ಪ್ರಕೃತಿ ಬಿಂಬ
© ಡಾ. ಅಮೋಲ್., ಬೆಕ್ಕು ಕಣ್ಣಿನ ಹಾವು
ಏಷ್ಯಾದ್ಯಂತ ಕಂಡುಬರುವ ಈ ಹಾವುಗಳು ಮೆದು ವಿಷಕಾರಿ ಗುಂಪಿಗೆ ಸೇರುತ್ತವೆ. ದೇಹವು ಬೂದು ಮಿಶ್ರಿತ ಕಂದು ಬಣ್ಣದಿಂದ ಇದ್ದು, ಗಾಢ ಕಂದು ಬಣ್ಣದ ಗೆರೆಗಳಿಂದ ಕೂಡಿದೆ. ಕೆಳಭಾಗವು ಹಳದಿ ಬಣ್ಣದಿಂದ ಕೂಡಿದ್ದು, ಅಲ್ಲಲ್ಲಿ ಕಪ್ಪು ಚುಕ್ಕಿಗಳಿವೆ. ಬಹಳ ಉದ್ದವಾಗಿ ಬೆಳೆಯುವ ಹಾಗೂ ದೊಡ್ಡದಾದ ತಲೆ ಮತ್ತು ದೊಡ್ಡದಾದ ಕಣ್ಣುಗಳನ್ನು ಈ ಹಾವುಗಳು ಹೊಂದಿವೆ. ನಿಶಾಚರಿಗಳಾದ ಇವು ಹೆಚ್ಚಾಗಿ ಮರಗಳ ಮೇಲೆ ವಾಸಿಸುತ್ತವೆ. ಆಹಾರವಾಗಿ ಸಣ್ಣ ಪಕ್ಷಿಗಳು, ಹಲ್ಲಿಗಳು ಹಾಗೂ ಸಣ್ಣ ಹಾವುಗಳನ್ನು ತಿನ್ನುತ್ತವೆ.
© ಡಾ. ಅಮೋಲ್., ಹಸಿರು ಹಾವು
ಏಷ್ಯಾದ್ಯಂತ ಕಂಡುಬರುವ ಇವು ಮೆದು ವಿಷಕಾರಿ ಗುಂಪಿಗೆ ಸೇರಿರುವ ಹಾವುಗಳಾಗಿವೆ. ಇವುಗಳ ಕಡಿತದಿಂದ ಮನುಷ್ಯನಿಗೆ ಊತ, ನೋವು, ಮೂಗೇಟುಗಳು ಉಂಟಾಗುತ್ತವೆ. ಇವು ಸಹ 3 ದಿನಗಳೊಳಗೆ ಕಡಿಮೆಯಾಗುತ್ತದೆ. ಹೆಸರೇ ಹೇಳುವ ಹಾಗೆ ಹಸಿರು ಬಣ್ಣದಿಂದ ಕೂಡಿರುವ ಇವು, ಉದ್ದನೆಯ ಮೂತಿ ಹೊಂದಿರುತ್ತದೆ. ತೊಂದರೆಗೊಳಗಾದಾಗ ದೇಹವನ್ನು ಹಿಗ್ಗಿಸುತ್ತ ತನ್ನ ಬಿಳಿಯ ಹಾಗೂ ಕಪ್ಪು ಪಟ್ಟೆಗಳನ್ನು ತೋರುತ್ತದೆ. ಸಾಮಾನ್ಯವಾಗಿ ಮರಗಳಲ್ಲಿ, ಪೊದೆಗಳಲ್ಲಿ ಅವಿತು ಕಪ್ಪೆಗಳನ್ನು ಮತ್ತು ಹಲ್ಲಿಗಳನ್ನು ತನ್ನ ಬೈನಾಕುಲರ್ ದೃಷ್ಟಿ ಬಳಸಿ ಬೇಟೆ ಆಡುತ್ತವೆ. ಸಾಧಾರಣವಾಗಿ 6 ರಿಂದ 10 ಮರಿಗಳು ಹೊರಬರುತ್ತವೆ.
