ಹೂವೇ,…
ಹೂವೇ,
ಚೆಂದದಿ ಮುಗುಳ್ನಗೆಯ ಬೀರುತಲಿರುವೆ,
ನಿನ್ನಂತೆ ನನಗಿರುವ ಆಸೆ ತಂದಿರುವೆ,
ಹರಡುತಿರು ಹೀಗೆ ನಿನ್ನೊಡಲ ಕಂಪು,
ನೋಡುಗರ ಕಣ್ಗಳಿಗೆ ಅದುವೇ ತಂಪು.
ಹೂವೇ,
ಹಕ್ಕಿ, ಕೀಟಗಳಿಗೆ ಮಕರಂದ ನೀ ನೀವೆ,
ಗಿಡದ ಸೌಂದರ್ಯಕೆ ನೀನೇ ಒಡವೆ,
ನಾನಾ ಬಣ್ಣಗಳಲಿ ನೀ ಎಲ್ಲರ ಸೆಳೆವೆ,
ತಾಜಾತನಕೆ ನೀ ಹೆಸರಾಗಿರುವೆ.
ಹೂವೇ,
ಕಾಯಾಗಿ, ಹಣ್ಣಾಗಿ ಮತ್ತೆ ಹುಟ್ಟಿ ಬರುವೆ,
ನಿಸರ್ಗದ ಅತಿ ಮುಖ್ಯ ಭಾಗವಾಗಿರುವೆ,
ಮೃದುತನಕೆ ಕೋಮಲತೆಗೆ ನೀನೊಂದು ಸಂಕೇತ,
ಚಿಟ್ಟೆ, ದುಂಬಿಗಳು ನಿನಗಾಗಿ ಹಾಡುವವು ಸಂಗೀತ.
ಹೂವೇ,
ಕಲಿಸು ನನಗೆ ನಿನ್ನಂತೆ ಇರಲು,
ಎಲೆ ಮರೆಯ ಕಾಯಾಗಿ ವಿನಯದಿಂದಿರಲು,
ಬೆಳಕಿನೆಡೆಗೆ ತಲೆ ಎತ್ತಿ ನಿಲ್ಲಲು,
ಕಾಲಚಕ್ರಕೆ ಹೊಂದಿಕೊಂಡು ನಡೆಯಲು.
– ದೀಪಿಕಾಬಾಯಿ ಎನ್..
ಬೆಂಗಳೂರು ಜಿಲ್ಲೆ
M.Sc ( ಗಣಿತ ) ಮುಗಿಸಿ, ನನ್ನಿಷ್ಟ ದಂತೆ ಶಿಕ್ಷಣ ವೃತ್ತಿ ಆರಿಸಿಕೊಂಡು, ಸರ್ಕಾರಿ ಶಾಲಾ ಮಕ್ಕಳಿಗೆ ಸೃಜನಾತ್ಮಕ ಕಲಿಕೆಗೆ ಪೂರಕವಾಗಲು ರಾಮಕೃಷ್ಣ ಮಿಷನ್ ಶಿವನಹಳ್ಳಿ ಯವರು ಆಯೋಜಿಸಿರುವ ಪ್ರೊಜೆಕ್ಟ್ ಮಾಡೂ ನಲ್ಲಿ ಕೆಲಸ ಮಾಡುತ್ತಿದ್ದೇನೆ.
ವಿವಿಧ ಶಾಲೆಯ ಮಕ್ಕಳೊಂದಿಗೆ ಚಟುವಟಿಕೆಗಳ ಮೂಲಕ ವಿಜ್ಞಾನ ಮತ್ತು ಗಣಿತದ ವಿಷಯಗಳನ್ನು ಚರ್ಚಿಸುವುದು ನನ್ನ ವೃತ್ತಿ ಮತ್ತು ಪ್ರವತ್ತಿ ಕೂಡ ಹೌದು .ಚಿಕ್ಕ ಕಥೆಗಳು ಮತ್ತು ಕವನಗಳು ಬರೆಯುವುದು ,ಚಿತ್ರಕಲೆ ನನ್ನ ಹವ್ಯಾಸ ಗಳು.
ಚಿಕ್ಕ ವಯಸ್ಸಿನಿಂದ ಬೆಂಗಳೂರಿನಲ್ಲೆ ಬೆಳೆದ ನನಗೆ ಕಾಡು ಮತ್ತು ಕಾಡು ಪ್ರಾಣಿಗಳ ಬಗ್ಗೆ ಹೆಚ್ಜ್ಚಿನ ಜ್ಞಾನ ಇರಲಿಲ್ಲ. ಆದರೆ ಈಗ ಪರಿಸರ ಕಾಳಜಿ ಹೊಂದಿರುವ ಕೆಲವು ಗೆಳೆಯರೊಂದಿಗೆ ಸೇರಿ ನನಗು ಪ್ರಕೃತಿ ಯ ಬಗ್ಗೆ ಹೆಚ್ಚು ತಿಳಿಯುವ ಕುತೂಹಲ ಬಂದಿದೆ. ಪರ್ವತಾರೋಹಣ, ಪಕ್ಷಿ ವೀಕ್ಷಣೆ, ಛಾಯಗ್ರಹಣಗಳಲ್ಲಿ ನನ್ನನ್ನು ತೊಡಗಿಸಿಕೊಳ್ಳುವುದು ನನಗಿಷ್ಟ .