ಮೂಗು ತೋರಿದ ದಾರಿಯಂತೆ

ಮೂಗು ತೋರಿದ ದಾರಿಯಂತೆ

ನನ್ನ GATE ತರಗತಿಗೆ ಈಗಾಗಲೇ ತಡವಾಗಿದೆ. ಹಿಂದಿನಿಂದ ಬರುತ್ತಿದ್ದ ಪಾಮ್ ಪಾಮ್ ಎಂಬ ವಾಹನಗಳ ಸದ್ದು ನನ್ನ ಕಿವಿಗೆ ದೂರಿ ತಿವಿದಂತಾಗುತ್ತಿದೆ. ತಲೆಯೆತ್ತಿ ನೋಡಿದರೆ ಸಿಗ್ನಲ್ ಹಸಿರು ತೋರುತ್ತಿದೆ. ಆದರೆ ನನ್ನ ಮೆದುಳು ನನಗೆ ದಿಕ್ಸೂಚಿ ಆಗುವ ಬದಲು ಬೇರೇನೋ ಯೋಚಿಸುತ್ತಿದೆ. ಸಿಟ್ಟು ಬಂದು ಯಾವುದೋ ಒಂದು… ಎಂದು ಮನಸಿನಲ್ಲೇ ಅಂದುಕೊಂಡು ಬಲಕ್ಕೆ ಬೈಕನ್ನು ತಿರುಗಿಸಿದೆ. ಹೊಸ ದಾರಿಗೆ ಬಂದಂತಾಗಿತ್ತು. ಆದರೂ ಬಿಡದೆ ಎಡಕ್ಕೆ ತಿರುಗಿ, ಬಲಕ್ಕೆ ಹೋಗಿ, ಮುಂದೆ ಸಾಗಿ, ನುಗ್ಗಿಸಿ ಹೇಗೋ ಮಾಡಿ ಕೊನೆಗೂ ಕಾಲೇಜಿನ ಬಳಿ ಬಂದು ತಲುಪಿದೆ. ಕಾಲೇಜಿನ ಸುತ್ತ ಮುತ್ತಲಿನ ದಾರಿಗಳು ಪರಿಚಿತವಾದ್ದರಿಂದ ಕಾಲೇಜಿನ ಹತ್ತಿರತ್ತಿರ ಬರುತ್ತಿದ್ದಂತೆ ನನ್ನ ಮೇಲೆ ನನಗೆ ಒಂಥರಾ ಹೆಮ್ಮೆ. ಆಹ್..! ಅದೋ ಕೊನೆಗೂ ಕಾಲೇಜಿಗೆ ಸರಿಯಾಗಿ ಬಂದಿದ್ದೇನೆ ಎಂದು ನನ್ನ ಬೆನ್ನು ನಾನೇ ತಟ್ಟಿಕೊಂಡೆ. ಅಷ್ಟೊತ್ತಿಗಾಗಲೆ ತರಗತಿಗೆ 30 ನಿಮಿಷ ತಡವಾಗಿತ್ತು.

