ಪ್ರಕೃತಿ ಬಿಂಬ

ಪ್ರಕೃತಿ ಬಿಂಬ

                             ಕಂದು ಬೆಳವ                                                          ©  ಭಗವತಿ ಬಿ. ಎಂ.

ಕಂದು ಬೆಳವವು ಆಫ್ರಿಕಾ, ಏಷ್ಯಾ ಮತ್ತು ಪಶ್ಚಿಮ ಆಸ್ಟ್ರೇಲಿಯಾದ ವಿವಿಧ ಪ್ರದೇಶಗಳಲ್ಲಿನ ಮರಗಳಿರುವ ತೋಟಗಳು, ಉದ್ಯಾನವನಗಳು ಮತ್ತು ನಗರ ಪ್ರದೇಶಗಳಲ್ಲಿ ಕಂಡುಬರುತ್ತದೆ. ಕೊಲಂಬಿಡೆ (Columbidae) ಕುಟುಂಬಕ್ಕೆ ಸೇರುವ ಇದನ್ನು ವೈಜ್ಞಾನಿಕವಾಗಿ ಸ್ಪಿಲೋಪೆಲಿಯಾ ಸೆನೆಗಾಲೆನ್ಸಿಸ್ (Spilopelia senegalensis) ಎಂದು ಕರೆಯಲಾಗುತ್ತದೆ. ದೇಹವು ಕಂದು ಮತ್ತು ಗುಲಾಬಿ ಬಣ್ಣದಲ್ಲಿದ್ದು, ನೀಲಿ ಛಾಯೆಯನ್ನು ಹೊಂದಿರುತ್ತದೆ. ಕುತ್ತಿಗೆಯ ಮೇಲೆ ಕಪ್ಪು ಮಚ್ಚೆಗಳಿದ್ದು, ಬಿಳಿಯ ಕೆಳಭಾಗವಿರುವ ಉದ್ದನೆಯ ಬಾಲವನ್ನು ಹೊಂದಿದೆ. ಇವು ಸಾಧಾರಣವಾಗಿ ಜೋಡಿಗಳಲ್ಲಿ ಅಥವಾ ಗುಂಪುಗಳಲ್ಲಿ ಕಾಣಿಸುತ್ತವೆ. ಬೀಜಗಳು, ಹುಲ್ಲು ಮತ್ತು ಕೀಟಗಳು ಇವುಗಳ ಆಹಾರವಾಗಿವೆ. ಇವುಗಳು ಕೂ-ಕೂ-ಕೂ ಎಂದು ನಗುವಿನಂತಹ ಪುನರಾವರ್ತಿತ ಕರೆಗಳನ್ನು ಮಾಡುತ್ತವೆ.

ಚೋರೆಹಕ್ಕಿ                                                                                                  ©  ಭಗವತಿ ಬಿ. ಎಂ.                     

ಪೂರ್ವ ಮತ್ತು ಆಗ್ನೇಯ ಏಷ್ಯಾದಕಾಡುಗಳು,ಉದ್ಯಾನವನಗಳು ಮತ್ತು ಇತರೆ ನಗರ ಪ್ರದೇಶಗಳಲ್ಲಿ ಕಂಡುಬರುವ ಚೋರೆಹಕ್ಕಿಯು ಕೊಲಂಬಿಡೆ (Columbidae) ಕುಟುಂಬಕ್ಕೆ ಸೇರುತ್ತದೆ‌. ಇದನ್ನು ವೈಜ್ಞಾನಿಕವಾಗಿ ಸ್ಪಿಲೋಪೆಲಿಯಾ ಚೈನೆನ್ಸಿಸ್ (Spilopelia chinensis) ಎಂದು ಕರೆಯಲಾಗುತ್ತದೆ. ದೇಹವು ಕಂದು ಬಣ್ಣವಿದ್ದು, ರೆಕ್ಕೆಗಳ ಮೇಲೆ ಮಚ್ಚೆಗಳನ್ನು ಹೊಂದಿರುತ್ತದೆ ಹಾಗೂ ಎದೆಯ ಭಾಗವು ಗುಲಾಬಿ ಬಣ್ಣದ್ದಾಗಿದೆ. ಕುತ್ತಿಗೆಯ ಮೇಲ್ಭಾಗದಲ್ಲಿ ಬಿಳಿ ಮಚ್ಚೆಗಳುಳ್ಳ ಕಪ್ಪು ತೇಪೆಯಿರುತ್ತದೆ. ಹುಲ್ಲು, ಬೀಜಗಳು, ಧಾನ್ಯಗಳು, ಉದುರಿದ ಹಣ್ಣುಗಳು ಇವುಗಳ ಆಹಾರವಾಗಿವೆ. ಇವು ಕ್ರೂ ಕ್ರೂ ಕ್ರೂ ಎಂಬ ಕರೆಯನ್ನು ಮಾಡುತ್ತವೆ. ಕೊಂಬೆಗಳಲ್ಲಿ, ನೆಲದ ಮೇಲೆ ಅಥವಾ ಕಟ್ಟಡಗಳ ಮೇಲೆ ಬಟ್ಟಲಿನಾಕಾರದ ಗೂಡನ್ನು ಕಟ್ಟುತ್ತದೆ.

