ನಾವು ಬದುಕುವುದು ಹೇಗೆ? ಆವಾಸವಿಲ್ಲದ ವನವಾಸಿ ಪ್ರಾಣಿಗಳ ಗೋಳಿನ ಕಥೆ!!!

ನಾವು ಬದುಕುವುದು ಹೇಗೆ? ಆವಾಸವಿಲ್ಲದ ವನವಾಸಿ ಪ್ರಾಣಿಗಳ ಗೋಳಿನ ಕಥೆ!!!

ಕೊಡಗು ಎಂದರೆ ಹಾಗೇ… ದಟ್ಟಕಾಡು, ಕಿರಿದಾದ ರಸ್ತೆಗಳು, ಕಾನನದ ಮಧ್ಯದಲ್ಲೊಂದು ಕಾಳಿಯದ್ದೋ, ಭಗವತಿಯದ್ದೋ ಮಂದಿರ, ಒಪ್ಪವಾದ ಮನೆಗಳು, ಅಲ್ಲೊಂದು ಪುಟ್ಟಕೈದೋಟ, ಕಾಫಿ ಹೂ ಅರಳಲು ಬಾ ಎಂದರು ಬಾರದೇ ಮುನಿಯುವ ಮಳೆ, ಮಳೆಗಾಲದಲ್ಲಿ ಧೋ ಎಂದು ಸುರಿಯುತ್ತಲೇ ಸಾಗುವ ಮಳೆ, ಚಳಿಗಾಲದಲ್ಲಿ ಕೊರೆಯುವ ಚಳಿ ಹೀಗೆ ಭೌಗೋಳಿಕವಾಗಿ, ಸಾಮಾಜಿಕವಾಗಿ ನಮ್ಮ ಜಿಲ್ಲೆ ಅಪ್ಪಟ “ಮಲೆಗಳಲ್ಲಿ ಮದುಮಗಳು”.

ಇಂತಿರುವ ಈ ಕೊಡಗಿನಲ್ಲಿ ಹಿರೀಕರಿಗೆ ನೆನಪಾದರೆ ನೆನಪು ಮಾಡಿಕೊಳ್ಳಿ. ಕಾಫಿತೋಟದ ಮಧ್ಯದಲ್ಲಿ ಎಲ್ಲೋ ಆನೆ ಹೆಜ್ಜೆ, ದನಕಾಯುವವರಿಗೆ ಕಂಡ ಆನೆಯ ಲದ್ದಿ, ತೋಟದಲ್ಲಿ ಹಂದಿತೋಡಿದ ಮಣ್ಣು, ಕಾಡುಕುರಿಯ ಹಿಕ್ಕೆ ಇವೆಲ್ಲಾ ಬಲು ಅಪರೂಪಕ್ಕೆ ಸಿಗುತ್ತಿದ್ದ ದೃಶ್ಯಗಳಾಗಿದ್ದವು, ಕಾಫೀ ಕ್ಲಬ್‍ ಗಳಲ್ಲಿ, ತೋಟದ ಮಧ್ಯೆ ಎಲೆಗೆ ಸುಣ್ಣ ಒರೆಸುತ್ತಾ ಮಾತನಾಡುವ ರೋಚಕ ವಿಚಾರಗಳಾಗಿದ್ದವು.

ಪಾಲೀಶ್ ಮಾಡಿಸಿಕೊಂಡು ತೂಗುಹಾಕಿದ ತೋಟದ ಕೋವಿಗೆ ಕೆಲಸವಿಲ್ಲದೆ ಮನೆಗಳಲ್ಲಿ ಮಲಗಿರುತ್ತಿದ್ದವು. ಕಾಡಿಗೆ ಹೋದ ದನಕರುಗಳು ಕ್ಷೇಮವಾಗಿಯೆ ಮನೆಗೆ ಹಿಂದಿರುಗುತ್ತಿದ್ದವು. ಕಾಡಿನ ಸವಕಲು ದಾರಿಯಲ್ಲಿ ಮೀನುಮಾರಲು ಬಂದವರು, ಸುರಕ್ಷಿತವಾಗಿಯೇ ಗೂಡು ಸೇರುತ್ತಿದ್ದರು.

ನೋಡನೋಡುತ್ತಿದ್ದಂತೆಯೆ ಕೊಡಗು ಇಲ್ಲಿನ ಕಾಡು, ರಸ್ತೆ ಎಲ್ಲವು ಮಗ್ಗುಲು ಬದಲಾಯಿಸಿದಂತೆ ಕಾಣುತ್ತಿವೆ. ಜಿಲ್ಲೆಯಲ್ಲಿ ಇಡೀ ಪ್ರಾಕೃತಿಕ ಚಿತ್ರಣವೇ ಬದಲಾಗಿ ಹೋಗಿದೆ. ಆನೆಗಳು, ಮನುಷ್ಯರು ಇರುವ ಜಾಗಕ್ಕೆ ಬಂದು ಧಮಕಿ ಹಾಕಿ ಹೋಗುತ್ತಿವೆ. ಅಷ್ಟೇಏಕೆ, ಭೀಕರವಾಗಿ ಕೊಂದು ಬೆನ್ನುತಿರುಗಿಸಿ ಹೋಗುತ್ತಿವೆ. ಹುಲಿಗಳು ಮಾರ್ಜಾಲ ನಡಿಗೆಯಲ್ಲಿ ಬಂದು ರಾಸುಗಳ, ಮನುಷ್ಯರ ರಕ್ತ ಹೀರಿಹೋಗುತ್ತಿವೆ. ಇತ್ತೀಚೆಗೆ ವನ್ಯಜೀವಿ ಸಪ್ತಾಹದ ದಿನವೇ ನಾಗರಹೊಳೆ ಅಭಯಾರಣ್ಯದಲ್ಲಿ ಹಿರಿಯ ಫಾರೆಸ್ಟ್ ಆಫೀಸರ್ ಮಣಿಕಂಟನ್, ಆನೆ ದಾಳಿಗೆ ಸಿಕ್ಕು ಮೃತಪಟ್ಟರು. ಬಸ್ಸಿನಲ್ಲೇ ತಿರುವು-ಮುರುವು ರಸ್ತೆಯಲ್ಲಿ ಮಡಿಕೇರಿಗೆ ಹೋಗಲು ಹಿಂದೇಟು ಹಾಕುವವರು ಇರುವಾಗ, ಆನೆಯೊಂದು ಜಿಲ್ಲಾಕೇಂದ್ರಕ್ಕೆ ಬಂದು ಏನೋ ಎಚ್ಚರಿಕೆಕೊಟ್ಟು ಹೋಗಿದೆ.

