ಬೆಂದಾಪುರ…..!!!!!!

ಬೆಂದಾಪುರ…..!!!!!!

ಮಾನವನ ಜೀವ ವಿಕಾಸದಲ್ಲಿ ಬೆಂಕಿ ಪ್ರಮುಖ ಪಾತ್ರವಹಿಸಿದೆ. ನಾಗರೀಕತೆ ಬೆಳೆದಂತೆ ಮಾನವ ಅತಿಯಾದ ಬುದ್ಧಿಶಕ್ತಿಯಿಂದ ಈ ಶತಮಾನದಲ್ಲಿ ತನಗೆ ಅರಿವಿಲ್ಲದಂತೆ ತನ್ನ ಅಳಿವಿನ ದಾರಿಯನ್ನು ಸುಗಮಗೊಳಿಸಿಕೊಳ್ಳುತ್ತಿದ್ದಾನೆ. ಮಾನವನ ಸಣ್ಣ ಬುದ್ಧಿಯಿಂದ ಮಳೆಗಾಲದಲ್ಲಿ ಹಚ್ಚ ಹಸಿರಾಗಿ ಕಂಗೊಳಿಸುವ ಕಾಡುಗಳು ಬೇಸಿಗೆ ಬರುತ್ತಿದ್ದಂತೆ ಒಣಗಿ ಬರಡಾಗಿಬಿಡುತ್ತವೆ. ಒಣಗಿ ಬಿದ್ದ ತರಗೆಲೆಗಳು, ಬರಡಾದ ಮರಗಳಲ್ಲಿ, ಕಾಡಿನ ಖಗ-ಪಕ್ಷಿಗಳಲ್ಲಿ ಈ ಮಾನವ ಆತಂಕ ಸೃಷ್ಠಿಸಿ ಬಿಡುತ್ತಿದ್ದಾನೆ. ಅದೇ… ಬೆಂಕಿ… ಕಾಳ್ಗಿಚ್ಚು…!.

ಹೌದು ಬೇಸಿಗೆಯಲ್ಲಿ ನಮ್ಮ ಕಾಡುಗಳು ಕಾಳ್ಗಿಚ್ಚಿಗೆ ಬಲಿಯಾಗುತ್ತಿವೆ, ಅದೇನು ಸ್ವಾಭಾವಿಕ ಕಾಳ್ಗಿಚ್ಚಲ್ಲ ಬದಲಾಗಿ ಮೋಜಿಗೋ ಮೂರ್ಖ ಮತಿಹೀನರ, ಇಲಾಖೆಯ ಮೇಲಿನ ಕೋಪಕ್ಕೋ ಇಂದು ಕಾಡುಗಳು ಬೆಂಕಿಗೆ ಆಹುತಿಯಾಗುತ್ತಿವೆ.

ಕೆಲ ದಿನಗಳ ಹಿಂದೆ ಬಂಡಿಪುರದಲ್ಲಿ ಉಂಟಾದ ಕಾಳ್ಗಿಚ್ಚಿನ ಅನಾಹುತ ರಾಷ್ಟ್ರ ವ್ಯಾಪಿ ಸುದ್ದಿಯಾಗಿತ್ತು. ಆದರೆ ಅದನ್ನ ಕಣ್ಣಾರೆ ಕಂಡ ನಾನು ನೊಂದು ಇದಕ್ಕೆಲ್ಲಾ ಕಾರಣವೇನು? ಎಂಬ ಗೊಂದಲದಲ್ಲಿಯೇ ಕಾಳ್ಗಿಚ್ಚಿನ ಬಗ್ಗೆ ಒಂದಿಷ್ಟು ವಿಷಯಗಳನ್ನು ಸಂಗ್ರಹಿಸತೊಡಗಿದೆ.

