ಅಡವಿ ಫೀಲ್ಡ್ ಸ್ಟೇಷನ್

ಅಡವಿ ಫೀಲ್ಡ್ ಸ್ಟೇಷನ್

     “ವೈಲ್ಡ್ ಲೈಫ಼್ ಕನ್ಸರ್ವೇಷನ್ ಗ್ರೂಪ್” ಪರಿಸರದ ಬಗ್ಗೆ ಆಸಕ್ತಿ ಹೊಂದಿರುವ ಸಮಾನ ಮನಸ್ಕರ ಒಂದು ತಂಡ. ಕಾಡಿನ ಸಂರಕ್ಷಣೆ, ನಿರ್ವಹಣೆ ಮತ್ತು ಅರಣ್ಯವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಗಿಡಮರ ಬೆಳೆಸಿ ಸಂರಕ್ಷಿಸಿ, ಸುಸ್ಥಿರ ಅಭಿವೃದ್ಧಿ ಮಾದರಿಯಲ್ಲಿ ಪರಿಸರವನ್ನು ಸಂರಕ್ಷಿಸಿ ಇಂದಿನ ಮತ್ತು ಮುಂದಿನ ಪೀಳಿಗೆಗೆ ಉಳಿಸುವುದು ನಮ್ಮ ಧ್ಯೇಯ.

ನಮ್ಮ ತಂಡದ ಬಹುತೇಕ ಸದಸ್ಯರು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಕಾಡಂಚಿನ ಗ್ರಾಮಗಳಲ್ಲಿ ಬೆಳೆದವರು. ಆದ್ದರಿಂದ ಕಾಡಿಗೆ, ಪರಿಸರಕ್ಕೆ ಉಂಟಾಗುತ್ತಿರುವ ತೊಂದರೆಗಳ ಬಗ್ಗೆ ಚೆನ್ನಾಗಿ ಬಲ್ಲವರು. ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರ ಸಾಹಿತ್ಯದ ಪ್ರಭಾವದಿಂದ ಪ್ರೇರಣೆಗೊಂಡು ಪರಿಸರದ ಬಗ್ಗೆ ಅದಮ್ಯ ಆಸಕ್ತಿಯನ್ನು ಬೆಳೆಸಿಕೊಂಡವರು. ಇದೇ ನಮ್ಮ ತಂಡದ ಹಿಂದಿನ ಪ್ರೇರಣಾ ಶಕ್ತಿ.  ವರ್ತಮಾನದಲ್ಲಿ ಇರುವ ಕಾಡು ಮತ್ತು ಪರಿಸರಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ  ಸ್ಥಳೀಯವಾಗಿ ವಾಸವಿರುವ ಜನರು ಹಾಗು ಯುವಕರಿಗೆ ಪ್ರಾಣಿ ಪಕ್ಷಿ, ಗಿಡಮರ, ಕೀಟಗಳ ಬಗ್ಗೆ ವೈಜ್ಞಾನಿಕವಾಗಿ ಕುತೂಹಲಕಾರಿಯಾಗಿ ಪರಿಚಯಿಸುವುದು. ಈ ಮೂಲಕ ಪರಿಸರ, ಜೀವ-ಜಂತುಗಳ ಪ್ರಾಮುಖ್ಯತೆಯ ಬಗ್ಗೆ ಅವರೇ ಅರಿತು ಸಂರಕ್ಷಣೆಗೆ ಮುಂದಾಗುವಂತೆ ಮಾಡುವುದು ನಮ್ಮ ಗುರಿ.

ಈ ನಿಟ್ಟಿನಲ್ಲಿ ಕಳೆದ 15 ವರ್ಷಗಳಿಂದ ಸ್ಥಳೀಯ ಮಟ್ಟದಲ್ಲಿ, ಅಂದರೆ ಬಂಡಿಪುರ ಅರಣ್ಯದ ತಪ್ಪಲಿನ ಹಳ್ಳಿಗಳಲ್ಲಿನ ಶಾಲಾ ಮಕ್ಕಳಿಗೆ ಪರಿಸರ ಜಾಗೃತಿ  ಕಾರ್ಯಕ್ರಮಗಳಾದ ವನ್ಯಜೀವಿ ಛಾಯಚಿತ್ರ ಪ್ರದರ್ಶನ, ಕೆರೆ ಸಂರಕ್ಷಣೆ, ಪರಿಸರ ಸ್ನೇಹಿ ಹಬ್ಬಗಳ ಆಚರಣೆ, ಪರಿಸರ ಶಿಬಿರಗಳು, ಪಕ್ಷಿ ವೀಕ್ಷಣೆ ಜೊತೆಗೆ ಈ ‘ಕಾನನ’ ಮಾಸಪತ್ರಿಕೆ ನಡೆಸುತ್ತಾ ಬಂದಿದ್ದೇವೆ.

ಈ ನಡುವೆ ನಮ್ಮ ಪರಿಸರಮುಖಿ ಕಾರ್ಯಕ್ರಮಗಳನ್ನು ಸುಸೂತ್ರವಾಗಿ ನಡೆಸಿಕೊಂಡು ಹೋಗಲು ನಮ್ಮದೇ ಆದ ನೆಲೆ ಬೇಕು ಎನ್ನಿಸಿದ್ದು ನಿಜ. ಆ ಕನಸಿನ ಪರಿಕಲ್ಪನೆಯ ಸಾಕರವೇ “ಅಡವಿ ಫೀಲ್ಡ್ ಸ್ಟೇಷನ್ (Adavi Field Station)”.

