ನಿನ್ನ ಕೆಂಪು – ನನ್ನ ಕೆಂಪೇ?
© ಜೈಕುಮಾರ್ ಆರ್.
“ಅಬ್ಬಾ… ಹೋಲಿಸಿ ವರ್ಣಿಸಲಿಕ್ಕೆ ಉದಾಹರಣೆಯೇ ತಕ್ಷಣ ಸಿಗದು.” ಎಷ್ಟು ಚಂದ ನೋಡೋಕೆ. ಪ್ರತೀ ಬಾರಿ ಪಕ್ಷಿ ವೀಕ್ಷಣೆಗೆ ಹೋದಾಗ, ‘ಸ್ಮಾಲ್ ಮಿನಿವೆಟ್’ ಎಂಬ ಸಣ್ಣ ಪಕ್ಷಿ ಕಂಡಾಗ ಆಗುವ ಅನುಭವವದು. ಬೆಳಗಿನ ಎಳೆ ಸೂರ್ಯನ ಕಿರಣಗಳು ಅವುಗಳ ಮೈಮೇಲೆ ಬಿದ್ದರಂತೂ ಹೇಳಲು ಕಷ್ಟ, ಅನುಭವಿಸಬೇಕು ಆ ನೋಟವನ್ನ. ಸಾಮಾನ್ಯವಾಗಿ ಗುಂಪಿನಲ್ಲಿ ಇರುವ ಇವುಗಳು, ಸಣ್ಣ ಮೆಲುದನಿಯ ಶಬ್ಧವನ್ನು ಮಾಡುತ್ತಾ ಒಂದು ಜಾಗದಲ್ಲಿ ಕೂರದೆ, ಮರವೆಲ್ಲಾ ಓಡಾಡುತ್ತಿರುತ್ತವೆ. ಹಾಗೆ ಹಾರುವಾಗ ಕಾಣುವ ಅವುಗಳ ಕತ್ತಿನಿಂದ ಎದೆ ಭಾಗದ ತುಂಬಿರುವ ಆ ಕೆಂಪು ಬಣ್ಣದ ಅಂದ, ನೋಡಲು ಬರೀ ಆನಂದ. ಆದರೆ, ನಾನು ನೋಡುತ್ತಿರುವ ಆ ಕೆಂಪು ಬಣ್ಣ, ನಿಮಗೂ ಹಾಗೇ ಕಾಣುತ್ತಿದೆಯೇ? ಇಲ್ಲವಾದರೆ ನಮಗೆ ಹೇಗೆ ತಿಳಿಯುತ್ತದೆ? ಇದು ಚಿಕ್ಕ ವಯಸ್ಸಿನಿಂದ ನನಗೂ ಇದ್ದ ಪ್ರಶ್ನೆ. ಕೊನೆಗೂ ಇದಕ್ಕೆ ಉತ್ತರ ಸಿಕ್ಕಂತಾಗಿದೆ. ಹೊಸ ಸಂಶೋಧನೆ ಅದನ್ನೇ ಹೇಳಲೆಂದು ಬಂದಿದೆ.

ಪ್ರತಿಯೊಬ್ಬ ಮನುಷ್ಯ ಬಣ್ಣಗಳನ್ನು ನೋಡಿದಾಗ ಅವನ ಕಣ್ಣಿನಿಂದ ಮೆದುಳು ಸೇರುವ ಸಂದೇಶಗಳು, ಅಲ್ಲಿ ಒಂದು ಬಗೆಯ ನರ-ವಿನ್ಯಾಸವನ್ನು (ನ್ಯೂರಾನ್ ಪ್ಯಾಟರ್ನ್) ಮಾಡುತ್ತವೆ. ಅದರ ಸಹಾಯದಿಂದ ಮೆದುಳು, ಆತ ಯಾವ ಬಣ್ಣ ನೋಡುತ್ತಿದ್ದಾನೆಂದು ಗ್ರಹಿಸುತ್ತದೆ. ಹಾಗೆಯೇ ಪ್ರತೀ ಬಣ್ಣಕ್ಕೂ ಈ ಪ್ಯಾಟರ್ನ್ ಬೇರೆ ಇರುತ್ತದೆ. ಆದ್ದರಿಂದ ಕೆಂಪು ಬಣ್ಣ ನೋಡಿದಾಗಲೂ ಒಂದು ವಿಭಿನ್ನ ಪ್ಯಾಟರ್ನ್ ಮೆದುಳಿನಲ್ಲಿ ಆಗುತ್ತದೆ. ಇದು ಪ್ರತೀ ವ್ಯಕ್ತಿಗೆ ಹೆಚ್ಚಾಗಿ ಬದಲಾಗುವುದಿಲ್ಲ ಎನ್ನುವುದನ್ನೇ ವಿಜ್ಞಾನಿ ಆಂಡ್ರಿಯಾಸ್ ಹೇಳುತ್ತಿರುವುದು.
