ಚಿನ್ಮಯಿ ಮತ್ತು ಗೀಜುಗ

ಚಿನ್ಮಯಿ ಮತ್ತು ಗೀಜುಗ

© ನಾಗೇಶ್ ಓ ಎಸ್

ಮಗಳು ಚಿನ್ಮಯಿಗೆ ಈಗ ಒಂದೂವರೆ ವರ್ಷ, ಅವಳಿಗೆ ದಿನವು ಮನೆಯಲ್ಲಿದ್ದ ಗುಬ್ಬಿಗೂಡು, ಗುಬ್ಬಿಗಳನ್ನ ತೋರಿಸಿ ಉಣಿಸುತ್ತಿದ್ದಕ್ಕೆನೋ, ಅವಳಿಗೆ ಪಕ್ಷಿಗಳೆಂದರೆ ಒಂಥರಾ ಆಸಕ್ತಿ, ಹೊರಗೆ ಯಾವುದೇ ಪಕ್ಷಿ ಹಾರಿದರೆ ಕೂಗು ಕೇಳಿದರೆ ಅದರತ್ತ ತಿರುಗಿ ನೋಡುವುದೇ ಅವಳ ಕೆಲ್ಸ ಆಗಿದೆ. ಕೈಟ್ ಎಲ್ಲಿ ಮಗಳೇ ಎಂದರೆ ತೊದಲು ಮಾತುಗಳನಾಡುತ್ತಾ ಆಗಸದತ್ತ ಕೈ ಮಾಡಿ ತಲೆಯೆತ್ತಿ ತೋರುತ್ತಾಳೆ. ಹಾಗಾಗಿ ಬಿಡುವಾದಾಗಲೆಲ್ಲಾ ಅವಳೊಟ್ಟಿಗೆ ಒಂದು ಸಣ್ಣ ಪಕ್ಷಿವೀಕ್ಷಣೆ ಮಾಡುವುದು ನಮ್ಮ ಕೆಲಸ.

ಮೊನ್ನೆ ರಜೆಯ ಮೇಲೆ ಮನೆಗೆ ಬಂದಿದ್ದೆ. ಮುಂಜಾನೆ ಆರರ ಸಮಯ. ಆಗ ತಾನೆ ಸೂರ್ಯ ಮೇಲೇರುತ್ತಿದ್ದ. ಸುತ್ತಲೂ ಕವಿದಿದ್ದ ಮಂಜು ನಿಧಾನವಾಗಿ ಕಡಿಮೆಯಾಗುತ್ತಿತ್ತು. ಮಗಳು ಚಿನ್ಮಯಿ ಸ್ವೆಟರು ಕುಲಾವಿ ಹಾಕಿ ಪಕ್ಷಿವೀಕ್ಷಣೆಗೆ ತಯಾರಾಗಿ ನಿಂತುಬಿಟ್ಟಿದ್ದಳು. ನಾನು ಹೆಗಲಿಗೆ ಕ್ಯಾಮರಾ ಏರಿಸಿ ಮಗಳು ಮಡದಿಯೊಂದಿಗೆ ಒಂದು ಸಣ್ಣ ಪಕ್ಷಿವೀಕ್ಷಣೆಗೆ ಹೊರಟೆವು. ದಾರಿಯುದ್ದಕ್ಕೂಸಿಕ್ಕ ಮುನಿಯ, ಗಿಳಿ, ಪಾರಿವಾಳ ಪಕ್ಷಿಗಳನ್ನ ಮಗಳಿಗೆ ವಿವರಿಸುತ್ತಿದ್ದೆ. ಅವಳು ಕಾಣುವ ಪಕ್ಷಿಗಳತ್ತ ಕೈ ಮಾಡಿ “ಹೂಃ, ಹೂಃ” ಎಂದು ಸನ್ನೆ ಮಾಡುತ್ತಿದ್ದಳು. ದಾರಿ ಪಕ್ಕದಲ್ಲೇ ಇದ್ದ ಕಳ್ಳಿಯಲ್ಲಿ ಯಾವುದೋ ಪತಂಗ ಕಂಡಂತಾಯಿತು ಹತ್ತಿರಕ್ಕೆ ಹೋಗಿ ನೋಡಿದರೆ ಆಶ್ಚರ್ಯ, ದೈತ್ಯ ಪತಂಗ, ಸುಮಾರು ವರ್ಷಗಳ ಹಿಂದೆ ಈ ಪತಂಗವನ್ನ ನೋಡಿದ್ದೆ ಇದು ಏಷ್ಯಾದಲ್ಲಿಯೇ ಅತ್ಯಂತ ದೊಡ್ಡ ಪತಂಗ

