ಪರೋಪಕಾರಿ ಹಿಮಕರಡಿ…
© Nilesh Shiragave
ನನಗಿನ್ನೂ ನೆನಪಿದೆ. ಹೊಲದಲ್ಲಿ ಅಜ್ಜಿ ಸುಮ್ಮನೆ ಕೂರದೆ ಏನೋ ಒಂದು ಕೆಲಸ ಮಾಡುತ್ತಿದ್ದರು. ಸಣ್ಣ ಸಣ್ಣ ಬಂಡೆ ಕಲ್ಲುಗಳಿಂದ ಕೂಡಿದ್ದ ಜಾಗದಲ್ಲೂ ಸಹ ಮಣ್ಣನ್ನು ತೋಡಿ ಹೂವಿನ ಬೀಜ, ಅರಳಿನ ಬೀಜ, ಮರಗೆಣಸು ಹೀಗೆ ಯಾವುದು ಸಾಧ್ಯವೋ ಅದನ್ನು ಬೆಳೆಯಲು ಶ್ರಮಿಸುತ್ತಿದ್ದರು. ಹಾಗೊಮ್ಮೆ ಕೆಲಸ ಮಾಡುವಾಗ, ಹೊಲದಲ್ಲಿ ಕೆಲಸ ಮಾಡುತ್ತಿದ್ದ ಎಲ್ಲರಿಗೂ ಊಟ ತೆಗೆದುಕೊಂಡು ಹೋಗುವ ಕೆಲಸ ನನಗೆ ಬಂತು. ನಾನೂ ತೆಗೆದುಕೊಂಡು ಹೋದೆ. ತೆಗೆದುಕೊಂಡು ಹೋದ ಸ್ವಲ್ಪ ಸಮಯದ ನಂತರ ಎಲ್ಲರೂ ಊಟಕ್ಕೆ ಕುಳಿತರು. ಅದರಲ್ಲಿ ಅಕಸ್ಮಾತಾಗಿ ನನ್ನ ಅಜ್ಜಿಯ ಊಟದ ಶೈಲಿಯನ್ನು ಸುಮ್ಮನೆ ಹಾಗೆ ಗಮನಿಸುತ್ತಿದ್ದೆ. ಅವರಿಗೆ ಅನ್ನಕ್ಕಿಂತ ಮುದ್ದೆ ಎಂದರೆಯೇ ಅಚ್ಚು ಮೆಚ್ಚು. ಮುದ್ದೆ-ಸಾರು ಹಾಕಿಸಿಕೊಂಡು ನಂತರ ಇನ್ನೇನು ಊಟ ಶುರು ಮಾಡುತ್ತಾರೆ ಎನ್ನುವಷ್ಟರಲ್ಲಿ ಒಂದು ತುತ್ತು ಮುದ್ದೆ ಮುರಿದು ಹಣೆಯ ಬಳಿ ಹಿಡಿದು, ಯಾವುದೋ ದೇವರನ್ನು ನೆನೆದು ತಟ್ಟೆಯ ಬದಿಯಲ್ಲಿ ಇಟ್ಟರು. ಆ ನಂತರ ಅವರು ಊಟ ಮಾಡಲು ಶುರು ಮಾಡಿದರು. ಇದನ್ನೆಲ್ಲಾ ನೋಡುತ್ತಿದ್ದ ನನಗೆ ಕುತೂಹಲ; ಅದಕ್ಕೇ ಕೇಳಿಬಿಟ್ಟೆ. ಅದಕ್ಕೆ ಅಜ್ಜಿ ಅಂದಳು ‘ಯಾವ್ದೋ ನಾಯಿನೋ, ಕಾಗೆನೋ ತಿಂತದೆ ಮಗ’ ಅಂದರು. ಆದರೂ ಇಷ್ಟು ಆಹಾರ ಅವಕ್ಕೆ ಸಾಕೇ? ಎಂಬ ಪ್ರಶ್ನೆ ಅಂದು ನನ್ನ ತಲೆಯಲ್ಲಿಯೇ ಉಳಿಯಿತು. ಈಗ ಅನ್ನಿಸುತ್ತದೆ; ಸಾಕಾಗಬಹುದು, ಏಕೆಂದರೆ ಹೀಗೆ ಮಾಡುತ್ತಿದ್ದದ್ದು ಕೇವಲ ನನ್ನ ಅಜ್ಜಿ ಮಾತ್ರವಲ್ಲ, ನನ್ನ ತಾತ, ಅಪ್ಪ, ಅಮ್ಮ ಊಟ ಮಾಡುವ ಮುನ್ನ ಒಂದು ತುತ್ತು ತಟ್ಟೆಯ ಬದಿಗಿಟ್ಟು ದೇವರನ್ನು ನೆನೆದು