ನಿಮಗೂ ಈ ಸರ್ಕಸ್ ಕೇಳಿ ಬೆನ್ನು ತಟ್ಟಬೇಕೆನಿಸಬಹುದು, ಆದರೆ ಒಂದು ನಿಮಿಷ ತಾಳಿ. ನನ್ನ ಮುಂದಿನ ಮಾತಿನ ಬಳಿಕವೂ ನನ್ನ ಸಂಚರಣೆಯ ಕೊಂಡಾಡಬೇಕೆಂದಿದ್ದರೆ ಮಾಡಬಹುದು. ನಾನು ಈ ಕಾಲೇಜಿಗೆ ಮೊದಲ ಬಾರಿ ಅಲ್ಲದೆ ಸುಮಾರು 4 ಸಾರಿ ಬಂದಿದ್ದೆ. ಹಾಗೂ ಈ ಬಾರಿಯೂ ದಾರಿಯನ್ನು ಮರೆತಿದ್ದೆ. ಅದೋ ನಿಮ್ಮ ಮುಖ-ಭಾವ ಬದಲಾಗುತ್ತಿದೆ. ನನ್ನ ಮೇಲೆ ಸಣ್ಣ ಸಿಟ್ಟೂ ಬಂದಿರಬಹುದು. ಆದರೆ ನಾನೇನು ಮಾಡಲಿ ನನಗೆ 5-6 ಬಾರಿ ಬೆಂಗಳೂರಿನಲ್ಲಿ ಓಡಾಡಿದರೂ ಯಾವ ದಾರಿ ಎಲ್ಲಿಗೆ, ಹೇಗೆ, ಎಂದು ನನಗೆ ಬೇಗ ತಿಳಿಯದು. ಜೊತೆಗೆ ನಾಲ್ಕೈದು ಅವಳಿ-ಜವಳಿಗಳಂತೆ ರಸ್ತೆಗಳು ಒಂದೇ ರೀತಿ ಕಾಣುತ್ತವೆ. ನಮ್ಮ ಕಷ್ಟ ನಮಗೇ ಗೊತ್ತು ಬಿಡಿ. ಆದರೂ ತಪ್ಪು ನನ್ನದಲ್ಲ. ನನ್ನ ಮೂಗಿನದ್ದು.! ನನ್ನ ವಾಸನಾ ಗ್ರಹಿಕಾ ಸಾಮರ್ಥ್ಯ ಚೆನ್ನಾಗಿದ್ದಿದ್ದರೆ, ನಾನು ಸಹ ಎಷ್ಟೋ ಮಂದಿಯಂತೆ ಸರಿಯಾಗಿ ದಾರಿಗಳನ್ನು ಹಾಗೂ ತಿರುವುಗಳನ್ನು ನೆನಪಿಡುತ್ತಿದ್ದೆ.  ಸಮಯಕ್ಕೆ ಸರಿಯಾಗಿ ತರಗತಿಗೆ ಹಾಜರಾಗುತ್ತಿದ್ದೆ.

ಅರೆ ಇದೇನಿದು ದಾರಿ-ತಿರುವುಗಳಿಗೂ, ಮೂಗಿಗೂ ಎಲ್ಲಿಯ ಸಂಬಂಧ? ಏನು ಓದುಗರ ದಾರಿ ತಪ್ಪಿಸುವ ಪ್ರಯತ್ನವೇನು? ಎಂಬ ಪ್ರಶ್ನೆ ನಿಮಗೂ ಕೇಳಬೇಕೆನಿಸಿರಬಹುದು. ಅದನ್ನು ನಾನೇ ಕೇಳಿಕೊಳ್ಳುತ್ತೇನೆ. ನಿಜವಾಗಿಯೂ ನಿಮ್ಮ ದಾರಿ ತಪ್ಪಿಸುವ ಯಾವ ಉದ್ದೇಶವೂ ನನಗಿಲ್ಲ. ಬದಲಿಗೆ ಹೊಸ ವಿಷಯ ಒಂದನ್ನು ನಿಮ್ಮ ಮುಂದೆ ಈಗ ಬಿಚ್ಚಿಡಲಿದ್ದೇನೆ. ಅದೇ ಮೂಗಿಗೂ, ನಮ್ಮ ಸಂಚರಣೆ(Navigation)ಗೂ ಇರುವ ಸಂಬಂಧ.

ಅಹುದು, ನಿಮ್ಮ ಮೂಗಿನ ಗ್ರಹಿಕೆ ಸಾಮರ್ಥ್ಯ ಹೆಚ್ಚಿದ್ದಷ್ಟೂ ನಿಮ್ಮ ಸಂಚರಣಾ ಸಾಮರ್ಥ್ಯ ಹೆಚ್ಚಿರುತ್ತದೆ. ಎನ್ನುತ್ತಿದೆ ಹೊಸ ಸಂಶೋಧನೆಯೊಂದು. ಅದು ಹೇಗೆ? ಎಂಬುದೊಂದೇ ಪ್ರಶ್ನೆ. ಅಲ್ಲವೇ? ಹಾ.. ಮುಂದೆ ಬನ್ನಿ…..

