ನಾಗಬನದ ಸುತ್ತ

ನಾಗಬನದ ಸುತ್ತ

(ಕಾನನ ಸಿರಿ ಲೇಖನ ಸ್ಪರ್ಧಾ ವಿಜೇತ ಲೇಖನ)

        © ರೈಹಾನಾ

ಅತ್ತ ಪೇಟೆಯೂ ಅಲ್ಲ ಇತ್ತ ಹಳ್ಳಿಯೂ ಅಲ್ಲದ ಸಣ್ಣದೊಂದು ಊರಿನಲ್ಲಿ ಹುಟ್ಟಿ ಬೆಳೆದ ನನಗೆ ಪ್ರಕೃತಿಯೊಂದಿಗೆ ‘ಅಬ್ಬಾ’ ಎಂದೆನಿಸಿಕೊಳ್ಳುವ ಅನುಭವವೇನೂ ಇಲ್ಲದಿದ್ದರೂ ನನ್ನ ಪ್ರಾಯದ ಅದೆಷ್ಟೋ ಯುವ ಜನತೆ ಕಂಡು ಕೇಳರಿಯದ ಹಲವು ರಸಮಯ ನಿಮಿಷಗಳು ನನ್ನ ಜೀವನದಲ್ಲೂ ಕಳೆದು ಹೋಗಿವೆ. ಪ್ರಕೃತಿಯ ಒಡನಾಟವನ್ನು ಹೆಚ್ಚಾಗಿ ಇಷ್ಟಪಡುತ್ತಿದ್ದ ನನ್ನ ತಾಯಿಗೆ ಆಡು ಸಾಕಾಣಿಕೆಯಲ್ಲಿ ವಿಪರೀತ ಆಸಕ್ತಿ ಇದ್ದ ಕಾರಣ ಆಡು ಮೇಯಿಸುವ ಸೋಗಿನಲ್ಲಿ ಮನೆ ಸಮೀಪದ ಹಲವು ಗುಡ್ಡ-ಕಾಡುಗಳ ದರ್ಶನ ಭಾಗ್ಯ ನನಗೊದಗಿದ್ದು ನನ್ನ ಅದೃಷ್ಟವೆಂದೇ ಹೇಳುತ್ತೇನೆ.