ಊಟ ಶುರು ಮಾಡುತ್ತಿದ್ದರು. ಈಗ ನನ್ನ ಅಪ್ಪ-ಅಮ್ಮರ ಈ ಹವ್ಯಾಸ ಕಾಲಕ್ಕೆ ತಕ್ಕಂತೆ ಬದಲಾಗಿಬಿಟ್ಟಿದೆ ಎದು ಕಾಣುತ್ತದೆ. ಆದರೆ ಅಂದಿನ ಈ ಅಭ್ಯಾಸ ಒಂದೆರಡು ಜೀವಿಗೆ ತನ್ನ ಆಹಾರ ಒದಗಿಸುವಲ್ಲಿ ನೆರವಾಗುತ್ತಿತ್ತು ಎನ್ನುವುದು ನಾವಿಲ್ಲಿ ಗಮನಿಸಬೇಕಾದ ವಿಚಾರ. ಅದರ ಜೊತೆಗೆ ನನ್ನ ಚಿಕ್ಕ ವಯಸ್ಸಿನಲ್ಲಿ ಅಮ್ಮ ಸಗಣಿಯಿಂದ ಸಾರಿಸುತ್ತಿದ್ದ ನಮ್ಮ ಹಳೆ ಮನೆಯ ಬಾಗಿಲಲ್ಲಿ ಕಾಲಕಾಲಕ್ಕೆ ಕಪ್ಪು ಇರುವೆಗಳು ಬರುತ್ತಿದ್ದವು. ಅದಕ್ಕೆ ಅಮ್ಮ ಅವುಗಳ ಗೂಡಿನ ಬಳಿ ಸ್ವಲ್ಪ ಸಕ್ಕರೆ ಹಾಕಿ ಹೀಗೆನ್ನುತ್ತಿದ್ದರು ‘ಇವು ಕಚ್ಚಲ್ಲ ಮಗಾ, ದೇವರ ಇರುವೆ ಇವು’. ಇವರ ನಂಬಿಕೆಗಳ ಪರಿ ಬೇರೆ ಬೇರೆಯಾದರೂ ಉದ್ದೇಶ ಮಾತ್ರ ಇನ್ನೊಂದು ಜೀವಿಗೆ ತನ್ನ ಕೈಲಾದ ಸಹಾಯ ಮಾಡುವುದಾಗಿತ್ತು. ಇದನ್ನು ನೆನೆಸಿಕೊಂಡರೆಯೇ, ಕೆಲವು ನಮ್ಮ ನಂಬಿಕೆಗಳು ಮೂಢವಾಗಿ ಕಂಡರೂ ಇನ್ನೊಂದು ಜೀವಿಗೆ ಆಸರೆಯಾಗಿತ್ತು. ನಾವೂ ಇದ್ದೀವಿ ಈಗ…

ಈ ವಿಚಾರ ಈಗ ಇಲ್ಲಿ ಏಕೆ? ಎಂದರೆ, ತಿಳಿದೋ ತಿಳಿಯದೆಯೋ ಆರ್ಕಟಿಕ್ ನಲ್ಲಿ ಕಾಣುವ ಹಿಮಕರಡಿಯೂ ಸಹ ಹೀಗೆ ತಾನು ಬೇಟೆಯಾಡಿದ ಪ್ರಾಣಿಯ ಶೇಕಡಾ 30 ಭಾಗವನ್ನು ಬೇರೆ ಜೀವಿಗಳು ತಿನ್ನಲಿಕ್ಕೆ ಹಾಗೇ ಬಿಟ್ಟು ಹೋಗುತ್ತವಂತೆ. ಇವುಗಳ ಈ ಅಭ್ಯಾಸದಿಂದ ಅಲ್ಲಿನ ತೀಕ್ಷ್ಣ ವಾತಾವರಣದಲ್ಲಿ ಬೇಟೆಯಾಡಲು ಕಷ್ಟಪಡುವ ಎಷ್ಟೋ ಜೀವಿಗಳು ಇದರ ಪ್ರಯೋಜನ ಪಡೆದು ತಮ್ಮ ತಮ್ಮ ಹೊಟ್ಟೆ ತುಂಬಿಸಿಕೊಳ್ಳುತ್ತಿವೆಯಂತೆ. ಹಿಮಕರಡಿಗಳು ಗೊತ್ತಿಲ್ಲದೇ ಮಾಡುವ ಈ ಕೆಲಸದಿಂದ ಕೆಲವು ಲಕ್ಷ ಕೆ. ಜಿ. ಗಳಷ್ಟು ಆಹಾರವನ್ನು ಪರ ಜೀವಿಗಳಿಗೆ ಇವುಗಳು ಒದಗಿಸುತ್ತಿವೆ ಎಂದು ಹೇಳುತ್ತದೆ ಈಗ ಹೇಳಲು ಹೊರಟಿರುವ ಸಂಶೋಧನೆ.

