ಜೀವಸಿರಿಯ ಅಳಿವು ಉಳಿವು

ಅಳಿದುಳಿದ ಗಿಡಗಳಿಗೆ ಜೀವ ತುಂಬಬೇಕು
ಕೆರೆ-ಕಟ್ಟೆ ಬಾವಿಗಳಿಗೆ ಮರುಜನ್ಮ ನೀಡಬೇಕು
ಎತ್ತಲಿಂದಲೋ ಮೋಡಗಳು ಬಂದು ಮತ್ತೆ ಮಳೆ ಸುರಿಸಬೇಕು
ಬತ್ತಿದ ಒಡಲಲ್ಲಿ ಬೆಳೆ ಮತ್ತೆ ಮರುಕಳಿಸಬೇಕು.
ಬಂಗಾರವ ಬೆಳೆದು, ಭೂತಾಯಿಯು ಒಲಿದು
ಬದುಕು ಸಾಗಿಸಲಿಲ್ಲವೇ ನಾವು ಎಷ್ಟೊಂದು ಕ್ರಿಸ್ತಶಕ
ದುಡ್ಡಿನ ದುರಾಸೆಗೆ ಬಿದ್ದು ಮಾನವೀಯತೆಯ ಮರೆತು
ಬೆರೆಸುತ್ತಿದ್ದೇವಲ್ಲವೇ ಮಣ್ಣಿಗೆ ಕೀಟನಾಶಕ, ಕಳೆನಾಶಕ.
ಅಮಲಲ್ಲಿ ಅನುಗಮಿಸಿ ಹಾಲಹಲವೇ ಉಣಿಸಿ
ಜೀರ್ಣಿಸಲಾಗದ ಜಿಹ್ವೇಯನು ಮಣ್ಣಲ್ಲಿ ಜಿನುಗಿಸಿ
ಕಡೆಗಣಿಸಿ, ನೆಲಸವೆಸಿ, ಸುತ್ತುವರಿದು ಮತ್ತದೇ ಮರುಕಳಿಸಿ
ಕತ್ತರಿಸಿ, ನೆತ್ತಿ ಉರಿಸಿ, ಒತ್ತುವರಿಯಾದರೆ ಉಳಿಯುವುದೇ ಸಸಿ, ಶಶಿ?
ಕ್ಲಿಷ್ಟವಾಗಿಹುದು ಬದುಕು, ಉಸಿರಾಟಕ್ಕೂ ತೊಡಕು
ಸ್ಪಷ್ಟವಾಗಿ ಗೋಚರಿಸುತಿಹುದು ಮನುಷ್ಯನ ಅಳುಕು-ಹುಳುಕು
ಮರ ಬೆಳೆಸಿ ಕಾಡು ಉಳಿಸಿ ಬದಲಾಗದಿದ್ದರೆ ಬದುಕು
ಅಳಿವಿನಂಚಿಗೆ ಅರಸಿ ಜೀವ ಸಂಕುಲವೇ ಇನ್ಮುಂದೆ ಕನಕಮುಸುಕು.
– ಡಾ. ಮಧುಸೂಧನ ಹೆಚ್. ಸಿ.
ತುಮಕೂರು ಜಿಲ್ಲೆ

ಬೋಧನೆಯ ಜೊತೆ ಬರಹಗಾರನಾಗುವ ಹಂಬಲ..ಸಾಮಾಜಿಕ ಕಾಳಜಿಯ ಜೊತೆ ಸಾಧಕನಾಗುವ ಹಂಬಲ..ಪ್ರಕೃತಿಯ ಮಡಿಲಲ್ಲಿ ಕಳೆದುಹೋಗುವ ಹಂಬಲ..
ತಾಂತ್ರಿಕ ಕಾಲೇಜಿನ ಉಪನ್ಯಾಸಕನಾಗಿರುವ ನನಗೆ ಕನ್ನಡ ಬರವಣಿಗೆ ಮೋಹ ಹೊಸತೇನಲ್ಲ..ಹವ್ಯಾಸಿ ಬರಹಗಾರ..ವೃತ್ತಿಯಲ್ಲಿ ಭೌತಶಾಸ್ತ್ರ ಉಪನ್ಯಾಸಕ ಹಾಗೂ ಸಂಶೋಧಕ