ಅಂದು ಮಧ್ಯಾಹ್ನದ ಸಮಯ ಇದ್ದಕ್ಕಿದ್ದಂತೆ ದಟ್ಟ ಹೊಗೆ ಆಕಾಶವನ್ನು ಆವರಿಸಿ ವಾತಾವರಣವನ್ನೇ ಮಬ್ಬಾಗಿಸಿಬಿಟ್ಟಿತ್ತು. ಮುಗಿಲೆತ್ತರಕ್ಕೆ ರಕ್ಕಸನಂತೆ ಉರಿಯುತ್ತಿದ್ದ ಬೆಂಕಿಯ ಜ್ವಾಲೆ, ಬೆಂಕಿಯ ಕೆನ್ನಾಲಿಗೆಯಿಂದ ತಪ್ಪಿಸಿಕೊಳ್ಳಲು ಹಾರುವ ಕೀಟಗಳು, ತಮ್ಮ ಗೂಡುಗಳು ಬೆಂಕಿಗಾಹುತಿಯಾಗುವುದರ ಬಗ್ಗೆ ತಿಳಿವಿರದೆ ಬೆಂಕಿಯಿಂದ ಹಾರುವ ಕೀಟಗಳನ್ನು ಹಿಡಿಯಲು ಕಾದುಕುಳಿತಿದ್ದ ಮುಗ್ಧ ಕಾಜಾಣ ಹಕ್ಕಿಗಳು ದಿಕ್ಕುದೆಸೆಯಿಲ್ಲದೆ ಓಡುತ್ತಿದ್ದ ಜಿಂಕೆಗಳ ಮುಖದಲ್ಲಿ ಭೀತಿ ಎದ್ದು ಕಾಣುತ್ತಿತ್ತು. ಅಬ್ಬಾ!!! ಮನಸ್ಸು ಭಾರವಾಗಿತ್ತು. ಸತತ ಮೂರುದಿನಗಳ ಕಾಲ ಅರಣ್ಯ ಇಲಾಖೆಯ ಸಿಬ್ಬಂದಿ ಹಾಗೂ ಸ್ವಯಂ ಸೇವಕರು ಹರಸಾಹಸ ಪಟ್ಟರೂ ನಿಯಂತ್ರಣಕ್ಕೆ ಬಾರದ ಬೆಂಕಿ ಕೊನೆಗೆ ಎಲ್ಲ ಸುಟ್ಟು ಭಸ್ಮವಾದ ಮೇಲೆ ತಣ್ಣಗಾಯಿತು. ಕಣ್ಣಾಯಿಸಿದಷ್ಟು ಬೆಂದು ಬೂದಿಯಾದ ಕಾಡು ಅಕ್ಷರಶಃ ಸ್ಮಶಾನದಂತಾಗಿತ್ತು. ಆಗಸದಲ್ಲಿ ಹಾರಾಡುತ್ತಿದ್ದ ಹದ್ದು, ಗಿಡುಗಗಳು ಕಾಡಿನ ಸ್ಥಿತಿಯನ್ನು ವಿವರಿಸುತ್ತಿದ್ದವು. ಬೆಂಕಿಯಲ್ಲಿ ಅರೆಬರೆ ಬೆಂದಂತಿದ್ದ ಮರಗಿಡಗಳ ಸ್ಥಿತಿ ಮೂಕರೋಧನದಂತೆ ಕಂಡುಬಂದಿತು. ಅವು ನನ್ನ ಮನಸ್ಸಿನ ಆಳಕ್ಕಿಳಿದು “ನಮಗೇಕೆ ಈ ಶಿಕ್ಷೆ?” ಎಂದು ಪ್ರಶ್ನಿಸುವಂತಿದ್ದವು.