ಪ್ರತಿದಿನ ಸಂಜೆ ಶಾಲೆ ಬಿಟ್ಟ ನಂತರ ಆಡುಗಳ ಸೈನ್ಯದೊಂದಿಗೆ ಗುಡ್ಡ ಹತ್ತುತ್ತಿದ್ದ ನಾನೂ ನನ್ನ ಅಣ್ಣಂದಿರೂ ಸೂರ್ಯ ಮುಳುಗುವ ಹೊತ್ತಿಗೆ ಹಲವಾರು ನವಿಲುಗರಿಗಳನ್ನೂ, ಕುಂಟಲಕಾಯಿ, ಚೂರಿಕಾಯಿ, ಕೇಪುಳುಕಾಯಿ ಹೀಗೆ ಹೆಸರೇ ತಿಳಿಯದ ಬಗೆ-ಬಗೆಯ ಭಕ್ಷ್ಯ ಯೋಗ್ಯ ಕಾಯಿ-ಕರಡುಗಳೊಂದಿಗೆ ಮರಳುತ್ತಿದ್ದೆವು. ಆಸಕ್ತಿದಾಯಕ ವಿಚಾರವೆಂದರೆ, ನಮ್ಮ ಆಡುಭಾಷೆಯಲ್ಲಿ  ‘ಮೊಡಕ್ಕಪಝಂ’ ಎಂದು ಕರೆಯಲ್ಪಡುವ ಕಾಯಿಯೊಂದು ಪೊದೆಯ ನಡುವೆ ದೊರಕುತ್ತಿತ್ತು. ಅದು ಗಾತ್ರದಲ್ಲಿ ದೊಡ್ಡ ನಿಂಬೆ ಹಣ್ಣನ್ನೂ ಬಣ್ಣದಲ್ಲಿ ಕಿತ್ತಳೆಯನ್ನೂ ಒಳ ರಚನೆಯಲ್ಲಿ ಥೇಟ್ ಪುನರುಪುಳಿ ಹಣ್ಣನ್ನೂ ಹೋಲುತ್ತಿತ್ತು. ಹೆಚ್ಚೇನೂ ಸಿಹಿಯಲ್ಲದ ಅಲ್ಪವೂ ಹುಳಿಯಲ್ಲದ ಈ ವಿಶಿಷ್ಟ ಕಾಯಿಯು ರುಚಿಯಲ್ಲಿ ತಟ್ಟನೆ ಯಾವ ಹಣ್ಣಿನೊಂದಿಗೂ ಹೋಲಿಸಲಾಗದಂತಿರುವುದರಿಂದ ನನ್ನಿಂದ ಹೆಚ್ಚೇನೂ ಹೇಳಲು ಸಾಧ್ಯವಿಲ್ಲ. ಆದ್ದರಿಂದಲೇ ಹತ್ತು-ಹಲವು ಮಂದಿಯಲ್ಲಿ ಈ ಹಣ್ಣಿನ ಕುರಿತು ವಿಚಾರಿಸಿ, ಅನ್ವೇಷಿಸಿದ ಬಳಿಕವೂ ಯಾರೊಬ್ಬರಿಗೂ ಅದೇನೆಂದು ಹೊಳೆಯದಾಗಿ ಅದರ ನಿಜವಾದ ಹೆಸರೇನು, ಗುಣವೇನು ಎಂಬುವುದನ್ನು ತಿಳಿಯಲು ಅಂತೆಯೇ ತಿಳಿಸಲು ವಿಫಲವಾಗಿದ್ದೇನೆ ಎನ್ನಲು ಖೇದವಾಗುತ್ತಿದೆ. ಆ ಕಾಲದಲ್ಲಿ ಅದರ ಒಂದು ಬೀಜವನ್ನಾದರೂ ಬಿತ್ತುವ ಯೋಚನೆ ಹೊಳೆದಿದ್ದರೆ ಬಹುಶಃ ಅದು ನಮ್ಮ ಹಿತ್ತಲಲ್ಲಿ ಬೆಳೆದು ಬೀಡು ಬಿಟ್ಟಿರುತ್ತಿತ್ತೇನೋ. ಕನಿಷ್ಟ ಪಕ್ಷ ಅದನ್ನು ಉಳಿಸುವ ಪ್ರಯತ್ನವಾದರೂ ಮಾಡಿದ್ದೆ ಎನ್ನುವ ಸಾರ್ಥಕತೆಯಾದರೂ ಇರುತ್ತಿತ್ತು. ಅಂತೂ ಈ ಹೊತ್ತಿಗೆ ಅದು ಎಲ್ಲಾದರೂ ಉಳಿದಿದೆಯೋ  ನಿರ್ನಾಮವಾಗಿದೆಯೋ ಕಾಣೆ…