ಆನೆಗಳನ್ನು ಆಯಾಪ್ರದೇಶದ ಕಾಡಿನ ಸಮೃದ್ಧಿಯ ಸೂಚಕಗಳು ಎಂದು ಪರಿಸರ ತಜ್ಞರು ಕರೆಯುತ್ತಾರೆ. ಕಾರಣವಿಷ್ಟೇ, ಆನೆಗಳ ಸಂಖ್ಯಾಬಲ ಹೆಚ್ಚಾಗಿದ್ದು, ಕಾಡಾನೆಗಳು ತಮ್ಮ ಆವಾಸದಲ್ಲೇ ಆರಾಮವಾಗಿ ಜೀವಿಸುತ್ತಾ ಇವೆಯೆಂದರೆ, ಆ ಕಾಡು ಸಮೃದ್ಧವಾಗಿದೆ ಎಂದು ಅರ್ಥ. ಏಕೆಂದರೆ, ಆನೆಗಳಿಗೆ ಒಂದು ದಿನಕ್ಕೆ 450 ಕೆ.ಜಿ ಊಟ ಬೇಕು. ಅದರಲ್ಲಿ ಸೊಪ್ಪು-ಸದೆ, ಹುಲ್ಲು, ಎಲೆಗಳು, ಹಣ್ಣುಗಳು, ಬೇರುಗಳು ಎಲ್ಲವೂ ಸೇರಿರಬೇಕು. ಕುಡಿಯಲು ಒಮ್ಮೆಗೆ ನೂರಾ ತೊಂಭತ್ತು ಲೀಟರ್‍ ನಷ್ಟು ನೀರು ಬೇಕು. ಇನ್ನು ನೀರಿನಲ್ಲಿ ಬೇಕೆಂದಾಗೇ ಆಟವಾಡಬೇಕು ಬೇರೆ. ಅಲ್ಲದೇ ಏಷ್ಯಾದ ಆನೆಯೊಂದು ಸಂಚರಿಸುವ ಪ್ರದೇಶದ ವ್ಯಾಪ್ತಿ ನೂರು ಕಿಲೊಮೀಟರ್‍ ನಿಂದ ಸಾವಿರ ಕಿಲೊಮೀಟರ್‍ ನಷ್ಟು ವಿಸ್ತೀರ್ಣ.

ಇಷ್ಟು ವಿಸ್ತಾರವಾದ ಜಾಗದಲ್ಲಿ ಎಲ್ಲೋ ಒಂದುಕಡೆ ತನಗೆ ಬೇಕಾದ ಹುಲ್ಲು, ಮತ್ತೆಲ್ಲೋ ನೀರುಕುಡಿದು ಕಾಡಿನ ಎಲ್ಲೆಯಲ್ಲಿ ಆನೆಗಳು ಆರಾಮವಾಗಿ ಇರುತ್ತಿದ್ದವು. ಹೀಗೆ ಆನೆಗಳು ಕಾಡಿನಿಂದಾಚೆಗೆ ಹಾಜರಿ ಹಾಕದೇ ಇದ್ದಾಗ ಕಾಡು ತುಂಬಾ ಚೆನ್ನಾಗಿದೆ ಎಂದು ಅರ್ಥವಾಗುತ್ತಿತ್ತು. ಆದರೆ, ಕಾಡಿನಂಚಿನಲ್ಲಿ ಮನುಷ್ಯನ ಅಗಾಧವಾದ ಚಟುವಟಿಕೆಗಳು, ದಿನಕ್ಕೊಮ್ಮೆ ಬದಲಾಗುವ ಸರ್ಕಾರದ ಭೂಪರಿವರ್ತನಾ ನಿಯಮಗಳು…. ಇವೆಲ್ಲವುಗಳ ಕಾರಣದಿಂದಾಗಿ ಕಾಡಿನ ಗಾತ್ರ ಚಿಕ್ಕದಾಗಿದೆ. ವಿಶಾಲವಾದ ಆಲದ ಮರದಂತಿದ್ದ ಕಾಡು ಇಂದು ಗಾತ್ರದಲ್ಲಿ ಕುಬ್ಜವಾಗಿದೆ. ಇದರಿಂದ ಆನೆಗಳಿಗೆ ಏನೋ ಅಸಹನೆ, ಕತ್ತುಕೊಂಕಿಸಿ ಕಾಡಿನಾಚೆಗೆ ನೋಡಿದ ಆನೆಗಳಿಗೆ ತಮ್ಮ ಜಾಗಕ್ಕೆ ಮನುಷ್ಯರು ಬಂದಿರುವುದು ಅರಿವಾಗಿದೆ. ಅಲ್ಲೆಲ್ಲೋ ಹುಲುಸಾಗಿ ಬೆಳೆದ ಭತ್ತ, ಬಾಳೆ, ಹಲಸು ಕಣ್ಣಿಗೆ ಬಿದ್ದಿದೆ. ಅಲ್ಲೇ ತೋಟದ ಮಧ್ಯೆ ಸ್ವಚ್ಛ ನೀರಿನಿಂದ ತುಂಬಿರುವ ಕೆರೆಯು ಕಂಡಿದೆ. ಒಮ್ಮೆ ಬಂದ ಆನೆಗಳು ಮತ್ತೊಮ್ಮೆ, ಮಗದೊಮ್ಮೆ ಬರಲಾರಂಭಿಸಿವೆ. ಬಂದು ವಾರಗಟ್ಟಲೇ, ತಿಂಗಳುಗಟ್ಟಲೆ ಅಲ್ಲೇ ಮೊಕ್ಕಾಂ ಹೂಡುವುದು ಕಲಿತಿವೆ.