                              
ಕಾಡು ಬುರ್ಲಿ                                                                      ©  ಭಗವತಿ ಬಿ. ಎಂ

ಭಾರತ ಮತ್ತು ಶ್ರೀಲಂಕಾದ ಹುಲ್ಲುಗಾವಲು ಮತ್ತು ಎಲೆ ಉದುರುವ ಕಾಡುಗಳಲ್ಲಿ ಕಂಡುಬರುವ ಕಾಡು ಬುರ್ಲಿಯು ಫಾಸಿಯಾನಿಡೆ (Phasianidae) ಕುಟುಂಬಕ್ಕೆ ಸೇರುತ್ತದೆ‌. ಇದನ್ನು ವೈಜ್ಞಾನಿಕವಾಗಿ ಪೆರ್ಡಿಕುಲಾ ಏಷ್ಯಾಟಿಕಾ (Perdicula asiatica) ಎಂದು ಕರೆಯಲಾಗುತ್ತದೆ‌. ದೇಹವು ಕಪ್ಪು ಮಚ್ಚೆಗಳುಳ್ಳ ಕಂದು ಬಣ್ಣವಿದ್ದು, ಗಂಡು ಹಕ್ಕಿಯ ದೇಹದ ತಳಭಾಗವು ಬಿಳಿ ಹಾಗೂ ಕಪ್ಪು ಪಟ್ಟಿಗಳನ್ನು, ಹೆಣ್ಣು ಹಕ್ಕಿಯ ದೇಹದ ತಳಭಾಗವು ಗುಲಾಬಿ ಬಣ್ಣವನ್ನು ಹೊಂದಿರುತ್ತದೆ. ಸಾಮಾನ್ಯವಾಗಿ ಗುಂಪುಗಳಲ್ಲಿ ವಾಸಿಸುತ್ತಾ ನೆಲದ ಸಮೀಪ ಹಾರಾಡುತ್ತದೆ. ಹುಲ್ಲು, ಬೀಜಗಳು ಮತ್ತು ಸಣ್ಣ ಕೀಟಗಳನ್ನು ತಿನ್ನುತ್ತದೆ.

    ಕೆಂಪುಪೃಷ್ಠದ ಕವಲುತೋಕೆ                                                                                                   ©  ಭಗವತಿ ಬಿ. ಎಂ.

ಯುರೋಪ್, ಆಫ್ರಿಕಾ ಮತ್ತು ಏಷ್ಯಾ ಖಂಡದ ವಿವಿಧ ಪ್ರದೇಶಗಳ ಕಾಡು, ಗುಡ್ಡಗಾಡು ಪ್ರದೇಶ, ಪರ್ವತಗಳು, ಕಣಿವೆಗಳು ಮತ್ತು ಪಟ್ಟಣಗಳಲ್ಲಿ ಕಂಡುಬರುವ ಕೆಂಪುಪೃಷ್ಠದ ಕವಲುತೋಕೆ ಹಕ್ಕಿಯು ಹಿರುಂಡಿನಿಡೇ (Hirundinidae) ಕುಟುಂಬಕ್ಕೆ ಸೇರುತ್ತದೆ‌. ಇದನ್ನು ವೈಜ್ಞಾನಿಕವಾಗಿ ಸೆಕ್ರೊಪಿಸ್ ಡೌರಿಕಾ (Cecropis daurica) ಎಂದು ಕರೆಯಲಾಗುತ್ತದೆ. ಉದ್ದ-ರೆಕ್ಕೆಯುಳ್ಳ ದೇಹದ ಮೇಲ್ಭಾಗವು ನೀಲಿ ಬಣ್ಣವಿದ್ದು, ಗೆರೆಗಳುಳ್ಳ ತಳಭಾಗವು ತೆಳು ಕಂದು ಬಣ್ಣವಿರುತ್ತದೆ. ಕೆನ್ನೆ, ಬೆನ್ನು ಮತ್ತು ಕುತ್ತಿಗೆಯ ಭಾಗದಲ್ಲಿ ಕೊಂಚ ಕೆಂಪು ಬಣ್ಣವನ್ನು ಹೊಂದಿದೆ. ಉದ್ದವಾದ, ಆಳವಾಗಿ-ಕವಲೊಡೆದ ಬಾಲವನ್ನು ಹೊಂದಿರುತ್ತದೆ. ಮಣ್ಣಿನಿಂದ ಸುರಂಗದ ರೀತಿಯಲ್ಲಿ ಗೂಡು ಮಾಡುತ್ತದೆ. ಕೀಟಗಳನ್ನು ವೇಗವಾಗಿ ಹಾರಾಡುತ್ತಾ ಬೇಟೆಯಾಡುತ್ತದೆ.

ಚಿತ್ರಗಳು : ಭಗವತಿ ಬಿ. ಎಂ.
        ಲೇಖನ : ದೀಪ್ತಿ ಎನ್.

Spread the love
error: Content is protected.