ನಮ್ಮ ಹಿತ್ತಲ ಕಾಡಿನ ಕುರಿತು ಯೋಚಿಸಿದಂತೆ ನೆನಪುಗಳ ಬುತ್ತಿಯು ಮತ್ತಷ್ಟು ಬಿಚ್ಚಿಕೊಳ್ಳುತ್ತದೆ. ಆ ಕತ್ತಲ ಕಾಡಿನ ದಟ್ಟ ಪೊದೆಯ ನಡುವೆ ನಾಗನ ಕಟ್ಟೆಯೊಂದು ಇದ್ದು, ಸಂಜೆಯ ನಂತರ ಅದರ ಬಳಿ ಸುಳಿಯಕೂಡದೆಂದು ಪ್ರತಿದಿನವೂ ತಾಯಿಯ ಕಟ್ಟಪ್ಪಣೆ ಇರುತ್ತಿತ್ತು. ಮೊದಮೊದಲು ಅದರತ್ತ ನೋಟ ತಿರುಗಿಸಲೂ  ಭಯವಾಗುತ್ತಿದ್ದರೂ ಯಾವುದೋ ಒಂದು ಅನಿರೀಕ್ಷಿತ ಸಂದರ್ಭದಲ್ಲಿ ನಾನು ಅದರ ಹಿಂದೆಯೇ ಅಡಗಿ ಕುಳಿತು ತಾಸುಗಳ ವರೆಗೂ ಹುಡುಕಾಡಿಸಿ ಕೊನೆಗೆ ಎಲ್ಲರಿಂದಲೂ ವಾಚಾಮಗೋಚರ ಬೈಸಿಕೊಂಡಿದ್ದೆ. ನಂತರ, ತಾಯಿ ಹೇಳುವಂತೆ ಭಯಪಡುವಂತದ್ದೇನೂ ಅಲ್ಲಿ ಇಲ್ಲವೆಂದು ಎಲ್ಲರಿಗೂ ಮನದಟ್ಟಾಗಿ ಮುಂದೆ ನಮ್ಮೆಲ್ಲರ ಚಟುವಟಿಕೆಗಳಿಗೆ ನಾಗನಕಟ್ಟೆಯೇ ಪ್ರಮುಖ ಕೇಂದ್ರವಾಯಿತು. ಎಷ್ಟರ ಮಟ್ಟಿಗೆಯೆಂದರೆ ಶಾಲೆಯ ಪರೀಕ್ಷಾ ಸಮಯದಲ್ಲಿಯೂ ಸಹ ನಾನು ನಾಗಬನಕ್ಕೆ ಭೇಟಿ ನೀಡುವುದನ್ನು ತಪ್ಪಿಸುತ್ತಿರಲಿಲ್ಲ. ನಾಗನಕಟ್ಟೆಯಲ್ಲೇ ತಾಸುಗಟ್ಟಲೆ ಪುಸ್ತಕ ಹಿಡಿದು ಓದುತ್ತಾ ಕೂರುತ್ತಿದ್ದೆ. ಕೆಲವೊಮ್ಮೆ ಕಟ್ಟೆಯ ಮೇಲೆ ಬೆಳೆಯುತ್ತಿದ್ದ ಪಾಚಿಯಂತಹ ಸಣ್ಣ-ಸಣ್ಣ ಹುಲ್ಲಿನಲ್ಲಿ ಕೋಳಿ ಜುಟ್ಟು ಆಟ, ಪುಸ್ತಕದ ಕೊನೆಯ ಪುಟದಲ್ಲಿ ಕಳ್ಳ-ಪೋಲಿಸ್, ಬಿಂಗೋ, ಹೆಸರು-ಊರು ಮುಂತಾದ ಆಟಗಳನ್ನು ಅಪರೂಪಕ್ಕೆ ಆಡುತ್ತಿದ್ದುದೂ ಇದೇ ಕಟ್ಟೆಯಲ್ಲಿ.