ಹಾಗೇ ವಿಶ್ರಮಿಸುತ್ತಿರುವ ಜಾಗ ಆರ್.ಟಿ.ಸಿ ಮಾಡಿಸಿಕೊಂಡಿರುವ ತೋಟದ ಮಾಲೀಕನದ್ದು ಎಂದು ತಿಳಿಯದ ಆನೆಗಳು ತೋಟದ ಮಾಲೀಕನನ್ನು ಅತ್ಯಂತ ನಿರ್ದಯೆಯಿಂದ ಕೊಂದು ಹಾಕಿವೆ, ಕೂಲಿಕಾರ್ಮಿಕರನ್ನು ಇನ್ನಿಲ್ಲದ ಆಕ್ರೋಶದಿಂದ ಬಡಿದು ಸಾಯಿಸಿವೆ. ಕೊಡಗಿನಲ್ಲಿ ಇದುವರೆಗೂ ಹತ್ತು ವರ್ಷದ ಅಂತರದಲ್ಲಿ ಎಪ್ಪತ್ಮೂರಕ್ಕೂ ಅಧಿಕ ಮಂದಿ ಕಾಡಾನೆ ದಾಳಿಯಿಂದ ಸಾವನ್ನಪ್ಪಿದ್ದಾರೆ. ಅಷ್ಟೇ ಪ್ರಮಾಣದ ಜನರು ಕೈ-ಕಾಲು ಕಳೆದುಕೊಂಡು ಅಂಗವೈಕಲ್ಯಕ್ಕೆ ತುತ್ತಾಗಿದ್ದಾರೆ. ನೂರಾರು ಮನೆಯ ಕೊಟ್ಟಿಗೆಯ ಜಾನುವಾರುಗಳು ಕಾಡಾನೆ, ಹುಲಿ, ಚಿರತೆ ದಾಳಿಗೆ ತುತ್ತಾಗಿವೆ.

ಇದು ಬರೇ ಕಾಡಾನೆ ದಾಳಿಯಿಂದ ಮನುಷ್ಯರಿಗೆ ಆಗಿರುವ ನಷ್ಟವಲ್ಲ. ಮನುಷ್ಯ ಜಗತ್ತಿನಿಂದಲೂ ಆನೆಗಳ ಮಾರಣ ಹೋಮವಾಗಿದೆ. ಭಾರತ ದೇಶವೊಂದರಲ್ಲೇ ಆನೆದಾಳಿಯಿಂದ ವರ್ಷಕ್ಕೆ ನಾಲ್ಕನೂರು ಮಂದಿ ಸಾವನ್ನಪ್ಪುತ್ತಾರೆ. ಅದೇ ರೀತಿ ವರ್ಷಕ್ಕೆ ನೂರು ಆನೆಗಳು ಸಾಯುತ್ತಿವೆ. ಅದೇ ನಮ್ಮ ನೆರೆರಾಷ್ಟ್ರ ಶ್ರೀಲಂಕಾದಲ್ಲಿ ವರ್ಷಕ್ಕೆ 70 ಮನುಷ್ಯರು, ಇನ್ನೂರು ಕಾಡಾನೆಗಳು ಸಾಯುತ್ತಿವೆ.

ಮಳೆಗಾಲದಲ್ಲಿ ತುಂಡಾಗಿ ಬಿದ್ದ ವಿದ್ಯುತ್ ತಂತಿ ತಗುಲಿ ಒಂದೇ ಬಾರಿಗೆ ಉಸಿರು ಚೆಲ್ಲಿದ ನಾಲ್ಕು ಮರಿಆನೆ, ರಸ್ತೆ ದಾಟುವಾಗ ಬಸ್ ಗೆ ಡಿಕ್ಕಿಯಾಗಿ ಸತ್ತ ರಂಗ, ಅನಾರೋಗ್ಯದಿಂದ ಇತ್ತೀಚೆಗೆ ಸಾಕಾನೆ ಶಿಬಿರದಲ್ಲಿ ನರಳಾಡಿ ಸತ್ತ ದಸರಾ ಆನೆ ದ್ರೋಣ. ಮನುಷ್ಯ-ವನ್ಯಜೀವಿ, ಎರಡು ಕಡೆಯೂ ಸಂಘರ್ಷ ತಾರಕಕ್ಕೇರಿದೆ. ಎರಡು ಕಡೆಯೂ ಸಾವು-ನೋವು, ಆವಾಸದ ಅತಿಕ್ರಮ ಪ್ರವೇಶ, ಆನೆಗಳ ಆಹಾರ, ಆವಾಸದ ನಾಶಮಾಡುವಿಕೆ, ಅದೇರೀತಿ ಕಾಡಾನೆಗಳು ಮನುಷ್ಯರ ಬೆಳೆ, ಪ್ರಾಣಿ, ಆವಾಸ ಎಲ್ಲವನ್ನು ಅಕ್ರಮವಾಗಿ ಪ್ರವೇಶಿಸಿ ತಾಳಲಾರದ ಹೊಡೆತ ಕೊಡುತ್ತಿವೆ.

ಕೊಡಗಿನಲ್ಲಿ ಈಗಿನ ತಲೆಮಾರಿಗೆ ಗದ್ದೆಗಳು ಅನ್ನದ ಬಟ್ಟಲಾಗಿ ಕಾಣುತ್ತಿಲ್ಲ, ಏಕೆ? ಮಳೆ ಸರಿಯಾದ ಸಮಯಕ್ಕೆ ಬಂದು ಕೃಷಿಇಲಾಖೆ ಕೊಟ್ಟ ಭತ್ತದ ಬೀಜಗಳು ನೆಟ್ಟಗೆ ನಿಂತರೆ ಬೆಳೆದವನ ಪುಣ್ಯ. ಅಷ್ಟೆಲ್ಲಾ ಆದಮೇಲೆ ಕೆಲಸಗಾರರನ್ನು ಹೊಂದಿಸಿ ಭತ್ತವನ್ನು ಕಣಕ್ಕೆ ತಂದಮೇಲೆ ಈಗಿನ ಕಾಲದ ಒಂದು ಬ್ರ್ಯಾಂಡೆಡ್ ಶೂ ಗೆ ಸಿಗುವ ಬೆಲೆಯೂ ರೈತನಿಗೆ ಸಿಗುವುದಿಲ್ಲ. ಹೇಗೋ ಏನೋ ಅಂತೂ ರೈತ ಭತ್ತವನ್ನು ಕೈಬಿಟ್ಟಿರಲಿಲ್ಲ. ಆದರೆ, ಕಾಡಾನೆಗಳು ಯಾವಾಗ ಸಸಿಮಾಡಲು ಹೋದಾಗ ಸಸಿಮಡುಗಳನ್ನು ಹಾಳುಗೆಡವಿದವೋ? ಅಂತೂಇಂತೂ ನಾಟಿಮಾಡಿ ಗೆದ್ದೇ ಎನ್ನುವಾಗ ಭತ್ತದ ಪೈರನ್ನೆಲ್ಲಾ ತುಳಿದು ಧ್ವಂಸಮಾಡಿದವೋ ಅವನ ಕೃಷಿಮಾಡಬೇಕೆನ್ನುವ ಕನಸು ಅಲ್ಲೇ ನಶಿಸಿತು. ಹೀಗೆ ಗದ್ದೆ ಮಾಡುವುದನ್ನು ಬಿಟ್ಟ ರೈತರು ಊರಿಗೆ ಹತ್ತುಮಂದಿ ಸಿಗುತ್ತಾರೆ. ಕೃಷಿ ಜಮೀನನ್ನು ಇವತ್ತಿನ ತಲೆಮಾರು ಹೆಂಡದಂಗಡಿ, ರೆಸಾರ್ಟು, ಬೇಕರಿ ಮಾಡುವುದು ಕಂಡಾಗ ಮನಸ್ಸಿನಲ್ಲಿ ಭೂಮಿಯನ್ನು ಕೈಬಿಟ್ಟಿದಕ್ಕಾಗಿ ದುಃಖವಾದರೂ ಬದುಕಿನಕಡೆ ಮುಖಮಾಡುತ್ತಿದ್ದಾನೆ ಅನ್ನಿಸುತ್ತದೆ. ವಾರಕ್ಕೊಂದು ಊರಿನಲ್ಲಿ ಗದ್ದೆಗಳು ಲೇಔಟ್‍ ಗಳಾಗಿ ಬದಲಾಗುತ್ತಿವೆ. ಜಿಲ್ಲೆಯೊಳಗೆ ಇಂಥದೊಂದು ಸಾಮಾಜಿಕ ಪಲ್ಲಟ ಸದ್ದಿಲ್ಲದೆ ನಡೆಯುತ್ತಿದೆ.