ಇದರ ಅನುಸಾರ ಹೇಳುವುದಾದರೆ ಸುಮಾರು 1930 ರಿಂದಲೂ ಮಾಡಿರುವ ಗಮನಿಕೆಗಳನ್ನು ಪರಿಗಣಿಸಿ ಹೇಳುವುದಾದರೆ ಹಿಮಕರಡಿಗಳು ತಾವು ಬೇಟೆಯಾಡಿದ ಒಂದಷ್ಟು ಭಾಗವನ್ನು ತಿನ್ನದೆ ಹಾಗೇ ಬಿಟ್ಟು ಹೋಗುತ್ತವೆ ಎಂದು ತಿಳಿದಿತ್ತು. ಆದರೆ ಅದರ ಬಗ್ಗೆ ನಿಖರವಾಗಿ ಅಧ್ಯಯನ ಮಾಡುವ ಪ್ರಯತ್ನ ಯಾರೂ ಮಾಡಿರಲಿಲ್ಲ. ಆಗ ಮುಂದೆ ಬಂದದ್ದು ನಿಕೊಲಸ್ ಪಿಲ್ ಫೊಲ್ಡ್ ಎನ್ನುವ ಮಾಂಸಾಹಾರಿ ಪ್ರಾಣಿ ಶಾಸ್ತ್ರಜ್ಞ. ಇವರು ಆರ್ಕಟಿಕ್ ನಲ್ಲೇ 15 ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಹಿಮಕರಡಿಗಳ ಚಲನವಲನವನ್ನು ಗಮನಿಸುತ್ತಿದ್ದ ಅವರು ಹೀಗೆ ಗಮನಿಸುವಾಗ ಅವುಗಳ ಆಹಾರ ಶೈಲಿಯನ್ನು ಸಂಶೋಧನೆಯಾಗಿ ಮಾಡಲು ಮುಂದಾದರು. ಅದರಲ್ಲಿ ಅವರು ಗಮನಿಸಿದ್ದು, ಹಿಮ ಕರಡಿಗಳು ಹೆಚ್ಚಾಗಿ ಬೇಟೆಯಾಡುವುದು ಸೀಲ್ ಗಳನ್ನು. ಜೊತೆಗೆ ವರ್ಷದ ಒಂದು ಸಮಯದಲ್ಲಿ ಮಾತ್ರ ಸ್ವಲ್ಪ ಹೆಚ್ಚಾಗಿ ಬೇಟೆಯಾಡುತ್ತವೆಯಂತೆ. ಅಂದರೆ ಸುಮಾರು 3-5 ದಿನಕ್ಕೊಮ್ಮೆ ಒಂದು ಸೀಲ್ ಅನ್ನು ಬೇಟೆಯಾಡುವುದು. ಅಂದರೆ ಒಂದು ಸಾಮಾನ್ಯ ಹಿಮಕರಡಿ ಬೇಟೆಯಾಡಿ 70% ಭಾಗ ತಿಂದು 30% ಭಾಗ ಬಿಟ್ಟು ಹೋಗುವುದಾದರೆ, ವರ್ಷಕ್ಕೆ ಸುಮಾರು 1000 ಕೆ. ಜಿ. ಆಹಾರವನ್ನು ಹಿಂದೆ ಬಿಟ್ಟು ಬೇರೆ ಜೀವಿಗೆ ನೆರವಾದಂತೆ ಆಯಿತು. ಆರ್ಕಟಿಕ್ ನಲ್ಲಿ ಸುಮಾರು 26000 ಹಿಮಕರಡಿಗಳನ್ನು ಗುರುತಿಸಲಾಗಿದೆ ಅಂದರೆ ಅದರ ಅನುಸಾರ ವರ್ಷಕ್ಕೆ 300 ಕೆ. ಜಿ. ಆಹಾರ ಒಂದು ಕರಡಿ ಬಿಡುವುದಾದರೆ ಎಲ್ಲಾ ಸೇರಿ ಬೇರೆ ಜೀವಿಗಳು ಬದುಕಲು ಸುಮಾರು 78 ಲಕ್ಷ ಕೆ. ಜಿ. ಗಳಷ್ಟು ಆಹಾರವನ್ನು ಈ ಹಿಮಕರಡಿಗಳೇ ಒದಗಿಸಿದಂತಾಯಿತು.