ಹೀಗೇ ಎಂದಿನಂತೆ ಒಂದು ಸಂಜೆ ಅಣ್ಣಂದಿರು ಆಡು ಮೇಯಿಸುತ್ತಾ ಅದರ ಕೆಲಸದಲ್ಲಿ ನಿರತರಾಗಿರಬೇಕಾದರೆ ನಾನು ಒಬ್ಬಂಟಿಯಾಗಿ ಕಾಡೊಳಗೆ ಹೊಕ್ಕು ಮಧ್ಯದಲ್ಲಿದ್ದ ಬೃಹತ್ ಬಂಡೆಯ ಮೇಲೆ ಹತ್ತಿ ಆಯತಪ್ಪಿ ನೆಲಕ್ಕುರುಳಿದ್ದೆ. ಅಷ್ಟು ಸಾಲದೆಂಬಂತೆ ನನ್ನ ಹಿಂದೆಯೇ ದೊಡ್ಡ ಗಾತ್ರದ ಕಲ್ಲೊಂದು ಉರುಳಿ ನನ್ನ ಕಾಲಮೇಲೆಯೇ ಬಿದ್ದು ಅನಪೇಕ್ಷಿತ ದಾಳಿ ಮಾಡಿತ್ತು. ನನ್ನ ಆರ್ತನಾದಕ್ಕೆ ಬೆಚ್ಚಿದ ಅಣ್ಣಂದಿರು ನನಗೆ ಯಾವುದೋ ಕಾಡುಪ್ರಾಣಿಯೇ ದಾಳಿಮಾಡಿರಬೇಕು ಎಂದು ಭಾವಿಸಿ ಅಳುತ್ತಾ ಆರ್ಭಟಿಸುತ್ತಾ  ನನ್ನನ್ನು ಹುಡುಕಿ ಹೊತ್ತು ತಂದು ಬಯಲಲ್ಲಿ ಕೂರಿಸಿ ನಿಟ್ಟುಸಿರು ಬಿಟ್ಟರಾದರೂ ನನ್ನ ಅಳುಮುಂಜಿ ಕಂಡರೆ ಅಪ್ಪನ ಸಹಸ್ರ ನಾಮಾರ್ಚನೆಗೆ ಅವರು ಗುರಿಯಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲವಾದ್ದರಿಂದ ‘ಅಳಬೇಡವೇ ತಂಗಿ’ ಎಂದು ನನ್ನನ್ನು ಪುಸಲಾಯಿಸುತ್ತಲೇ ಕಮ್ಯುನಿಸ್ಟ್ ಗಿಡದ ಎಲೆಗಳನ್ನು ಜಜ್ಜಿ ನನ್ನ ಗಾಯಕ್ಕೆ ಹಿಂಡಿ ಏನೂ ಆಗಿಲ್ಲವೆಂಬಂತೆ ಮನೆಗೆ ಕರೆದೊಯ್ದಿದ್ದರು. ಯಾರ ದುರದೃಷ್ಟವೋ….!  ಒಟ್ಟು ರಾತ್ರಿಯಾಗುವ ಹೊತ್ತಿಗೆ ನನ್ನ ಕಾಲು ವಿಪರೀತ ಬಾತುಕೊಂಡು ಅಸಹ್ಯ ನೋವಿನಿಂದ ನನ್ನ ಚೀರಾಟ ನಿಲ್ಲದಾಗಿ ಕೊನೆಗೆ ಆಸ್ಪತ್ರೆಗೆ ಧಾವಿಸಿ ಬ್ಯಾಂಡೇಜು ಹಾಕಿಸಿ ಮರಳುವ ಹೊತ್ತಿಗೆ ಅಣ್ಣಂದಿರ ಕಿವಿಗಳ ತೂತು ಮುಚ್ಚಿಕೊಂಡಿದ್ದವು. ಮತ್ತೆ ನಾನು ನೆಟ್ಟಗಾಗಲು ತಗುಲಿದ್ದು ಒಟ್ಟು ಹನ್ನೆರಡು ದಿನಗಳು!!

© ರೈಹಾನಾ

ಟಿವಿ, ಮೊಬೈಲ್, ವಿಡಿಯೋ ಗೇಮುಗಳ ಹಾವಳಿ ಅಷ್ಟಾಗಿ ಧಾವಿಸಿರದ ಆ ಕಾಲದಲ್ಲಿ ಶಾಲಾ ರಜೆ ಬಂತೆಂದರೆ ಸಾಕು ನೆಂಟರಿಷ್ಟರ ಮಕ್ಕಳೆಲ್ಲಾ ನಮ್ಮಲ್ಲಿಗೆ ಬಂದು ಬೀಡು ಬಿಟ್ಟಿರುತ್ತಿದ್ದರು. ಮಧ್ಯಾಹ್ನದವರೆಗೆ, ಮನೆ ಹಿತ್ತಲಲ್ಲೇ ಇರುವ ದೊಡ್ಡ ಅಕೇಶಿಯಾ ಮರಕ್ಕೆ ಹಾಕಿದ ಬಾವಿಯ ಹಗ್ಗದಲ್ಲಿ ಉಯ್ಯಾಲೆ ಆಟ, ಪೆಟ್ಲಂಗೋವಿ, ಲಗೋರಿ, ಕ್ರಿಕೆಟ್ ಹೀಗೇ ಸಾಗಿದರೆ ನಡುವೆ ಬೀಳುವುದು-ಅಳುವುದು, ಗಲಾಟೆ-ಮುನಿಸು  ಸಾಮಾನ್ಯವಾಗಿತ್ತು. ಮತ್ತೆ ಮಧ್ಯಾಹ್ನದ ರಣ ಬಿಸಿಲು ಅಲ್ಪಸ್ವಲ್ಪ ಮಾಯವಾಗುವ ಹೊತ್ತಿಗೆ ಹಿರಿ-ಕಿರಿಯರೆನ್ನದೆ ಎಲ್ಲರೂ ನಾಗಬನದಲ್ಲಿ ಕಣ್ಣಾಮುಚ್ಚಾಲೆ ಆಡುತ್ತಿದ್ದದ್ದು ಯಾವ ವಿಡಿಯೋ ಗೇಮೂ ಗ್ಯಾಜೆಟ್ಗಳೂ ನೀಡಲಾರದಷ್ಟು ಮನರಂಜನೆ, ಸಂತೋಷ ನೀಡುತ್ತಿತ್ತು.

