ಹಾರಾಡುವ ಇಂಜಿನಿಯರ್‍ಗಳು

ಹಾರಾಡುವ ಇಂಜಿನಿಯರ್‍ಗಳು

© ಅಭಿನಂದನ್ ಬಿ. ಎ

ನಾವು ನಮ್ಮ ಸುತ್ತ-ಮುತ್ತಲಿನ ಪರಿಸರದಲ್ಲಿ ನಮ್ಮಂತೆ ಬದುಕುವ ಅನೇಕ ಜೀವಿಗಳನ್ನು ನೋಡುತ್ತೇವೆ. ನಮ್ಮ ಹಾಗೆ ಈ ಜೀವಿಗಳೂ ಸಹ ತಮ್ಮ ದಿನನಿತ್ಯದ ಚಟುವಟಿಕೆಗಳಲ್ಲಿ ತಲ್ಲೀನರಾಗಿರುತ್ತವೆ. ಅದಲ್ಲದೇ ಅವುಗಳ ಕಾರ್ಯ ಚಟುವಟಿಕೆಯಲ್ಲಿ ಕಾಲ ಕಾಲಕ್ಕೆ ಬದಲಾವಣೆಯನ್ನೂ ಸಹ ಗಮನಿಸಬಹುದು. ಅದರಲ್ಲಿ ಗೂಡು ನಿರ್ಮಿಸುವಿಕೆಯೂ ಒಂದು. ನಾವು ಹೇಗೆ ವಿವಿಧ ಆಕಾರ, ಬಣ್ಣ ಮತ್ತು ಗಾತ್ರಗಳಲ್ಲಿ ಮನೆಗಳನ್ನು ನಿರ್ಮಿಸುತ್ತೇವೋ ಹಾಗೆಯೇ ಪಕ್ಷಿಗಳೂ ಸಹ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಹತ್ತು ಹಲವು ರೀತಿಯ ಗೂಡುಗಳನ್ನು ನಿರ್ಮಿಸುತ್ತವೆ. ಮೊಟ್ಟೆ ಮರಿಗಳಿಗೆ ಹಾನಿಯಾಗದಂತೆ ಈ ಗೂಡು ನಿರ್ಮಿಸುವ ಕಲೆ ವಂಶ ಪಾರಂಪರ್ಯವಾಗಿ ಬಂದಿರುವುದು ಒಂದು ಅದ್ಭುತವೇ ಸರಿ. ಒಂದು ಪಕ್ಷಿ ದೊಡ್ಡ ಗೂಡು ಕಟ್ಟಿದರೆ, ಮತ್ತೊಂದು ಪಕ್ಷಿ ಚಿಕ್ಕದಾದ ಗೂಡನ್ನು ಕಟ್ಟುವ ಪರಿಣಿತಿಯನ್ನು ಹೊಂದಿರುವ ಹಕ್ಕಿಗಳು ಯಾವ ಇಂಜಿನಿಯರ್ಗೂ ಕಡಿಮೆಯಿಲ್ಲ. ಪಕ್ಷಿಗಳು ಕೇವಲ ಗೂಡು ನಿರ್ಮಿಸುವುದರಲ್ಲಿ ಮಾತ್ರವಲ್ಲ, ಗೂಡು ನಿರ್ಮಿಸುವ ಸ್ಥಳದ ಪರಿಶೀಲನೆ ಮತ್ತು ತಮ್ಮ ಮರಿಗಳ ಪಾಲನೆ-ಪೋಷಣೆ ಹಾಗೂ ರಕ್ಷಣೆಗೆ ಬೇಕಾದ ವಸ್ತುಗಳನ್ನು ಹುಡುಕಿ ತರುವುದರಲ್ಲಿ ಸಹ ನಿಸ್ಸೀಮರು. ಇವುಗಳು ತಮ್ಮ ಗೂಡನ್ನು ನಿರ್ಮಿಸುವಾಗ ಶತ್ರುಗಳ ಕಾಟ ಕಡಿಮೆ ಇರುವ ಸ್ಥಳ ಹಾಗೂ ಆಹಾರ ಮತ್ತು ನೀರಿಗೆ ಹತ್ತಿರವಾದ ಸ್ಥಳವನ್ನು ಆಯ್ಕೆ ಮಾಡಿಕೊಳ್ಳುತ್ತವೆ. ಕೆಲವು ಪ್ರಭೇದದ ಪಕ್ಷಿಗಳಲ್ಲಿ ಗೂಡು ಕಟ್ಟುವ ಕೆಲಸವನ್ನು ಗಂಡು-ಹೆಣ್ಣು ಪಕ್ಷಿಗಳು ಸೇರಿ ಮಾಡಿದರೆ, ಇನ್ನೂ ಕೆಲವುಗಳಲ್ಲಿ ಕೇವಲ ಗಂಡು ಪಕ್ಷಿ (ಗೀಜುಗಗಳಲ್ಲಿ ಗಂಡು ಪಕ್ಷಿ ಗೂಡು ನಿರ್ಮಿಸುತ್ತದೆ) ಅಥವಾ ಹೆಣ್ಣು ಪಕ್ಷಿ ಗೂಡು ನಿರ್ಮಿಸುತ್ತವೆ. ಪಕ್ಷಿಗಳು ತಮ್ಮ ಗೂಡನ್ನು ಕಟ್ಟುವಾಗ ಮರದ ತೊಗಟೆ, ಬೇರು, ಒಣಗಿದ ಎಲೆ, ಹಾವಸೆ, ಕೂದಲು, ಹತ್ತಿ, ಹುಲ್ಲು, ಹಕ್ಕಿಗಳ ಪುಕ್ಕ, ಮಣ್ಣು ಹೀಗೆ ಅನೇಕ ವಸ್ತುಗಳನ್ನು ಬಳಸಿ ಗೂಡಿನ ಒಳಗೆ ಬೆಚ್ಚನೆಯ ವಾತಾವರಣವನ್ನು ಸೃಷ್ಟಿಸುತ್ತವೆ. ಇದು ಮೊಟ್ಟೆ ಹಾಗೂ ಮರಿಗಳ ಬೆಳವಣಿಗೆಗೆ ಪೂರಕವಾಗಿರುತ್ತದೆ.