ನಮ್ಮಲ್ಲಿ ಹೇಗಂದರೆ ಕಾಡು, ಮರಗಳ ಹೊದಿಕೆ, ಮಳೆಮಾರುತ, ವನ್ಯಜೀವಿಗಳು, ಜೀವವೈವಿಧ್ಯ ಇವೆಲ್ಲವೂ ಸಮಾಜದ ಮುನ್ನೆಲೆಯಲ್ಲಿ ಯೋಚಿಸಬೇಕಾಗಿದ್ದ, ಚರ್ಚಿಸಬೇಕಾಗಿದ್ದ ವಿಚಾರಗಳಾಗಿದ್ದವು. ಆದರೆ, ದುರಾದೃಷ್ಟವಶಾತ್, ಮೆಟ್ರೋನಗರದ ಮಂದಿ ಟೀ ಶರ್ಟ್ ಮೇಲಿನ ಬರಹ, ವಾಟ್ಸಪ್ ಸ್ಟೇಟಸ್ ಇವುಗಳಲ್ಲೇ ತಮ್ಮ ಪರಿಸರ ಪ್ರೇಮ ಮೆರೆಯುತ್ತಿದ್ದಾರೆ.

ಈ ವರ್ಷ ಅತ್ಯಂತ ಕಠೋರ ಬೇಸಿಗೆಯನ್ನು ದೇಶದ ಮಹಾನಗರಗಳು ಕಂಡವು. ಆದರೆ, ಮಹಾನಗರದ ಕಾಂಕ್ರೀಟ್ ಸ್ವರ್ಗದಲ್ಲಿ ಕುಳಿತಮಂದಿ, ಬಿಸಿಲು ಕಡಿಮೆ ಮಾಡುವ ಕೂಲರ್‍ ಗಳು ಹೆಚ್ಚು ರೆಕ್ಕೆಯಿರುವ ಫ್ಯಾನ್‍ ಗಳಿಗೆ ಹುಡುಕಾಡಿದರೆ ವಿನಃ ಮನೆಯಾಚೆಗೆ ಹಲಸೋ, ಮಾವಿನಮರವೋ ಇದ್ದಿದ್ದರೇ ಮನೆಯೆಷ್ಟು ತಣ್ಣಗಿರುತ್ತಿತ್ತು ಎನ್ನುವ ಹಸಿರಿನಪಾಠ ಅವರಿಗೆ ನೆನಪೇ ಆಗುತ್ತಿಲ್ಲ. ನಮ್ಮ ಪರಿಸರದಿಂದ ಬಹುದೂರ ಹೋಗುತ್ತಿರುವ ಪಕ್ಷಿಗಳು, ಪ್ರಾಣಿಗಳು, ಅವು ನಮ್ಮನ್ನು ಕಾಡುವ ವಿಚಾರಗಳು ಅಲ್ಲವೇ ಅಲ್ಲ. ಆದರೆ, ಈ ನಡುವೆ ಎಲ್ಲೋ ಸಾಲುಮರದ ತಿಮ್ಮಕ್ಕ ಮಾತ್ರ ತಮ್ಮ ಇಳಿವಯಸಿನಲ್ಲೂ ಮುಖ್ಯಮಂತ್ರಿಯವರನ್ನು ಭೇಟಿಮಾಡಿ ರಸ್ತೆ ಅಗಲೀಕರಣಕ್ಕೆ ಹನನವಾಗಲಿದ್ದ ಮರಗಳನ್ನು ಕಡಿಯದಂತೆ ಕೈ ಮುಗಿದು ಬೇಡಿದ್ದು ನೋಡಿದಾಗ ಮಾತ್ರ ಪರಿಸರದ ಬೆಲೆತಿಳಿದವರು ಇನ್ನೂಇದ್ದಾರಲ್ಲ ಎಂಬ ನಿರಾಳತೆ.