© ಡಾ. ಅಮೋಲ್., ಮಲಬಾರ್ ಗುಳಿ ಮಂಡಲದ ಹಾವು
ಮಲಬಾರ್ ಗುಳಿ ಮಂಡಲದ ಹಾವುಗಳು ಭಾರತದ ಪಶ್ಚಿಮ ಘಟ್ಟಗಳಲ್ಲಿ ಕಂಡುಬರುತ್ತವೆ. ಇವು ಹಲವಾರು ಬಣ್ಣಗಳಲ್ಲಿ ಕಾಣಸಿಗುತ್ತವೆ, ಬಣ್ಣಕ್ಕೆ ಸರಿ ಹೊಂದುವ ಮರಗಳ ಪೊಟರೆಗಳಲ್ಲಿ ವಾಸಿಸುತ್ತವೆ. ನಿಶಾಚರಿಗಳಾದ ಇವು ತಟಸ್ಥವಾಗಿ ಒಂದೇ ಕಡೆ ಕೂತು ಶಾಖ ಸಂಗ್ರಹಣೆ ಮಾಡಿ ಬೇಟೆಯಾಡುತ್ತವೆ. ಕಪ್ಪೆಗಳು ಇವುಗಳ ಪ್ರಮುಖ ಆಹಾರ. ವಿಷಕಾರಿ ಹಾವುಗಳ ಗುಂಪಿಗೆ ಸೇರಿದರೂ ಇವುಗಳಿಂದ ಹೆಚ್ಚು ಪ್ರಾಣಹಾನಿ ಆಗದೇ ಇರುವುದರಿಂದ ಇದರ ವಿಷವನ್ನು ಅಷ್ಟಾಗಿ ಪರಿಗಣನೆ ಮಾಡುವುದಿಲ್ಲ. ಈ ಹಾವುಗಳು ಬೇರೆ ಪ್ರಭೇದದ ಹಾವುಗಳಂತೆ ಮೊಟ್ಟೆ ಇಡುವುದಿಲ್ಲ, ಬದಲಾಗಿ ಹೊಟ್ಟೆಯೊಳಗೆ ಮೊಟ್ಟೆ ಅಭಿವೃದ್ಧಿ ಮಾಡಿ ನಂತರ ಸುಮಾರು 10 ರಿಂದ 20 ಮರಿ ಹಾಕುತ್ತವೆ.
© ಡಾ. ಅಮೋಲ್., ಬಿದಿರು ಮಂಡಲ
ಇದು ಭಾರತದ ದಕ್ಷಿಣ ಮತ್ತು ಈಶಾನ್ಯ ಭಾಗಗಳಲ್ಲಿ ಕಂಡುಬರುವ ವಿಷಪೂರಿತ ಹಾವುಗಳ ಪ್ರಭೇದಕ್ಕೆ ಸೇರಿದೆ. ದೇಹವು ಗಾಢ ಹಸಿರು ಬಣ್ಣದಿಂದ ಕೂಡಿದ್ದು, ಅಲ್ಲಲ್ಲಿ ಕೆಂಪು ಮಿಶ್ರಿತ ಕಪ್ಪು ಬಣ್ಣದ ಕಲೆಗಳಿರುತ್ತವೆ. ತಳ ಭಾಗವು ಹಳದಿ ಬಣ್ಣದಿಂದ ಕೂಡಿರುತ್ತದೆ. ಸಾಧಾರಣವಾಗಿ ದಟ್ಟ ಅಡವಿಗಳ ಬಿದಿರು ತೋಪುಗಳಲ್ಲಿ, ಝರಿಗಳ ಸನಿಹದಲ್ಲಿ ಕಾಣಸಿಗುತ್ತವೆ. ಅಲ್ಲಿ ಸಿಗುವಂತಹ ಹಲ್ಲಿಗಳು, ಇಲಿಗಳು, ಪಕ್ಷಿಗಳನ್ನು ಕೊಂದು ನುಂಗುತ್ತವೆ. ಹೆಣ್ಣು ಹಾವು ಹೊಟ್ಟೆಯಲ್ಲಿ ಮೊಟ್ಟೆಗಳಿಗೆ ಕಾವು ಕೊಟ್ಟು ಸುಮಾರು 6 ರಿಂದ 11 ಮರಿಗಳಿಗೆ ಜನ್ಮ ಕೊಡುತ್ತವೆ.
ಚಿತ್ರಗಳು : ಡಾ. ಅಮೋಲ್, ಕೊಲ್ಲಾಪುರ
ಲೇಖನ: ಹೇಮಂತ್ ನಿಖಿಲ್