ಇದರ ಪ್ರಯೋಜನ ಪಡೆಯುವವರಲ್ಲಿ ಆರ್ಕಟಿಕ್ ನರಿ, ಗಲ್ ಪಕ್ಷಿಗಳು, ಕಾಗೆ ಜಾತಿಯ(ರೇವನ್ಸ್) ಪಕ್ಷಿಗಳು ಮತ್ತು ಇತರ ಹಿಮಕರಡಿಗಳೂ ಆಗಿವೆಯಂತೆ. ಆದರೆ ಇಲ್ಲಿ ಜಾಗತಿಕ ತಾಪಮಾನದಿಂದ ಕ್ಷೀಣಿಸುತ್ತಿರುವ ಹಿಮ ಹಾಗೂ ಆಹಾರ ಒದಗಿಸುವ ದೈತ್ಯ ಹಿಮಕರಡಿಗಳ ಸಂಖ್ಯೆಯೂ ಕ್ಷೀಣಿಸುತ್ತಿರುವುದು ಚಿಂತಿಸಬೇಕಾದ ವಿಷಯ. ಇದರ ಪರಿಣಾಮವಾಗಿ ವಿಜ್ಞಾನಿಗಳ ಲೆಕ್ಕದ ಪ್ರಕಾರ ಸುಮಾರು 3,23,000 ಕೆ. ಜಿ. ಯಷ್ಟು ಇಂತಹ ಆಹಾರ ಪ್ರತೀ ವರ್ಷ ಕ್ಷೀಣಿಸುತ್ತಿದೆಯಂತೆ. ಅದರ ನೇರ ಪರಿಣಾಮ ಅಲ್ಲಿ ಇದನ್ನೇ ನಂಬಿಕೊಂಡು ಬದುಕುತ್ತಿರುವ ಎಷ್ಟು ಜೀವಿಗಳ ಮೇಲೆ ಬೀರುತ್ತದೆಂದು ನೀವೇ ಊಹಿಸಿ.

ಇದನ್ನೆಲ್ಲಾ ಕೇಳಿದ ಮೇಲೆ ಇದೊಂದು ವೈಜ್ಞಾನಿಕ ವಿಚಾರವಷ್ಟೇ ಎಂದು ಬಿಡದೇ, ಸ್ವಲ್ಪ ಸೂಕ್ಷ್ಮವಾಗಿ ಗಮನಿಸಿದರೆ, ಪ್ರಾಣಿಗಳೇ ತಮಗೆ ತಿಳಿದೋ ತಿಳಿಯದೆಯೋ ಬೇರೊಂದು ಜೀವಿಗೆ ಆಸರೆಯಾಗುತ್ತಿರುವಾಗ, ‘ಪರೋಪಕಾರಾರ್ಥಂ ಇದಂ ಶರೀರಂ’ ಎಂಬ ಮಂತ್ರವನ್ನು ಜಪಿಸುವ ನಾವು ನಮ್ಮ ನಡವಳಿಕೆಗಳಲ್ಲಿ ಇತರ ಜೀವಿಗಳ ಬದುಕನ್ನು ಗೌರವಿಸುವ ಗುಣಗಳು ಎಷ್ಟಿರಬೇಕು? ಒಂದೇ ಒಂದು ಬಾರಿ ಯೋಚಿಸಿ ನೋಡೋಣ.
Source: www.snexplores.org

ಲೇಖನ: ಜೈಕುಮಾರ್ ಆರ್.
ಬೆಂಗಳೂರು ನಗರ ಜಿಲ್ಲೆ

ನನ್ನ ಇಂಜಿನಿಯರಿಂಗ್ ಅನ್ನು ಮೆಕಾನಿಕಲ್ ಆಗಿ ಮುಗಿಸಿ, ಈಗ ರಾಮಕೃಷ್ಣ ಮಿಷನ್ ಶಿವನಹಳ್ಳಿಯ ವಿವಿಧ ಯೋಜನೆಗಳಲ್ಲಿ ಭಾಗಹಿಸುತ್ತಾ, ನನ್ನ ಪ್ರಕೃತಿಯ ಬಗೆಗಿನ ಒಲವನ್ನು ಅನುಭವಿಸಲು ಡಬ್ಲ್ಯೂ . ಸಿ .ಜಿ. ಮತ್ತು ಕಾನನದ ಬೆನ್ನೇರಿದ್ದೇನೆ.