ಪ್ರಕೃತಿ ಬಿಂಬ
ಕೆಂಬೂತ © ದೀಪಕ್ ಎಲ್. ಎಂ.
ಭಾರತೀಯ ಉಪಖಂಡ ಮತ್ತು ಆಗ್ನೇಯ ಏಷ್ಯಾದ ಕಾಡುಗಳು, ಹುಲ್ಲುಗಾವಲುಗಳು, ತೋಟಗಳು ಮತ್ತು ಜನವಸತಿ ಸಮೀಪದ ಪ್ರದೇಶಗಳಲ್ಲಿ ವ್ಯಾಪಕವಾಗಿ ಕಂಡುಬರುವ ಕೆಂಬೂತವು ಕುಕುಲಿಡೇ (Cuculidae) ಕುಟುಂಬಕ್ಕೆ ಸೇರುತ್ತದೆ. ಇದನ್ನು ವೈಜ್ಞಾನಿಕವಾಗಿ ಸೆಂಟ್ರೊಪಸ್ ಸಿನೆನ್ಸಿಸ್ (Centropus sinensis) ಎಂದು ಕರೆಯಲಾಗುತ್ತದೆ. ಇದು ಉದ್ದನೆಯ ಬಾಲ, ಕಂದು ಬಣ್ಣದ ರೆಕ್ಕೆಗಳನ್ನು ಹಾಗೂ ಕೆಂಪು ಬಣ್ಣದ ಕಣ್ಣನ್ನು ಹೊಂದಿರುತ್ತದೆ. ಒಂಟಿಯಾಗಿ ಅಥವಾ ಜೋಡಿಗಳಲ್ಲಿ ವಾಸಿಸುವ ಇವು ಎತ್ತರಕ್ಕೆ ಹಾರದೆ, ನೆಲದ ಮೇಲೆ ಪೊದೆಗಳಡಿಯಲ್ಲಿಯೇ ಆಹಾರವನ್ನರಸುತ್ತಾ ನುಸುಳುತ್ತಿರುತ್ತವೆ. ಹಾವಿನ ಮರಿ, ಹಲ್ಲಿ, ಹಕ್ಕಿಯ ಮರಿ, ಮೊಟ್ಟೆ ಇದರ ಆಹಾರವಾಗಿದೆ. ಇದು ಫೆಬ್ರವರಿಯಿಂದ ಸೆಪ್ಟೆಂಬರ್ ವರೆಗೆ ಮುಳ್ಳಿನ ಮರಗಳಲ್ಲಿ ಸಾಕಷ್ಟು ಎತ್ತರದಲ್ಲಿ ಕಡ್ಡಿಗಳನ್ನು ಒಟ್ಟುಗೂಡಿಸಿ ದೊಡ್ಡದಾದ ಗೂಡು ಕಟ್ಟುತ್ತದೆ.
ಭಾರತ, ಶ್ರೀಲಂಕಾ ಮತ್ತು ಆಗ್ನೇಯ ಏಷ್ಯಾದ ಭಾಗಗಳಲ್ಲಿನ ಕಾಡುಗಳು ಮತ್ತು ಪೊದೆಗಳಲ್ಲಿ ಕಂಡುಬರುವ ಹೊನ್ನಹಣೆಯ ಎಲೆ ಹಕ್ಕಿಯು ಕ್ಲೋರೋಪ್ಸಿಡೆ (Chloropseidae) ಕುಟುಂಬಕ್ಕೆ ಸೇರುತ್ತದೆ. ಇದನ್ನು ವೈಜ್ಞಾನಿಕವಾಗಿ ಕ್ಲೋರೊಪ್ಸಿಸ್ ಔರಿಫ್ರಾನ್ಸ್ (Chloropsis aurifrons) ಎಂದು ಕರೆಯಲಾಗುತ್ತದೆ. ಹಸಿರು-ದೇಹ, ಕಪ್ಪು ಮುಖ ಮತ್ತು ಹಳದಿ ಅಂಚನ್ನು ಹೊಂದಿರುವ ಕಪ್ಪು ಗಂಟಲು ಮತ್ತು ಕಿತ್ತಳೆ ಬಣ್ಣದ ಹಣೆಯನ್ನು ಹೊಂದಿರುತ್ತದೆ. ಕಪ್ಪು ಬಣ್ಣದ ಪಾದಗಳನ್ನು ಮತ್ತು ಕಪ್ಪು ಬಣ್ಣದ ಕೊಕ್ಕನ್ನು ಸಹ ಹೊಂದಿರುತ್ತದೆ. ಮರದ ಮೇಲೆ ಗೂಡನ್ನು ನಿರ್ಮಿಸಿ, 2-3 ಮೊಟ್ಟೆಗಳನ್ನು ಇಡುತ್ತದೆ. ಕೀಟಗಳು ಮತ್ತು ಹಣ್ಣುಗಳು ಇದರ ಆಹಾರವಾಗಿದೆ. ಇತರ ಪಕ್ಷಿಗಳ ಕರೆಗಳನ್ನು ಅನುಕರಿಸುವುದು ಇದರ ವಿಶೇಷತೆಯಾಗಿದೆ.
