ಕನಕದಾಸರು ಕಂಡ ಚಕ್ರವಾಕ ಹಕ್ಕಿ

ಕನಕದಾಸರು ಕಂಡ ಚಕ್ರವಾಕ ಹಕ್ಕಿ

ಕನಕದಾಸರ ಆರಾಧ್ಯ ದೈವ ಆದಿಕೇಶವನ ನೆಲೆಯಾದ ಕಾಗಿನೆಲೆಯ ದೊಡ್ಡಕೆರೆಯಲ್ಲಿ (ಈಗ ಈ ಕೆರೆಯ ಹೆಸರು ಕನಕ ಸರೋವರ) ಜೋಡಿಯಾದ ಕೆಂಬಾತು ಹಕ್ಕಿಗಳು ಉಚ್ಛಸ್ಥಾಯಿಯ ಸ್ವರ ಆಲಾಪನೆಯಲ್ಲಿ ತೊಡಗಿ ಸಂಗೀತ ಕಛೇರಿ ಏರ್ಪಡಿಸಿ ಸ್ಪರ್ಧೆಗಿಳಿದು ಜುಗಲ್‌ ಬಂದಿ ಹಾಡುಗಾರಿಕೆ ಕರ್ಣಗಳಿಂದ ಮನಕೆ ತಾಗಿದಾಗ ಜಗವೇ ಮರೆತು ಕೆರೆಪರಿಸರದಲ್ಲಿ ಮೈಮರೆತು ಹೋದೆ. ಹೌದು ಇದರ ಗಾನಸುಧೆಯೇ ಹಾಗೆ, ಅಷ್ಟೇಅಲ್ಲ ನೋಡಲು ಬಲು ಅಂದವಾದ ಹಕ್ಕಿ. ಇದರ ಸೌಂದರ್ಯ ಎಂಥವರನ್ನೂ ಆಕರ್ಷಿಸದೇ ಇರದು. ಈ ಹಕ್ಕಿಗೆ ಮನಸೋತು ಕನಕದಾಸರು ತಮ್ಮ ‘ಮೋಹನ ತರಂಗಿಣಿ’ ಮಹಾಕಾವ್ಯದ ಹನ್ನೆರೆಡು ಸಾಂಗತ್ಯಗಳಲ್ಲಿ ಈ ಹಕ್ಕಿಯನ್ನು ಉಲ್ಲೇಖಿಸಿ ಇವನ್ನು ಚಕ್ರವಾಕ, ಚಕ್ರ, ಪಗಲ್ವಕ್ಕಿ, ಚಕ್ರಿ, ಎಣೆವಕ್ಕಿ, ರಥಾಂಗಪಕ್ಷಿ, ಕೋಕ, ಜಕ್ಕವಕ್ಕಿ ಎಂದೆಲ್ಲಾ ಹೆಸರಿಸಿದ್ದಾರೆ.

(ಉದಾಹರಣೆಯಾಗಿ ಎರಡು ಸಾಂಗತ್ಯ ಹೀಗಿವೆ).

ಜೋಡಿಗೊಂಡವು ಚಕ್ರವಾಕ ಪಕ್ಷಿಗಳು
ಓಡಿದುವಳಿಚೂತವನಕೆ
ಮಾಡಿದ ಚಂದ್ರಪಲಾಯನ ಪಠನಸೂರ್ಯ
ಮೂಡಿದನುದಯ ಶೈಲದಲಿ

೨೭-೫

ವಾರಿಜಚಕ್ರಿವಕ್ಕಿಗಳು ಕುಗ್ಗಿದುವು
ಚಕೋರನೀಲಾಬ್ಜ ಹಿಗ್ಗಿದುವು
ಸೋರಿದುವಮೃತಪಾಷಾಣ ಪಾಲ್ಗಡಲಂತೆ
ಪೂರಯಿಸಿತು ಚಂದ್ರನುದಯ

೨೭-೨೩

ಹಕ್ಕಿಯ ವಿವರಣೆ:

ಚಕ್ರವಾಕ ಹಕ್ಕಿಗಳನ್ನು ಕೆಂಬಾತು, ಕಂದುಬಾತು, ಕವಚಬಾತು, ಕೆಂಪುಹಂಸ ಎಂತೆಲ್ಲಾ ಕರೆಯುತ್ತಾರೆ. ಆಂಗ್ಲಭಾಷೆಯಲ್ಲಿ ಬ್ರಾಹ್ಮಿಣಿ ಡಕ್ (Brahminy Duck) ಅಥವಾ ರೂಡಿಶೆಲ್ಡಕ್ (Ruddy Shelduck) ಎಂದು ಕರೆಯುತ್ತಾರೆ. ಪಕ್ಷಿಶಾಸ್ತ್ರೀಯಾಗಿ ಟಡೋರ್ನಾ ಫೆರುಗಿನಿಯಾ (Tadorna ferruginea) ಎಂದು ಹೆಸರಿಸಿ, ಅನ್ಸಾರಿಫಾರ್ಮಿಸ್ (Anseriformes) ಗಣದ ಅನಾಟಿಡೇ (Anatidae) ಕುಟುಂಬಕ್ಕೆ ಸೇರಿಸಲಾಗಿದೆ. ಟಡೋರ್ನಾ ಫೆರುಗಿನಿಯಾ (Tadorna ferruginea) ಎಂಬ ಈ ದ್ವಿನಾಮವನ್ನು (Binomial Name) 1764ರಲ್ಲಿ ಪೀಟರ್ಸೈಮನ್ಪಲ್ಲಾಸ್ ಎಂಬ ಸಸ್ಯ ಮತ್ತು ಪ್ರಾಣಿಶಾಸ್ತ್ರಜ್ಞರು ಪರಿಚಯಿಸಿದರು. ಟಡೋರ್ನಾ ಕುಲದ ಹೆಸರು ಫ್ರೆಂಚ್ “ಟಡಾರ್ನ್”, ಸಾಮಾನ್ಯ ಶೆಲ್ ಡಕ್ ನಿಂದ ಬಂದಿದೆ ಮತ್ತು ಮೂಲತಃ “ಪೈಡ್ವಾಟರ್ಫೌಲ್” ಎಂಬ ಅರ್ಥವಿರುವ ಸೆಲ್ಟಿಕ್ ಪದದಿಂದ ಹುಟ್ಟಿಕೊಂಡಿರಬಹುದು. “ಶೆಲ್ ಡಕ್” ಎಂಬ ಇಂಗ್ಲಿಷ್ ಹೆಸರು ಸುಮಾರು 1700 ರಿಂದ ಪ್ರಾರಂಭವಾಗಿದೆ. ಫೆರುಗಿನಿಯಾ ಎಂಬ ಜಾತಿಯ ಹೆಸರು ಲ್ಯಾಟಿನ್ ಭಾಷೆಯಲ್ಲಿ “ತುಕ್ಕು” ಬಣ್ಣದ ಪುಕ್ಕಗಳನ್ನು ಸೂಚಿಸುತ್ತದೆ.

65 ಸೆಂ.ಮೀ ಗಾತ್ರದ ಕಿತ್ತಳೆ, ಕಂದು ಬಣ್ಣದ ಬಾತು. ತಲೆ ಹಾಗೂ ಕತ್ತು ತುಸು ಮಾಸಲು ಬಿಳಿ. ರೆಕ್ಕೆಗಳು ಬಿಳಿಮಿಶ್ರಿತ ಕಪ್ಪು ಮತ್ತು ಹೊಳೆಪಿನ ಹಸಿರುವರ್ಣಗಳಿಂದ ಕೂಡಿವೆ. ಕಪ್ಪಾದ ಮೊಂಡು ಬಾಲವಿದೆ. ಕುತ್ತಿಗೆಯಲ್ಲಿ ಕಪ್ಪುಪಟ್ಟಿಯಿದೆ. ದೇಹವು ಎಣ್ಣೆಯುಕ್ತ ಪುಕ್ಕಗಳಿಂದ ಕೂಡಿದೆ. ಇದರಿಂದ ಸದಾನೀರಿನಲ್ಲಿ ಇದ್ದರೂ ಪುಕ್ಕಗಳು ನೆನೆಯುವುದಿಲ್ಲ. ಬದಲಿಗೆ ಜಲಹನಿಗಳು ಜಾರುತ್ತವೆ. ಕಾಲುಗಳು ಜಾಲಪಾದಗಳನ್ನು ಹೊಂದಿವೆ. ದೇಹವು ದೋಣಿ ಆಕಾರದಲ್ಲಿದ್ದು ನೀರಿನಮೇಲೆ ಸರಾಗವಾಗಿ ಈಜಿ ತೇಲಾಡುವಂತೆ ಮಾಡಿದೆ.