© ಮಹದೇವ .ಕೆ .ಸಿ

ಸುಮಾರು ನನ್ನ ಎರಡು ಹಸ್ತಗಳಷ್ಟು ದೂಡ್ಡ ಚಿಟ್ಟೆಯಂತಹದು, ಇದು ವಿಶ್ವದ ಅತ್ಯಂತ ದೊಡ್ಡ ಪತಂಗ. ಸುಮಾರು 25 ಸೆಂಟಿಮೀಟರ್ ನಿಂದ 30 ಸೆಂಟಿಮೀಟರ್ ಉದ್ದದ ರೆಕ್ಕೆಗಳನ್ನ ಹೊಂದಿರುತ್ತದೆ. ಸಾಮಾನ್ಯವಾಗಿ ಕುರುಚಲು, ಅರೆನಿತ್ಯ ಹಾಗೂ ನಿತ್ಯ ಹರಿದ್ವರ್ಣ ಕಾಡುಗಳಲ್ಲಿ ಕಾಣಸಿಗುತ್ತವೆ. ಒಂದೆರಡು ಚಿತ್ರ ತೆಗೆದು ಮಗಳಿಗೆ ಚಿಟ್ಟೆ ತೋರಿಸಿ ಮುಂದುವರಿದೆವು, ದಾರಿ ಸಾಗುತ್ತಿತ್ತು ಅಲ್ಲೇ ಮುಂದೆ ಇದ್ದ ಈಚಲ ಮರದಲ್ಲಿದ್ದ ಗೂಡುಗಳನ್ನ ಕಂಡ ನನ್ನ ಮಡದಿ, ಮಗಳಿಗೆ ಹೇಳಿದಳು “ನೋಡು ಚಿನ್ನು ಅಲ್ಲೆಷ್ಟೊಂದು ಗೂಡುಗಳಿವೆ” ಎಂದು ತೋರಿಸುತ್ತಿದ್ದಳು. ಅಲ್ಲೊಂದಷ್ಟು ಪಕ್ಷಿಗಳು ಗೂಡಿಂದ ಹೊರಕ್ಕೆ ಒಳಕ್ಕೆ ಹಾರುತ್ತಿದ್ದವು. ಒಟ್ಟಾರೆ ಈಚಲ ಮರ ಹಲವು ಚಟುವಟಿಕೆಗಳಿಂದ ಕೂಡಿತ್ತು. ಅಷ್ಟರಲ್ಲಿ ಕೊಕ್ಕಿನಲ್ಲಿ ಕಂಬಳಿಹುಳುವಿನೊಂದಿಗೆ ಬಂದ ಮತ್ತೊಂದು ಪಕ್ಷಿ ಗೂಡೊಳಗೆ ಪುರ್ರನೆ ಒಳಹೊಕ್ಕಿತು. ಮಗಳು ಅದನ್ನೇ ಏಕಾಗ್ರತೆಯಿಂದ ನೋಡುತ್ತಿದ್ದಳು. ಅವೇ ಗೀಜಗನ ಹಕ್ಕಿಗಳು ಇಂಗ್ಲಿಷಿನಲ್ಲಿ ಬಯಾ ವೀವರ್ ಪಕ್ಷಿಗಳು ಎನ್ನುತ್ತೇವೆ.

