ಜೀವ ಜಲ
ಹಿಮದಿಂದ ಕರಗಿ
ಹರಿದು ಧಾರೆಯಾಗಿ
ಅಲ್ಲಲ್ಲೊಂದು ಹೆಸರಾಗಿ
ಹಸಿರಿಗೆ ಉಸಿರಾಗಿ
ಅಮೃತವಾದ ಜೀವ ಜಲ,
ಜುಳು ಜುಳನೆ ಸದ್ದು ಮಾಡಿ
ಸಂಗೀತದ ಅಲೆಯ ಹೂಡಿ
ಬಳುಕುತ್ತಾ ಹರಿವ ಮೋಡಿ
ಎಂಥಾ ಚೆಂದ ನೋಡಿ!
ತನ್ನೊಡಲ ಚಾಚಿ ಜಲಚರಗಳ ಸಲಹಿ
ಸಿಹಿಯ ಎಲ್ಲೆಡೆ ಹರಡಿ ಕರಿಗಿಸಿಕೊಳ್ಳುವೆ ಕಹಿ
ಭೂಮಿಯಲ್ಲಿ ಇಂಗಿದರೆ ಅಂತರ್ಜಲ
ಪ್ರವಾಹವಾಗಿ ಮುನ್ನುಗ್ಗಿದರೆ ಕೋಲಾಹಲ!
ಘನವಾಗಿ, ದ್ರವವಾಗಿ, ಅನಿಲವಾಗುವ ಭಿನ್ನ ಭಿನ್ನ ಸ್ಥಿತಿ.
ಪರಿಸ್ಥಿತಿಗೆ ಹೊಂದಿಕೊಳ್ಳುವ ಈ ರೀತಿ
ಕಲಿಸಲಿ ನಮಗೆ ಜೀವನ ನೀತಿ
ಒಟ್ಟಾಗಿ ಮಾಡುವ ಜಲ ಸಂರಕ್ಷಣೆ,
ತೊಲಗಿಸುವ ಬರಗಾಲ ಕ್ಷಾಮದ ಭೀತಿ.
– ದೀಪಿಕಾ ಬಾಯಿ ಎನ್., ಬೆಂಗಳೂರು ಜಿಲ್ಲೆ
M.Sc ( ಗಣಿತ ) ಮುಗಿಸಿ, ನನ್ನಿಷ್ಟ ದಂತೆ ಶಿಕ್ಷಣ ವೃತ್ತಿ ಆರಿಸಿಕೊಂಡು, ಸರ್ಕಾರಿ ಶಾಲಾ ಮಕ್ಕಳಿಗೆ ಸೃಜನಾತ್ಮಕ ಕಲಿಕೆಗೆ ಪೂರಕವಾಗಲು ರಾಮಕೃಷ್ಣ ಮಿಷನ್ ಶಿವನಹಳ್ಳಿ ಯವರು ಆಯೋಜಿಸಿರುವ ಪ್ರೊಜೆಕ್ಟ್ ಮಾಡೂ ನಲ್ಲಿ ಕೆಲಸ ಮಾಡುತ್ತಿದ್ದೇನೆ.
ವಿವಿಧ ಶಾಲೆಯ ಮಕ್ಕಳೊಂದಿಗೆ ಚಟುವಟಿಕೆಗಳ ಮೂಲಕ ವಿಜ್ಞಾನ ಮತ್ತು ಗಣಿತದ ವಿಷಯಗಳನ್ನು ಚರ್ಚಿಸುವುದು ನನ್ನ ವೃತ್ತಿ ಮತ್ತು ಪ್ರವತ್ತಿ ಕೂಡ ಹೌದು .ಚಿಕ್ಕ ಕಥೆಗಳು ಮತ್ತು ಕವನಗಳು ಬರೆಯುವುದು ,ಚಿತ್ರಕಲೆ ನನ್ನ ಹವ್ಯಾಸ ಗಳು.
ಚಿಕ್ಕ ವಯಸ್ಸಿನಿಂದ ಬೆಂಗಳೂರಿನಲ್ಲೆ ಬೆಳೆದ ನನಗೆ ಕಾಡು ಮತ್ತು ಕಾಡು ಪ್ರಾಣಿಗಳ ಬಗ್ಗೆ ಹೆಚ್ಜ್ಚಿನ ಜ್ಞಾನ ಇರಲಿಲ್ಲ. ಆದರೆ ಈಗ ಪರಿಸರ ಕಾಳಜಿ ಹೊಂದಿರುವ ಕೆಲವು ಗೆಳೆಯರೊಂದಿಗೆ ಸೇರಿ ನನಗು ಪ್ರಕೃತಿ ಯ ಬಗ್ಗೆ ಹೆಚ್ಚು ತಿಳಿಯುವ ಕುತೂಹಲ ಬಂದಿದೆ. ಪರ್ವತಾರೋಹಣ, ಪಕ್ಷಿ ವೀಕ್ಷಣೆ, ಛಾಯಗ್ರಹಣಗಳಲ್ಲಿ ನನ್ನನ್ನು ತೊಡಗಿಸಿಕೊಳ್ಳುವುದು ನನಗಿಷ್ಟ .