© ಸಂತೋಷ್ ಎನ್

ಎಲ್ಲಾ ಪ್ರಭೇದದ ಪಕ್ಷಿಗಳು ಗೂಡು ಕಟ್ಟುವುದಿಲ್ಲ ಕೆಲವು ಪಕ್ಷಿಗಳು ಪರಾವಲಂಬಿಗಳಾಗಿದ್ದು, ಇವು ತಮ್ಮ ಮೊಟ್ಟೆಗಳನ್ನು ಬೇರೆ ಪಕ್ಷಿಯ ಮೊಟ್ಟೆಗಳ ಜೊತೆಗಿಟ್ಟು ಮರಿಗಳನ್ನು ಬೆಳೆಸುತ್ತವೆ. ಇಂತಹ ಪಕ್ಷಿಗಳನ್ನು ಸಂಸಾರದ ಪರಾವಲಂಬಿಗಳು (Brood Parasites) ಎಂದು ಕರೆಯುತ್ತಾರೆ. ಉದಾಹರಣೆಗೆ ಕೋಗಿಲೆ ಮತ್ತು ಕಾಗೆ. ಪಕ್ಷಿಗಳ ಗೂಡುಗಳಲ್ಲಿ ಸುಮಾರು ಆರು ವಿಧದ ಗೂಡುಗಳನ್ನು ನಾವು ಗಮನಿಸಬಹುದು, ಅವುಗಳೆಂದರೆ ನುಣುಪಾದ ಸರಳ ಗೂಡು (Scrape nest), ಬಿಲದ ಗೂಡು (Burrow nest), ಕುಹರದ ಗೂಡು (Cavity nest), ದಿಬ್ಬದ ಗೂಡು (Mound nest), ಸಭಾಂಗಣ ಅಥವಾ ಸಮತಟ್ಟಾದ ಗೂಡು (Platform nest) ಮತ್ತು ಬಟ್ಟಲು ಗೂಡು (Cup nest).