ಹಾರ್ವರ್ಡ್ ಯುನಿವರ್ಸಿಟಿಯ ಲೋಯಿಸ ಎಂಬ ನರವಿಜ್ಞಾನಿ, 57 ಸ್ವಯಂ ಸೇವಕರ ಮೇಲೆ ನಡೆಸಿದ ಪ್ರಯೋಗದಿಂದ ಈ ವಿಷಯ ತಿಳಿದು ಬಂದಿದೆ.

ಈ ಪ್ರಯೋಗದಲ್ಲಿ ಮೊದಲಿಗೆ ಎಲ್ಲ 57 ಜನಕ್ಕೆ ಕಂಪ್ಯೂಟರಿನಲ್ಲಿ ದಾರಿ ಹುಡುಕುವ ಚಟುವಟಿಕೆಯನ್ನು ನೀಡಲಾಗಿತ್ತು. ನಂತರ ಕಂಪ್ಯೂಟರಿನಲ್ಲಿ ತೋರಿದ್ದ ಜಾಗಗಳಲ್ಲಿ, ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಹೇಗೆ ತಲುಪುವುದು ಎಂಬುದನ್ನೂ ಕೇಳಲಾಯಿತು.




ಮೆದುಳಿನ ಆರ್ಬಿಟೊಫ್ರಂಟಲ್ ಕಾರ್ಟೆಕ್ಸ್ (orbitofrontal cortex)

ಎರಡನೆಯದಾಗಿ ಒಬ್ಬೊಬ್ಬರ ವಾಸನಾ ಗ್ರಹಣಾ ಸಾಮರ್ಥ್ಯ ತಿಳಿಯಲು, 40 ವಿವಿಧ ಬಗೆಯ ಸುಗಂಧ ಭರಿತ ಟ್ಯೂಬುಗಳನ್ನು ಕೊಟ್ಟು, ಒಬ್ಬೊಬ್ಬರು ಒಂದೊಂದು ಬಗೆಯ ಸುಗಂಧವನ್ನು ಹೀರಿ, ತಮ್ಮ ಮುಂದೆ ಟಿ ವಿ ಯಲ್ಲಿ ಬರುವ ಪದಗಳಿಗೆ ಹೋಲಿಸಬೇಕು ಹಾಗೂ ಆ ಸುಗಂಧ ಯಾವುದೆಂದು ಗುರುತಿಸಬೇಕಾಗಿತ್ತು. ಪ್ರಯೋಗದ ಇವೆರೆಡೂ ಭಾಗಗಳು ಒಂದಕ್ಕೊಂದು ಸಂಬಂಧ ಇಲ್ಲದಂತೆ ಮೇಲ್ನೋಟಕ್ಕೆ ಕಂಡರೂ ಸತ್ಯಾಂಶ ಬೇರೆಯೇ ಇದೆ. ಅದು, ಚೆನ್ನಾಗಿ ವಾಸನೆ ಗ್ರಹಿಸಬಲ್ಲ ಸ್ವಯಂ ಸೇವಕರು ಅಷ್ಟೇ ಚೆನ್ನಾಗಿ ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ತೆರಳುವ ವಿಧಾನವನ್ನು ಉಳಿದವರಿಗಿಂತ ಸರಿಯಾಗಿ ತಿಳಿಯುತ್ತಿದ್ದರು ಎಂದು.