ದಟ್ಟ ಪೊದೆಗಳ ನಿಗೂಢ ಇರುಳು, ತರಗೆಲೆಗಳಿಂದ ಮುಚ್ಚಿದ ಗುಂಡಿ-ಕಣಿವೆಗಳು, ಮರದ ತುದಿಯ ರೆಂಬೆಗಳು, ಪೊಟರೆಗಳು ಇವೆಲ್ಲಾ ನಮ್ಮ ನೆಚ್ಚಿನ ಅಡಗುತಾಣಗಳಾಗಿದ್ದವು. ಹುಡುಕಿ-ಹುಡುಕಿ ಬಳಲಿ ಬೆಂಡಾದ ನಂತರ ಹುಡುಕಿಸಿಕೊಳ್ಳುವವರೂ ಕೂತಲ್ಲೇ ಬೇಸತ್ತು ಅಲ್ಲೇ ಇರುತ್ತಿದ್ದ ಯಾವುದಾದರೊಂದು ಗಿಡದ ಎಲೆಯನ್ನು ಕಿತ್ತು ಬೀಡಿಯಂತೆ ಸುರುಳಿ ಸುತ್ತಿ, ತುದಿಯನ್ನು ಬೆರಳಿನಿಂದ ಒತ್ತಿ ಪೀಪಿಯಂತೆ ಊದಿ ಶಬ್ದ ಬರಿಸಿ ನಮ್ಮ-ನಮ್ಮ ಅಡಗುತಾಣಗಳ ಸುಳಿವನ್ನು ನಾವೇ ನೀಡುತ್ತಿದ್ದದ್ದು ಆಟದ ಆಯಾಮವನ್ನೇ ಬದಲಾಯಿಸಿ ಇನ್ನಷ್ಟು ರೋಚಕಗೊಳಿಸುತ್ತಿತ್ತು.

ಈ ಭಯಂಕರ ಆಟದ ನಡುವೆ ಕೋತಿ, ನವಿಲು, ‌ಜಿಂಕೆ, ಹಾವುಗಳ ದರ್ಶನ ಸಾಮಾನ್ಯವಾಗಿರುತ್ತಿತ್ತಲ್ಲದೆ ಮರಳುವ ಹೊತ್ತಿಗೆ ಕೂದಲುಗಳೆಡೆಯಲ್ಲಿ ಹುಲ್ಲು-ಕಡ್ಡಿಗಳೂ, ಕೈ-ಕಾಲುಗಳ ತುಂಬಾ ಪರಚಿದ ಗಾಯಗಳೂ, ಸೊಳ್ಳೆಕಡಿತದ ಬೊಬ್ಬೆಗಳೂ, ಸೈಲೆಂಟಾಗಿ ಕಡಿದು ರಕ್ತ ಹೀರುವ ಉಣುಗುಗಳೂ ಇದ್ದೇ ಇರುತ್ತಿದ್ದವು.