© Hippopx

1. ನುಣುಪಾದ ಸರಳ ಗೂಡು (Scrape nest): ಎಲ್ಲಾ ವಿಧದ ಗೂಡುಗಳಿಗಿಂತ ಇದು ಅತ್ಯಂತ ಸರಳವಾಗಿದ್ದು, ಇದನ್ನು ನೆಲದ ಮೇಲೆ ಯಾವುದೇ ರೀತಿಯ ಪ್ರವಾಹ ಸಂಭವಿಸಿದರೂ ಮೊಟ್ಟೆಗಳು ಮಣ್ಣಿನಿಂದ ಮುಚ್ಚದಂತೆ ಸ್ವಲ್ಪ ಇಳಿಜಾರಿರುವ ಪ್ರದೇಶದಲ್ಲಿ ನಿರ್ಮಿಸಲಾಗಿರುತ್ತದೆ. ಈ ತರಹದ ಗೂಡುಗಳ ಮಧ್ಯಭಾಗದಲ್ಲಿ ಮೊಟ್ಟೆಗಳು ಜಾರದಂತೆ ಸ್ವಲ್ಪ ಆಳವಾಗಿರುತ್ತದೆ. ಸುತ್ತಲೂ ಇರುವ ಬಣ್ಣಕ್ಕೆ ಹೋಲುವ ಸಸ್ಯವರ್ಗ, ಸಣ್ಣ ಕಲ್ಲುಗಳು, ಗರಿಗಳು, ಗಿಡದ ಕಡ್ಡಿಗಳು ಹೀಗೆ ಹಲವು ವಸ್ತುಗಳಿಂದ ಗೂಡನ್ನು ನಿರ್ಮಿಸಿರುತ್ತವೆ. ಮೊಟ್ಟೆಯ ಹೊರ ಕವಚವು ಕೂಡ ಸುತ್ತಲಿನ ವಾತಾವರಣದ ಬಣ್ಣವನ್ನೇ ಹೋಲುವುದರಿಂದ ಇದು ಮರೆಮಾಚುವಂತಿದ್ದು, ಸುಲಭಕ್ಕೆ ಯಾವ ಶತ್ರುವೂ ಗುರುತಿಸಲಾರದು.

 ಈ ರೀತಿ ಗೂಡು ನಿರ್ಮಿಸುವ ಅನೇಕ ಪ್ರಭೇದಗಳು ವಿನಾಶ ಪ್ರದರ್ಶನ (Destruction Display) ಗುಣವನ್ನು ಹೊಂದಿರುತ್ತದೆ. ಅಂದರೆ ಪರಭಕ್ಷಕಗಳು ತಮ್ಮ ಗೂಡಿನ ಹತ್ತಿರ ಪ್ರವೇಶಿಸುವುದನ್ನು ಗಮನಿಸುವ ಪೋಷಕ ಹಕ್ಕಿಗಳು, ಮೊಟ್ಟೆಗಳಿರುವ ಜಾಗದಿಂದ ಬೇರೆಡೆಗೆ ಪರಭಕ್ಷಕಗಳ ಗಮನ ಸೆಳೆಯುತ್ತವೆ. ಇಂತಹ ಗೂಡುಗಳನ್ನು ರೀವಹಕ್ಕಿ (River Tern) ಮತ್ತು ಕಡಲಕ್ಕಿಗಳು (Gulls) ನಿರ್ಮಿಸುತ್ತವೆ.

© Wikimedia commons

2. ಬಿಲದ ಗೂಡು (Burrow nest): ಹಕ್ಕಿಗಳು ಈ ರೀತಿಯ ಗೂಡನ್ನು ತಮ್ಮ ಕೊಕ್ಕಿನ ಸಹಾಯದಿಂದ ನೆಲದಲ್ಲಿ ಉದ್ದವಾಗಿ ಬಿಲದಂತೆ ಕೊರೆದು ಕೋಣೆ ನಿರ್ಮಿಸಿ ಅಲ್ಲಿ ಮೊಟ್ಟೆಗಳು, ಮರಿಗಳು ಹಾಗೂ ಕಾವು ಕೊಡುವ ತಾಯಿ ಸಹ ಕೆಲವೊಮ್ಮೆ ಅದರ ಆಶ್ರಯದಲ್ಲಿರುತ್ತದೆ. ಎಲ್ಲಾ ರೀತಿಯ ಪಕ್ಷಿಗಳು ಈ ರೀತಿ ಬಿಲವನ್ನು ಕೊರೆಯುವುದಿಲ್ಲ. ಕೆಲವು ಪಕ್ಷಿಗಳು ಇನ್ನೊಂದು ಪಕ್ಷಿ ಬಳಸಿ ಬಿಟ್ಟ ಗೂಡನ್ನು ಪುನ: ಬಳಸುತ್ತವೆ. ಈ ಗೂಡು ಪ್ರವಾಹದಿಂದ ಮತ್ತು ಪರಭಕ್ಷಕಗಳಿಂದ ಮೊಟ್ಟೆ-ಮರಿಗಳಿಗೆ ರಕ್ಷಣೆ ನೀಡುತ್ತದೆ. ಇಂತಹ ಗೂಡುಗಳನ್ನು ಮಿಂಚುಳ್ಳಿ ಮತ್ತು ಕಳ್ಳಿಪೀರಗಳು (Bee-eaters) ನಿರ್ಮಿಸುತ್ತವೆ.