ಹಿಪ್ಪೊಕಾಂಪಸ್ (hippocampus)

ಕೇವಲ ಇಷ್ಟೇ ಎಂದು ತಿಳಿದೀರಿ ಜೋಕೆ. ಈ ಪ್ರಯೋಗವನ್ನು ನಾವು ಸಹ ಮಾಡಬಹುದು. ಹಾಗೆಂದು ಅದೇ ಸತ್ಯವೆಂದು ಹೊರಗೆ ಹೇಳಲಾಗದು. ಯಾಕೆ ಹೇಳಿ? ಏಕೆಂದರೆ ಇದಕ್ಕೆ ಸರಿಯಾದ ಪುರಾವೆಯೂ ಬೇಕು. ಅದೇ ವಿಷಯ ಹೇಳಲು ಹೊರಟೆ ಈಗ. ವಿಜ್ಞಾನಿಗಳು ಇವೆರೆಡೂ ಸಾಮರ್ಥ್ಯಗಳ ನಡುವಿನ ಸಂಬಂಧ ಬೆಸೆಯಲು ಕಾರಣ ಹುಡುಕಿ ಹುಡುಕಿ ಕೊನೆಗೆ ಮೆದುಳಿಗೆ ಬಂದು ನಿಂತರು. ಹೌದು ಮೂಗಿನ ವಾಸನೆಯ ಗ್ರಹಣಾ ಶಕ್ತಿಯು ನಮ್ಮ ಮೆದುಳಿನ ಆರ್ಬಿಟೊಫ್ರಂಟಲ್ ಕಾರ್ಟೆಕ್ಸ್ (orbitofrontal cortex)ನಲ್ಲಿ ಇರುವುದೆಂದು. ಹಾಗೆ ನಮ್ಮ ಸಂಚರಣಾ ಶಕ್ತಿಯು ಹಿಪ್ಪೊಕಾಂಪಸ್ (hippocampus)ನಲ್ಲಿ ಅಡಗಿರುವುದೆಂದು ತಿಳಿದರು. ನಂತರ 9 ಆರ್ಬಿಟೊಫ್ರಂಟಲ್ ಕಾರ್ಟೆಕ್ಸ್ ಸರಿಯಾಗಿರದ ಸ್ವಯಂ ಸೇವಕರ ಮೇಲೂ ಇದೇ ಎರಡು ಪ್ರಯೋಗ ಪ್ರಯೋಗಿಸಿದಾಗ ತಿಳಿದು ಬಂದದ್ದು, ಈ ಎಲ್ಲ 9 ಜನರಿಗೂ ವಾಸನಾ ಗ್ರಹಣಾ ಸಾಮರ್ಥ್ಯ ಹಾಗೂ ಸಂಚರಣಾ ಸಾಮರ್ಥ್ಯ ಬಹಳ ಮಟ್ಟಿಗೆ ಕಡಿಮೆ ಇದ್ದಿತೆಂದು.

ಇದೇ ನಿಜವಾದರೆ, ನಮ್ಮ ‘ಮೂಗು’ ನಮ್ಮ ದಾರಿದೀಪ ಎನ್ನಬಹುದೇನೋ. ಈ ವಿಷಯವನ್ನು “ಆಲ್ಫ್ಯಾಕ್ಟರಿ ಸ್ಪೇಷಿಯಲ್ ಹೈಪೋತಸಿಸ್” ಎಂದೂ ಕರೆಯುತ್ತಾರಂತೆ. ಏನೇ ಆದರೂ ಎಲ್ಲಾದಕ್ಕೂ ಸ್ಮಾರ್ಟ್ ಫೋನ್ ಗಳ ಮೊರೆ ಹೋಗುವ ಈಗಿನ ಕಾಲದಲ್ಲಿ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳುವವರು ವಿರಳ ಎನಿಸುತ್ತದೆ. ಆದರೆ ಅದರ ಪರಿಣಾಮವೂ ಮುಂದೆ ಕಾದೇ ಇರುತ್ತದೆ. ನಿಮ್ಮ ಅನಿಸಿಕೆಗಳನ್ನು ನಮಗೆ ಬರೆದು ತಿಳಿಸಿ..

ಮೂಲ ಲೇಖನ : ScienceNewsforStudents

ಲೇಖನ: ಜೈಕುಮಾರ್ ಆರ್.
ಡಬ್ಲೂ.ಸಿ.ಜಿ, ಬೆಂಗಳೂರು

Print Friendly, PDF & Email
Spread the love
error: Content is protected.