ಸಾಲು ಮರದ ತಿಮ್ಮಕ್ಕ
ಮೊನ್ನೆ ವಾಟ್ಸಪ್ ನಲ್ಲಿ ಒಂದು ವೀಡಿಯೋ ಬಂದಿತು, ಆ ವೀಡಿಯೋದಲ್ಲಿ ದೇಶದ ಪ್ರಮುಖ ಧುರೀಣರು ಚಪ್ಪಾಳೆ ಹಾಕುತ್ತಿದ್ದಾರೆ, ರಾಷ್ಟ್ರಪತಿಯವರ ರಕ್ಷಕಪಡೆಯವ ಶ್ವೇತವಸ್ತ್ರಧಾರಿಯೊಬ್ಬರು ಹಸಿರು ಸೀರೆಯುಟ್ಟು ವಿಭೂತಿ ಧರಿಸಿದ ಮಹಿಳೆಯನ್ನು ಎಡಗೈ ಹಿಡಿದು ಕರೆತರುತ್ತಿದ್ದಾರೆ, ವ್ರದ್ಧೆ ತನ್ನೆರಡೂ ಕೈಗಳನ್ನೂ ಜೋಡಿಸಿ ಆದಷ್ಟು ಕಡಿಮೆ ಕುಂಟುತ್ತಾ ಮುಂದೆಸಾಗಿ ದೇಶದ ನಾಲ್ಕನೇ ಅತ್ಯುನ್ನತ ಪ್ರಶಸ್ತಿಯಾದ ಪದ್ಮಶ್ರೀಯನ್ನು ರಾಷ್ಟ್ರಪತಿಗಳಿಂದ ಸ್ವೀಕರಿಸುತ್ತಾರೆ. ಛಾಯಾಚಿತ್ರಕ್ಕೆ ಮುಖಮಾಡಿ ಎಂದು ರಾಷ್ಟ್ರಪತಿಗಳು ಕೈ ಮಾಡುವುದು ಕಾಣುತ್ತದೆ, ಅತ್ತ ಮುಖ ತಿರುಗಿಸಿದವರು ಮತ್ತೆ ರಾಷ್ಟ್ರಪತಿಗಳತ್ತ ತಿರುಗಿ ಅವರ ತಲೆ ಮುಟ್ಟಿ ಆಶೀರ್ವದಿಸುತ್ತಾರೆ, ರಾಷ್ಟ್ರಪತಿಗಳು ಕೈಮುಗಿದು ಆ ಹಿರಿಯಜೀವದ ಆಶೀರ್ವಾದ ಸ್ವೀಕರಿಸುತ್ತಾರೆ. ಅವರೇ ಸಾಲುಮರದ ತಿಮ್ಮಕ್ಕ. ತುಮಕೂರು ಜಿಲ್ಲೆಯ ಕ್ವಾರಿ ಕೆಲಸಗಾರ್ತಿಯಾದ ಇವರು ಮಕ್ಕಳಿಲ್ಲದ ಕೊರತೆಯನ್ನು ನೀಗಿಸಲು ಹುಲಿಕಲ್ ಕುದೂರುಗಳ ನಡುವೆ ಇರುವ 4.5 ಕಿಲೊಮೀಟರ್ ರಸ್ತೆಬದಿಯಲ್ಲಿ 4 ಕಿಲೊಮೀಟರ್ ವರೆಗೂ ಸುಮಾರು 400 ಮರಗಳನ್ನು ನೆಟ್ಟು ನೀರುಹಾಕಿ ಬೇಲಿ ಕಟ್ಟಿ ಕಾಪಾಡಿದ್ದಾರೆ. ಅವರು ಪರಿಸರವಾದಿ ಎಂದು ಗುರುತಿಸಿ ಭಾರತ ಸರ್ಕಾರ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿದ್ದಾರೆ.
ತಿಮ್ಮಕ್ಕ ಹಾಗೂ ಚಿಕ್ಕಯ್ಯರಿಗೆ ಬೇಕಾದಷ್ಟು ಆಲದ ಗಿಡಗಳು ಸಿಗುತ್ತಿದ್ದವು. ಮೊದಲವರ್ಷ ಹತ್ತು ಗಿಡ ನಂತರದ ವರ್ಷ 15 ಗಿಡಗಳು ಆನಂತರ 20 ಹೀಗೆ ಅವರ ಸಾಮರ್ಥ್ಯಾನುಸಾರ ಮರಗಳನ್ನು ನೆಟ್ಟು ಪೋಷಿಸಿದ್ದಾರೆ. ಎಲ್ಲಗಿಡಗಳನ್ನು ಮಳೆಗಾಲದಲ್ಲಿ ನೆಟ್ಟು ಮಳೆ ಬಾರದಾಗ ಕಿಲೋಮೀಟರುಗಟ್ಟಲೆ ನೀರನ್ನು ಹೊತ್ತೊಯ್ದು ಗಿಡಗಳನ್ನು ಪೋಷಿಸಿದ್ದಾರೆ, ಮುಂದಿನ ಮಳೆಗಾಲದ ಸಮಯಕ್ಕೆ ಕಳೆದ ವರ್ಷದ ಮರಗಳು ಬೇರು ಬಿಟ್ಟುಕೊಂಡಿದ್ದರಿಂದ ಅವರು ಹೊಸದಾಗಿ ಗಿಡಗಳನ್ನು ನೆಟ್ಟಿದ್ದಾರೆ.