“ಕಾಡುಗಳನ್ನು ನಾಶಮಾಡಿದಾಗ ಅಲ್ಲಿರುವ ಪ್ರಾಣಿಗಳನ್ನು, ಅವುಗಳ ಪರಿಸರವನ್ನು ಧ್ವಂಸಮಾಡಿದಾಗ ರಹಸ್ಯ, ಗೌಪ್ಯ, ಅದ್ಭುತಗಳ ನಿರಂತರ ನಿಧಿಯೊಂದನ್ನು ನಮ್ಮ ಕಿರಿಯ ಜನಾಂಗ ಕಳೆದುಕೊಂಡಂತಾಗಿ ಮನಸ್ಸು ಖಿನ್ನವಾಗುತ್ತದೆ. ಈ ದುರಂತದ ದುಃಖವನ್ನು ಅಂಕಿ-ಸಂಖ್ಯೆಗಳ ಆಧಾರದ ಮೇಲೆ, ಸಿದ್ಧಾಂತಗಳ ಮುಖಾಂತರ ವಿಶ್ಲೇಷಿಸಿ, ಪರಿಸರ ಸಂರಕ್ಷಣೆಯ ಬಗ್ಗೆ ಜನಗಳಿಗೆ ಹೇಳಲು ಮನಸ್ಸೇ ಬರುವುದಿಲ್ಲ. ಏಕೆಂದರೆ ನಾನು ಕಂಡಂತೆ ಕಾಡನ್ನು ಕಂಡಿಲ್ಲದ, ಅನುಭವಿಸಿಲ್ಲದ ಮನಸ್ಸುಗಳಿಗೆ ನನ್ನ ಮನಸ್ಸಿನ ದುಗುಡವನ್ನು ನಿರ್ಜೀವ ಅಂಕಿ-ಸಂಖ್ಯೆಗಳ ವಿಶ್ಲೇಷಣೆ ಮೂಲಕ ಹೇಳಿ, ಹೇಗೆ ತಾನೇ ಪ್ರತಿಸ್ಪಂದನ ಉಂಟುಮಾಡಲಿ”

– ಕೆ.ಪಿ. ಪೂರ್ಣಚಂದ್ರ ತೇಜಸ್ವಿ

ಹೌದು, ಇಂಥ ಒಂದು ಪ್ರತಿಸ್ಪಂದನ ನಮ್ಮೊಳಗೆ ಆಗುತ್ತಲೇ ಇಲ್ಲ. ನಮಗಾದರೆ ಏಕಾಂಗಿಯಾಗಿರುವ ಜಾಗದಲ್ಲಿ ಮನೆಕಟ್ಟಬೇಕು ಅಂತೀವಿ, ಸಮುದ್ರತೀರದಲ್ಲಿ ಮನೆ, ಕಾಡಿನ ಮಧ್ಯೆ ನೀರಿನ ನಾದಕೇಳುವಲ್ಲಿ ರೇಸಾರ್ಟ್ ಇರಬೇಕು ಅಂತೀವಿ. ಹಾಗೇ ಪ್ರಾಣಿಗಳು ಅಲ್ವಾ? ಅವುಗಳಿಗೆ ಓಡಾಡಲು, ನಡೆದಾಡಲು, ಸಂತಾನೋತ್ಪತ್ತಿ ಮಾಡಲು ಜಾಗಬೇಕಲ್ವಾ? ಪ್ರಾಣಿಗಳ ಲೋಕದಲ್ಲಿ ಪ್ರತಿಪ್ರಾಣಿಗೂ ಒಂದು ಭೌಗೋಳಿಕ ವ್ಯಾಪ್ತಿಯನ್ನು, ಮೂತ್ರವಿಸರ್ಜಿಸುವ ಮೂಲಕ ಗುರುತು ಮಾಡಿಟ್ಟಿರುತ್ತವೆ. ಸಿಂಹ ಮತ್ತು ಹುಲಿಗಳಿಗೂ ಅಷ್ಟೆ ಮೊದಲು ಬೇಟೆಯನ್ನು ಯಾರು ತಿನ್ನಬೇಕು? ಹೇಗೆ ತಿನ್ನಬೇಕು ಎನ್ನುವುದಕ್ಕು ಅವುಗಳೇ ರೂಪಿಸಿಕೊಂಡ ನಡಾವಳಿಗಳಿರುತ್ತವೆ. ಆದರೆ ಅವೆಲ್ಲಕ್ಕೂ ಜಿಲ್ಲೆಯ ತುಂಬೆಲ್ಲಾ ಚಿಲಿಪಿಲಿಗುಟ್ಟುತ್ತಿರುವ ರೆಸಾರ್ಟ್‍ ಗಳು, ಹೋಂ ಸ್ಟೇಗಳಿಂದಾಗಿ ಈ ಜಿಲ್ಲೆಯಲ್ಲಿ ಪ್ರಾಣಿಗಳಿಗೆ ಜಾಗವೆಲ್ಲಿದೆ ಹೇಳಿ?

ಎಲ್ಲಾ ಬೆಟ್ಟದಲ್ಲು ಟ್ರೆಕ್ಕಿಂಗ್ ಮಾಡುವವರು, ಬೋಳುಗುಡ್ಡದಮೇಲೆ ಕ್ಯಾಂಪ್ ಫೈರ್ ಮಾಡುವವರು, ಹರಿಯೋ ನೀರಲ್ಲಿ ಎಂಜಿನ್ ಚಾಲಿತ ರ್ಯಾಫ್ಟಿಂಗ್ ಮಾಡುವವರು, ಯಾವ ಜಲಚರ ಎಲ್ಲಿ ಉಸಿರಾಡಬೇಕು, ಯಾವ ಆನೆ ಯಾವ ದಾರಿಯಲ್ಲಿ ನಡೆಯಬೇಕು? ಅನಾಥ ಪ್ರಾಣಿಗಳು ಆವಾಸಕ್ಕಾಗಿ, ನೀರಿಗಾಗಿ ಊರೊಳಗೆ, ಕಾಫಿತೋಟದೊಳಗೆ ದಾಳಿಯಿಟ್ಟಿವೆ. ಪ್ರವಾಸೋದ್ಯಮ ಪ್ರಕೃತಿ ರಕ್ಷಣೆ ಎರಡು ಒಟ್ಟೊಟ್ಟಿಗೆ ಆಗಬೇಕು. ಆದರೆ, ವ್ಯವಸ್ಥೆ ಹೇಗಿದೆ ಅಂದ್ರೆ, ರಿವರ್ ರ್ಯಾಫ್ಟಿಂಗ್‍ ನಂಥ ಅಪಾಯಕಾರಿ ಕ್ರೀಡೆಯನ್ನು ಯಾವ ಮಾರ್ಗದರ್ಶಿ ಸೂತ್ರಗಳಿಲ್ಲದೇ ವರ್ಷಗಳಕಾಲ ನಡೆಸಲಾಯಿತು.