3. ಕುಹರದ ಗೂಡು (Cavity nest): ಈ ರೀತಿಯ ಗೂಡನ್ನು ಒಣಗಿದ ಮರ ಅಥವಾ ಹಸಿ ಮರದ ಕಾಂಡದಲ್ಲಿ ಕಾಣಬಹುದು. ಹಕ್ಕಿಗಳು ತಮ್ಮ ಕೊಕ್ಕಿನ ಸಹಾಯದಿಂದ ಮರದ ಕಾಂಡವನ್ನು ಆಳವಾಗಿ ಕೊರೆದು ಗೂಡನ್ನು ನಿರ್ಮಿಸುತ್ತವೆ. ಕೆಲವು ಪಕ್ಷಿಗಳು ಈ ರೀತಿಯ ಗೂಡನ್ನು ಸ್ವತ: ತಾವೇ ನಿರ್ಮಿಸಿದರೆ ಇನ್ನೂ ಕೆಲವು ಪಕ್ಷಿಗಳು ಬೇರೆ ಪಕ್ಷಿ ಬಳಸಿ ಬಿಟ್ಟ ಗೂಡನ್ನು ಹಾಗೂ ಪ್ರಕೃತಿದತ್ತವಾಗಿ ನಿರ್ಮಿತವಾದ ಪೊಟರೆಗಳನ್ನು ಬಳಸುತ್ತವೆ. ಈ ಗೂಡುಗಳು ಆಳವಾಗಿ ಹಾಗೂ ಎತ್ತರದಲ್ಲಿರುತ್ತವೆ. ಇದರಿಂದಾಗಿ ಪರಭಕ್ಷಕಗಳಿಂದ ಮೊಟ್ಟೆ-ಮರಿಗಳನ್ನು ರಕ್ಷಿಸಿಕೊಳ್ಳುವುದು ಸುಲಭ. ಇಂತಹ ಗೂಡುಗಳನ್ನು ಗಿಳಿಗಳು, ಮಂಗಟೆಗಳು, ಕೆಲವು ಗೂಬೆಗಳು ಮತ್ತು ಕೆಲವು ಮರಕುಟಿಗಗಳು ನಿರ್ಮಿಸುತ್ತವೆ.

© ಅಭಿನಂದನ್ ಬಿ. ಎ
© public domain

4. ದಿಬ್ಬದ ಗೂಡು (Mound nest): ಪಕ್ಷಿಗಳು ಮಣ್ಣು, ಕೊಂಬೆ, ಕೋಲು ಮತ್ತು ಎಲೆಗಳನ್ನು ಬಳಸಿ ಎತ್ತರವಾದ ದಿಬ್ಬದಂತ ಗೂಡನ್ನು ನಿರ್ಮಿಸುತ್ತವೆ. ದಿಬ್ಬದೊಳಗೆ ಕೊಳೆಯುವ ವಸ್ತುಗಳನ್ನಿರಿಸಿ ಅದರೊಳಗೆ ಮೊಟ್ಟೆಗಳನ್ನು ಇಡುತ್ತವೆ. ಆ ಕೊಳೆಯುವ ವಸ್ತುಗಳಲ್ಲಿನ ಸೂಕ್ಷ್ಮಾಣುಗಳಿಂದ ಹಾಗೂ ಥರ್ಮೊಫಿಲಿಕ್ (Thermophyllic) ಶಿಲೀಂಧ್ರಗಳಿಂದ ಉತ್ಪತ್ತಿಯಾಗುವ ಶಾಖವು ಮೊಟ್ಟೆಗಳನ್ನು ಬೆಚ್ಚಗಿಟ್ಟು ಕಾವು ನೀಡುತ್ತದೆ. ಸಾಮಾನ್ಯವಾಗಿ ಇಂತಹ ಗೂಡುಗಳನ್ನು ರಾಜಹಂಸಗಳು ಮತ್ತು ಮೆಗಾಪೋಡ್‍ಗಳು (Megapodes) ನಿರ್ಮಿಸುತ್ತವೆ.