ತಂತ್ರಜ್ಞಾನ ಇಷ್ಟು ಮುಂದುವರೆದರೂ ನಮ್ಮ ಅರಣ್ಯ ಇಲಾಖೆ ಮಾತ್ರ ಬೆಂಕಿ ನಂದಿಸಲು ಆಧುನಿಕ ತಂತ್ರಜ್ಞಾನವನ್ನು ಬಳಸುವಲ್ಲಿ ವಿಫಲವಾಗಿದೆ. ಕೇವಲ ತೋರಿಕೆಗಷ್ಟೇ ಕೆಲವು ಸಲಕರಣೆಗಳು ನಿರ್ದಿಷ್ಠ ವಲಯದಲ್ಲಿ ಮಾತ್ರ ಕಂಡುಬಂದದ್ದು ದುರಂತ. ಬಂಡೀಪುರದ ಕಾಳ್ಗಿಚ್ಚನ್ನು ಗಮನಿಸಿದರೆ ಹಲವಾರು ಅನುಮಾನಗಳು ಕಾಡುತ್ತವೆ, ಇಷ್ಟು ಪ್ರಸಿದ್ಧ ಹುಲಿ ಸಂರಕ್ಷಿತಾರಣ್ಯದಲ್ಲಿ ಕಾಳ್ಗಿಚ್ಚಿನ ತಡೆಗೆ ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳದೆ ಇರುವುದೇ ಕಾರಣ ಎಂದು ಹಲವಾರು ದಿನಪತ್ರಿಕೆಗಳು ಸುದ್ದಿ ಮಾಡಿದ್ದವು. ಹೌದು ಅದು ಸತ್ಯ ಕೂಡ ಏಕೆಂದರೆ ಕಾಡಲ್ಲಿ ಕಂಡ ಕಾಳ್ಗಿಚ್ಚು ಹಂತ ಹಂತವಾಗಿ ತಡೆಯಲು ಬೇಕಾದ ಬೆಂಕಿ ರೇಖೆಗಳನ್ನೇ ಇಲಾಖೆ ಸರಿಯಾಗಿ ನಿರ್ವಹಿಸದಿರುವುದೇ ಇಷ್ಟು ಅನಾಹುತಕ್ಕೆ ಕಾರಣ. ಇಲಾಖೆಯಲ್ಲಿ ಕಾಡಿನ ಮೇಲೆ ಅತೀವ ಪ್ರೀತಿ ಹೊಂದಿರುವಂತಹ ಅಧಿಕಾರಿಗಳ ಸಂಖ್ಯೆ ತೀರ ವಿರಳ. ಸರ್ಕಾರಿ ಕೆಲಸಕ್ಕಾಗಿ ಬಂದು ಕೂತ ಹಲವಾರು ಅಧಿಕಾರಿಗಳ ನಿರ್ಲಕ್ಷಕ್ಕೆ ಇಂದು ಮೂಕಪ್ರಾಣಿಗಳು ನರಕ ವೇದನೆ ಪಡಬೇಕಾಗಿದೆ. ಹಾಗೂ ಇಷ್ಟು ಸ್ವಾಭಾವಿಕವಾಗಿ ಬೆಳೆದ ಕಾಡು ತನ್ನ ಆವಾಸವನ್ನ ಕಳೆದುಕೊಳ್ಳುವ ಸ್ಥಿತಿಗೆ ಬಂದು ನಿಂತಿದೆ. ಇನ್ನಾದರೂ ಇಲಾಖೆ ಎಚ್ಚೆತ್ತುಕೊಂಡು ಕಾರ್ಯನಿರ್ವಹಿಸುವುದು ಅನಿವಾರ್ಯ.

ಸಂಶೋಧಕರ ಪ್ರಕಾರ ಸ್ವಾಭಾವಿಕ ಕಾಳ್ಗಿಚ್ಚು ಭಾರತದ ಯಾವುದೇ ಪ್ರದೇಶಗಳಲ್ಲಿ ಆಗುವುದಿಲ್ಲ. ಭಾರತದಲ್ಲಾಗುವ ಎಲ್ಲಾ ಕಾಳ್ಗಿಚ್ಚಿನ ಹಿಂದೆ ಯಾವುದೋ ಒಂದು ಮಾನವ ಪ್ರಾಣಿಯ ಕೈವಾಡ ಇದ್ದೇ ಇರುತ್ತದೆ. ಸಾಮಾನ್ಯವಾಗಿ ಕಾಡುಗಳಿಗೆ ಬೆಂಕಿ ಯಾರೊ ಬಂದು ಹಚ್ಚುವುದಿಲ್ಲ ಕಾಡಂಚಿನ ಹಳ್ಳಿಗಳಲ್ಲಿನ ಕೆಲ ಕಿಡಿಗೇಡಿಗಳೇ ಇಂತಹ ಕೃತ್ಯಗಳನ್ನ ಮಾಡುವುದು. ಯಾವುದೋ ಮೋಜು ಮಸ್ತಿಗೋ ಅಥವಾ ಇಲಾಖೆಯ ಮೇಲಿನ ಕೋಪಕ್ಕೋ ಇಂತಹ ಕೃತ್ಯಕ್ಕೆ ಕೈ ಹಾಕಿ ಸಾವಿರಾರು ಎಕರೆ ಅರಣ್ಯ ನಾಶಕ್ಕೆ ಕಾರಣರಾಗಿದ್ದಾರೆ. ಕಾಳ್ಗಿಚ್ಚಿನ ಪರಿಣಾಮ ಎಷ್ಟರ ಮಟ್ಟಿಗೆ ಇದೆ ಎಂದರೆ, 2017ರ ಬಂಡಿಪುರದ ಕಾಳ್ಗಿಚ್ಚಿನಲ್ಲಿ ಬರಡಾದ ಪ್ರದೇಶದಲ್ಲಿ ಇಂದು ಕೇವಲ ಲಂಟಾನ ಪಾರ್ತೇನಿಯಂ ಹಾಗೂ ಯುಪತೋರಿಯಂ ನಂತಹ ಕಳೆಯನ್ನು ಮಾತ್ರ ಕಾಣಬಹುದು. ಅಧ್ಯಯನದ ಪ್ರಕಾರ ಕಾಳ್ಗಿಚ್ಚು ಕಾಡಿನ ಆವಾಸಗಳ ಮೇಲೆ ಅತೀವ ಪ್ರಭಾವ ಬೀರುತ್ತದೆ.

