ್ಚಿಸ್ತಾ, ಈ ಲೇಖನದಲ್ಲಿ ಇದ್ದ ಹಾವನ್ನ ನಾವು ಮರತೇಬಿಟ್ವಿ.
ಮುಂದೇನಾಯ್ತು ಶೂ ಕವರ್ನಲ್ಲಿದ್ದ ಹಾವು?
ಇದರ ಬಗ್ಗೆ, ಮೇಲೆ ತಿಳಿಸಿರುವ ವಿಷಯಗಳನ್ನು ತಿಳಿದಿದ್ದ ನಾನು, ಅದರಿಂದ ಆಗಬಹುದಾದ ತೊಂದರೆಗಳನ್ನು ಬಲ್ಲವನಾಗಿದ್ದೆ. ಅದಕ್ಕೆ ಆ ಹಾವು ಕವರ್-ನಿಂದ ಎಲ್ಲೂ ಹೊರಹೋಗದಂತೆ ಕಟ್ಟಿ, ಗಾಳಿಯಾಡಲು ಸಾಸಿವೆ ಕಾಳಿನಷ್ಟು ರಂದ್ರಮಾಡಿ, ಅಶ್ವಥ್ ಅವರಿಗೆ ವಿಷಯ ತಿಳಿಸಿದೆ. ಈ ವಿಷಯ ತಿಳಿದ ಅವರ ಮನಸ್ಸು ಇದರತ್ತ ಸೆಳೆಯಿತು ಎಂಬುದು, ಅವರು ನನಗೆ ಹೇಳಿದಾಗ ತಿಳಿಯಿತು. ಜಾಗರಣೆಯ ಭಜನೆಯ ವಿರಾಮದ ಸಮಯದಲ್ಲಿ ಅಡವಿಗೆ ಬಂದು, ಕವರ್ನಲ್ಲಿದ್ದ ಹಾವನ್ನು ಹೊರತೆಗೆದು ಅದರ ಸುಂದರ ಛಾಯಾಚಿತ್ರಗಳನ್ನು ಸೆರೆಹಿಡಿದು ಅದರ ಆವಾಸ ಸ್ಥಳಕ್ಕೆ ವಾಪಸ್ ಬಿಟ್ಟರಂತೆ. ಈ ಲೇಖನದಲ್ಲಿರುವ ಛಾಯಾಚಿತ್ರಗಳು ಅದರದ್ದೇ ನೋಡಿ.
ಲೇಖನ: ಧನರಾಜ್ ಎಂ
ಬೆಂಗಳೂರು ಜಿಲ್ಲೆ