ಈಗ ಗಿಡ ನೆಟ್ಟರೆ ಏನು ಮಹಾನ್ ಕೆಲಸ ಎನಿಸಬಹುದು, ಇಂದಿನ ಜನರ ಮನೋಭಾವ ಹೇಗಿದೆ ಅನ್ನುವುದಕ್ಕೆ ಒಂದು ಉದಾಹರಣೆ: ಮನೆಮುಂದೆ ಗಿಡ ಬೆಳೆಯುತ್ತಿದ್ದರೆ ಅದು ಮರವಾಗಿ ಆಳಕ್ಕೆ ಬೇರುಬಿಟ್ಟು ಅಡಿಪಾಯಕ್ಕೆ ತೊಂದರೆ ಆಗತ್ತೆ ಕಿತ್ತು ಬಿಸಾಡಿ ಎಂದು ನನಗೆ ಸಲಹೆಕೊಟ್ಟು ನಾನದನ್ನು ಕೇಳದೆ ಇದ್ದಾಗ ಅದನ್ನು ಸ್ವತಃ ಕಿತ್ತು ಬಿಸಾಡಿದ್ದರು ನನ್ನ ಹಿತೈಷಿಗಳು. ಎಲ್ಲವನ್ನೂ ತನ್ನದಾಗಿಸಿಕೊಂಡು ನಾನೇನು ಮಾಡಬಲ್ಲೆ ಎಂದು ಯೋಚಿಸುತ್ತಾ ರಸ್ತೆಬದಿಯಲ್ಲಿ. ಜನ ಜಾನುವಾರುಗಳಿಗೆ ನೆರಳಾಗಲಿ ಎಂದು ಮರಗಳನ್ನು ಬೆಳೆಸುವುದು ಒಂದು ಮಹತ್ಕಾರ್ಯವೇ ಸರಿ. ಸಾಲು ಮರದ ತಿಮ್ಮಕ್ಕರಿಂದ ನಾವೆಲ್ಲರೂ ಉತ್ತೇಜನವನ್ನು ಪಡೆದು ನಮ್ಮ ಮನೆ ಮುಂದೆ ಒಂದು ಗಿಡ ನೆಟ್ಟು ಅದು ಮರವಾಗಿ ಬೆಳೆಯುವುದನ್ನು ಕಾಣುವುದೇ ನಾವು ಸಾಲುಮರದ ತಿಮ್ಮಕ್ಕನಿಂದ ಕಲಿಯಬೇಕಾದ ಪಾಠ. ಸಾಲು ಮರದತಿಮ್ಮಕ್ಕನಿಗೆ ಹಲವಾರು ಪ್ರಶಸ್ತಿಗಳು ಸಂದಿವೆ. ಅವುಗಳಲ್ಲಿ ಪ್ರಮುಖವಾದದ್ದು ಪದ್ಮಶ್ರೀ ಪ್ರಶಸ್ತಿ, ನಾಡೋಜ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಮುಂತಾದವು. ಬಿಬಿಸಿ 2016 ರಲ್ಲಿ ಅತಿ ಪ್ರಭಾವಶಾಲಿ ಮಹಿಳೆಯರ ಪಟ್ಟಿಗೆ ಸಾಲುಮರದ ತಿಮ್ಮಕ್ಕನ ಹೆಸರನ್ನು ಸೇರಿಸಿದ್ದರು.
ಲೇಖನ:ಡಾ. ದೀಪಕ್, ಭ
ಮೈಸೂರು ಜಿಲ್ಲೆ
ಮೈಸೂರಿನ ನಿವಾಸಿ, ವೃತ್ತಿಯಲ್ಲಿ ದಂತವೈದ್ಯ ಹವ್ಯಾಸಿ ಬರಹಗಾರ ಹವ್ಯಾಸಿ ಛಾಯಾಚಿತ್ರಗಾರ