ಮಳೆಗಾಲದ ಅತ್ಯುತ್ತಮ ವರ್ಣರಂಜಿತ ಮಾಯಾ ಪ್ರಪಂಚ!

ಮಳೆಗಾಲದ ಅತ್ಯುತ್ತಮ ವರ್ಣರಂಜಿತ ಮಾಯಾ ಪ್ರಪಂಚ!

©ಗುರುಪ್ರಸಾದ್ ಕೆ. ಆರ್.

ಮಳೆಗಾಲ! ಮುಂಗಾರಿನ ಮಳೆ, ಮಳೆ ಕಾಡು. ಪ್ರಕೃತಿಯು ಹಚ್ಚ ಹಸಿರಿನಿಂದ ಮಳೆಯಲ್ಲಿ ಜಳಕ ಮಾಡಿ ಮಿಂದೆದ್ದು ಕಾಣುವ ಪರಿ. ಮೈದುಂಬಿ ಹರಿಯುವ ಝರಿ. ಧುಮ್ಮಿಕುವ ಜಲಪಾತ. ಭರ್ರೋ ಎಂದು ಸುರಿಯುವ ಮಳೆ. ಆಹಾ… ಪರಿಸರ ಪ್ರೇಮಿಗಳಿಗೆ ಮಳೆಗಾಲ ಒಂದು ಅದ್ಭುತ ಲೋಕವೇ ಸರಿ.

