ಅರಿತು ಜಾಗೃತರಾಗೋಣ
ಸೀಮೆ ಮೀರುತ್ತಿದೆ ಹೀಗೇಕೆ ಮಾನವನ ದುರಾಸೆ? ,
ಒಂದಲ್ಲ ಒಂದು ದಿನ ಅವನಿಗೆ ಕಾದಿದೆ ನಿರಾಸೆ ,
ಎಲ್ಲವೂ ಅಳೆದು ಬರೀ ಮನುಜರುಳಿದರೆ ಸೊಗಸೆ?
ಎಲ್ಲವೂ ಅಳಿದ ಮೇಲೆ ಮನುಜರುಳಿವುದು ಬರಿ ಕನಸೆ.
ಹೊಗೆ ಮಾಲಿನ್ಯಗಳಿಂದ ಕಮರುತ್ತಿದೆ ಕುಸುಮ
ನೈತಿಕತೆ ಇಲ್ಲದೆ ನಡೆಯುತ್ತಿದೆ ಅಕ್ರಮ
ರಸ್ತೆ ಕಟ್ಟಡಗಳ ನಿರ್ಮಾಣಗಳಿಗೆ ಮರಗಳ ಮಾರಣಹೋಮ
ಪ್ರಕೃತಿ ಮಾತೆ ಒಮ್ಮೆ ಮುನಿದರೆ ಎಲ್ಲವೂ ನೆಲಸಮ.
ಅರಣ್ಯ ನಾಶಕ್ಕೆ ಮನುಜನೆ ಮೂಲಕಾರಣ
ಪ್ಲಾಸ್ಟಿಕ್, ರಾಸಾಯನಿಕಗಳು ಮಣ್ಣಿಗೆ ಮಿಶ್ರಣ
ತಿನ್ನುವ ಅನ್ನವೂ ವಿಷವಾಗುವುದು ಮರೆಯದಿರಣ್ಣ
ಇದನ್ನು ಅರಿತು ಇಂದಾದರೂ ಜಾಗೃತರಾಗೋಣ.
ಬನ್ನಿ ಗೆಳೆಯರೇ ಕಾನನದ ಸೊಬಗ ಸವಿಯುವ,
ಚಿಟ್ಟೆ ಹಕ್ಕಿಗಳ ಬಣ್ಣಗಳಿಗೆ ಬೆರಗಾಗುವ,
ಜೇನುನೊಣಗಳಿಂದ ಒಗ್ಗಟ್ಟು ಕಲಿಯುವ,
ಇರುವೆಗಳಿಂದ ಶಿಸ್ತಿನ ನೀತಿ ಕಲಿಯುವ.
– ದೀಪಿಕಾ ಬಾಯಿ ಎನ್
ಬೆಂಗಳೂರು ಜಿಲ್ಲೆ
M.Sc ( ಗಣಿತ ) ಮುಗಿಸಿ, ನನ್ನಿಷ್ಟ ದಂತೆ ಶಿಕ್ಷಣ ವೃತ್ತಿ ಆರಿಸಿಕೊಂಡು, ಸರ್ಕಾರಿ ಶಾಲಾ ಮಕ್ಕಳಿಗೆ ಸೃಜನಾತ್ಮಕ ಕಲಿಕೆಗೆ ಪೂರಕವಾಗಲು ರಾಮಕೃಷ್ಣ ಮಿಷನ್ ಶಿವನಹಳ್ಳಿ ಯವರು ಆಯೋಜಿಸಿರುವ ಪ್ರೊಜೆಕ್ಟ್ ಮಾಡೂ ನಲ್ಲಿ ಕೆಲಸ ಮಾಡುತ್ತಿದ್ದೇನೆ.
ವಿವಿಧ ಶಾಲೆಯ ಮಕ್ಕಳೊಂದಿಗೆ ಚಟುವಟಿಕೆಗಳ ಮೂಲಕ ವಿಜ್ಞಾನ ಮತ್ತು ಗಣಿತದ ವಿಷಯಗಳನ್ನು ಚರ್ಚಿಸುವುದು ನನ್ನ ವೃತ್ತಿ ಮತ್ತು ಪ್ರವತ್ತಿ ಕೂಡ ಹೌದು .ಚಿಕ್ಕ ಕಥೆಗಳು ಮತ್ತು ಕವನಗಳು ಬರೆಯುವುದು ,ಚಿತ್ರಕಲೆ ನನ್ನ ಹವ್ಯಾಸ ಗಳು.
ಚಿಕ್ಕ ವಯಸ್ಸಿನಿಂದ ಬೆಂಗಳೂರಿನಲ್ಲೆ ಬೆಳೆದ ನನಗೆ ಕಾಡು ಮತ್ತು ಕಾಡು ಪ್ರಾಣಿಗಳ ಬಗ್ಗೆ ಹೆಚ್ಜ್ಚಿನ ಜ್ಞಾನ ಇರಲಿಲ್ಲ. ಆದರೆ ಈಗ ಪರಿಸರ ಕಾಳಜಿ ಹೊಂದಿರುವ ಕೆಲವು ಗೆಳೆಯರೊಂದಿಗೆ ಸೇರಿ ನನಗು ಪ್ರಕೃತಿ ಯ ಬಗ್ಗೆ ಹೆಚ್ಚು ತಿಳಿಯುವ ಕುತೂಹಲ ಬಂದಿದೆ. ಪರ್ವತಾರೋಹಣ, ಪಕ್ಷಿ ವೀಕ್ಷಣೆ, ಛಾಯಗ್ರಹಣಗಳಲ್ಲಿ ನನ್ನನ್ನು ತೊಡಗಿಸಿಕೊಳ್ಳುವುದು ನನಗಿಷ್ಟ .