© ರೈಹಾನಾ

ಹೀಗೊಮ್ಮೆ ಆಟದ ನಡುವೆ ‘ಚೇರೆಕಾಯಿ’ (ನಿಜವಾದ ಹೆಸರು ಗೊತ್ತಿಲ್ಲ) ಎಂಬ ಗಿಡವೊಂದನ್ನು ಹತ್ತಿ ಅದರಲ್ಲಿನ ಆಕರ್ಷಕವಾದ ಕೆಂಪು ಬಣ್ಣದ ಗೊಂಚಲು ಹೂಗಳನ್ನು ಕಿತ್ತ ಪರಿಣಾಮ ಮುಖ, ತುಟಿ, ಕಣ್ಣು, ಮೂಗೆಲ್ಲವೂ ಜೇನುನೊಣಗಳು ಕಡಿದಂತೆ ಅಸಹ್ಯವಾಗಿ ಬಾತುಕೊಂಡು ಥೇಟ್ ಈಗಿನ ಕಾರ್ಟೂನ್, ವ್ಯಂಗ್ಯ ಚಿತ್ರಗಳ ಪಾತ್ರಧಾರಿಗಳಾಗಿ ಪರಕಾಯ ಪ್ರವೇಶ ಮಾಡಿದ್ದೆವು. ಮನೆಗೆ ಬಂದ ಬಳಿಕ ಅದು ಯಾವುದೋ ವಿಷಯುಕ್ತ ಗಿಡವೆಂದು ಮನೆ ಹಿರಿಯರು ಹೇಳಿದಾಗ ಗೊತ್ತಾಯಿತು. ಅದರ ಬಣ್ಣಕ್ಕೆ ಅದರ ಕಾಯಿಯನ್ನೂ ಕಿತ್ತು ಹೊಟ್ಟೆಗಿಳಿಸಿಕೊಂಡಿದ್ದರೆ ಈ ಕಾಲಕ್ಕೆ ಮಣ್ಣಾಗಿ ಮರೆಯಾಗಿರುತ್ತಿದ್ದೆವೇನೋ…. ಅಂತೂ ಯಾರದೋ ಕರ್ಮಫಲಕ್ಕೆ ಅದನ್ನು ತಿನ್ನುವ ಗೋಜಿಗೆ ಹೋಗದೆ ಬದುಕಿಕೊಂಡೆವು.

 ನನಗೆ ಬಾಲ್ಯದಿಂದಲೂ ಧೈರ್ಯ-ಸಾಹಸಕ್ಕೆ ಕೊರತೆಯೇನೂ ಇರದ ಕಾರಣ ಸ್ಥಳ ಎಂತದ್ದೇ ಇರಲಿ ಕಾಲಿಡಲು ಹಿಂದೇಟು ಹಾಕುತ್ತಿರಲಿಲ್ಲ.  ಆದರೂ ನಾನು ಯಾವ ಗ್ಯಾರಂಟಿಯಲ್ಲಿ ಆ ದಟ್ಟ ಕಾಡಿನ ತರಗೆಲೆಗಳ ಗುಂಡಿಗಳಿಗೆ ಹಿಂದೆ-ಮುಂದೆ ಯೋಚಿಸದೆ ಇಳಿದು ಕೂರುತ್ತಿದ್ದೆನೋ…..ಆ ದೇವನೇ ಬಲ್ಲ! ಈಗ ನೆನೆದಷ್ಟೂ ರೋಮಾಂಚನಗೊಳ್ಳುತ್ತೇನೆ. ಇವತ್ತೇನಾದರೂ ಅಂತಹ ಸಂದರ್ಭ ಒದಗಿ ಬಂದರೆ ವಿಷ ಜೀವಿ-ಜಂತುಗಳು ಇಲ್ಲದಿರುವುದು ಖಾತ್ರಿಯಾಗದೆ ಖಂಡಿತ ನಾನು ಒಂದು ಹೆಜ್ಜೆಯೂ ಮುಂದಿಡಲಾರೆ. ಅಂದು ನನಗಿದ್ದುದು ಧೈರ್ಯವೋ  ಹುಚ್ಚೋ ತಿಳಿಗೇಡಿತನವೋ ಕಾಣೆ……ಅಂತೂ ಈಗ ಮಾತ್ರ ಹಿಂದೆ ಇದ್ದ ಚುರುಕು, ಗಡುಸು ಯಾವುದೂ ನನಗಿಲ್ಲವೆನ್ನುವುದು ನಿಜ. ಹಾಗೆಂದು ನಾನು ಹೆದರು ಪುಕ್ಕಲಂತೂ ಅಲ್ಲವೇ ಅಲ್ಲ ಎಂಬುದನ್ನು ನನ್ನನ್ನು ಬಲ್ಲವರು ಚೆನ್ನಾಗಿ ಬಲ್ಲರು.

ಈ ಪ್ರಪಂಚದಲ್ಲಿ ಪ್ರಕೃತಿಗಿಂತಲೂ ರಮಣೀಯ, ರೋಚಕ, ನಿಗೂಢವಾದದ್ದು ಯಾವುದೂ ಇರಲು ಸಾಧ್ಯವಿಲ್ಲ ಎಂಬುವುದು ನನ್ನ ನಂಬುಗೆ. ನನ್ನ ಅನುಭವಗಳೇನೂ ಈ ವಾದಕ್ಕೆ ಇಂಬು ನೀಡುವಂತೆ ಅನ್ನಿಸದಿದ್ದರೂ ‘ಕರ್ವಾಲೊ’ ದಂತಹ ಕಾದಂಬರಿಗಳೂ, ‘ನಾಗರಹೊಳೆ’ಯಂತಹ ಚಿತ್ರಗಳೂ ನನ್ನ ಸಮರ್ಥನೆಗೆ ಖಂಡಿತ ಶಕ್ತಿ ನೀಡುತ್ತವೆ.