ಈ ಸಂಶೋಧನೆಗಾಗಿ, ಆಂಡ್ರಿಯಾಸ್ ಮತ್ತು ಅವರ ಇನ್ನೊಬ್ಬ ಸಹೋದ್ಯೋಗಿ ವಿಜ್ಞಾನಿ ಬ್ಯಾನ್ನರ್ಟ್ ಅವರು 15 ವ್ಯಕ್ತಿಗಳನ್ನು ಆರಿಸಿಕೊಂಡರು. ಎಲ್ಲರಿಗೂ ಕೆಂಪು, ಹಸಿರು ಮತ್ತು ಹಳದಿ ಬಣ್ಣದ ವಿವಿಧ ಛಾಯೆಗಳನ್ನು (shades of colors) ಅನ್ನು ತೋರಿಸಲಾಯಿತು. ಅದರ ಅನುಸಾರವಾಗಿ ಆದ ಮೆದುಳಿನ ಪ್ರತಿಕ್ರಿಯೆಯನ್ನು ಸಂಗ್ರಹಿಸಲಾಯಿತು. ತದನಂತರ ಆ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿಕೊಂಡು ಅವರು ನೋಡಿದ ಬಣ್ಣ ಯಾವುದು ಇರಬಹುದೆಂದು ಗುರುತಿಸಲಾಯಿತು. ಅದರ ಪ್ರಕಾರವಾಗಿ ಹೇಳುವುದಾದರೆ, ಪ್ರತೀ ವ್ಯಕ್ತಿಯ ಬಣ್ಣಗಳ ಗ್ರಹಿಕೆಯಲ್ಲಿ ಅಷ್ಟೇನು ವ್ಯತ್ಯಾಸವಿರಲಿಲ್ಲ. ಅಂದರೆ ಸರಿ ಸುಮಾರಾಗಿ ಎಲ್ಲರೂ ನೋಡುವ ಬಣ್ಣಗಳ ಗ್ರಹಿಕೆ ಒಂದೇ ಆಗಿದೆ ಎಂದು ಈ ಸಂಶೋಧನೆಯ ಮೂಲಕ ತಿಳಿಯುತ್ತದೆ.
ಆದರೆ, ಈ ಸಂಶೋಧನೆಯು ಎಲ್ಲರ ಬಣ್ಣಗಳ ಗ್ರಹಿಕೆ ಒಂದೇ ಆಗಿರುತ್ತದೆ ಎಂದು ಹೇಳುತ್ತದಾದರೂ, ಬಣ್ಣಗಳನ್ನು ನೋಡಿದಾಗ ಅಥವಾ ಗ್ರಹಿಸುವಾಗ ಆಗುವ ‘ಅನುಭವ’ ಹೇಗಿರುತ್ತದೆ ಎಂದು ತಿಳಿಯಲಾಗುವುದಿಲ್ಲ. ಈ ಅನುಭವವು ಪ್ರತಿಯೊಬ್ಬರಿಗೂ ವಿಭಿನ್ನವಾಗೇ ಇರುತ್ತದೆ. ಇದು ಪ್ರತೀ ವ್ಯಕ್ತಿಯ ಭಾವ ಹಾಗೂ ಜಾಗೃತಿಗೆ (consciousness) ಅನುಗುಣವಾಗಿರುತ್ತದೆ ಎನ್ನುತ್ತಾರೆ ಅದೇ ವಿಜ್ಞಾನಿಗಳು; ಹಾಗೂ, ಈ ವಿಷಯ ಸದಾ ಚರ್ಚಿಸಬಹುದಾದ ವಿಚಾರವಾಗಿ ಉಳಿಯುತ್ತದೆ.
ನೋಡಿದಿರಾ! ನಿನ್ನ ಕೆಂಪು, ನನ್ನ ಕೆಂಪೇ? ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿತಾದರೂ, ನಾನು ಅದೇ ಕೆಂಪನ್ನು ಗ್ರಹಿಸುವಾಗ ಆಗುವ ಅನುಭವ, ನಿನ್ನ ಅನುಭವದ ಹಾಗೆಯೇ ಇದೆಯೇ? ಎಂಬ ಪ್ರಶ್ನೆಗೆ ಉತ್ತರ ಇನ್ನೂ ವಿಜ್ಞಾನದ ಬಳಿ ಇಲ್ಲ. ಉತ್ತರವಿಲ್ಲ ಎಂದ ಮಾತ್ರಕ್ಕೆ ಆ ಪ್ರಶ್ನೆ ನಿಲ್ಲುವುದಿಲ್ಲ. ಉತ್ತರವಿಲ್ಲದ ಪ್ರಶ್ನೆಗಳಿಗೆ ಉತ್ತರ ಹುಡುಕುವುದೇ ವಿಜ್ಞಾನದ ಚಾಳಿ. ಪ್ರಶ್ನೆಗಳೇ ಅದಕ್ಕೆ ಸ್ಪೂರ್ತಿ. ಅಲ್ಲವೇ? ಹಾಗಾದರೆ, ಉತ್ತರ ಸಿಗದ ಪ್ರಶ್ನೆಗಳು ಬೇಸರಗಳಾಗಬೇಕಿಲ್ಲ, ಬದಲಿಗೆ ಉತ್ತರ ಹುಡುಕುವ ಭರದಲ್ಲಿ ನಡೆಯಬೇಕಾದ ಸುಂದರ ಅನುಭವಗಳಿಗೆ ನಾಂದಿಯಾಗಿರಬಹುದಲ್ಲಾ?!
Source: www.snexplores.org
ಲೇಖನ: ಜೈಕುಮಾರ್ ಆರ್
ಬೆಂಗಳೂರು ಜಿಲ್ಲೆ
