ಮಾಸ ವಿಶೇಷ – ಕಳ್ಳನಗಿಡ
©ಡಬ್ಲೂ.ಸಿ.ಜಿ, ಕಳ್ಳನಗಿಡ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ
ಇಂಗ್ಲೀಷ್ ಹೆಸರು : Purple Morning Glory
ವೈಜ್ಞಾನಿಕ ಹೆಸರು : Argyeia Cuneata
ಪರ್ಪಲ್ ಮಾರ್ನಿಂಗ್ ಗ್ಲೋರಿ ಅಥವಾ ಕಳ್ಳನ ಗಿಡವು ಒಂದರಿಂದ ಎರಡು ಮೀಟರ್ ಎತ್ತರಕ್ಕೆ ಬೆಳೆಯಬಲ್ಲ ದೀರ್ಘಕಾಲಿಕ ಪೊದೆಸಸ್ಯವಾಗಿದೆ. ಇದರ ಮೃದುವಾದ ಕಾಂಡಗಳು ವೇಗವಾಗಿ ಬೆಳೆಯಬಲ್ಲವು. ಉದ್ದವಾದ ಅಥವಾ ಅಂಡಾಕಾರದ ಎಲೆಗಳು 3 ರಿಂದ 10 ಸೆಂಟಿಮೀಟರ್ ಇರುತ್ತದೆ. ಈ ಸಸ್ಯದ ಹೂ ಕೊಳವೆಯಾಕಾರದಲ್ಲಿದ್ದು, 5 ಸೆಂಟಿಮೀಟರ್ ಉದ್ದ ಹಾಗೂ ನೇರಳೆ ಬಣ್ಣದಿಂದ ಕೂಡಿದ್ದು ಸುಲಭವಾಗಿ ಗುರುತಿಸಬಹುದು. ಹೆಚ್ಚಾಗಿ ತೇವಾಂಶವುಳ್ಳ ಕಾಡುಗಳಲ್ಲಿ ಹಾಗೂ ಪೂರ್ವ ಮತ್ತು ಪಶ್ಚಿಮ ಘಟ್ಟಗಳಲ್ಲಿ ಕಂಡು ಬರುವ ಈ ಸಸ್ಯವು ವರ್ಷದ ಜುಲೈನಿಂದ ಸೆಪ್ಟೆಂಬರ್ ವರೆಗೆ ಹೂ ಬಿಡುತ್ತದೆ. ಕಡಿಮೆ ಸಮಯದಲ್ಲಿ ಬಹಳ ವೇಗವಾಗಿ ಬೆಳೆಯುವ ಕಳೆ ಗಿಡಗಳಲ್ಲಿ ಒಂದಾಗಿರುವ ಕಳ್ಳನ ಗಿಡವು ಒಂದು ಬಾರಿ ಹರಡಿದರೆ ನಿಯಂತ್ರಿಸುವುದು ಕಷ್ಟ. ಎಲ್ಲಾ ಮಾರ್ನಿಂಗ್ ಗ್ಲೋರಿ ಗಿಡಗಳು ಸಂಪೂರ್ಣ ಸೂರ್ಯನ ಬಿಸಿಲನ್ನು ಬಯಸುತ್ತವೆ. ಬೆಳಿಗ್ಗೆ ಅರಳಿದಾಗಿನಿಂದ ಕಣ್ಣಿಗೆ ಹಬ್ಬದಂತೆ ಕಾಣುವ ಹೂಗಳು ಸಂಜೆಯಾಗುತ್ತಲೆ ಮಂಕಾಗಿಬಿಡುತ್ತವೆ. ವಿಭಿನ್ನ ಹೂಗಳು, ಹಣ್ಣು ಮತ್ತು ಎಲೆಯ ಗುಣಲಕ್ಷಣಗಳನ್ನು ಹೊಂದಿರುವ ಅನೇಕ ಕಳ್ಳನ ಗಿಡದ ತಳಿಗಳಿವೆ. ಆದರೆ ಎಲ್ಲಾ ಕಳ್ಳನಗಿಡಗಳು ಬಿಳಿ, ಕೆಂಪು, ನೀಲಿ, ನೇರಳೆ ಮತ್ತು ಹಳದಿ ಬಣ್ಣಗಳಲ್ಲಿ ವಿಶಿಷ್ಟವಾದ ಕೊಳವೆಯಾಕಾರದ ಹೂಗಳನ್ನು ಬಿಡುತ್ತವೆ.