ಚಿಟ್ಟೆ

ಚಿಟ್ಟೆ

ಬಂದೆ ನಾ, ನಿನ್ನ ಬೆನ್ನ ಹತ್ತಿ,
ಓಡುತಿರುವೆ ನೀನೆಲ್ಲಿ ಓ ಪಾತರಗಿತ್ತಿ?
ನೋಡಿದೆ ನಿನ್ನ ನಾ ತಲೆಯೆತ್ತಿ,
ಹೊರಟೆ ನೀನೆಲ್ಲಿ ನಿನ್ನ ಬಣ್ಣವ ನನ್ನ ಕೈಗೆ ಮೆತ್ತಿ.

ಮುತ್ತಿನಂತೆ ಪೋಣಿಸಿದೆ ನೀನಿಟ್ಟ ಮೊಟ್ಟೆ.
ಅದರೊಳಗೆ ಸೋಜಿಗವ ನೀ ಅಡಗಿಸಿ ಇಟ್ಟೆ,
ಕವಚದಿಂದ ಹೊರಬಂತೆ ಇನ್ನೊಂದು ಚಿಟ್ಟೆ?
ಅಚ್ಚರಿಯಿಂದ ನಾ, ಅದನೇ ನೋಡುತ್ತಾ ನಿಂತು ಬಿಟ್ಟೆ.

ಕಂಬಳಿ ಹುಳುವಾಗಿ ನೀ ಹೊರಬರುವೆ,
ರೂಪಪರಿವರ್ತನೆ ಹೊಂದಿ ಚಿಟ್ಟೆಯಾಗಿ ಬಿಡುವೆ,
ಬಣ್ಣ ಬಣ್ಣದಿ ಕಂಡು ನಿನ್ನ ಹಿಡಿವ ಆಸೆ ತಂದಿರುವೆ,
ಹಿಡಿಯಲಾಗದೆ ನಿನ್ನ, ನಾ ಸೋತು ಸೊರಗಿರುವೆ.

ಪ್ರಕೃತಿಯ ಸೊಬಗಿಗೆ ನೀನೊಂದು ಮೆರುಗು,
ಪರಾಗಸ್ಪರ್ಶದಿ ನಿನ್ನ ಕೊಡುಗೆ ಮೂಡಿಸಿದೆ ಬೆರಗು,
ಬರುವೆ ನಾ ನಿನ್ನೊಡನೆ, ನನಗೂ ಕೊಡು ಮಕರಂದ,
ನಿನ್ನಂತೆ ನಾ ಸವಿಯುವೆ ಜೀವನದ ಆನಂದ.!.

       – ದೀಪಿಕಾ ಬಾಯಿ
                            ಬೆಂಗಳೂರು ನಗರ ಜಿಲ್ಲೆ


Print Friendly, PDF & Email
Spread the love
error: Content is protected.