5. ಸಭಾಂಗಣ ಅಥವಾ ಸಮತಟ್ಟಾದ ಗೂಡುಗಳು (Platform nest): ಇವುಗಳು ನೆಲದ ಮೇಲೆ, ಎತ್ತರದ ಮರಗಳಲ್ಲಿ, ಬಂಡೆಗಳ ಮೇಲೆ, ಸಸ್ಯವರ್ಗದ ಮೇಲ್ಭಾಗದಲ್ಲಿ ಮತ್ತು ಆಳವಿಲ್ಲದ ನೀರಿನ ಮೇಲೆ ಒಣ ಕಡ್ಡಿ, ಎಲೆ ಮತ್ತು ಹುಲ್ಲನ್ನು ಉಪಯೋಗಿಸಿ ಗೂಡುಗಳನ್ನು ನಿರ್ಮಿಸುತ್ತವೆ. ಬೇರೆಲ್ಲಾ ಗೂಡುಗಳಿಗಿಂತ ಈ ಗೂಡುಗಳು ದೊಡ್ಡದಾಗಿ ಮತ್ತು ಜಟಿಲವಾಗಿದ್ದು, ಇಂತಹ ಗೂಡುಗಳು ಹಕ್ಕಿಯ ದೇಹದ ಗಾತ್ರಕ್ಕಿಂತ ದೊಡ್ಡದಾಗಿರುತ್ತದೆ. ಬೇಟೆಯಾಡುವ ಪಕ್ಷಿಗಳಾದ ಹದ್ದು, ಗಿಡುಗಗಳು ಮತ್ತು ನೀರಿನಲ್ಲಿ ವಾಸಿಸುವ ಪಕ್ಷಿಗಳಾದ ಕೊಕ್ಕರೆ, ಹಾವಕ್ಕಿ, ನೀರುಕಾಗೆಗಳೂ ಸಹ ಇಂತಹ ಗೂಡನ್ನು ನಿರ್ಮಿಸುತ್ತವೆ. ಗೂಡಿನ ಮಧ್ಯ ಭಾಗದಲ್ಲಿ ಆಳವಾಗಿದ್ದು, ಹುಲ್ಲು ಅಥವಾ ಮೃದುವಾದ ವಸ್ತುಗಳನ್ನು ಹೊಂದಿಸಿ ಗೂಡಿನ ಸುತ್ತಲೂ ಕೋಲು- ಕೊಂಬೆಗಳನ್ನು ಮಣ್ಣಿನಿಂದ ಅಂಟಿಸಿ ನಿರ್ಮಿಸುತ್ತವೆ. ನೀರಿನಲ್ಲಿರುವ ಪಕ್ಷಿಗಳು ಆಳವಲ್ಲದ ಪ್ರದೇಶದಲ್ಲಿ ಅಲ್ಲಿನ ಸಸ್ಯವರ್ಗವನ್ನು ಆಧರಿಸಿ ಗೂಡನ್ನು ನಿರ್ಮಿಸುರುವುದರಿಂದ ಇವು ನೀರಿನ ಮೇಲೆ ತೇಲುತ್ತವೆಯೇ ಹೊರತು ಚಲಿಸುವುದಿಲ್ಲ. ಮರಿಗಳು ಬೆಳೆದ ನಂತರ ಗೂಡಿನಿಂದ ನೀರಿಗೆ ಹಾರಿ ತಮ್ಮ ಜೀವನವನ್ನು ನಡೆಸುತ್ತವೆ ಹಾಗೂ ಈ ಗೂಡುಗಳನ್ನು ಪಕ್ಷಿಗಳು ಮರುಬಳಕೆ ಮಾಡುತ್ತವೆ.

© ಅಭಿನಂದನ್ ಬಿ. ಎ
© ಅಭಿನಂದನ್ ಬಿ. ಎ

6. ಬಟ್ಟಲು ಗೂಡು (Cup nest): ಹೆಸರೇ ಸೂಚಿಸುವಂತೆ ಈ ಗೂಡುಗಳು ಬಟ್ಟಲು ಅಥವಾ ಅರ್ಧ ಗೋಳಾಕೃತಿಯಂತಿರುತ್ತವೆ. ಗೂಡಿನ ಮಧ್ಯಭಾಗದಲ್ಲಿ ಆಳವಾದ ಕುಳಿಯನ್ನು ಹೊಂದಿರುತ್ತದೆ. ಈ ಗೂಡುಗಳು ಸಣ್ಣ ಹಾಗೂ ಹಗುರಾಗಿದ್ದು, ಇವುಗಳಲ್ಲಿ ಸಾಮಾನ್ಯವಾಗಿ ಹುಲ್ಲು, ಕೊಂಬೆಗಳು, ಒಣಗಿದ ಎಲೆಗಳನ್ನು ಲಾಲಾರಸ ಅಥವಾ ಜೇಡರ ಬಲೆ ಮತ್ತು ಮಣ್ಣಿನಿಂದ ಅಂಟಿಸಿರುತ್ತವೆ. ಗೂಡಿನ ಒಳಗೆ ಬೆಚ್ಚಗಿನ ವಾತಾವರಣವನ್ನು ಸೃಷ್ಟಿಸಲು ಹತ್ತಿ, ಕೂದಲು ಹಾಗೂ ಪುಕ್ಕಗಳನ್ನು ಬಳಸಲಾಗಿರುತ್ತದೆ. ಈ ಗೂಡುಗಳಲ್ಲಿ ಸುಮಾರು 4 ವಿಧಗಳನ್ನು ನೋಡಬಹುದು.

