ನನ್ನ ಪುಟ್ಟ ಕೊಡುಗೆ
ಉದಯ ರವಿ ಮೂಡುತಿರಲು ಬಾನು ಕೆಂಪೇರುತಿರಲು
ಒಡಲ ಕಡಲೊಳಗಿಂದ ಹುಕ್ಕಿ ಬಂತೊಂದು ಕವನ
ಇಳೆಗೆ ಮಳೆ ಸುರಿಯುತಿರಲು ವನದ ಮೈ ತೊಳೆಯುತಿರಲು
ಬಳುವಳಿಯಿಂದ ಬಂದಿಹುದು ನಮಗೆ ಪ್ರಕೃತಿಯ ಮಿಲನ
ಇಬ್ಬನಿಯ ತಬ್ಬಿದ ತಬ್ಬಿಬ್ಬಾದ ದಿಬ್ಬಗಳು
ಹೆಬ್ಬುಲಿಯಂತೆ ಬಾಯ್ತೆರೆದಿಹ ಹುಬ್ಬೇರಿಸುವ ಜಲಪಾತಗಳು
ಹಬ್ಬ ಆಚರಿಸುವಂತೆ ನಿಂತಿಹ ಸಭ್ಯ ಸಾಲುಮರಗಳು
ಒಬ್ಬ ಹೊಗಳಿದರೆ ಸಾಲದು ಇವು ವೈಕುಂಠ ವಸ್ತ್ರಗಳು
ಹಸಿರುಟ್ಟು ನಿಂತಿಹಳು ಭೂರಮೆಯು ತನ್ನ ಹೊಸುಗೆಗೆ
ಹುಸುರುಗಟ್ಟಿ ಕಾಯುತಿಹಳು ವರುಣನ ಬೆಸುಗೆಗೆ
ಕೆಸರೊಳಗೆ ಕಂಗೊಳಿಸುತಿಹ ಈ ಮೂಕ ಪ್ರಕೃತಿಗೆ
ಎರಡು ಸಾಲು ಬರೆಯುವುದೊಂದೆ ನನ್ನ ಪುಟ್ಟ ಕೊಡುಗೆ
– ಮಧುಸೂದನ ಹೆಚ್. ಸಿ.
ಬೋಧನೆಯ ಜೊತೆ ಬರಹಗಾರನಾಗುವ ಹಂಬಲ..ಸಾಮಾಜಿಕ ಕಾಳಜಿಯ ಜೊತೆ ಸಾಧಕನಾಗುವ ಹಂಬಲ..ಪ್ರಕೃತಿಯ ಮಡಿಲಲ್ಲಿ ಕಳೆದುಹೋಗುವ ಹಂಬಲ..
ತಾಂತ್ರಿಕ ಕಾಲೇಜಿನ ಉಪನ್ಯಾಸಕನಾಗಿರುವ ನನಗೆ ಕನ್ನಡ ಬರವಣಿಗೆ ಮೋಹ ಹೊಸತೇನಲ್ಲ..ಹವ್ಯಾಸಿ ಬರಹಗಾರ..ವೃತ್ತಿಯಲ್ಲಿ ಭೌತಶಾಸ್ತ್ರ ಉಪನ್ಯಾಸಕ ಹಾಗೂ ಸಂಶೋಧಕ