ಭಾರತ, ಅಫ್ಘಾನಿಸ್ತಾನ, ಪಾಕಿಸ್ತಾನ, ನೇಪಾಳ, ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್ ದೇಶಗಳ ಶುಷ್ಕ ಪ್ರದೇಶಗಳು, ಒಣ ಕಾಡು ಪ್ರದೇಶಗಳು, ಕೃಷಿ ಪ್ರದೇಶಗಳು ಮತ್ತು ಮಾನವ ವಾಸಸ್ಥಾನಗಳ ಬಳಿ ಕಂಡುಬರುವ ಈ ಮೀಸೆ ಚಾಣ ಹಕ್ಕಿಯು ಫಾಲ್ಕೊನಿಡೇ (Falconidae) ಕುಟುಂಬಕ್ಕೆ ಸೇರುತ್ತದೆ. ಇದನ್ನು ವೈಜ್ಞಾನಿಕವಾಗಿ ಫಾಲ್ಕೊ ಜಗ್ಗರ್ (Falco jugger) ಎಂದು ಕರೆಯಲಾಗುತ್ತದೆ. ಇದರ ದೇಹದ ಮೇಲ್ಬಾಗವು ಬೂದು ಮಿಶ್ರಿತ ಕಂದು ಬಣ್ಣದಲ್ಲಿದ್ದು ಕಪ್ಪು ಗರಿಗಳನ್ನು ಹೊಂದಿರುತ್ತದೆ ಹಾಗು ಕೆಳಭಾಗವು ಕಂದು ಬಣ್ಣದ ಗೆರೆಗಳನ್ನೊಳಗೊಂಡ ತೆಳುವಾದ ಬಿಳಿಯ ಬಣ್ಣದ್ದಾಗಿದೆ. ಇದು ಮಧ್ಯಮ ಗಾತ್ರದ ಬೇಟೆಯ ಹಕ್ಕಿಯಾಗಿದ್ದು ಉದ್ದವಾದ ರೆಕ್ಕೆಗಳನ್ನು ಹೊಂದಿದೆ. ಕೆಲವು ಬಗೆಯ ಪಕ್ಷಿಗಳು, ಸಣ್ಣ ಸಸ್ತನಿಗಳು ಮತ್ತು ಹಲ್ಲಿಗಳು ಇವುಗಳ ಆಹಾರವಾಗಿವೆ. ಅತಿಯಾದ ಕೀಟನಾಶಕಗಳ ಬಳಕೆಯಿಂದ ಇವುಗಳ ಸಂಖ್ಯೆ ಕಡಿಮೆಯಾಗುತ್ತಿದೆ.
ಆಫ್ರಿಕಾ ಖಂಡದ ಮರುಭೂಮಿ, ಹುಲ್ಲುಗಾವಲುಗಳು ಅಥವಾ ಸವನ್ನಾ ಬಯಲು ಪ್ರದೇಶಗಳಲ್ಲಿ ಕಂಡುಬರುವ ಬೇಟೆಯ ಹಕ್ಕಿಯಾದ ಕಂದು ಗಿಡುಗವು ಆಕ್ಸಿಪಿಟ್ರಿಡೆ (Accipitridae) ಕುಟುಂಬಕ್ಕೆ ಸೇರುತ್ತದೆ. ಇದನ್ನು ವೈಜ್ಞಾನಿಕವಾಗಿ ಅಕ್ವಿಲಾ ರಾಪಾಕ್ಸ್ (Aquila rapax) ಎಂದು ಕರೆಯಲಾಗುತ್ತದೆ. ಇದರ ದೇಹದ ಮೇಲ್ಬಾಗವು ಗಾಢ ಬೂದು ಮಿಶ್ರಿತ ಕಂದು ಬಣ್ಣವಿದ್ದು, ಮಸುಕಾದ ಕೆಳಭಾಗವನ್ನು ಹೊಂದಿರುತ್ತದೆ. ದೊಡ್ಡದಾದ ರೆಕ್ಕೆ ಹಾಗು ಬಾಲವು ಕಪ್ಪಾಗಿರುತ್ತದೆ. ಇವು ಕಡ್ಡಿ, ಕೋಲು ಮತ್ತು ಎಲೆಗಳನ್ನು ಸೇರಿಸಿ ಸಮತಟ್ಟಾದ ಗೂಡನ್ನು ತೆರೆದ ಪ್ರದೇಶಗಳಲ್ಲಿ ಅಥವಾ ಮರಗಳಲ್ಲಿ ಕಟ್ಟುತ್ತವೆ. ಹೆಣ್ಣು ಗಿಡುಗವು ಸುಮಾರು ಒಂದರಿಂದ ಮೂರು ಮೊಟ್ಟೆಗಳನ್ನು ಇಡುತ್ತದೆ. ಕೊಳೆತ ಪ್ರಾಣಿಗಳ ಮಾಂಸ, ಸಣ್ಣ-ಪುಟ್ಟ ಹಕ್ಕಿ, ಮೊಲ, ಹಲ್ಲಿ ಮತ್ತು ಹಾವುಗಳು ಇವುಗಳ ಆಹಾರವಾಗಿವೆ. ಕಂದು ಗಿಡುಗಗಳ ದೃಷ್ಟಿ ಹಾಗು ಶ್ರವಣ ಗ್ರಹಿಕೆ ಬಹಳ ತೀಕ್ಷ್ಣವಾಗಿರುತ್ತದೆ.
ಚಿತ್ರಗಳು : ದೀಪಕ್ ಎಲ್. ಎಂ.
ಲೇಖನ : ದೀಪ್ತಿ ಎನ್.