ಗಗನ

ಅದೆಷ್ಟು ಎತ್ತರ ನೀ ವಿಸ್ತಾರ ಗಗನ
ಅಚ್ಚರಿಗಳೊಡನೆ ಸೆಳೆಯುವೆ ಎಲ್ಲರ ಗಮನ
ಸೂರ್ಯ, ಚಂದ್ರ ತಾರೆಗಳ ತಾಣ
ನೋಡಲು ಬೆಳೆಸಲೆ ನಿನ್ನತ್ತ ಪಯಣ?
ಒಮ್ಮೆ ಕಪ್ಪು, ಒಮ್ಮೆ ಕೆಂಪು, ಒಮ್ಮೊಮ್ಮೆ ಬಿಳಿ
ಸೂರ್ಯ ರಶ್ಮಿಗಳೊಡನೆ ಬೆಳಕಿನ ಓಕುಳಿ
ಗುಡುಗುಡು ಶಬ್ದದಿ ಮುನ್ನುಗ್ಗುವ ಗುಡುಗು
ವೇಗದಿ ನುಗ್ಗಿ ಮರೆಯಾಗುವ ಮಿಂಚಿನ ಮಿನುಗು!
ಮೋಡದಿಂದ ಜಾರಿ ಜಿನುಗುವ ಮಳೆ ಹನಿ
ಭೂಸ್ಪರ್ಶಕೆ ಕಾಯ್ವ ತಂಪಾದ ಇಬ್ಬನಿ
ಬಿಸಿಲ ಮಳೆಯಲ್ಲಿ ಮೂಡಿದ ಕಾಮನ ಬಿಲ್ಲು
ಬಾಗಿದ ಬಣ್ಣಗಳ ಬೆರಗು ಕಂಡೆ ನಾ ಅಲ್ಲು!
ಕುತೂಹಲವ ಕೆರಳಿಸಿದೆ ನೀಲಿ ಆಕಾಶ
ಆಲೋಚಿಸಿದಷ್ಟೂ ಅನಂತ… ವಿಶೇಷ
ಹಕ್ಕಿಗಳಂತೆ ರೆಕ್ಕೆ ಪಡೆದು ಹಾರಲೆ ನಿನ್ನೆಡೆಗೆ
ರೋಮಾಂಚನಗೊಳಿಸುವ ಎತ್ತರದ ನೋಟದೆಡೆಗೆ!
ಗುರಿ ತಲುಪಲು ನೀನಾಗಬಹುದೇ ಮಿತಿ?
ಅಳೆಯಲಾಗದಷ್ಟು ಅಗಾಧ ನಿನ್ನ ಪರಿಮಿತಿ.
– ದೀಪಿಕಾ ಬಾಯಿ
ಬೆಂಗಳೂರು ಜಿಲ್ಲೆ

M.Sc ( ಗಣಿತ ) ಮುಗಿಸಿ, ನನ್ನಿಷ್ಟ ದಂತೆ ಶಿಕ್ಷಣ ವೃತ್ತಿ ಆರಿಸಿಕೊಂಡು, ಸರ್ಕಾರಿ ಶಾಲಾ ಮಕ್ಕಳಿಗೆ ಸೃಜನಾತ್ಮಕ ಕಲಿಕೆಗೆ ಪೂರಕವಾಗಲು ರಾಮಕೃಷ್ಣ ಮಿಷನ್ ಶಿವನಹಳ್ಳಿ ಯವರು ಆಯೋಜಿಸಿರುವ ಪ್ರೊಜೆಕ್ಟ್ ಮಾಡೂ ನಲ್ಲಿ ಕೆಲಸ ಮಾಡುತ್ತಿದ್ದೇನೆ.
ವಿವಿಧ ಶಾಲೆಯ ಮಕ್ಕಳೊಂದಿಗೆ ಚಟುವಟಿಕೆಗಳ ಮೂಲಕ ವಿಜ್ಞಾನ ಮತ್ತು ಗಣಿತದ ವಿಷಯಗಳನ್ನು ಚರ್ಚಿಸುವುದು ನನ್ನ ವೃತ್ತಿ ಮತ್ತು ಪ್ರವತ್ತಿ ಕೂಡ ಹೌದು .ಚಿಕ್ಕ ಕಥೆಗಳು ಮತ್ತು ಕವನಗಳು ಬರೆಯುವುದು ,ಚಿತ್ರಕಲೆ ನನ್ನ ಹವ್ಯಾಸ ಗಳು.
ಚಿಕ್ಕ ವಯಸ್ಸಿನಿಂದ ಬೆಂಗಳೂರಿನಲ್ಲೆ ಬೆಳೆದ ನನಗೆ ಕಾಡು ಮತ್ತು ಕಾಡು ಪ್ರಾಣಿಗಳ ಬಗ್ಗೆ ಹೆಚ್ಜ್ಚಿನ ಜ್ಞಾನ ಇರಲಿಲ್ಲ. ಆದರೆ ಈಗ ಪರಿಸರ ಕಾಳಜಿ ಹೊಂದಿರುವ ಕೆಲವು ಗೆಳೆಯರೊಂದಿಗೆ ಸೇರಿ ನನಗು ಪ್ರಕೃತಿ ಯ ಬಗ್ಗೆ ಹೆಚ್ಚು ತಿಳಿಯುವ ಕುತೂಹಲ ಬಂದಿದೆ. ಪರ್ವತಾರೋಹಣ, ಪಕ್ಷಿ ವೀಕ್ಷಣೆ, ಛಾಯಗ್ರಹಣಗಳಲ್ಲಿ ನನ್ನನ್ನು ತೊಡಗಿಸಿಕೊಳ್ಳುವುದು ನನಗಿಷ್ಟ .