ಪ್ರಾಣಿಗಳ ಬಗೆಗೆ ನಮಗಿರುವ ಜ್ಞಾನದ ಕೊರತೆಯು ಅವುಗಳ ದಾಳಿಗೆ ನಾವು ಸುಲಭವಾಗಿ ಸಿಲುಕಲು ಕಾರಣ. ಅರಣ್ಯದಂಚಿನಲ್ಲಿ ವಾಸಿಸುವವರು ಪ್ರಾಣಿಗಳ ನಡವಳಿಕೆಗಳ ಬಗೆಗೆ ಸ್ವಲ್ಪ ಮಟ್ಟಿನ ಜ್ಞಾನವನ್ನಾದರು ಹೊಂದಿರಬೇಕು. ಇಲ್ಲದಿದ್ದರೆ ನಮ್ಮ ಅರಣ್ಯಇಲಾಖೆಗಳು ಜನರಿಗೆ ಆ ಕುರಿತಾದ ತರಬೇತಿ ಕೊಡುವುದು, ಜಾಗೃತಿ ಮೂಡಿಸುವ ಕೆಲಸ ಮಾಡಬೇಕು. ಕಾಡಿನಪಕ್ಕ ವಾಸಿಸುವವರು ಆದಷ್ಟು ಈ ಸಾಕುಪ್ರಾಣಿಗಳಾದ ಹಸು, ನಾಯಿ, ಬೆಕ್ಕು ಇಂಥವನ್ನು ಸಾಕದಿರುವುದೇ ಒಳಿತು ಎನ್ನುತ್ತಾರೆ ತಜ್ಞರು. ಏಕೆಂದರೆ ಸುಲಭವಾಗಿ ಅವುಗಳು ಇವನ್ನು ಬೇಟೆ ದೃಷ್ಟಿಯಿಂದ ಅರಸುತ್ತಾ ಬರಬಹುದು. ಪ್ರಾಣಿಗಳನ್ನು ಕೆಣಕುವುದು, ತೊಂದರೆ ನೀಡುವುದು ಮಾಡಬಾರದು. ಆಗ ಘರ್ಷಣೆಯ ಮಟ್ಟ ಕೊಂಚ ಕುಸಿಯುತ್ತದೆ. ಹೆಚ್ಚಿನದಾಗಿ ಪ್ರಾಣಿಗಳು ಬೆಳಿಗ್ಗೆ ಮತ್ತು ಸಂಜೆಯ ಸಮಯದಲ್ಲಿ ದಾಳಿಯನ್ನು ಹೆಚ್ಚಾಗಿ ಮಾಡುತ್ತವೆಯಂತೆ ಅಂತ ಸಂದರ್ಭದಲ್ಲಿ ನಾವು ಹೊರಗೆ ಒಂಟಿಯಾಗಿ ಹೋಗದಿರುವುದು ಒಳಿತು ಎನ್ನುತ್ತಾರೆ.

ಪರಿಸರ ವ್ಯವಸ್ಥೆಯ ಮೂಲಭೂತ ತತ್ವಕ್ಕೆ ನಾವು ಕೊಡಲಿಪೆಟ್ಟು ಕೊಡುತ್ತಿದ್ದೇವೆ.

ಭೂಮಿಯ ಮೇಲೆ ಬದುಕುವ ಪ್ರತಿಯೊಂದು ಜೀವಿಯು ತನ್ನದೇ ಆದ ರೀತಿ-ನೀತಿಗಳನ್ನು ಹೊಂದಿರುತ್ತದೆ. ಅವುಗಳ ದೇಹದ ಗಾತ್ರ, ವರ್ಣ ವಿನ್ಯಾಸ, ಆಹಾರದ ಕ್ರಮ, ನಡವಳಿಕೆ, ಪರಿಸರ, ಮೊದಲಾದ ಅಂಶಗಳು ವಿಭಿನ್ನವಾಗಿರುತ್ತವೆ. ಯಾವುದೇ ಜೀವಿಯು ಒಂಟಿಯಾಗಿ ಜೀವನ ಮಾಡಲಾರದು. ಪ್ರತಿಯೊಂದು ಜೀವಿಸಂಕುಲಗಳು ಆಹಾರಕ್ಕಾಗಿ, ಆವಾಸಕ್ಕಾಗಿ ಪರಸ್ಪರ ಹೋರಾಟ ನಡೆಸುತ್ತಲೇ ಇರುತ್ತವೆ. ಹೀಗೆ ಜೀವಿ-ಜೀವಗಳೊಂದಿಗಿನ ಸಂಬಂಧ, ಸಹಕಾರ, ಪೈಪೋಟಿ, ಜೀವಿ-ನಿರ್ಜೀವಿಗಳೊಂದಿಗಿನ ಹೊಂದಾಣಿಕೆ, ಒಡನಾಟ, ಪ್ರಭಾವಗಳಿರುವ ಒಂದು ಅತೀ ಸಂಕೀರ್ಣವಾದ ವ್ಯವಸ್ಥೆಯೇ ಪರಿಸರ ವ್ಯವಸ್ಥೆಯಾಗಿರುತ್ತದೆ.

ಪರಿಸರದಲ್ಲಿ ಒಂದು ಜೀವಿಯ ಸಂಪೂರ್ಣ ಅಳಿವಾದರೂ ಪರಿಸರ ಸಮತೋಲನ ತಪ್ಪಿ ಹೋಗುತ್ತದೆ. ಪ್ರತಿಯೊಂದು ಜೀವಿಯ ಆಹಾರಕ್ರಮ ತಪ್ಪಿಹೋದರೆ ಪರಿಸರಕ್ಕೆ ಅದು ಭಾರೀ ಹೊರೆಯಾಗುತ್ತದೆ. ಉದಾಹರಣೆಗೆ ಜಿಂಕೆಗಳು ಹುಲ್ಲುಗಾವಲಿನ ಹುಲ್ಲುತಿಂದರೆ ಅದನ್ನು ಮಾಂಸಾಹಾರಿ ಪ್ರಾಣಿಗಳಾದ ಹುಲಿ, ಚಿರತೆಗಳು ತಿನ್ನುತ್ತವೆ. ಅವುಗಳಲ್ಲಿ ಬಲಾಢ್ಯ ಹುಲಿಗಳು ಬದುಕುಳಿಯುತ್ತವೆ. ಇನ್ನು ಉನ್ನತಶ್ರೇಣಿಯ ಜೀವಿಗಳು ಸತ್ತಾಗ ಅವುಗಳ ದೇಹವನ್ನು ಹೊಕ್ಕುವ ಶೀಲಿಂಧ್ರಗಳು, ಬ್ಯಾಕ್ಟೀರಿಯಾಗಳು ಆ ಮೃತದೇಹವನ್ನು ಕೊಳೆಯುವಂತೆ ಮಾಡಿ ಮಣ್ಣಿಗೆ ಗೊಬ್ಬರವಾಗಿ ಸೇರಿಸುತ್ತವೆ. ಹೀಗೆ ಈ ಚಕ್ರ ತಿರುಗುತ್ತಾ ಇರಬೇಕು. ಆದರೆ ಪ್ರಕೃತಿ ಚಿತ್ರಣ ಇಂದು ಏನಾಗಿದೆ. ಅರಣ್ಯದ ವ್ಯಾಪ್ತಿ ಕಡಿಮೆಯಾಗಿದೆ.