ನಿಮ್ಮೊಯಸ್ಸಿನ ಹಕ್ಕಿ ಹಾರುವ ದೂರವೇ ಕಿರಿದು
ರೆಕ್ಕೆ ಬಿಚ್ಚಿದೆ ನೋಡು ಮನಮಾಡು.

ಈ ಕವನದ ಸಾಲು ಪ್ರತಿಧ್ವನಿಸುವ ಕಾರ್ಯವನ್ನು ನನಸು ಮಾಡಲು ತಂಡದ ಎಲ್ಲಾ ಸದಸ್ಯರು ಶಕ್ತಿಮೀರಿ ಶ್ರಮ ವಹಿಸುತ್ತಿದ್ದಾರೆ. ನಮ್ಮ ಗೆಳೆಯರು, ಪರಿಸರ ಪ್ರೇಮಿಗಳು, ಹಿತೈಷಿಗಳು ಅಡವಿಯ ನಿರ್ಮಾಣಕ್ಕೆ ಸಹಾಯಹಸ್ತ ಚಾಚಿದ್ದಾರೆ. ಎಲ್ಲರ ನಿರಂತರ ಪರಿಶ್ರಮದಿಂದ ನಮ್ಮ ಪರಿಸರ ಶಿಕ್ಷಣದ ಶಿಬಿರ ಕಾರ್ಯಾಗಾರಗಳನ್ನು ನಡೆಸಲು ನಮ್ಮದೇ ಒಂದು ವೇದಿಕೆ, ನೆಲೆ ಸಿದ್ಧಗೊಂಡಿದೆ.

ಅಡವಿಯ ಉದ್ಘಾಟನೆ ಸಮಾರಂಭವನ್ನು ಜನವರಿ, 21, 2018 ರಂದು ರಾಮಕೃಷ್ಣ ಮಿಷನ್, ಶಿವನಹಳ್ಳಿಯ ಪೂಜ್ಯ ವಿಷ್ಣುಮಯಾನಂದಜೀ ಮಹಾರಾಜ್  ಹಾಗು ಪೂಜ್ಯ ಸೌಖ್ಯಾನಂದಜೀ ಮಹಾರಾಜ್ ರವರು ಭಾಗವಹಿಸಿ ಪೂಜೆಯ ಮೂಲಕ ಉದ್ಘ್ಹಾಟಿಸಿ ಹರಸಿ ಪ್ರೋತ್ಸಾಹಿಸಿದರು. ನಮ್ಮ ಗೆಳೆಯರು, ಪರಿಸರ ಪ್ರೇಮಿಗಳು, ತಂಡದ ಸದಸ್ಯರು, ಹಿತೈಷಿಗಳು ಮತ್ತು ನಮ್ಮ ಪೋಷಕರು, ವಿದ್ಯಾರ್ಥಿಗಳು ಸಹ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಈಗಾಗಲೇ ಅಡವಿ ಫೀಲ್ಡ್ ಸ್ಟೇಷನ್ (AFS)ನಲ್ಲಿ ಮಕ್ಕಳ ಪರಿಸರ ಶಿಕ್ಷಣ ಕಾರ್ಯಕ್ರಮಗಳು ನಡೆಯುತ್ತಿವೆ. ಪ್ರತಿ ಭಾನುವಾರದಂದು ಪಕ್ಷಿವೀಕ್ಷಣೆ ಉಳಿದಂತೆ ಶಾಲ ಮಕ್ಕಳಿಗೆ ಪರಿಸರ ಅಧ್ಯಯನ ಕಾರ್ಯಾಗಾರಗಳು ನಡೆಯುತ್ತಿವೆ.

  ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಉತ್ತರಭಾಗದಲ್ಲಿ ಸುತ್ತಲೂ 3600 ಕಾಡಿರುವ ಬಳಿ ಅಡವಿ ಫೀಲ್ಡ್ ಸ್ಟೇಷನ್ ಸ್ಥಾಪಿತವಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹಲವು ಪರಿಸರ ಸಂರಕ್ಷಣಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದ್ದೇವೆ. ಈ ಎಲ್ಲಾ ಕಾರ್ಯಕ್ರಮದಲ್ಲಿ ತಾವೂ ಪರಿಸರ ವಿದ್ಯಾರ್ಥಿಯಾಗಿ, ಸಂಪನ್ಮೂಲ ವ್ಯಕ್ತಿಯಾಗಿ ಸ್ವಯಂಸೇವಕರಾಗಿ ಭಾಗವಹಿಸಬಹುದು ಎಂದು ತಿಳಿಸಲು ಸಂತೋಷವಾಗುತ್ತದೆ

ಲೇಖನ: ಶಂಕರಪ್ಪ .ಕೆ .ಪಿ
ಬೆಂಗಳೂರು ಜಿಲ್ಲೆ

Print Friendly, PDF & Email
Spread the love
error: Content is protected.