© ಮಹದೇವ .ಕೆ .ಸಿ

ಗುಬ್ಬಚ್ಚಿ ಗಾತ್ರದ ಈ ಹಕ್ಕಿಗಳು ಸಂತಾನೋತ್ಪತಿ ಕಾಲ ಬಿಟ್ಟು ಉಳಿದೆಲ್ಲಾ ಕಾಲಗಳಲ್ಲಿ ಇವುಗಳ ಬಣ್ಣ ಗುಬ್ಬಚ್ಚಿಗಳ ಬಣ್ಣದಂತಿರುತ್ತವೆ. ಕೊಕ್ಕು ಶಂಕುವಿನಾಕಾರವಿದ್ದು ಬಾಲ ಮೋಟಾಗಿರುತ್ತದೆ. ಸಾಮಾನ್ಯವಾಗಿ ಕೃಷಿಪ್ರದೇಶಗಳಲ್ಲಿ ಬಯಲುಗಳಲ್ಲಿ ಗುಂಪುಗುಂಪುಗಳಾಗಿ ಬದುಕುತ್ತವೆ.  ಭಾರತ, ಶ್ರೀಲಂಕಾ, ಪಾಕಿಸ್ತಾನ ಹಾಗು ಬರ್ಮಾ ದೇಶಗಳಲ್ಲಿ ಈ ಹಕ್ಕಿಗಳ ವ್ಯಾಪ್ತಿ ಇದೆ. ಇವುಗಳಲ್ಲಿ ವಲಸೆ ಹೋಗುವ ಕ್ರಮವೂ ಉಂಟು ದೊಡ್ಡ ದೊಡ್ಡ ಗುಂಪುಗಳಾಗಿ ಕುಯ್ಲಿಗೆ ಬಂದ ಭತ್ತ ಹಾಗು ಇತರೆ ಧಾನ್ಯಗಳ ಕೃಷಿ ಭೂಮಿಗಳಲ್ಲಿ ಸಾಮಾನ್ಯವಾಗಿ ಕಾಣಸಿಗುತ್ತವೆ. ಸೊಗಸಾಗಿ ಗೂಡುಕಟ್ಟುವುದರಲ್ಲಿ ಇವು ನಿಸ್ಸೀಮವು ಗೂಡುಕಟ್ಟಲು ಹುಲ್ಲನ್ನು ಬಳಸಿ ತಮ್ಮ ಕೊಕ್ಕು ಮತ್ತು ಕಾಲುಗಳಿಂದ ರೆಕ್ಕೆಗಳನ್ನು ಬಡಿಯುತ್ತ ಗೂಡನ್ನ ಕಟ್ಟುವುದು ನೋಡುವುದಕ್ಕೆ ಸೊಗಸಾಗಿರುತ್ತವೆ. ಸಾಧಾರಣವಾಗಿ ನದಿ ಕೆರೆಗಳ ಕಡೆ ಬಾಗಿದ ರೆಂಬೆಗಳಲ್ಲಿ ಹಾಗೂ ಈಚಲಗರಿಗಳ ತುದಿಗಳಲ್ಲಿ ಹೂಜಿಯಾಕಾರ ಅಥವಾ ಬಟ್ಟಿ ಪಾತ್ರೆಯಾಕಾರವಾಗಿ ಕಟ್ಟುತ್ತವೆ. ಒಟ್ಟಾರೆ ಗೂಡುಕಟ್ಟುವ ಕೆಲಸ ಗಂಡು ಪಕ್ಷಿಯದ್ದು. ಮೊಟ್ಟೆಯಿಟ್ಟು ಕಾವು ಕೊಡುವ ಕೆಲ್ಸ ಹೆಣ್ಣು ಪಕ್ಷಿಯದ್ದು. ಹೆಣ್ಣು ಪಕ್ಷಿ ತನ್ನ ಸಂಗಾತಿಯನ್ನ ಆರಿಸುವುದು ಒಂದು ಸೋಜಿಗ. ಗಂಡು ಪಕ್ಷಿಯದ್ದು ಗೂಡುಕಟ್ಟುವ ಕೆಲಸ ಅರ್ಧ ಗೂಡು ಕಟ್ಟಿ ತನ್ನ ಸಂಗಾತಿಯನ್ನ ಕರೆಯುತ್ತದೆ. ಗೂಡನ್ನ ಸಂಗಾತಿ ನೋಡಿ ಮೆಚ್ಚಿದರೆ ಗೂಡು ಪೂರ್ಣಗೊಳ್ಳುತ್ತದೆ. ಇಲ್ಲವಾದರೆ. ಅದನ್ನ ಅಲ್ಲಿಗೆ ಬಿಟ್ಟು ಮತ್ತೊಂದು ಹೊಸ ಗೂಡು ಕಟ್ಟಬೇಕು ಹಾಗಾಗಿ ಈ ಗೀಜುಗನ ಗೂಡುಗಳೊಟ್ಟಿಗೆ ಹಲವು ಪೂರ್ಣಗೊಳ್ಳದ ಗೂಡುಗಳು ಇರುತ್ತವೆ. ಒಂದು ಗಂಡು ಹಲವು ಹೆಣ್ಣು ಪಕ್ಷಿಗಳೊಂದಿಗೆ ಸಂಪರ್ಕವಿಟ್ಟುಕೊಂಡಿರುತ್ತವೆ. ಈ ವಿಶಿಷ್ಟ ನಡವಳಿಕೆಯನ್ನ ಪ್ರಪಂಚಕ್ಕೆ ಪರಿಚಯಿಸಿದ ಕೀರ್ತಿ ನಮ್ಮ ಭಾರತದ ಪಕ್ಷಿಪ್ರೇಮಿ ಸಲೀಂ ಅಲಿಯವರು. ಹೀಗೆ ನಮ್ಮ ಪಕ್ಷಿವೀಕ್ಷಣೆ ಮುಂದುವರೆಯಿತು. ಪಕ್ಕದಲ್ಲೇ ಇದ್ದ ಕೆರೆಯತ್ತ ಹೆಜ್ಜೆ ಹಾಕಿದೆವು. ನೀರಲ್ಲಿದ್ದ ಬೆಳ್ಳಕ್ಕಿಗಳನ್ನ ನೋಡಿಕೊಂಡು ಮನೆಯತ್ತ ಹೆಜ್ಜೆ ಹಾಕಿದೆವು.