ಕಾಡ್ಗಿಚ್ಚು, ಬೇಟೆ, ಅಭಿವೃದ್ಧಿ ಕಾಮಾಗಾರಿಗಳು, ನೀರಾವರಿ ಯೋಜನೆಗಾಗಿ ಕಾಡುನಾಶ, ನಮ್ಮಲ್ಲೂ ರೈಲ್ವೆ ಯೋಜನೆಗಾಗಿ ಸಾವಿರಾರು ಎಕರೆ ಕಾಡು ನಾಶ ಮಾಡಹೊರಟಿದ್ದರಲ್ಲ… ಸಂರಕ್ಷಿಸಲ್ಪಟ್ಟ ಅರಣ್ಯಗಳ ಒತ್ತುವರಿ, ಸರ್ಕಾರ ತನಗೆ ಬೇಕೆಂದಾಗ ಮಾಡುವ ಅಕ್ರಮ-ಸಕ್ರಮ ಭೂಬದಲಾವಣೆಗಳು, ಕಾಡಿನ ಜಟಿಲತೆಯನ್ನು ಹಾಳುಗೆಡವುತ್ತಿವೆ. ನಮ್ಮ ರಾಜ್ಯದ ಚಿರತೆಗಳ ಸಂಖ್ಯೆ ಬರೇ ಅರವತ್ತೆರಡು! ಇದು ಎರಡು ದಶಕದ ಹಿಂದಿನ ಅಂಕಿ-ಅಂಶ ಅಂದರೆ, ಈಗ ಎಷ್ಟಾಗಿರಬಹುದು ಊಹೆ ಮಾಡಿಕೊಳ್ಳಿ.

ಅರಣ್ಯಗಳು ಕ್ಷೀಣಿಸುತ್ತಾ ವನ್ಯಜೀವಿಗಳು ಪರಿಸರ ವ್ಯವಸ್ಥೆಗೆ ವಿದಾಯ ಹೇಳುವ ಹಂತಕ್ಕೆ ತಲುಪುತ್ತಿವೆ. ಕಳೆದ ವರ್ಷ ದುಬಾರೆಯಿಂದ ಸಿದ್ದ ಎಂಬ ಆನೆಮರಿಯನ್ನು ಸ್ಥಳಾಂತರ ಮಾಡುವ ಉದ್ದೇಶದಿಂದ ಅರಣ್ಯ ಇಲಾಖೆ ಜಾರ್ಖಂಡ್‍ ಗೆ ಆನೆಯನ್ನು ಲಾರಿ ಹತ್ತಿಸಹೋದಾಗ ಸಿದ್ದ ಹಠಮಾಡಿ ಕಣ್ಣೀರು ಸುರಿಸಿ, ಕಾಡಿನಲ್ಲಿ ಮಾಯವಾಗಿದ್ದ ಅವನನ್ನು ಮಾರನೇದಿನ ಬಲವಂತವಾಗಿ ಲಾರಿಹತ್ತಿಸಿ ಕಳುಹಿಸಿದ್ದು ವನ್ಯಜೀವಿ ಜಗತ್ತು ನಮ್ಮಿಂದ ಮರೆಯಾಗುತ್ತಿರುವ ದುರಂತತೆಯ ಸೂಚಕ ಅಂದರು ಅನ್ನಬಹುದು. ಒಂದು ಕಾಡುಪ್ರಾಣಿಯನ್ನು ಅದರಿಚ್ಛೆಯಂತೆ ಅದು ಹುಟ್ಟಿಬೆಳೆದ ಕಾಡಿನಲ್ಲಿ ಇರಲು ಬಿಡದೆ ಕಳುಹಿಸಿದ್ದು ಎಂಥ ಮನಕಲಕುವ ಸನ್ನಿವೇಶ…

ಪ್ರಾಣಿದಯಾ ಸಂಘಗಳು ಬರೇ ಟೀಶರ್ಟ್ ಮೇಲೆ ಹುಲಿ, ಸಿಂಹ ರಕ್ಷಣೆ ಮಾಡುತ್ತಿವೆಯಾ?

ಹೌದು ನೀವು ಗಮನಿಸಿ, ಅವರ ಹೆಚ್ಚಿನ ಚಟುವಟಿಕೆಗಳು ಇಂಥಕಡೆ ನಡೆಯಬೇಕು. ಆದರೆ ಅವರದ್ದೇನಿದ್ದರು ಸಿನಿಮಾದಲ್ಲಿ ನಿಜವಾದ ಆನೆಬಳಸಿ ಶೂಟಿಂಗ್ ಮಾಡಿದ್ರಾ? ಇಲ್ಲ ಗ್ರಾಫಿಕ್ ಆನೆಬಳಸಿದ್ರಾ ಅನ್ನುವಂತಹ ಮೊಕದ್ದಮೆಗಳನ್ನು ಹೂಡಿ ಪ್ರಚಾರ ಪಡೆಯುತ್ತಿರುತ್ತವೆ. ಆದರೆ ನಿಜವಾಗಿ ಜೀವಂತ ಆನೆಗಳು ಹೇಗೆ ಶೂಟ್ ಆಗುತ್ತಿವೆ ಎಂದು ತಿರುಗಿಯೂ ನೋಡುವುದಿಲ್ಲ. ಕೊಡಗಿನಲ್ಲಿ ಅದೆಷ್ಟು ಮನುಷ್ಯರು, ಆನೆಗಳು ದುರಂತಕ್ಕೆ ಬಲಿಯಾಗುತ್ತಿವೆ? ಅವುಗಳ ಸಾವು ಹೇಗಾಗುತ್ತಿದೆ ಬಂದು ನೋಡುವವರು ಯಾರೂ ಇಲ್ಲ. ಅದೇ ನೀವೊಮ್ಮೆ ಮಹಾನಗರಕ್ಕೆ ಹೋಗಿ ನೋಡಿದರೆ, ಪ್ರತಿಷ್ಟಿತ ಹೋಟೆಲ್ ರೂಮಲ್ಲಿ ಕುಳಿತು ಇಂಟರ್‍ನೆಟ್‍ ನಿಂದ ಪ್ರಾಣ ಪಕ್ಷಿಗಳ ಫೋಟೊ ಹೆಕ್ಕಿತೆಗೆದು ಅದನ್ನು ಹಿನ್ನೆಲೆ ಸಂಗೀತದ ಜೊತೆ ಎಡಿಟ್ ಮಾಡಿ, ನಾವು ಪ್ರಾಣಿರಕ್ಷಕರು ಅಂಥ ಹೇಳಿಕೊಂಡು ತಿರುಗುತ್ತಿರುತ್ತಾರೆ.