  • ಆವಾಸಗಳ ನಾಶ:

ಕಾಡುಗಳಲ್ಲಿ ಆವಾಸ ಬಹುಮುಖ್ಯ ಆಹಾರ ಸರಪಳಿಯಲ್ಲಿ ಪ್ರಾಣಿ ಸಂಕುಲಕ್ಕೆ ಬೇಕಾದ ನಿರ್ದಿಷ್ಠ ಆವಾಸದ ಅವಶ್ಯವಿರುತ್ತದೆ. ಈ ಕಾಳ್ಗಿಚ್ಚಿನಿಂದ ಆವಾಸಗಳು ಹಾಳಾಗಿ ಆಹಾರ ಸರಪಳಿಗೆ ಹೊಡೆತ ಬೀಳುತ್ತದೆ. ಪಕ್ಷಿಗಳು ತಮ್ಮ ಗೂಡುಗಳನ್ನ ಕಳೆದುಕೊಳ್ಳುತ್ತವೆ. ಸಸ್ಯಾಹಾರಿ ಪ್ರಾಣಿಗಳಿಗೆ ಸೂಕ್ತವಾದ ಆವಾಸ ಹುಲ್ಲುಗಾವಲು. ಕಾಳ್ಗಿಚ್ಚಿನಿಂದ ಹುಲ್ಲುಗಾವಲು ನಾಶವಾಗಿ ಮತ್ತೆ ಹುಲ್ಲು ಬೆಳೆಯುವಷ್ಟರಲ್ಲಿ ಲಂಟಾನದಂತಹ ಕಳೆಗಿಡಗಳು ಬೆಳೆದು ಆವಾಸವನ್ನು ಆಕ್ರಮಿಸಿಬಿಡುತ್ತವೆ. ಆಗ ಈ ಸಸ್ಯಹಾರಿಗಳ ಕಥೆ? ಸಾಮಾನ್ಯವಾಗಿ ಇವು ಬೇರೊಂದು ಸ್ಥಳಕ್ಕೆ ವಲಸೆ ಹೋಗಬಹುದು. ಆದರೆ ಇವುಗಳನ್ನೇ ಅವಲಂಬಿಸಿರುವ ಮಾಂಸಾಹಾರಿಗಳು ಎಲ್ಲಿಗೆ ಹೋಗಬೇಕು? ಇಲ್ಲಿ ಆಹಾರ ಸರಪಳಿಯಲ್ಲಿ ವ್ಯತ್ಯಾಸವಾಗುತ್ತದೆ.

  • ನೈಸರ್ಗಿಕ ಪುನಶ್ಚೇತನಕ್ಕೆ ಹಾನಿ.

ಕಾಳ್ಗಿಚ್ಚಿನಿಂದ ನೈಸರ್ಗಿಕವಾಗಿ ಮೊಳೆಯುವ ಬೀಜಗಳು ಹಾಗೂ ಗಿಡಗಳು ಬೆಂಕಿಯ ಕೆನ್ನಾಲಿಗೆಗೆ ಬಲಿಯಾಗಿ ಕಾಡಿನ ಪುನಶ್ಚೇತನವನ್ನು ಕುಂಠಿತಗೊಳಿಸುತ್ತದೆ.