ಅ. ಸ್ಥಿರ ಬಟ್ಟಲ ಗೂಡು (Statant Cup nest): ಈ ಗೂಡನ್ನು ಮರಗಳ ಕೊಂಬೆಗಳಲ್ಲಿ ಹಾಗೂ ಪೊದೆಗಳಲ್ಲಿ ಕಾಣಬಹುದಾಗಿದೆ. ಮರ ಅಥವಾ ಗಿಡದ ಕೊಂಬೆಗಳನ್ನು ಕೆಳಗಿನಿಂದ ಆಧಾರವಾಗಿಟ್ಟುಕೊಂಡು ಈ ಗೂಡನ್ನು ನಿರ್ಮಿಸಲಾಗಿರುತ್ತದೆ. ಇಂತಹ ಗೂಡುಗಳನ್ನು ಪಿಕಳಾರ, ಕಾಜಾಣಗಳು ನಿರ್ಮಿಸುತ್ತವೆ.

ಆ. ತೂಗಾಡುವ ಬಟ್ಟಲ ಗೂಡು (Suspended Cup nest): ಈ ರೀತಿಯ ಬಟ್ಟಲ ಗೂಡುಗಳಲ್ಲಿ ಗೂಡಿನ ಕೆಳಗಿನಿಂದ ಕೊಂಬೆಗಳು ಆಧಾರವಾಗಿರದೆ, ಗೂಡಿನ ಪಕ್ಕದಿಂದ ಅಥವಾ ಗೂಡಿನ ಮೇಲಿನಿಂದ ಆಧಾರವಾಗಿರುತ್ತದೆ. ಇಂತಹ ಗೂಡುಗಳಲ್ಲಿ 2 ವಿಧಗಳನ್ನು ನೋಡಬಹುದು.

• ಇಳಿಬಿದ್ದಿರುವ ತೂಗು ಬಟ್ಟಲ ಗೂಡು (Pensile nest): ಈ ಗೂಡುಗಳ ಒಂದು ಬದಿಯನ್ನು ಕೊಂಬೆಗೆ ಜೋಡಿಸಿ ನಿರ್ಮಿಸಲಾಗಿರುತ್ತದೆ.

• ನೇತಾಡುವ ತೂಗು ಬಟ್ಟಲ ಗೂಡು (Pendulous nest): ಈ ರೀತಿಯ ಗೂಡುಗಳನ್ನು ಕೊಂಬೆಗೆ ನೇತುಹಾಕಿದಂತೆ ನಿರ್ಮಿಸಲಾಗಿರುತ್ತದೆ. ಇಂತಹ ಗೂಡುಗಳನ್ನು ಗೀಜುಗಗಳು ಹಾಗೂ ಸೂರಕ್ಕಿಗಳು ನಿರ್ಮಿಸುತ್ತವೆ.

© ಅಭಿನಂದನ್ ಬಿ. ಎ

ಇ. ಅಂಟಿಕೊಂಡಿರುವ ಬಟ್ಟಲ ಗೂಡು (Adherent Cup nest): ಈ ರೀತಿಯ ಗೂಡುಗಳ ಒಂದು ಬದಿಯನ್ನು ಸ್ಥಿರ ವಸ್ತುಗಳಾದ ಕಲ್ಲುಬಂಡೆ ಅಥವಾ ಮನೆಯ ಛಾವಣಿ, ಮಣ್ಣು ಅಥವಾ ಲಾಲಾರಸದಿಂದ ಅಂಟಿಸಲಾಗಿರುತ್ತದೆ. ಇಂತಹ ಗೂಡುಗಳನ್ನು ಬಾನಾಡಿಗಳು ನಿರ್ಮಿಸುತ್ತವೆ.

