ಪ್ರಕೃತಿ ಕತೆ-ವ್ಯಥೆ
ಮರಗಳ ಉಳಿಸಿ
ಹಸಿರನು ಬೆಳೆಸಿ
ಉಸಿರ ಪಡೆವ ನಾವು..
ಮಳೆಯ ತರುವ ನಾವು..
ತೋಟದಿ ಒಂದು ಮನೆಯಿತ್ತು
ಮನೆಯಲಿ ಸಂತಸ ನೆಲೆಸಿತ್ತು
ಊರಿಗೆ ಊರೆ ಹೊಗಳಿತ್ತು
ಮನೆ ಮನ ನೆಮ್ಮದಿ ತುಂಬಿತ್ತು…
ಅಣ್ಣ ತಮ್ಮ ಅಕ್ಕ ತಂಗಿಯ
ಕೂಡು ಕುಟುಂಬ ಎನಿಸಿರಲು
ತೋಟದ ಹಸಿರೆ ಉಸಿರಾಗಿ
ಮನೆಯವರೆಲ್ಲರ ಕಾದಿತ್ತು…
ಹೀಗಿರಲೊಮ್ಮೆ ಒಂದು ದಿನ
ಕಮ್ಮಾರನು ತುಳಿದ ಹೊಸಲನ್ನ
ಹಣದ ದಾಹವ ತೋರಿಸುತ
ಹಸಿರನು ಕಡಿಯಲು ಮುಂದಾದ…
ಕಂತೆಯ ಹಣದ ಆಸೆಯಲಿ
ಮನೆ ಮನ ದೂರವಾಗಿರಲು,
ಹಸಿರಿಗೆ ಬೆಲೆಯ ಕೊಡಲಿಲ್ಲ
ಕೊಡಲಿಯ ಕೆಲಸ ನಿಲಲ್ಲಿಲ್ಲ…
ಮರಗಳು ಉರುಳಿ ಬಿದ್ದಿರಲು
ಮಣ್ಣಿನ ಪಸೆಯು ಆರಿರಲು
ಬಿಸಿ ಬಿಸಿ ಗಾಳಿಯು ಎದ್ದಿರಲು
ಉಸಿರಿನ ಆಸೆ ಮುಗಿದಿತ್ತು…
ಪರಿಸರ ನಮ್ಮಯ ಗೆಲುವಣ್ಣ
ಉಳಿಸಲು ಮರವ, ಬಾಳಣ್ಣ
ಹಸಿರೇ ಜಲದ ಜೀವಣ್ಣ
ಮಾತನು ನಂಬಿ ನಡೆಸಣ್ಣ…
ಹಣದ ಆಸೆಯು ಬಾರದಿರೆ
ಹಸಿರಿನ ವರವು ಕಾದಿತ್ತು
ಹಸಿವನು ನೀಗಿಸೋ ಭರದಲ್ಲಿ
ಹಳೆಮನೆ ಇಂದಿಗೂ ಸಾಗುತಿದೆ..
ತಿಳಿದವರೆಲ್ಲ ಸೋತಿರಲು
ತಿಳಿಯದ ಮಂದಿಗೆ ಬೆಲೆಯೆಲ್ಲಿ..?
ಕೃಷಿಕರು ಎಂದಿಗೂ ಬಾಗಲ್ಲ
ಧನಿಕರು ಎಂದೂ ಬಾಳಲ್ಲ…!
ಸಮಾಜ ಸೇವೆಯ ನೆಪದಲ್ಲಿ
ವನ ಮಹೋತ್ಸವ ಮಾಡುವರು
ಬೇಸಿಗೆಯಲ್ಲಿ ನೀರಿರದೇ
ಹಸಿರಿಗೆ ಬರೆಯ ಇಟ್ಟಿಹರು…
ಇನ್ನಾದರೂ ಇಳೆ ಕಾಯೋಣ
ಸ್ವಂತಿಕೆಯಲ್ಲಿ ಬೆಳೆಯೋಣ..
ವನ್ಯಜೀವಿಗಳ ಪೊರೆಯುತಲಿ
ನಿಜ ಸಂತಸವನ್ನು ಕಾಣೋಣ..
–ನಂದಕುಮಾರ್ ಹೊಳ್ಳ.
ಉಡಪಿ ಜಿಲ್ಲೆ