ಕೆರೆ, ನದಿ, ಝಿಲ್‌ ಗಳಲ್ಲಿ ಜೋಡಿಯಾಗಿ ಕೆಲಸಮಯ ಗುಂಪಿನಲ್ಲಿ ಕಾಣಸಿಗುತ್ತವೆ. ನೀರಿಗಿಂತ ಹೆಚ್ಚಾಗಿ ಕೆಸರು ಮಣ್ಣಿರುವ(ರಾಡಿ), ಮರಳುದಿಬ್ಬಗಳಲ್ಲಿ ಜಲಕೀಟ, ಮೃದ್ವಂಗಿ, ಏಡಿ, ಮೀನು, ಸಣ್ಣ ಜಲಸಸ್ಯಗಳನ್ನು ಆಹಾರವಾಗಿ ತಿನ್ನುತ್ತವೆ. ಚಳಿಗಾಲದ ವಲಸೆಗಾರ ಹಕ್ಕಿಗಳಾಗಿ ಕರ್ನಾಟಕಕ್ಕೆ ಟಿಬೇಟ್, ನೇಪಾಳ, ಲಡಾಕ್‌ ನಿಂದ ವಲಸೆ ಬರುತ್ತವೆ.

ಮೂಗಿನಿಂದ ಹೊರಟಂತೆ ವಾಂಗ್… ವಾಂಗ್… ಎಂದು ಕೂಗುತ್ತವೆ. ಕರ್ನಾಟಕ ಶಾಸ್ತ್ರೀಯ ಸಂಗೀತ ಪದ್ಧತಿಯಲ್ಲಿ ‘ಚಕ್ರವಾಕ’ ಎಂಬ ರಾಗವಿದೆ. ಈ ರಾಗವು ಮೇಳಕರ್ತ ರಾಗಗಳಲ್ಲಿ ಹದಿನಾರನೇಯದು. ಮುತ್ತುಸ್ವಾಮಿ ದೀಕ್ಷಿತರು ಇದನ್ನು ತೋಜವೇಗವಾಹಿನಿ ಎಂದು ಹೆಸರಿಸಿದ್ದಾರೆ. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಪದ್ಧತಿಯಲ್ಲಿ ಅಹಿರ್‌ ಬೈರವ ರಾಗಕ್ಕೆ ಹತ್ತಿರವಾಗಿದೆ. ಈ ರಾಗವನ್ನು ಕೇಳಿದಾಗ ಕೇಳುಗರಲ್ಲಿ ಭಕ್ತಿರಸ ಮತ್ತು ಸಹಾನುಭೂತಿ ಉಕ್ಕಿಬಂದು ಭಕ್ತಿ ಪರಾಕಾಷ್ಠೆಯಲ್ಲಿ ಮುಳುಗುತ್ತಾರೆ. ಚಕ್ರವಾಕ ರಾಗದಲ್ಲಿ ಎಲ್ಲ ಶುದ್ಧಸ್ವರಗಳಿವೆ ಆರೋಹಣದಲ್ಲಿ ಸ.ರಿ.ಗ.ಮ.ಪ.ದ.ನಿ.ಸ ಅವರೋಹಣದಲ್ಲಿ ಸ.ನಿ.ದ.ಪ.ಮ.ಗ.ರಿ.ಸ ಇದ್ದು ಇದೊಂದು ಸಂಪೂರ್ಣ ರಾಗವಾಗಿದೆ.

ಕಂದುಬಾತುಹಕ್ಕಿಯ ವಾಂಗ್… ವಾಂಗ್… ಕೂಗು ನರಿ (ರಿಷಭ- ಗೂಳಿಯ ಧ್ವನಿ ಹೋಲುವ) ಈ ಹಕ್ಕಿಯ ಕೂಗಿನಲ್ಲಿ ಉಚ್ಛಸ್ಥಾಯಿಯಲ್ಲಿ ಕೇಳಿಸುವುದರಿಂದ ಈ ಹಕ್ಕಿಗೆ ಚಕ್ರವಾಕ ಎಂಬ ಹೆಸರು ಬಂದಿರಬಹುದು. ಚಕ್ರವಾಕ ರಾಗದಿಂದ ಕೆಲವು ಜನ್ಯ ರಾಗಗಳಿವೆ. ಅವುಗಳೆಂದರೆ ಬಿಂದುಮಾಲಿನಿ, ಕಲಾವತಿ, ಮಲಯಮಾರುತ, ವಾಲಜಿರಾಗಗಳು ಹೆಚ್ಚು ಪ್ರಚಲಿತದಲ್ಲಿದ್ದು ಮಲಯಮಾರುತ ರಾಗದಿಂದ ಮಳೆಯನ್ನೇ ಸುರಿಯುವಂತೆ ಮಾಡುವ ಶಕ್ತಿಇದೆ.

ಚಿತ್ರ-ಲೇಖನ: ಶಶಿಧರಸ್ವಾಮಿ ಆರ್. ಹಿರೇಮಠ
ಕದರಮಂಡಲಗಿ, ಹಾವೇರಿ

Spread the love
error: Content is protected.