  • ಜೀವವೈವಿಧ್ಯತೆಯ ನಷ್ಟ ಹಾಗೂ ಕಳೆಗಳ ಆಕ್ರಮಣ:

ಕಾಳ್ಗಿಚ್ಚಾದ ಕೆಲ ತಿಂಗಳುಗಳಲ್ಲೇ ಸ್ಥಳೀಯ ಪ್ರಭೇದದ ಮರಗಳು ಬೆಳೆಯದೆ ಕಳೆಗಳ ಆಕ್ರಮಣ ಶುರುವಾಗುತ್ತದೆ. ಲಂಟಾನ ಪಾರ್ಥೇನಿಯಂ, ಯುಪತೋರಿಯಂ ನಂತಹ ಕಳೆಗಿಡಗಳು ಸುಲಭವಾಗಿ ಮೂಲ ಆವಾಸವನ್ನ ಆಕ್ರಮಿಸಿ ಹಾಳುಗೆಡವಲು ಕಾಳ್ಗಿಚ್ಚು ಸಹಕಾರಿಯಾಗುತ್ತದೆ.

  • ಜಾಗತಿಕ ತಾಪಮಾನ ಮತ್ತು ಹವಾಮಾನ ಬದಲಾವಣೆ:

ಸಾವಿರಾರು ಎಕರೆ ಕಾಡು ನಿರಂತರವಾಗಿ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಸುಡುವಾಗ ಹೊರ ಸೂಸುವ ದಟ್ಟ ಹೊಗೆ ನೇರವಾಗಿ ಜಾಗತಿಕ ತಾಪಮಾನಕ್ಕೆ ಕಾರಣವಾಗುತ್ತಿದೆ.

  • ಮಾನವ ಪ್ರಾಣಿ ಸಂಘರ್ಷ

ಬೆಂಕಿಗೆ ಹೆದರಿ ಪ್ರಾಣಿಗಳು ಬೆಂಕಿಯಿಂದ ತಪ್ಪಿಸಿಕೊಳ್ಳಲು ದಿಕ್ಕಾಪಾಲಾಗಿ ಒಡಿ ಕೆಲವೊಮ್ಮೆ ಕಾಡಂಚಿನ ಹಳ್ಳಿಗಳಿಗೆ ಬರುವ ಸಾಧ್ಯತೆಗಳೇ ಹೆಚ್ಚು. ಇದರಿಂದ ಮಾನವ-ಪ್ರಾಣಿ ಸಂಘರ್ಷಕ್ಕೆ ಕಾರಣವಾಗಬಹುದು. ಹಾಗಾದರೆ ಕಾಳ್ಗಿಚ್ಚಿನ ನಿಯಂತ್ರಣ ಹೇಗೆ? ಇದೊಂದು ಯಕ್ಷ ಪ್ರಶ್ನೆಯೇ ಸರಿ. ಇದಕ್ಕಾಗಿ ನಮ್ಮ ಅರಣ್ಯ ಇಲಾಖೆ ಹಲವಾರು ಕಾರ್ಯಕ್ರಮಗಳನ್ನು ದೊಡ್ಡ ಮಟ್ಟದಲ್ಲೇ ರೂಪಿಸಿಕೊಂಡಿದೆ.

  • ಕಾಡಂಚಿನ ಹಳ್ಳಿಗಳೊಂದಿಗೆ ಇಲಾಖೆಯ ಉತ್ತಮ ಸಂಬಂಧ ಹಾಗೂ ಜಾಗೃತಿ ಮೂಡಿಸುವುದು.

ಬೆಂಕಿ ಸಾಧಾರಣವಾಗಿ ಶುರುವಾಗುವುದು ಕಾಡಂಚಿನ ಹಳ್ಳಿಗಳಿಂದಲೇ. ಕಾಡಂಚಿನ ಜನ ಕಾಡಿನೊಂದಿಗೆ ಹಲವಾರು ರೀತಿ ಅವಲಂಬಿತರಾಗಿರುತ್ತಾರೆ. ಉದಾಹರಣೆಗೆ ಸೌದೆ, ಆಡುಗಳಿಗೆ ಸೊಪ್ಪು, ಹುಣಸೇ ಹಣ್ಣಿಗೋ ಮತ್ತು ತಮ್ಮ ರಾಸುಗಳನ್ನ ಮೇಯಿಸಲೋ… ಹಾಗಾಗಿ ಇಲಾಖೆ ಈ ಹಳ್ಳಿಗಳಲ್ಲಿ ಕಾಡಿನ ಮಹತ್ವ ಕಾಡಿನಿಂದಾಗುವ ಉಪಯೋಗಗಳ ಬಗ್ಗೆ ಅರಿವು ಮೂಡಿಸುವ ಬೀದಿ ನಾಟಕಗಳನ್ನೂ ಹಾಗೂ ಅರಣ್ಯಾಧಿಕಾರಿಗಳೊಂದಿಗೆ ಗ್ರಾಮಸ್ಥರ ಸಮಾಲೋಚನೆ ಸಭೆಗಳನ್ನು ಆಯೋಜಿಸಬೇಕು. ವನ್ಯಪ್ರಾಣಿಗಳಿಂದಾದ ಬೆಳೆನಾಶದ ಪರಿಹಾರಗಳನ್ನು ಕಾಲಕಾಲಕ್ಕೆ ರೈತರ ಕೈಸೇರುವಂತೆ ನೋಡಿಕೊಳ್ಳುವುದು ಹಾಗೂ ಇಲಾಖೆಯಿಂದ ಸಿಗಬೇಕಾದ ಸವಲತ್ತುಗಳನ್ನು ಕಾಲಕಾಲಕ್ಕೆ ಫಲಾನುಭವಿಗಳ ಕೈಸೇರುವಂತೆ ಮಾಡುವುದು ಆದ್ಯ ಕರ್ತವ್ಯ.

