ಮಾಸ ವಿಶೇಷ – ಆಲದ ಮರ
© ಅಶ್ವಥ ಕೆ ಎನ್., ಆಲದ ಮರ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ
ಸಾಮಾನ್ಯ ಹೆಸರು: Banian tree
ವೈಜ್ಞಾನಿಕ ಹೆಸರು : Ficus bengalensis
ಆಲದ ಮರ ಎಂದಾಕ್ಷಣ ಬಹುತೇಕ ಮಂದಿಗೆ ಬಾಲ್ಯದಲ್ಲಿ ಆಲದ ಮರದ ಬಿಳಲುಗಳು ಹಿಡಿದು ಜೋಕಾಲಿ ಆಡಿದ ನೆನಪು ಬರುತ್ತದೆ. ಆಲದ ಮರವು ಭಾರತದ ರಾಷ್ಟ್ರೀಯ ಮರ. ಇದು ಫೈಕಸ್ (Ficus) ಕುಲದ ಒಂದು ಮರವಾಗಿದ್ದು, ಫೈಕಸ್ ಕುಲದಲ್ಲಿ ವಿಶ್ವದಾದ್ಯಂತ ಸುಮಾರು 800 ಪ್ರಭೇದದ ಮರಗಳನ್ನು ಕಾಣಬಹುದು. ನಯವಾದ ಬೂದು ಮಿಶ್ರಿತ ಬಿಳಿ ಬಣ್ಣದ ತೊಗಟೆಯನ್ನು ಹೊಂದಿರುವ ಆಲದ ಮರವು ಸರಳ ಎಲೆ ವಿನ್ಯಾಸವನ್ನು ಒಳಗೊಂಡಿದೆ. ಈ ಮರದ ಎಲೆಯ ಮೇಲ್ಭಾಗವು ಕಡು ಹಸಿರು ಬಣ್ಣದಿಂದ ಕೂಡಿದ್ದು, ಎಲೆಯ ಮತ್ತೊಂದು ಭಾಗ ತಿಳಿ ಹಸಿರು ಬಣ್ಣದಿಂದ ಕೂಡಿರುತ್ತದೆ ಹಾಗೂ 10-15 ಸೆಂ. ಮೀ. ಉದ್ದ 6-9 ಸೆಂ. ಮೀ. ಅಗಲವಿರುತ್ತದೆ. ಮರದಲ್ಲಿ ಹೂಗಳು ನೋಡಲಿಕ್ಕೆ ಸಿಗುವುದಿಲ್ಲ ಏಕೆಂದರೆ ನಾವು ಕಾಣುವ ಕೆಂಪು ಬಣ್ಣದ ಹಣ್ಣುಗಳು ಹೂವುಗಳನ್ನು ತನ್ನಲ್ಲಿ ಅಡಗಿಸಿಕೊಂಡಿರುತ್ತವೆ.
ಆಲದ ಮರವು ಸ್ರವಿಸುವ ಹಾಲನ್ನು ನೋವು ನಿವಾರಕವಾಗಿ ಬಳಸಲಾಗುತ್ತದೆ ಹಾಗೂ ಮರದ ತೊಗಟೆಯನ್ನು ಮಧುಮೇಹ ಕಾಯಿಲೆಗೆ ಔಷಧಿಯಾಗಿ ಆಯುರ್ವೇದದಲ್ಲಿ ಉಪಯೋಗಿಸುತ್ತಾರೆ. ಈ ಮರದ ಎಲೆಗಳನ್ನೂ ಸಹ ಆಯುರ್ವೇದದಲ್ಲಿ ಉಪಯೋಗಿಸುವ ಉದಾಹರಣೆಗಳಿವೆ.