ಈ. ನೆಲದ ಮೇಲಿನ ಬಟ್ಟಲ ಗೂಡು (Ground Cup nest): ಈ ರೀತಿಯ ಗೂಡುಗಳನ್ನು ಭೂಮಿಯ ಮೇಲೆ ಸ್ವಲ್ಪ ಆಳವಾದ ಆಕೃತಿಯನ್ನು ಕೊರೆದು ನಿರ್ಮಿಸಲಾಗಿರುತ್ತದೆ. ಇಂತಹ ಗೂಡುಗಳಲ್ಲಿ ಪರಭಕ್ಷಕಗಳಿಂದ ಮೊಟ್ಟೆ ಮರಿಗಳನ್ನು ರಕ್ಷಿಸಲು ಸುತ್ತಲಿನ ವಾತಾವರಣದ ಬಣ್ಣವನ್ನು ಹೋಲುವಂತಹ ವಸ್ತುಗಳನ್ನು ಬಳಸಲಾಗಿರುತ್ತದೆ. ಇಂತಹ ಗೂಡುಗಳನ್ನು ಟಿಟ್ಟಿಭಗಳು ನಿರ್ಮಿಸುತ್ತವೆ.

ಈ ರೀತಿ ಪಕ್ಷಿಗಳ ಗೂಡು ಕಟ್ಟುವಿಕೆ ನಿಜಕ್ಕೂ ಒಂದು ಸೂಕ್ಷ್ಮವಾದ ಕಲೆ. ನಾನು ಚಿಕ್ಕವಳಿದ್ದಾಗ ನಡೆದ ಒಂದು ಘಟನೆ, ಅದು ಅಡಿಕೆ ಕೊಯ್ಲಿನ ಕೊನೆಯ ಹಂತದ ಸಮಯ, ಪ್ರತೀ ವರ್ಷದಂತೆ ಆ ವರ್ಷವೂ ಅಡಿಕೆ ಒಣಗಿಸಲೆಂದು ಮನೆಯ ಮುಂದೆ ಮುರಿದ ಅಡಿಕೆ ಮರದ ದಬ್ಬೆಗಳ ಎತ್ತರದ ಚಪ್ಪರ ಹಾಕಿದ್ದರು. ದಬ್ಬೆಗಳ ಒಂದು ಬದಿ ಅಷ್ಟು ಗಟ್ಟಿ ಇರದಿದ್ದರಿಂದಲೇನೋ ಅಲ್ಲಿ ಯಾರೋ ಅಡಿಕೆ ಹರವಲು ಹೋಗದಿರಲೆಂದು ಸೋಗೆಯನ್ನು ಮುಚ್ಚಿಗೆ ಹಾಕಿದ್ದರು. ನನ್ನ ತಂದೆ ಎಷ್ಟು ದಿನದಿಂದ ಗಮನಿಸಿದ್ದರೋ ಗೊತ್ತಿಲ್ಲ ಸೋಗೇ ಹಾಸಿದ್ದರ ಕೆಳಗೆ ಒಂದು ಮರದ ರೆಂಬೆ ಹಾದು ಬಂದಿತ್ತು. ಅಲ್ಲಿ ಒಂದು ಪುಟ್ಟ ಹಕ್ಕಿ ತನ್ನ ಗೂಡು ನಿರ್ಮಿಸಿಯಾಗಿತ್ತು. ಅಪ್ಪ ಅದನ್ನು ತೋರಿಸಿ, ‘ಇವು ಸುಮಾರು ಹತ್ತ್-ಹದಿನೈದ್ ದಿನ್ದಿಂದ ಗೂಡು ಕಟ್ತಿದಾವೆ, ಇದ್ರು ಜೊತೆ ಇನ್ನೊಂದು ಹಳದಿ ಹೊಟ್ಟೆ ಹಕ್ಕಿನು ಬರ್ತಿತ್ತು, ಕೋಲ್-ಗೀಲ್ ತಾಗ್ಸಬೇಡಿ ಹಂಗೆ ದೂರ್ದಿಂದ ನೋಡಿ’ ಅಂತ ಹೇಳಿದ್ರು. ಸ್ವಲ್ಪ ಹೊತ್ತಲ್ಲೇ ಅಪ್ಪ ಹೇಳ್ದಂಗೆ ಗೂಡಲ್ಲಿದ್ದ ಹಕ್ಕಿ ಹಾರಿ ಹೋಗಿ ಹಳದಿ ಹೊಟ್ಟೆಯ ಹಕ್ಕಿ (ಸೂರಕ್ಕಿ) ಬಂದು ಗೂಡು ಸೇರಿತು. ಬಹಳ ಸಮಯವಾದರೂ ಅದು ಹೊರಗೆ ಬರಲಿಲ್ಲ. ಅಪ್ಪ, ‘ಅವು ಮೊಟ್ಟೆ ಇಟ್ಕಂಡಿರ್ಬೇಕು ಏನು ತೊಂದ್ರೆ ಕೊಡ್ಬೇಡಿ’ ಅಂತ ಹೇಳಿದ್ರು. ನನಗೆ ನನ್ನ ತಂಗೀರಿಗೆ ಪ್ರತೀ ದಿನ ಒಂದು ಸಲ ಗೂಡಿನ ಕಡೆ ಕಣ್ಣು ಹಾಯಿಸೋದು ಅಪ್ಪನನ್ನು ಪ್ರಶ್ನಿಸೋದು ರೂಢಿಯಾಗಿತ್ತು. ಒಂದು ದಿನ ಮರಿಗಳ ‘ಚಿಂವ್ ಚಿಂವ್’ಕೂಗು ಕೇಳಿತು. ಬಂದು ನೋಡಿದರೆ ಚಪ್ಪರ ಎತ್ತರವಿದ್ದಿದ್ದರಿಂದ ಮರಿಗಳು ನಮಗೆ ಕಾಣಲಿಲ್ಲ. ಬಹಳ ದಿನಗಳ ನಂತರ ಮೂರು ಪುಟ್ಟ ಮರಿಗಳು ಗೂಡಿನಿಂದ ಹೊರ ಬಂದವು, ತಾಯಿ ಹಕ್ಕಿ ಹಾರಲು ಕಲಿಸುತ್ತಿತ್ತು. ಅದಾದ ಕೆಲವು ದಿನದೊಳಗೆ ಮರಿಗಳು ಹಾರಿ ಹೋದವು. ಇದು ನನ್ನ ಅನುಭವ.