ಈ ಮಳೆಗಾಲದ ಸೌಂದರ್ಯ ಅನುಭವಿಸಿದವರಿಗೆ ಗೊತ್ತು. ನನ್ನಂಥ ಎಷ್ಟೋ ಪರಿಸರ ಪ್ರಿಯರು ಮುಂಗಾರು ಮಳೆಯಲ್ಲಿ ನೆನೆಯಲು ಇದರ ಸೊಬಗ ಸವಿಯಲು ಮಲೆನಾಡಿನ ಪ್ರದೇಶಗಳಿಗೆ, ಪಶ್ಚಿಮ ಘಟ್ಟ ಪ್ರದೇಶಗಳಾದ ಆಗುಂಬೆ, ಅಂಬೋಲಿ ಘಾಟ್, ಶರಾವತಿ, ಇತ್ಯಾದಿ ಪ್ರದೇಶಗಳಿಗೆ ಹೋಗುತ್ತೇವೆ. ಬರೀ ಮಳೆ, ಜಲಪಾತ, ಹಸಿರು ಇವಿಷ್ಟೇ ಅಲ್ಲದೆ, ಬಣ್ಣ ಬಣ್ಣ ಚಿತ್ತಾರದ ಇನ್ನೊಂದು ವೈವಿಧ್ಯಮಯ ಮಾಯಾಲೋಕವೇ ಇಲ್ಲಿ ಸೃಷ್ಟಿಯಾಗುವುದರ ಬಗ್ಗೆ ನಿಮಗೆ ಗೊತ್ತೇ? ಹೌದು, ಈ ಮುಂಗಾರಿನ ಮಳೆಗಾಲದಲ್ಲಿ ನಮಗೆ ಕೀಟ ಪ್ರಪಂಚದ ಒಂದು ಅದ್ಭುತ ಲೋಕ ಅನಾವರಣಗೊಳ್ಳುತ್ತದೆ. ಮಳೆ ಬೀಳುವುದನ್ನೇ ಕಾಯುತ್ತಿರುವ, ಎಷ್ಟೋ ಬಗೆ ಬಗೆಯ ಕೀಟಗಳು ಒಂದು ಬಗೆಯ ಅದ್ಭುತ ಮಾಯಾ ಪ್ರಪಂಚವನ್ನೇ ಸೃಷ್ಟಿ ಮಾಡುತ್ತವೆ. ಸಾಮಾನ್ಯವಾಗಿ ಮಳೆಗಾಲದಲ್ಲಿ ಪಕ್ಷಿ ಹಾಗು ಪ್ರಾಣಿಗಳು ಕಾಣಿಸುವಿಕೆ ಕಡಿಮೆ. ಈ ಸಮಯ ಸಣ್ಣ ಜೀವಿಗಳ ಛಾಯಾಚಿತ್ರಣಕ್ಕೆ (ಮ್ಯಾಕ್ರೋ ಫೋಟೋಗ್ರಾಫಿಗೆ) ಹೇಳಿ ಮಾಡಿಸಿದ ಸಮಯ.  ಹಚ್ಚ ಹಸಿರಿನ ನಡುವೆ ಮುತ್ತು ರತ್ನಗಳ ಹಾಗೆ ಈ ಕೀಟ ಪ್ರಪಂಚ ಕಾಣಿಸುತ್ತದೆ. ಯಾರೋ ಕಲಾವಿದ ಬಿಡಿಸಿರುವ ಬಣ್ಣ ಬಣ್ಣದ ಚಿತ್ತಾಕರ್ಷಕ ಚಿತ್ರಗಳ ಹಾಗೆ! ಅಬ್ಭಾ ಅದೊಂದು ಅದ್ಭುತ ಮಾಯಾಲೋಕವೇ ಸರಿ.ಇದನ್ನು ಗಮನಿಸಲು ಸ್ವಲ್ಪ ತಾಳ್ಮೆ ನಮಗೆ ಅತ್ಯವಶ್ಯಕ. ಒಂದೊಂದು ಬಗೆಯ ಜೀವಿಯೂ ವೈವಿಧ್ಯಮಯ. ಮಳೆಗಾಲ ಇನ್ನೇನು ಶುರುವಾಗುವ ಹೊತ್ತಿಗೆ ಮಣ್ಣಿನ ಒಳಗಿನಿಂದ ಎದ್ದು ಬರುವ “ಸಿಕಾಡ” ಎನ್ನುವ ಕೀಟ ತನ್ನ ವಿಚಿತ್ರ ಶಬ್ಧದಿಂದ ಸುತ್ತಲಿನ ಪರಿಸದಲ್ಲಿ ತನ್ನದೇ ಆದ ಝೇಂಕಾರ ಹೊಮ್ಮಿಸುತ್ತ ತನ್ನ ಸಂಗಾತಿಯನ್ನು ಹುಡುಕುವ ಪರಿ, ಸಂಗಾತಿಗಳನ್ನು ಆಕರ್ಷಿಸಲು ಕೀಟಗಳು ನಡೆಸುವ ಸರ್ಕಸ್ಸು, ತನ್ನ ಕೂಗಿನ ಮೂಲಕ ಸಂಗಾತಿಯನ್ನು ಓಲೈಸಲು ಕೂಗುತ್ತಿರುವ ಕಪ್ಪೆಗಳ ನಿನಾದ ಎಲ್ಲವೂ ಮನಮೋಹಕ.

ಕಪ್ಪೆಗಳ ಲೋಕವೇ ಒಂದು ವೈವಿಧ್ಯ ತಾಣ. ಸಣ್ಣ ಸಣ್ಣ ಕಪ್ಪೆಯಿಂದಿಡಿದು ಎರಡು ಕೈ ಮುಷ್ಠಿಯಷ್ಟಿರುವ ದೈತ್ಯ ಗಾತ್ರದ ಬುಲ್ ಫ್ರಾಗ್ (Bull Frog) ತನಕ ಇವುಗಳ ವೈವಿಧ್ಯತೆ ನೋಡುವುದೇ ಒಂದು ಆನಂದ. ತನ್ನ ಸಂಗಾತಿಗಳ ಹುಟುಕಾಟದಲ್ಲಿ ಮೈಮರೆತಿರುವ ಕಪ್ಪೆಗಳನ್ನು ಹುಡುಕಿ ಬೇಟೆಯಾಡಲು ಬರುವ ವರ್ಣರಂಜಿತ ಹಾವುಗಳದ್ದು ಮತ್ತೊಂದು ವಿಸ್ಮಯ ಪ್ರಪಂಚ!