  • ಬೆಂಕಿ ರೇಖೆಗಳ ನಿರ್ವಹಣೆ

ಸಾಧಾರಣವಾಗಿ ಇಲಾಖೆಯಲ್ಲಿ ಕಾಳ್ಗಿಚ್ಚು ನಿಯಂತ್ರಣಕ್ಕೆ ಕಾಡುಗಳನ್ನ ಪ್ರತೀ 5 ಕಿ.ಮೀ ವಿಸ್ತೀರ್ಣದಲ್ಲಿ ಚೌಕಾಕಾರವಾಗಿ ವಿಂಗಡಿಸಿ ಸುತ್ತಲು ಬೆಂಕಿ ರೇಖೆಯನ್ನ ನಿರ್ಮಿಸಿ, ಆ ರೇಖೆಯನ್ನ ಸುಟ್ಟು ಬೇಸಿಗೆ ಬರುವಷ್ಟರಲ್ಲಿ ಸಿದ್ಧಮಾಡಿಟ್ಟುಕೊಂಡಿರುತ್ತಾರೆ. ಇದರಿಂದ ಬೆಂಕಿ ಮುಂದಕ್ಕೆ ಸಾಗುವುದನ್ನು ತಡೆಯಲು ಈ ಬೆಂಕಿರೇಖೆಗಳು ಸಹಕಾರಿಯಾಗುತ್ತವೆ. ಇವುಗಳನ್ನ ಅರಣ್ಯ ಇಲಾಖೆ ಉತ್ತಮವಾಗಿ ನಿರ್ವಹಿಸಬೇಕು.

ಅರಣ್ಯ ಇಲಾಖೆ ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಮುಖ್ಯ ಕೆಲಸ ಕಾಡಂಚಿನ ಹಳ್ಳಿಗರಲ್ಲಿ ಕಾಡಿನ ಮೇಲೆ ಪ್ರೇಮ ಹಾಗೂ ಕಾಡಿನ ಮಹತ್ವವನ್ನು ಹಳ್ಳಿಗರ ಮನದಾಳದಲ್ಲಿ ಉಳಿಯುವಂತೆ ಮಾಡಬೇಕು. ಹಾಗೂ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವವರಲ್ಲೂ ಕಾಡಿನ ಮಹತ್ವ ಹಾಗೂ ಅವುಗಳ ಬಗೆಗೆ ಒಲವು ಮೂಡುವಂತಾದಾಗಾ ಮಾತ್ರ ಕಾಳ್ಗಿಚ್ಚಿನಂತಹ ಮಹಾ ಮಾರಿಯಿಂದ ಅಳಿದುಳಿದ ಕಾಡುಗಳನ್ನು ರಕ್ಷಿಸಬಹುದಾಗಿದೆ. ಇಲ್ಲವಾದರೆ ನಮ್ಮ ಮುಂದಿನ ಪೀಳಿಗೆಗೆ ನಮ್ಮ ಕೊಡುಗೆ ಶೂನ್ಯವಾಗುವುದಂತೂ ಕಟ್ಟಿಟ್ಟ ಬುತ್ತಿಯೇ ಸರಿ!

ಚಿತ್ರ – ಲೇಖನ: ಮಹದೇವ ಕೆ. ಸಿ.
ಡಬ್ಲ್ಯೂ.ಸಿ.ಜಿ., ಬೆಂಗಳೂರು

Print Friendly, PDF & Email
Spread the love
error: Content is protected.