ಒಂದರ್ಥದಲ್ಲಿ ನನ್ನ ಬಾಲ್ಯ ಬಣ್ಣ-ಬಣ್ಣಗಳಿಂದ ಬೆಳಗಲು ಪ್ರಕೃತಿಯು ಬಹುಮುಖ್ಯ ಕಾರಣವೆನ್ನಬಹುದು. ರಾತ್ರಿ-ಹಗಲೆನ್ನದೆ ಸ್ಕ್ರೀನಿನ ಮುಂದೆಯೇ ಕಾಲ ಕಳೆಯುವ ಈಗಿನ ಮಕ್ಕಳ ಬರಡಾದ ಬಾಲ್ಯಕ್ಕಿಂತ ಅದೆಷ್ಟೋ ‌ಭಿನ್ನವಾಗಿ ನಮ್ಮ ಬಾಲ್ಯವು ಹಸಿರು-ಹಸಿರಾಗಿ ಕಂಗೊಳಿಸಿದ್ದು ಹಸಿರ ಒಡನಾಟದಿಂದಲೇ. ನಾಗಬನ ಮಾತ್ರವಲ್ಲದೆ, ಒಂದೆರೆಡು ಬಾರಿ ನನ್ನ ಚಿಕ್ಕಮ್ಮನ ಮನೆ ಸಮೀಪದ ಸಣ್ಣ ತೋಡಿನಲ್ಲಿ ಈಜಾಡಲು ಹೊರಟು, ಮೀನು ಹಿಡಿದು ಬಾಟಲಿಗೆ ತುಂಬಿ ಮನೆಗೆ ತಂದದ್ದೂ ಸಹ ನನ್ನ ಬಾಲ್ಯದ ಸುಂದರ ನೆನಪುಗಳಲ್ಲೊಂದು. ನಂತರದ ಮೂರು ದಿನಗಳು ಜ್ವರದಿಂದ ಮಲಗಿದ್ದೂ ಸಹ ಇದರೊಂದಿಗೆ ಹೇಳಲೇಬೇಕು.

ನನ್ನದು ತೀರಾ ಹಳೆಯದಾದ ಬಾಲ್ಯವೇನೂ ಅಲ್ಲದಿದ್ದರೂ ನಾನು ಪರಿಚಯಿಸಿದ  ‘ನಾಗಬನ’ ಎಂಬ ಸ್ಥಳದಲ್ಲಿನ ‘ಬನ’ವೆಲ್ಲಾ ಮಾಯವಾಗಿ ಈಗ ನಾಲ್ಕಾರು ಮನೆಗಳು ತಲೆಯೆತ್ತಿ ನಿಂತಿದೆ. ನಾಗನ ಕಟ್ಟೆಯೊಂದು ಬಿಟ್ಟರೆ ಬೇರೇನೂ ಅಲ್ಲಿ ಮೊದಲಿನಂತೆ ಕಾಣಸಿಗುವುದಿಲ್ಲ. ಹಲವಾರು ಸುಂದರ, ಸಾಹಸಮಯ, ರೋಚಕ ನೆನಪುಗಳನ್ನು ಜೀವಂತವಾಗಿರಿಸಿದ ನಮ್ಮ ನಾಗಬನವೇನೋ ಅಳಿಯಿತು ನಿಜ; ಇನ್ನು ಆ ಹೆಸರಾದರೂ ಉಳಿಯಲಿ -ಎಂದೇ ನನ್ನ ಪ್ರಾರ್ಥನೆ.

© ರೈಹಾನಾ
© ರೈಹಾನಾ

ಲೇಖನ: ರೈಹಾನಾ
                     ದಕ್ಷಿಣ ಕನ್ನಡ ಜಿಲ್ಲೆ

Spread the love

Leave a Reply

Your email address will not be published. Required fields are marked *

error: Content is protected.