ಆದರೆ ಅವರಾದರು ಒಮ್ಮೆ ಇತ್ತ ನೋಡಿದರೆ ಸ್ವಲ್ಪಮಟ್ಟಿಗಾದರು ವನ್ಯಜೀವಿಗಳ ಸಮಸ್ಯೆಯನ್ನು ಸರಿಪಡಿಸುವತ್ತ ಗಮನ ಹರಿಸಬಹುದೇನೋ. ಮನೆಯ ಗೋಡೆಯ ಚಿತ್ರಗಳಲ್ಲಿರುವ ಆನೆ, ಚಿರತೆ, ಗುಬ್ಬಿಯ ಫೊಟೋ ಫ್ರೇಮ್‍ ಗಳಷ್ಟು ಸಂಖ್ಯೆಯ ಕಾಡುಪ್ರಾಣಿಗಳು ನಮ್ಮಲ್ಲಿವೆಯಾ? ದಟ್ಟಕಾಡಿನಲ್ಲಿದ್ದ ಘೀಳಿಡುವ ಮದಗಜ, ಚಂಗನೆ ಜಿಗಿದು ಓಡುವ ಜಿಂಕೆ, ಹೊಂಚುಹಾಕಿ ಸಂಚುಮಾಡುತ್ತಿದ್ದ ಚಿರತೆ, ಕುತಂತ್ರಿ ನರಿ…. ಇವೆಲ್ಲಾ ರೂಪಕವಾಗಿ ಮಾತ್ರ ಉಳಿದು ಹೋದವಾ? ಸ್ವಾಭಾವಿಕ ನ್ಯಾಯದಂತೆ ನಾವು ಬದುಕಿ ಇತರರಿಗೂ ಬದುಕಲು ಬಿಡಿ ಎನ್ನುವ ನ್ಯಾಯವನ್ನು ನಾವು ಸಂಪೂರ್ಣವಾಗಿ ಮರೆತಿದ್ದೇವೆಯೇ? ಅನಿಸುತ್ತಿದೆ.

ನಮ್ಮಿಂದ ನಮ್ಮ ಜೀವವೈವಿಧ್ಯದ ಕೊಂಡಿಗಳು ಕಳಚಿ ಬೀಳುತ್ತಿವೆ. ಪ್ರತಿಬಾರಿ ಆನೆಗಳು, ಕಾಡುಪ್ರಾಣಿಗಳು ಸತ್ತಾಗ ನಮ್ಮೆಲ್ಲರ ಮನಸ್ಸು ಭಾರವಾಗುತ್ತದೆ. ಹಾಗೇ ಆನೆ ಭೀಕರವಾಗಿ ಮನುಷ್ಯರ ಮೇಲೆ ದಾಳಿ ಮಾಡಿದಾಗಲೂ ಮನುಷ್ಯರು ಮಾಡುತ್ತಿರುವ ತಪ್ಪೇನು ಎಂದು ಮನಸು ಚಿಕ್ಕದಾಗುತ್ತದೆ. ಇಷ್ಟವಿಲ್ಲದ ಮನಸ್ಸಿನಿಂದ ಬೇರೆ ರಾಜ್ಯಕ್ಕೆ ಹೋದ ಸಿದ್ದ ಆನೆ ಕೊಡಗಿನ ಕಾಡಿಗೆ ಎಂದು ಹೋಗುವೆ, ತನ್ನವರನ್ನೆಲ್ಲ ಎಂದು ನೋಡುವೆ ಎಂದು ಕಾಯುತ್ತಿರುವ ಚಿತ್ರ ಕಣ್ಮುಂದೆ ಬಂದಂತಾಗುತ್ತದೆ.

ಪೂರ್ಣಚಂದ್ರ ತೇಜಸ್ವಿಯವರಿಗೆ ಅನಿಸಿದಂತೆ, ಇದರ ಬಗೆಗೆ ಇನ್ನೂ ಬರೆಯಬೇಕು. ಕಾನೂನು ಶಿಕ್ಷಿಸುತ್ತದೆ ಎಂದೆಲ್ಲಾ ಹೇಳಿಯೂ ಪ್ರಯೋಜನವಿಲ್ಲ ಅನಿಸುವಂತೆ ನಮ್ಮ ಪರಿಸ್ಥಿತಿ ಆಗಿದೆ. ನಮಗೆಲ್ಲಾ ತಾಸುಗಟ್ಟಲೆ ಟಿವಿ ಮುಂದೆ ಕುಳಿತು ನ್ಯಾಷನಲ್ ಜಿಯೋಗ್ರಫಿಯ ಕಾರ್ಯಕ್ರಮ ನಮ್ಮ ಮಕ್ಕಳು ನೋಡುತ್ತಾರೆ ಎಂದು ಹೇಳುವುದರಲ್ಲಿ ಹೆಮ್ಮೆಯಿದೆ. ಆದರೆ ಪಕ್ಕದ ಕಾಡಿನಲ್ಲಿ ಅಳಿಸಿ ಹೋಗುತ್ತಿರುವ ಪ್ರಾಣಿಸಂಕುಲಕ್ಕೆ ಅಲ್ಲಿಂದ ಎದ್ದುಬಂದು ಏನು ಮಾಡಬಹದು ಎಂದು ಯಾರೂ ಯೋಚಿಸುವುದಿಲ್ಲ. ಯಾರನ್ನೇ ದೂರಿದರು ಅಂತಿಮವಾಗಿ ಹಾಳಾಗುತ್ತಿರುವುದು ಕಾಡು ಮತ್ತು ಕಾಡುಪ್ರಾಣಿಗಳೇ, ಇದಷ್ಟೇ ಸತ್ಯ.

ಉಷಾ ಪ್ರೀತಮ್
ಮಗ್ಗುಲ

Print Friendly, PDF & Email
Spread the love
error: Content is protected.