ಇತ್ತೀಚಿನ ದಿನಗಳಲ್ಲಿ ಪಕ್ಷಿಗಳ ಗೂಡು ಕಾಣುವುದು ಕೆಲವು ಬೆರಳೆಣಿಕೆಯಷ್ಟು. ಅಂದರೇ ಪಕ್ಷಿಗಳು ಗೂಡು ಕಟ್ಟುವುದನ್ನೇ ನಿಲ್ಲಿಸಿವೆ ಎಂದಲ್ಲ. ಮಾನವನ ಸಂಸಾರ, ಮನೆಗಳು ಬೆಳೆದಂತೆ ಪಕ್ಕಿಗಳ ಸಂಸಾರಕ್ಕೆ ಎಲ್ಲೋ ಕುತ್ತು ಬಂದಂತಿದೆ. ಪಕ್ಷಿಗಳಿಗೂ ವಾಸಿಸಲು ತಮ್ಮ ಸಂಸಾರ ಹೂಡಲು ಸೂಕ್ತ ಸ್ಥಳಬೇಕು. ಎಲ್ಲೆಂದರಲ್ಲಿ ಕಾಡು ಕಡಿದು ಕಾಂಕ್ರೀಟ್ ಕಟ್ಟಡಗಳನ್ನು ಗಗನಕ್ಕೇರಿಸಿದ್ದೇವೆ. ಜೀವಿಗಳ ಆವಾಸ ಸ್ಥಾನ ಕಣ್ಮರೆಯಾಗಲು ಕಾರಣ ನಾವು ನಮಗೆ ಬೇಕಾದಷ್ಟು ಅರಣ್ಯವನ್ನು ಕಬಳಿಸಿ, ನಾವು ಎಲ್ಲೋ ಬೇಡಾ ಎಂದು ಬಿಟ್ಟ ಒಂದಿಷ್ಟು ಜಾಗದಲ್ಲಿ ಹೊಂದಾಣಿಕೆ ಮಾಡಿಕೊಂಡು ಬದುಕುತ್ತಿವೆ ಎನಿಸುತ್ತದೆ. ನಮ್ಮ ಏಳಿಗೆಯ ಜೊತೆಗೆ ಪ್ರಾಣಿ-ಪಕ್ಷಿಗಳ ನೈಸರ್ಗಿಕ ಬದುಕಿಗೆ ಹಾನಿಯಾಗದಂತೆ ಸಹಬಾಳ್ವೆ ನಡೆಸುವುದು ಅತ್ಯಗತ್ಯ.

© ಸೌಮ್ಯ ಅಭಿನಂದನ್


ಲೇಖನ: ಸೌಮ್ಯ ಅಭಿನಂದನ್
             ಶಿವಮೊಗ್ಗ ಜಿಲ್ಲೆ

Print Friendly, PDF & Email
Spread the love

One thought on “ಹಾರಾಡುವ ಇಂಜಿನಿಯರ್‍ಗಳು

Comments are closed.

error: Content is protected.