© ನಾಗೇಶ್ ಓ ಎಸ್

ಇತ್ತೀಚಿನ ನಗರೀಕರಣ ಹಾಗೂ ಕೆರೆಗಳು ಬಾವಿಗಳು ಮಾಯವಾಗುತ್ತಿರುವುದರಿಂದ ಗೀಜುಗಗಳಂತ ಪಕ್ಷಿಗಳಿಗೆ ಆವಾಸ ನಾಶವಾಗಿ ನಗರೀಕರಣಕ್ಕೆ ಪಕ್ಷಿಗಳು ಹೊಂದಿಕೊಂಡಂತಾ ಬೆಳವಣಿಗೆಗಳು ಇತ್ತೀಚೆಗೆ ಕಾಣಬಹುದು.  ಗೀಜಗಗಳು ವಿದ್ಯುತ್ ತಂತಿಯಲ್ಲಿ ಗೂಡುಗಳನ್ನ ಕಟ್ಟಿರುವುದೇ ಇದಕ್ಕೆ ಸಾಕ್ಷಿಯಾದಂತೆ ಕಾಣುತ್ತದೆ. ಹೀಗೆ ಆವಾಸಗಳನ್ನ ನಾಶಮಾಡುತ್ತಾ ಹೋದರೆ ಇಂತಹಾ ಸೊಗಸಾದ ಪಕ್ಷಿಗಳನ್ನ ನಮ್ಮ ಮುಂದಿನ ಪೀಳಿಗೆ ಕಳೆದುಕೊಳ್ಳಬೇಕಾಗುತ್ತದೆ.

© ಮಹದೇವ .ಕೆ .ಸಿ

ಲೇಖನ: ಮಹದೇವ .ಕೆ .ಸಿ
JLR, ಬಂಡೀಪುರ ರಾಷ್ಟ್ರೀಯ ಉದ್ಯಾನವನ

Spread the love
error: Content is protected.