© ಗುರುಪ್ರಸಾದ್ ಕೆ. ಆರ್.

ಇನ್ನೊಂದೆಡೆ ನೆಲದ ಮೇಲೆ ಇರುವ ಜೀವಿಗಳ ಕಡೆ ಒಮ್ಮೆ ಕಣ್ಣಾಯಿಸಿದರೆ ಅವುಗಳದ್ದೇ ಒಂದು ಸುಂದರ ಪ್ರಪಂಚ ನಮ್ಮನ್ನು ಸೆಳೆಯುತ್ತದೆ.   ಚಿಕ್ಕ ಚಿಕ್ಕ ಮಿಡತೆಗಳು, ವಿವಿಧ ಪ್ರಭೇದದ ನೊಣಗಳು, ಜೇನು ಹುಳುಗಳು, ಕಡಜಗಳು, ದುಂಬಿಗಳು, ಜೀರುಂಡೆಗಳು ಸುತ್ತಲಿನ ಪ್ರಪಂಚವನ್ನು ಮರೆಸಿ ಬೇರೆಡೆಗೆ ಕರೆದೊಯ್ಯುತ್ತವೆ. ಇದನ್ನು ಗಮನಿಸಿ ಕ್ಯಾಮೆರಾದಲ್ಲಿ ಸೆರೆಹಿಡಿಯಲು ಶುರುಮಾಡುವ ನಮಗೆ ಸಮಯದ ಲೆಕ್ಕವಿರುವುದಿಲ್ಲ, ಆಯಾಸದ ಹಂಗಿರುವುದಿಲ್ಲ, ಸುತ್ತಲಿನ ಪ್ರಪಂಚದ ಪರಿವೆಯೇ ಇರುವುದಿಲ್ಲ. ಇನ್ನು ಚಿಟ್ಟೆಗಳ ಆಕರ್ಷಕ ಬಣ್ಣಗಳ ಸೊಬಗು, ಪತಂಗ, ಕಂಬಳಿ ಹುಳ, ಅವುಗಳ ಮೇಲೆ ಬಿದ್ದಿರುವ ಮಳೆ ಹನಿಗಳು ಇನ್ನಷ್ಟು ಸೌಂದರ್ಯ ಹೆಚ್ಚಿಸುತ್ತವೆ. ಈ ಮಳೆಗಾಲದಲ್ಲಿ ಹೆಚ್ಚು ಸಕ್ರಿಯವಾಗಿರುವ ಕೀಟಗಳನ್ನು ತನ್ನ ಬಲೆಗೆ ಬೀಳಿಸಿಕೊಳ್ಳಲು ಹವಣಿಸುತ್ತಿರುವ ಬಗೆಬಗೆಯಾದ ಜೇಡಗಳು ನಮ್ಮನ್ನು ಅವುಗಳ ಬಳಿಗೆ ಸೆಳೆಯಲು ಸೋಲಲಿಲ್ಲ.  ಅವುಗಳ ಆಕಾರ, ವಿನ್ಯಾಸ, ಗಾತ್ರ, ನೇಯ್ದ ಬಲೆಯ ಮೇಲೆ ಬಿದ್ದಿರುವ ನೀರ ಹನಿಗಳ ಪರಿ, ಅವುಗಳು ಬೇಟೆಯಾಡುವ ವೈಖರಿ ಎಲ್ಲವು ಕಣ್ಮನ ಸೆಳೆಯುತ್ತವೆ.

