ಮಾಸ ವಿಶೇಷ – ಹಳದಿ ಪಾವಟೆ

ಮಾಸ ವಿಶೇಷ – ಹಳದಿ ಪಾವಟೆ

                         © ನಾಗೇಶ್ ಓ. ಎಸ್. ಹಳದಿ ಪಾವಟೆ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ

ಸಾಮಾನ್ಯ ಹೆಸರು: Indian mulberry
ವೈಜ್ಞಾನಿಕ ಹೆಸರು : Morinda pubescens

ಹಳದಿ ಪಾವಟೆ ಮರಗಳು ಸಾಮಾನ್ಯವಾಗಿ ಶುಷ್ಕ ಎಲೆ ಉದುರುವ ಕಾಡುಗಳಲ್ಲಿ ಕಂಡುಬರುತ್ತವೆ. ಸುಮಾರು ಎಂಟರಿಂದ ಹತ್ತು ಮೀಟರ್ ಎತ್ತರಕ್ಕೆ ಬೆಳೆಯುತ್ತವೆ. ಈ ಮರದ ಎಲೆಗಳು ಸರಳ ಎಲೆ ವಿನ್ಯಾಸವನ್ನು ಹೊಂದಿದ್ದು, ಕಡು ಹಸಿರು ಬಣ್ಣದಿಂದ ಕೂಡಿರುತ್ತವೆ ಹಾಗೂ 15 ರಿಂದ 20 ಸೆಂಟಿಮೀಟರ್ ಉದ್ದ, 4 ರಿಂದ 5 ಸೆಂಟಿಮೀಟರ್ ಅಗಲವಿರುತ್ತವೆ. ಮರದ ತೊಗಟೆಯು ಬೂದು ಮತ್ತು ಕಂದು ಬಣ್ಣದಿಂದ ಕೂಡಿದ್ದು, ಒರಟಾಗಿರುವ ತೊಗಟೆಯ ಮಧ್ಯೆ ಬಿರುಕುಗಳನ್ನು ಕಾಣಬಹುದು. ಹೂವುಗಳು ಕೊಳವೆಯಾಕಾರದಲ್ಲಿದ್ದು,  ಬಿಳಿ  ಬಣ್ಣವನ್ನು ಹೊಂದಿವೆ ಮತ್ತು ಸುಗಂಧ ಭರಿತವಾಗಿರುತ್ತವೆ. ಹೂವಿನಲ್ಲಿ ಉದ್ದವಾದ ಸುಮಾರು ಐದರಿಂದ ಆರು ದಳಗಳನ್ನು ಕಾಣಬಹುದು. ವರ್ಷದ ಮೇ ತಿಂಗಳಿನಲ್ಲಿ ಹೂಗಳನ್ನು ಕಾಣಬಹುದಾಗಿದೆ. ಕಾಯಿಗಳು ಹಸಿರು ಬಣ್ಣದಿಂದ ಕೂಡಿದ್ದು, ಸಂಪೂರ್ಣವಾಗಿ ಹಣ್ಣಾದಾಗ ಕಪ್ಪು ಬಣ್ಣಕ್ಕೆ ತಿರುಗುತ್ತವೆ. ಮರದ ಬಹುತೇಕ ಭಾಗಗಳನ್ನು ಆಯುರ್ವೇದ ಸಿದ್ಧ ಔಷಧಿಗಳಲ್ಲಿ ಮತ್ತು ನಂಜು ನಿರೋಧಕವಾಗಿ ಉಪಯೋಗಿಸುತ್ತಾರೆ. ಚರ್ಮದ ಗಾಯಗಳು, ಹುಣ್ಣುಗಳು ಮತ್ತು ಮೂತ್ರದ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಬಳಸುತ್ತಾರೆ.

Spread the love
error: Content is protected.