ಎಲೆ ತಿನ್ನುವ ಚಿಕ್ಕ ಚಿಕ್ಕ ಹಸಿರು ಹುಳುಗಳು. ತುಂಬಾ ಹತ್ತಿರದಿಂದ ಇವುಗಳನ್ನು ಗಮನಿಸಿದರೆ ಈ ಪುಟ್ಟ ಹುಳುಗಳ ಮೇಲೆ ಇರುವ ಮೈ ಬಣ್ಣ ಕಲಾವಿದನ ಕುಂಚದಿಂದ ಮೂಡಿದ ವಿವಿಧ ಕಲಾಕೃತಿಯಂತೆ ಕಾಣುತ್ತವೆ. ಇವುಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲು ಇಚ್ಛಿಸಿದಲ್ಲಿ ಮ್ಯಾಕ್ರೋ ಲೆನ್ಸ್ ಮತ್ತು ಅದಕ್ಕೆ ತಕ್ಕುದಾದ ಡಿಫ್ಯೂಸರ್ ಫ್ಲ್ಯಾಶ್ ತುಂಬಾ ಅವಶ್ಯಕ. ಹಾಗೆಯೇ ಹೆಚ್ಚು ತಾಳ್ಮೆ ಇರಲೇಬೇಕು. ಕೆಲವು ಕೀಟ, ಕಪ್ಪೆ, ಹಾವುಗಳು ಸಂಜೆಯ ಮೇಲೆ ಹಾಗು ರಾತ್ರಿ ಹೊತ್ತು ಹೆಚ್ಚು ಸಕ್ರಿಯವಾಗಿರುತ್ತವೆ.  ರಾತ್ರಿ ಹೊತ್ತಿನ ಈ ಹುಡುಕಾಟಕ್ಕೆ “ಹರ್ಪಿಂಗ್ ” ಎಂದು ಕರೆಯುತ್ತಾರೆ.  ರಾತ್ರಿ ಹೊತ್ತಿನಲ್ಲಿ ಹರ್ಪಿಂಗ್ ಮಾಡುವ ಮಜಾ, ಸಣ್ಣಗೆ ಆಗುವ ಭಯ, ತಲೆಯ ಮೇಲೆ ಒಂದು ಟಾರ್ಚ್, ಒಂದು ಕೈನಲ್ಲಿ ಕೋಲು, ಇನ್ನೊಂದು ಕೈ ನಲ್ಲಿ ಕೊಡೆ ಇವುಗಳ ಮಧ್ಯ ಮಳೆಯಲ್ಲಿ ನೆನೆಯಬಾರದು ಅಂತ ಕವರ್ ಮಾಡಿಕೊಂಡಿರುವ ಕ್ಯಾಮರಾ ಎಲ್ಲವೂ ಒಂದು ರೀತಿಯ ರೋಮಾಂಚನದ ಅನುಭವ. ಅದನ್ನು ಹೇಳಲಿಕ್ಕೆ ವರ್ಣಿಸಲಾಗದು ಅನುಭವಿಸಿ ಸವಿಯಬೇಕು.

 ಈ ಅನುಭವದ ಫಲಿತಾಂಶವೇ ಇಲ್ಲಿರುವ ಚಿತ್ರಗಳು. ನಾನಂತೂ ಪ್ರತಿ ವರುಷ ಈ ಮಳೆಗಾಲದ ವಿಸ್ಮಯವನ್ನು ತಪ್ಪದೆ ಆನಂದಿಸುತ್ತೇನೆ, ನೀವೂ ಸಹ ಅನುಭವಿಸಿ, ಆಸ್ವಾದಿಸಿ ಸುತ್ತಲಿನ ಜೀವ ವೈವಿಧ್ಯವನ್ನು ಅರಿಯಿರಿ.

© ಗುರುಪ್ರಸಾದ್ ಕೆ. ಆರ್.


ಲೇಖನ: ಗುರುಪ್ರಸಾದ್ ಕೆ. ಆರ್.
         ಬೆಂಗಳೂರು ಜಿಲ್ಲೆ
.

Print Friendly, PDF & Email
Spread the love
error: Content is protected.